ಹಣ ಮಾಡಲು ಒಬ್ಬೊಬ್ಬರದ್ದು ಒಂದೊಂದು ಮಾರ್ಗ. ಕಷ್ಟಪಟ್ಟು, ದುಡಿದು ಸಂಪಾದಿಸುವವರ ನಡುವೆ ಅನಾಮತ್ತಾಗಿ ಕಾಸು ಮಾಡಿ, ದಿಢೀರ್ ಶ್ರೀಮಂತರಾಗುವ ಬಯಕೆ ಕೆಲವರಿಗಿರುತ್ತದೆ. ಮತ್ಯಾರನ್ನೋ ವಂಚಿಸಿ, ಬ್ಲಾಕ್ಮೇಲ್ ಮಾಡಿಯಾದರೂ ಐಶಾರಾಮಿ ಜೀವನ ನಡೆಸುವವರಿದ್ದಾರೆ. ಇಲ್ಲಿ ಹೀರೋ ಕೃಷ್ಣ ಅದೇ ಕೆಟಗರಿಗೆ ಸೇರಿದವನು. ಅವನ ಜೊತೆಗಾರರೂ ಅಂತಹವರೇ. ʼ ಉದರ ನಿಮಿತ್ತಂ ಬಹುಕೃತ ವೇಷಂʼ ಅನ್ನುವಂತೆ ನಾನಾ ವೇಷದಲ್ಲಿ ಜನರನ್ನು ವಂಚಿಸಿರುತ್ತಾನೆ. ಇಂಥವನಿಗೆ ಹುಡುಗಿಯೂ ಜೊತೆಯಾಗುತ್ತಾಳೆ. ಏನಪ್ಪಾ ಮುಂದೆ ಅನ್ನುವಷ್ಟರಲ್ಲಿ ಕೃಷ್ಣನ ಪೂರ್ವಾಪರಗಳೆಲ್ಲಾ ತೆರೆದುಕೊಳ್ಳುತದೆ. ಗತಿಸಿಹೋದ ಬದುಕಿನೊಂದಿಗೆ ಮತ್ತೆ ಬಾಂಧವ್ಯ ಬೆಸೆಯುತ್ತದೆ. ಅಂದುಕೊಂಡಂತೇ ಸಕಲ ಐಶ್ವರ್ಯವೂ ಜೊತೆಯಾಯಿತು ಎನ್ನುವ ಹೊತ್ತಿಗೆ, ಬಹುದೊಡ್ಡ ಟಾಸ್ಕ್ ಕೂಡಾ ಎದುರಾಗುತ್ತದೆ. ಇದನ್ನೆಲ್ಲಾ ಚಾಲಾಕಿ ಕೃಷ್ಣ ಹೇಗೆಲ್ಲಾ ನಿಭಾಯಿಸುತ್ತಾನೆ ಎನ್ನುವುದು ʻರಾಯಲ್ʼ ಚಿತ್ರದ ಸೀಕ್ರೆಟ್ಟು!

