ಕಳಪೆ ಕಾಮಗಾರಿಯಿಂದ ಶಾಲೆಯೊಂದು ಕುಸಿದುಬೀಳತ್ತೆ. ಬೆಳೆದು ಬಾಳಬೇಕಿದ್ದ ಕಂದಮ್ಮಗಳು ಕಟ್ಟಡದ ಅವಶೇಷಗಳ ನಡುವೆ ಜೀವ ಚೆಲ್ಲಿ ಮಲಗುತ್ತವೆ. ಇನ್ಯಾವನೋ ಗುಟ್ಕಾ ರಮೇಶನೆನ್ನುವ ಪೀಡೆಗೆ ಮಕ್ಕಳಿಗೂ, ಮಾಂಸಕ್ಕೂ ವ್ಯತ್ಯಾಸವೇ ಗೊತ್ತಿರೋದಿಲ್ಲ. ಮಾಡಬಾರದ ಅನಾಚಾರ ಮಾಡಿ ಜಾಮೀನು ಪಡೆಯಲು ಲಾಯರ್ ವೇಶದಲ್ಲಿ ಕೋರ್ಟಿಗೆ ನುಗ್ಗಿರುತ್ತಾನೆ. ದುಷ್ಟ ಎಂಎಲ್ಲೆಯೊಬ್ಬ ಮಂತ್ರಿ ಸ್ಥಾನಕ್ಕಾಗಿ ಹಠ ಮಾಡುತ್ತಿರುತ್ತಾನೆ. ಪೊಲೀಸ್ ಇಲಾಖೆಯ ಒಂದು ತಂಡ ಅವನಿಗಾಗಿ ಕೆಲಸ ಮಾಡುತ್ತಿರುತ್ತದೆ.

ಈ ಎಲ್ಲಾ ಬಿಡಿ ಬಿಡಿ ಚಿತ್ರಣಗಳ ನಡುವೆ ಅವನೊಬ್ಬ ಪೊಲೀಸ್ ಇನ್ಸ್ಪೆಕ್ಟರ್ ಇಲಾಖೆಯ ಪಾಲಿಗೆ ರೆಬೆಲ್ ಸ್ಟಾರ್ ಆಗಿರುತ್ತಾನೆ. ಹಿರಿಯ ಅಧಿಕಾರಿಗಳ ಹಿಡಿತಕ್ಕೆ ಸಿಕ್ಕಿಕೊಳ್ಳದೆ ತನ್ನಿಷ್ಟಕ್ಕೆ ತಕ್ಕಹಾಗೆ ವರ್ತಿಸುತ್ತಾನೆ. ರೇಪಿಸ್ಟ್ ಕ್ರಿಮಿಯನ್ನು ಹಿಡಿದು ಎನ್ ಕೌಂಟರ್ ಮಾಡುತ್ತಾನೆ. ಅಶ್ವದಳ, ಬ್ಯಾಂಡ್ ದಳಕ್ಕೆ ವರ್ಗಾವಣೆ ಮಾಡಿದರೂ ತಲೆ ಕೆಡಿಸಿಕೊಳ್ಳೋದಿಲ್ಲ. ಇಂಥಾ ಆಫೀಸರನ್ನು ಖುದ್ದು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಅನ್ ಅಫಿಷಿಯಲ್ ಆಗಿ ಪ್ರಕರಣವೊಂದರ ತನಿಖೆ ನಡೆಸಲು ನೇಮಿಸುತ್ತಾರೆ. ತನಿಖೆ ವೇಳೆ ನಿಗೂಢವಾದ ಕೆಲವು ವಿಚಾರಗಳು ನಡೆಯುತ್ತಿರುತ್ತದೆ. ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ದುರಂತವೊಂದರ ಎಲ್ಲರನ್ನೂ ಗೊಂದಲಕ್ಕೀಡುಮಾಡುತ್ತದೆ. ಅದರ ಹಿನ್ನೆಲೆ ಏನು? ಆ ಘಟನೆಯಲ್ಲಿ ಜೀವ ಕಳೆದುಕೊಂಡ ಜೀವಗಳು ಪ್ರೇತಗಳಾಗಿ ಕಾಡುತ್ತಿರುತ್ತವಾ? ಅಸಲಿಗೆ ಹೀರೋ ವಹಿಸಿಕೊಳ್ಳುವ ಆ ಪ್ರಕರಣವಾದರೂ ಯಾವುದು? ಈ ಎಲ್ಲ ಪ್ರಶ್ನೆಗಳಿಗೂ ʻರುದ್ರ ಗರುಡ ಪುರಾಣʼದಲ್ಲಿ ಹಂತ ಹಂತವಾಗಿ ಉತ್ತರ ತೆರೆದುಕೊಳ್ಳುತ್ತದೆ…

