ಯಾರೂ ಹೇಳದ ಕಥೆಯನ್ನು ಕಾಡು ಹೇಳತ್ತೆ… ಅದನ್ನ ಕೇಳಿ ಸುಮ್ನಾಗಬೇಕು ಅಷ್ಟೇ.. ಅದರಲ್ಲಿ ಪಾತ್ರ ಆಗೋಕೆ ಹೋದವರು ಕಥೆಯಾಗಿಬಿಡ್ತಾರೆ… ಅಂತಾ ಹೇಳುತ್ತಲೇ ಕಾಡಿನ ಬಗ್ಗೆ ಕಥೆಯೊಂದನ್ನು ಕಟ್ಟಿ, ಎರಡು ಪಾತ್ರಗಳನ್ನೂ ಸೃಷ್ಟಿಸಿ ಸಿನಿಮಾ ರೂಪದಲ್ಲಿ ನೀಡಿದ್ದಾರೆ ನಿರ್ದೇಶಕ ಸಮರ್ಥ್!
ಸೂತ್ರ, ಸಂಬಂಧವಿಲ್ಲದೆ ಏನೇನೋ ನಡೆಯುತ್ತಿರುತ್ತವೆ. ನಾವು ನೋಡಿರದ ಜಾಗಗಳು, ಪಾತ್ರಗಳೆಲ್ಲಾ ಸುಪ್ತ ಮನಸ್ಸಿನಲ್ಲಿ ಕದಲುತ್ತಿರುತ್ತವೆ. ಎಲ್ಲಿಂದ ಎಲ್ಲಿಗೋ ಲಿಂಕು, ಮತ್ತೇನೋ ಆತಂಕ, ನಿರ್ಲಿಪ್ತತೆ… -ಇವೆಲ್ಲಾ ಕನಸಿನ ಚಿತ್ರಣಗಳು. ಕಾಡುಮಳೆ ಸಿನಿಮಾವನ್ನು ನೋಡುತ್ತಾ ಥೇಟು ಇಂಥದ್ದೇ ಫೀಲ್ ಹುಟ್ಟುತ್ತದೆ. ನಿಜಕ್ಕೂ ಇಲ್ಲಿ ಏನು ನಡೆಯುತ್ತಿದೆ? ಅಸಲಿಗೆ ನಾವಿರುವುದು ಭ್ರಮೆಯ ಜಗತ್ತಿನಲ್ಲಾ? ವಾಸ್ತವದಲ್ಲಾ? ಎನ್ನುವ ಗೊಂದಲ ಶರುವಾಗುತ್ತೆ. ಎಷ್ಟೋ ಸಲ ಯಾವುದಾದರೂ ಘಟನೆ ನಡೆದಾಗ, ʻಈ ಹಿಂದೆಯೇ ಇದು ಆಗಿತ್ತಲ್ಲಾ…ʼ ಅನ್ನಿಸುತ್ತದೆ ಅಲ್ವಾ? ಮತ್ಯಾವುದೋ ಜಾಗಕ್ಕೆ ಮೊದಲ ಸಲ ಹೋದರೂ, ʻʻಮೊದಲೇ ಇಲ್ಲಿ ಬಂದಹಾಗೆ ಅನ್ನಿಸ್ತಿದೆ…ʼʼ ಎನ್ನುವಂತಾಗಿರುತ್ತದೆ. ಈ ರೀತಿಯ ಅನಿಸಿಕೆಗಳು, ಮಾನಸಿಕ ಸ್ಥಿತಿಗಳನ್ನೇ ಕಾಡುಮಳೆಯಲ್ಲಿ ಕಥೆಯನ್ನಾಗಿಸಿದ್ದಾರೆ. ಅದಕ್ಕೆ 7ರ ನಂಟು ನೀಡಿದ್ದಾರೆ. ಒಂದಿಷ್ಟು ಫಿಲಾಸಫಿ, ಇನ್ನೊಂದಿಷ್ಟು ಮನೋವೈಜ್ಞಾನಿಕ ವಿಚಾರಗಳನ್ನೆಲ್ಲಾ ಬೆರೆಸಿ, ಥ್ರಿಲ್ ನೀಡುವ ಚಿತ್ರವನ್ನು ರೂಪಿಸಿದ್ದಾರೆ.