ಏನೇನೂ ಇಲ್ಲದೆ ದೊಡ್ಡದೊಂದು ಉದ್ಯಮ ಸ್ಥಾಪಿಸುವ ಸಿದ್ದಾರ್ಥ್ ಎನ್ನುವ ಪಾತ್ರದ ಸುತ್ತಲೂ ಬೆಸೆದುಕೊಂಡ ಕಥೆ ರಾಯಲ್ ಚಿತ್ರದಲ್ಲಿದೆ. ಸಿದ್ದಾರ್ಥ್ ಗೆಲುವಿನ ಹಿಂದಿನ ಪ್ರೇರಕ ಶಕ್ತಿಯಂತೆ ನಿಲ್ಲುವವಳು ಆತನ ಪತ್ನಿ. ಹಣ ಮಾಡಲು ಜನಸಾಮಾನ್ಯರ ಆರೋಗ್ಯ, ಬದುಕನ್ನ ಆಪೋಶನ ತೆಗೆದುಕೊಳ್ಳುವ ನಿಲುವನ್ನು ಆಕೆ ವಿರೋಧಿಸುತ್ತಾಳೆ. ಅದೊಂದು ದಿನ ಸಿದ್ದಾರ್ಥ್ ಮೇಲೆ ಹತ್ಯೆ ಯತ್ನವೂ ನಡೆಯುತ್ತದೆ. ಇದಾದ ನಂತರ ಸಿದ್ದಾರ್ಥನ ಬಹುಕೋಟಿಯ ಉದ್ಯಮ ಸಾಮ್ರಾಜ್ಯ ಏನಾಗುತ್ತದೆ? ಹೀರೋ ಕೃಷ್ಣನಿಗೂ ಇದಕ್ಕೂ ಯಾವ ಸಂಬಂಧ? ಇವೆಲ್ಲದರಲ್ಲಿ ಹೀರೋಯಿನ್ ಪಾತ್ರವೇನು? ಎಂಬಿತ್ಯಾದಿ ಕುತೂಹಲಕಾರಿ ವಿಚಾರಗಳ ಸುತ್ತಲೂ ಅಚ್ಚುಕಟ್ಟಾಗಿ ಹೆಣೆಯಲ್ಪಟ್ಟ ಚಿತ್ರ ರಾಯಲ್!

ರಾಯಲ್ ಎನ್ನುವ ಹೆಸರಿಗೆ ತಕ್ಕಂತೆ ಇಲ್ಲಿ ಎಲ್ಲವೂ ರಾಯಲ್ಲಾಗೇ ಇದೆ. ಗೋವಾದ ರಿಚ್ ಲೊಕೇಶನ್ನುಗಳು ಸೇರಿದಂತೆ ಇಡೀ ಚಿತ್ರವನ್ನು ಅದ್ಧೂರಿ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದೆ. ಹೀರೋ ವಿರಾಟ್ ನಟನೆಗಿಂತಾ ಡ್ಯಾನ್ಸು, ಫೈಟಲ್ಲಿ ಹೆಚ್ಚು ಗಮನ ಸೆಳೆಯುತ್ತಾರೆ. ಸಂಜನಾ ಆನಂದ್ ನಟನೆಯಲ್ಲಿ ಪಳಗಲು ಇನ್ನೂ ಒಂದಿಷ್ಟು ಸಿನಿಮಾಗಳು ಬೇಕಾಗಬಹುದು. ಅಚ್ಯುತ್, ಛಾಯಾ ಸಿಂಗ್, ರವಿ ಭಟ್, ಗೋಪಾಲಕೃಷ್ಣ ದೇಶಪಾಂಡೆ, ರಘು ರಾಮನಕೊಪ್ಪ, ಬಿ.ಎಂ.ಗಿರಿರಾಜ್ ಮೊದಲಾದವರ ನಟನೆ ಚಿತ್ರದ ಗುಣಮಟ್ಟವನ್ನು ಕಾಪಾಡಿದೆ. ರಘು ಮುಖರ್ಜಿ ಎಂಟ್ರಿ ಕೊಟ್ಟಮೇಲೆ ಚಿತ್ರದ ಖದರು ಕೂಡಾ ಬದಲಾಗುತ್ತದೆ.