ರುದ್ರ ಗರುಡ ಪುರಾಣದಲ್ಲಿ ನಿರ್ದೇಶಕ ಕೆ.ಎಸ್. ನಂದೀಶ್ ಸಾಕಷ್ಟು ಎಲಿಮೆಂಟುಗಳನ್ನು ಪೋಣಿಸಿದ್ದಾರೆ. ಕೆಲವೊಂದು ಕಥೆಗೆ ಪೂರಕವಾಗಿದ್ದರೆ, ಇನ್ನೂ ಕೆಲವು ಬೇಕಂತಲೇ ತುರುಕಿದಂತಿದೆ. ಹೀರೋಯಿಸಮ್ಮು ಬಿಲ್ಡಪ್ ಮಾಡಲೆಂದೇ ಆರಂಭದ ಅರ್ಧ ಗಂಟೆಯನ್ನು ಬಳಸಿಕೊಂಡಿದ್ದಾರೆ. ನೇರವಾಗಿ ಕಥೆಗೆ ಎಂಟ್ರಿ ಕೊಡದೆ, ಸುತ್ತೀ ಬಳಸಿ ವಿಚಾರಕ್ಕೆ ಬರುತ್ತಾರೆ. ರಿಷಿ ಎಂದಿನಂತೆ ಎನರ್ಜಿಟಿಕ್ ಆಗಿ ನಟಿಸಿದ್ದಾರೆ. ನಾಯಕಿ ಪ್ರಿಯಾಂಕ ಕೂಡಾ ರಿಷಿಗೆ ಹೇಳಿಮಾಡಿಸಿದಂತಿದ್ದಾಳೆ. ಮೊದಲ ಸಿನಿಮಾ ಆದರೂ ಚೆಂದಗೆ ನಟಿಸಿದ್ದಾರೆ. ಆದರೆ ಸಿನಿಮಾದ ಪ್ರಧಾನ ಎಳೆಗೂ ನಾಯಕಿಗೂ ಅಂತಾ ನಂಟು ಬೆಸೆದುಕೊಳ್ಳೋದೇ ಇಲ್ಲ.
ರಿವೇಂಜ್ ಕಿಲ್ಲಿಂಗ್ ಸಬ್ಜೆಕ್ಟ್ ಇದಾಗಿದ್ದು, ನಡುವೆ ಒಂದಿಷ್ಟು ಹಾರರ್ ಅಂಶಗಳನ್ನು ಸೇರಿಸಿ ಕಥೆಗೆ ಟ್ವಿಸ್ಟ್ ಕೊಡುವುದು ನಿರ್ದೇಶಕರ ಉದ್ದೇಶವಾದರೂ ಅದು ಸ್ವತಃ ಚಿತ್ರಕತೆಯ ದಿಕ್ಕು ತಪ್ಪಿಸಿದೆ. ಚಿತ್ರದಲ್ಲಿ ಸಂಭಾಷಣೆ ಗುಣಮಟ್ಟದಿಂದ ಕೂಡಿದೆ. ʻಬುದ್ದಿವಂತ ಭ್ರಷ್ಟ ಆದ್ರೆ ಸಮಾಜಕ್ಕೆ ತುಂಬಾ ಅಪಾಯʼ, ʻಎಲ್ಲಾ ಮೋಸಾನೂ ನಂಬಿಕೆ ಇಂದಾನೇ ಶುರು ಆಗೋದು…ʼ ಎಂಬಿತ್ಯಾದಿಯಾಗಿ ರಘು ನಿಡುವಳ್ಳಿ ತೂಕದ ಮಾತುಗಳನ್ನು ಬರೆದಿದ್ದಾರೆ. ಹಿನ್ನೆಲೆ ಸಂಗೀತದ ಅಬ್ಬರ ತುಂಬಾನೇ ಡಿಸ್ಟರ್ಬ್ ಮಾಡುತ್ತದೆ. ಒಂದು ಸಲಕ್ಕೆ ಸಲೀಸಾಗಿ ನೋಡಿಸಿಕೊಳ್ಳುವ ಕೆಪ್ಯಾಸಿಟಿ ರುದ್ರ ಗರುಡ ಪುರಾಣಕ್ಕಿದೆ.