ಕಾಡುಮಳೆ ಮಾಮೂಲಿ ಸಿನಿಮಾ ಸೂತ್ರಗಳಿಂದ ಹೊರತಾಗಿರುವ ಪ್ರಾಡಕ್ಟು. ಆದಿ, ಮಧ್ಯಂತರ, ಅಂತ್ಯಗಳ ಕರಾರುವಕ್ಕಾದ ಗ್ರಾಫ್ ಇಲ್ಲಿಲ್ಲ. ಪ್ರೀತಿಯಿಂದ ವಂಚಿತಳಾಗಿ ಸಾಯಲು ಬಂದ ಹುಡುಗಿ ಬದುಕುಳಿಯುತ್ತಾಳೆ. ಆ ಕಾಡಿನಲ್ಲಿ ಸಿಕ್ಕಿಕೊಳ್ಳುತ್ತಾಳೆ. ಅಲ್ಲೊಬ್ಬ ಪರಮ ತಿಕ್ಕಲನಂತಾ ವ್ಯಕ್ತಿ ಜೊತೆಯಾಗುತ್ತಾನೆ. ಮಾತಾಡುತ್ತಾನೆ; ಕಥೆ ಹೇಳುತ್ತಾನೆ. ತಪ್ಪಿಸಿಕೊಂಡು ಹೋಗುವ ದಾರಿ ಹುಡುಕುತ್ತಾನೆ. ಇದರಾಚೆಗೆ ಹುಡುಗಿ ಕಾಡಿನಿಂದ ತಪ್ಪಿಸಿಕೊಳ್ತಾಳಾ? ಜೊತೆಗೆ ಇದ್ದವನು ಏನಾಗ್ತಾನೆ? ಅಸಲಿಗೆ ಅಲ್ಲಿ ಏನೇನು ನಡೆಯುತ್ತೆ? ಎಂಬಿತ್ಯಾತಿ ವಿಚಾರಗಳು, ವಿಚಿತ್ರ ಘಟನೆಗಳು, ವಿಲಕ್ಷಣ ಪಾತ್ರಗಳ ಮೂಲಕ ಹೇಳಲಾಗಿದೆ.
ಒಂದೆರಡು ದಿನಗಳ ಕಾಲ ಸರಿಯಾಗಿ ನಿದ್ರೆ ಮಾಡದೇ ಹೋದರೆ ಬ್ರೈನು ಡಿಸ್ಟರ್ಬ್ ಆಗಿ ಮನುಷ್ಯ ಹೆಂಗೆಂಗೋ ವರ್ತಿಸಲು ಶುರು ಮಾಡುತ್ತಾನೆ. ಕತ್ತಲನ್ನೇ ಕಾಣದ ಆ ಕಾಡಿನಲ್ಲಿ, ನಿದ್ರೆಯಿಲ್ಲದೆ ಏಳು ದಿನ ಕಳೆದವರ ಸ್ಥಿತಿ ಏನಾಗಿರಬಹುದು? ನಿದ್ರೆಯಿಲ್ಲದೇ ಭ್ರಮೆಯ ಸ್ಥಿತಿ ತಲುಪುವುದೇ ಬ್ರೈನ್ ಸ್ಕ್ಯಾಮಿಂಗಾ? ಇದನ್ನು ಸಮರ್ಥ್ ತಮ್ಮದೇ ಧಾಟಿಯಲ್ಲಿ ಹೇಳಿದ್ದಾರೆ. ಇಲ್ಲಿ ಎರಡು ಪಾತ್ರಗಳು ಪ್ರಧಾನವಾಗಿದ್ದರೂ, ಒಟ್ಟಾರೆ ಬಳಸಿಕೊಂಡಿರುವ ಕಾಡಿನ ಲೊಕೇಷನ್ನೇ ಪ್ರಮುಖ ಪಾತ್ರಧಾರಿಯಂತಿದೆ. ಇಲ್ಲಿ ಬಳಕೆಯಾಗಿರುವ ಕುಸಿದ ಬ್ರಿಡ್ಜು ರೂಪಕದಂತಿದೆ.
ಎನ್.ಎಂ. ರಾಜು ಕಾಡನ್ನು ಅದ್ಭುತವಾಗಿ ತೋರಿಸಿದ್ದಾರೆ. ಮಹಾರಾಜ ನೀಡಿರುವ ಸಂಗೀತ ಅಗತ್ಯಕ್ಕೆ ತಕ್ಕಷ್ಟಿದೆ. ಸಂಭಾಷಣೆಯಲ್ಲಿ ಇಂಗ್ಲಿಷನ್ನು ಯಾಕೆ ಅಷ್ಟೊಂದು ಬಳಸಿದ್ದಾರೋ ಗೊತ್ತಿಲ್ಲ. ಅದೇನೆ ಇರಲಿ, ಚೌಕಟ್ಟನ್ನು ಮೀರಿ, ತೀರಾ ಹೊಸ ಬಗೆಯ ಸಿನಿಮಾಗಳನ್ನು ನೋಡಲು ಇಷ್ಟ ಪಡುವವರಿಗೆ ಕಾಡುಮಳೆ ಮಜಾ ಕೊಡುತ್ತದೆ.