ನಿರ್ದೇಶಕ ದಿನಕರ್ ಎಸ್ ಅವರು ಕನ್ನಡಕ್ಕೆ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ಕೊಟ್ಟವರು. ಕಮರ್ಷಿಯಲ್ ಸಿನಿಮಾದ ಸೂತ್ರ ಅವರಿಗೆ ಗೊತ್ತು. ಒಬ್ಬ ಸಾಮಾನ್ಯ ಪ್ರೇಕ್ಷಕನ ಮನಸ್ಥಿತಿ ಅರ್ಥ ಮಾಡಿಕೊಂಡು ಸಿನಿಮಾಗಳನ್ನು ರೂಪಿಸಿ ಗೆದ್ದವರು ದಿನಕರ್. ಈ ನಿಟ್ಟಿನಲ್ಲಿ ʻರಾಯಲ್ʼ ಕಥೆಯನ್ನು ಅವರು ಆಯ್ಕೆ ಮಾಡಿಕೊಂಡಿರುವುದು ಸರಿಯಿದೆ. ಈ ಬಗೆಯ ಸಿನಿಮಾಗಳು ಈಗಾಗಲೇ ಇತರೆ ಭಾಷೆಗಳಲ್ಲಿ ಸಾಕಷ್ಟು ಬಂದಿರುವುದರಿಂದ ತೀರಾ ಹೊಸತನವನ್ನು ಇಲ್ಲಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಪ್ರತೀ ಫ್ರೇಮಿಗೆ ಏನೇನು ಬೇಕೋ ಎಲ್ಲವನ್ನೂ ಒದಗಿಸಿರುವುದರಿಂದ ಸಂಕೇತ್ ಛಾಯಾಗ್ರಹಣ ಕೂಡಾ ಹೆಚ್ಚು ಕಳೆಗಟ್ಟಿದೆ. ಚರಣ್ ರಾಜ್ ಸಂಗೀತ ನಿರ್ದೇಶನದ ʻಅಣ್ಣಗೇ ಟಾಂಗ್ ಟಾಂಗ್ʼ ಹಾಡು ಕುಂತಲ್ಲೇ ಎಲ್ಲರನ್ನೂ ಕುಣಿಸುತ್ತದೆ; ಕವಿರಾಜ್ ಅವರ ಲಿರಿಕ್ಸ್ ಕೂಡಾ ಅಷ್ಟೇ ಮಜವಾಗಿದೆ. ಡಾ. ವಿ. ನಾಗೇಂದ್ರ ಪ್ರಸಾದ್ ಅವರು ಬರೆದಿರುವ ʻನೂರು ಕೋಟಿ ದೇವರುʼ ಹಾಡು ಸಿನಿಮಾದ ತೂಕವನ್ನೂ ಹೆಚ್ಚಿಸುತ್ತದೆ. ಈ ಹಾಡಿನ ಪ್ರತೀ ಪದದಲ್ಲೂ ಸಮ್ಮೋಹಕ ಗುಣವಿದೆ. ನಾನೇ ಕೃಷ್ಣ ನಾನೇ ಶಾಮ ಹಾಡು ಕೂಡಾ ಇಷ್ಟವಾಗುತ್ತದೆ. ಬೇಡದ ಒಂದೇ ಒಂದು ಶಾಟ್ ಅನ್ನೂ ಇಡದ ದಿನಕರ್ ಅವರು ʻಆಟಮ್ ಬಾಂಬ್ʼ ಹಾಡನ್ನು ಯಾಕೆ ಉಳಿಸಿಕೊಂಡರೋ ಗೊತ್ತಿಲ್ಲ!
ಯಶಸ್ವೀ ಉದ್ಯಮಿಯೊಬ್ಬನ ಲೈಫ್ ಜರ್ನಿ, ಸ್ವಾಭಿಮಾನಿ ಹೆಣ್ಣುಮಗಳ ಬದುಕಿನ ರೀತಿ, ದಾರಿ ತಪ್ಪಿದ ಮಗ, ಜವಾಬ್ದಾರಿ ಅಂತಾ ಬಂದಾಗ ಆತ ಬಳಸುವ ತಂತ್ರಗಳು, ಬೆಳೆದುನಿಂತ ಸಾಮ್ರಾಜ್ಯದಲ್ಲಿ ನಿಷ್ಠೆಯೆನ್ನುವ ಮುಖವಾಡ ತೊಟ್ಟು ಜಾಗ ಹಿಡಿದ ಕುತಂತ್ರಿಗಳು, ಪ್ರಾಮಾಣಿಕರಾಗಿ ಉಳಿದವರು, ಅವರಿಗೆ ಎದುರಾಗುವ ಸವಾಲು… ಹೀಗೆ ಹತ್ತು ಹಲವು ವಿಚಾರಗಳನ್ನು ಹದಮಿತವಾಗಿ ಬೆರೆಸಿ ರೂಪಿಸಿರುವ ಚಿತ್ರ ರಾಯಲ್. ಫ್ಯಾಮಿಲಿ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗಬಲ್ಲದು…