ಫಾರೆಸ್ಟ್ ಒಳಗೆ ಫುಲ್ ಫೈಟು! ಆನೆ ಬಿಟ್ಟರೆ ನಾನೇ ಅಂದನಂತೆ ಚಿಕ್ಕ!

Picture of Cinibuzz

Cinibuzz

Bureau Report

❝ಫಾರೆಸ್ಟ್ ಒಳಗೆ ಸಾಕಷ್ಟು ವಿಚಾರಗಳು ನಡೆದಿವೆ. ಅದರಲ್ಲೂ ಇತ್ತೀಗೆ ಪೋಸ್ಟರ್ ವಿಚಾರಕ್ಕೆ ಒಳಗುದ್ದಾಟಗಳು ನಡೆದಿವೆ. ಸಿನಿಮಾದಲ್ಲಿ ಅನೀಶ್ ಮತ್ತು ಗುರುನಂದನ್ ಇಬ್ಬರು ಹೀರೋಗಳಿದ್ದರೂ ʻತನ್ನ ಫೋಟೋ ದೊಡ್ಡದಾಗಿ ಇರಬೇಕು. ಪೋಸ್ಟರಲ್ಲಿ ಬಳಸಿರುವ ಆಫ್ರಿಕಾ ಆನೆ ಬಿಟ್ಟರೆ, ನನ್ನ ಫೋಟೋನೇ ದೊಡ್ಡದಾಗಿ ಹಾಕಿಸಬೇಕು' ಅಂತಾ ಕಂಡೀಷನ್ ಹಾಕಿದ್ದನಂತೆ❞

ಸಿನಿಮಾ ನಿರ್ಮಾಣ ಮಾಡಬೇಕು ಅಂತಾ ಹೊಸ ನಿರ್ಮಾಪಕರು ಕನಸಿಟ್ಟುಕೊಂಡು ಬಂದಿರುತ್ತಾರೆ. ಹಾಗೆ ಚಿತ್ರರಂಗಕ್ಕೆ ಬಂದವರನ್ನು ಕೆಲವರು ಕೊಡಬಾರದ ಕಾಟ ಕೊಟ್ಟು, ಏನೇನೂ ಉಳಿಯದಂತೆ ಸುಲಿದು, ಬಗೆ ಬಗೆಯಲ್ಲಿ ಬಗೆದು ಭಯಗೊಳಿಸಿ ಕಳಿಸುತ್ತಾರೆ!

ಸದ್ಯಕ್ಕೆ ಎನ್ ಎಂ ಕಾಂತರಾಜು ಎನ್ನುವ ಹೊಸ ನಿರ್ಮಾಪಕ ಫಾರೆಸ್ಟ್ ಒಳಗೆ ಸಿಕ್ಕಿಕೊಂಡು ನರಳಾಡುತ್ತಿದ್ದಾರೆ. ಅನೀಶ್, ಗುರುನಂದನ್, ರಂಗಾಯಣ ರಘು, ಚಿಕ್ಕಣ್ಣ, ಅರ್ಚನಾ ಕೊಟ್ಟಿಗೆ, ಶರಣ್ಯಾ ಮುಂತಾದವರು ಈ ಚಿತ್ರದ ಪ್ರಧಾನ ಪಾತ್ರದಲ್ಲಿದ್ದಾರೆ. ಅನೀಶ್ ಈಗಾಗಲೇ ಕಮರ್ಷಿಯಲ್ ಹೀರೋ ಆಗಿ ಹೆಸರು ಮಾಡಿದ್ದಾರೆ. ಫಸ್ಟ್ ರ್ಯಾಂಕ್ ರಾಜು ಸಿನಿಮಾ ಮೂಲಕ ಹೀರೋ ಆದ ಗುರುನಂದನ್ ನಟನೆಯ ಸಿನಿಮಾಗಳು ಕುಂಟುತ್ತಾ ತೆವಳುತ್ತಾ ಮೂರು ವರ್ಷಕ್ಕೊಂದಾದರೂ ಹೊರಬರುತ್ತವೆ. ಪೋಷಕ ಕಲಾವಿದನಾಗಿದ್ದ ಚಿಕ್ಕಣ್ಣ ಈಗಷ್ಟೇ ಹೀರೋ ಆಗಿದ್ದಾನೆ….

ಸದ್ಯಕ್ಕೆ ಫಾರೆಸ್ಟ್ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಫಾರೆಸ್ಟ್ ಅನ್ನು ಈ ಹಂತಕ್ಕೆ ತರುವಷ್ಟರಲ್ಲಿ ನಿರ್ಮಾಪಕ ಕಾಂತರಾಜು ಅದೆಷ್ಟು ಯಮಯಾತನೆ ಅನುಭವಿಸಿದ್ದಾರೋ ಅವರಿಗೇ ಗೊತ್ತಿರುತ್ತದೆ.

ಫಾರೆಸ್ಟ್ ಒಳಗೆ ಸಾಕಷ್ಟು ವಿಚಾರಗಳು ನಡೆದಿವೆ. ಅದರಲ್ಲೂ ಇತ್ತೀಗೆ ಪೋಸ್ಟರ್ ವಿಚಾರಕ್ಕೆ ಒಳಗುದ್ದಾಟಗಳು ನಡೆದಿವೆ. ಸಿನಿಮಾದಲ್ಲಿ ಅನೀಶ್ ಮತ್ತು ಗುರುನಂದನ್ ಇಬ್ಬರು ಹೀರೋಗಳಿದ್ದರೂ ʻತನ್ನ ಫೋಟೋ ದೊಡ್ಡದಾಗಿ ಇರಬೇಕು. ಪೋಸ್ಟರಲ್ಲಿ ಬಳಸಿರುವ ಆಫ್ರಿಕಾ ಆನೆ ಬಿಟ್ಟರೆ, ನನ್ನ ಫೋಟೋನೇ ದೊಡ್ಡದಾಗಿ ಹಾಕಿಸಬೇಕು’ ಅಂತಾ ಕಂಡೀಷನ್ ಹಾಕಿದ್ದನಂತೆ. ಅದರಂತೇ ಹಠ ಮಾಡಿ ಹಾಕಿಸಿಕೊಂಡಿದ್ದಾನೆ. ಇದು ಸಹಜವಾಗೇ ಇತರೇ ಇಬ್ಬರು ಹೀರೋಗಳ ಕೋಪಕ್ಕೆ ಕಾರಣವಾಗಿದೆ. ಇದರ ಸೈಡ್ ಎಫೆಕ್ಟು ಸಿನಿಮಾದ ಪ್ರಚಾರಕ್ಕೆ ದೊಡ್ಡ ಏಟು ನೀಡುತ್ತಿದೆ.

ʻಟೀವಿ, ಟ್ಯೂಬುಗಳ ಸಂದರ್ಶನಗಳಲ್ಲಿ ಹೆಚ್ಚು ಹೊತ್ತು ಪಾಲ್ಗೊಳ್ಳಲು ಸಾಧ್ಯವಿಲ್ಲ, ಇಷ್ಟಿಷ್ಟೇ ಪ್ರಶ್ನೆಗಳಿಗೆ ಇಷ್ಟೇ ಉತ್ತರಿಸಲು ಸಾಧ್ಯ’ ಎನ್ನುವ ನಿಬಂಧನೆಗಳನ್ನೂ ಚಿಕ್ಕಣ್ಣ ಸರ್ ವಿಧಿಸಿದ್ದಾರಂತೆ. ಸಿನಿಮಾರಂಗದಿಂದ ಎಲ್ಲವನ್ನೂ ಪಡೆದಿರುವ ಶ್ರೀಯುತರು ನಿರ್ಮಾಪಕರು, ಚಿತ್ರತಂಡದವರನ್ನು ಇನ್ನೂ ಎಷ್ಟೆಷ್ಟು ಹಿಂಸಿಸಿ, ತೃಪ್ತಿ ಪಡುತ್ತಾರೋ ಅದಕ್ಕೆ ಕಾಲ ಕೊಡುವ ಉತ್ತರವೇನು ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಇದೇ ರೀತಿ ಮೆರೆದವರೆಲ್ಲಾ ಈ ಇಂಡಸ್ಟ್ರಿಯಲ್ಲಿ ಗೊತ್ತೂ ಗುರಿ ಇಲ್ಲದೆ ಕಳೆದುಹೋಗಿದ್ದಾರೆ. ಚಿಕ್ಕನ ಭವಿಷ್ಯ ಹಾಗಾಗದೇ ಉಳಿಯಲಿ…

ಈ ಸಿನಿಮಾದ ನಿರ್ಮಾಪಕರನ್ನು ಮತ್ತೊಬ್ಬ ನಯವಂಚಕ ದೊಡ್ಡ ಮಟ್ಟದಲ್ಲಿ ಯಾಮಾರಿಸಿದ್ದಾನಂತೆ. ಪಬ್ಲಿಸಿಟಿ ಮಾಡಿಸ್ತೀನಿ ಅಂತಾ ಇಪ್ಪತ್ತು ಲಕ್ಷ ಪೀಕಿಕೊಂಡು ಮೋಸ ಮಾಡಿದ್ದಾನಂತೆ. ಇಲ್ಲಿ ವಂಚಿಸಿದ ಯಾರೇ ಆದರೂ ಉಳಿದು ಬಾಳಲು ಸಾಧ್ಯವಿಲ್ಲ. ಎಷ್ಟೇ ಹೈ ಡ್ರಾಮಾ, ಮಳ್ಳಿ ಮಾತಾಡಿದರೂ ಒಂದು ಅಸಲಿಯತ್ತು ಹೊರಬರಲೇಬೇಕು!

ಸಿನಿಮಾರಂಗದಲ್ಲಿ ನಿಯತ್ತಾಗಿ ಕೆಲಸ ಮಾಡುವವರೂ ಇದ್ದಾರೆ. ಅಂಥವರ ಮಾರ್ಗದರ್ಶನ ಪಡೆದು, ಬಣ್ಣದ ಮಾತಾಡುವವರ ಬಗ್ಗೆ ಎಚ್ಚರ ವಹಿಸಿದರೆ ಯಾವ ನಿರ್ಮಾಪಕರೂ ನಷ್ಟ ಅನುಭವಿಸಬೇಕಿಲ್ಲ. ಸದ್ಯ ಕಾಂತರಾಜು ಅವರು ಸಿಕ್ಕಸಿಕ್ಕವರ ಗೈಡ್ ಲೈನ್ ಪಡೆದು ಗಟಾರಕ್ಕೆ ಬಿದ್ದಿದ್ದಾರೆ. ಇನ್ನಾದರೂ ಹುಷಾರಾಗಿರಲಿ!

ಇನ್ನಷ್ಟು ಓದಿರಿ

Scroll to Top