ಅಮ್ಮನ ನೆನಪಿಗೆ ಅಂತಾ ಉಳಿದಿರುವುದು ಅದೊಂದೇ ಮನೆ. ಉಳಿದುಹೋದ ಹಳೆಯ ಸಾಲವನ್ನು ತೀರಿಸದಿದ್ದರೆ ಬ್ಯಾಂಕಿನವರು ಆಮನೆಯನ್ನೂ ಜಪ್ತಿ ಮಾಡುತ್ತಾರೆ. ಬ್ಯಾಂಕಿಂಗ್ ಪರೀಕ್ಷೆ ಬರೆದು, ಪಾಸಾಗಿ, ಬ್ಯಾಂಕ್ ಮ್ಯಾನೇಜರ್ ಆಗುವ ಕನಸು ಹೊತ್ತವನು ರಾಜು. ಅದೆಲ್ಲಾ ಆಗಿ, ದುಡಿದು ಸಾಲ ತೀರಿಸೋ ಹೊತ್ತಿಗೆ ಅಮ್ಮನ ನೆನಪಿನ ಆ ಮನೆ ಕೈಬಿಟ್ಟು ಹೋಗೋದು ಗ್ಯಾರೆಂಟಿ. ಇದರ ಜೊತೆಗೆ ಅದೇ ಬ್ಯಾಂಕಿಗೆ ಸಂಬಂಧಿಸಿದ ಮುಖ್ಯಸ್ಥನ ತಂಗಿ ಜೊತೆಗೆ ಬೆಸೆದುಕೊಂಡ ಲವ್ವು ಕೂಡಾ ಕಳಚಿಕೊಳ್ಳುವ ಹಂತ ತಲುಪುತ್ತದೆ. ಈ ಹೊತ್ತಲ್ಲಿ, ಯಾವುದಾದರೊಂದು ಶಾರ್ಟ್ಕಟ್ ಹುಡುಕಿಕೊಂಡು, ಅನಾಮತ್ತಾಗಿ ಸಂಪಾದಿಸಿ, ಅಮ್ಮ ಬಿಟ್ಟುಹೋದ ಆಸ್ತಿ, ಅರಸಿ ಬಂದವಳ ಪ್ರೀತಿ ಎರಡನ್ನೂ ಉಳಿಸಿಕೊಳ್ಳಬೇಕು. ಇದಕ್ಕೆ ಜೇಮ್ಸ್ ಬಾಂಡ್ ರಾಜು ಏನೇನು ಸ್ಕೆಚ್ಚು ರೂಪಿಸುತ್ತಾನೆ? ಇದರಲ್ಲಿ ತನ್ನ ಗೆಣೇಕ್ಕಾರರ ಪಾತ್ರವೇನಾಗಿರುತ್ತದೆ? ತನ್ನ ಎಲೆಕ್ಟ್ರಿಷನ್ ಮಾವ ಈ ಕೆಲಸಕ್ಕೆ ಹೇಗೆ ಸಹಕರಿಸುತ್ತಾನೆ? – ಈ ರೀತಿಯ ಒಂದಿಷ್ಟು ವಿಚಾರಗಳ ಸುತ್ತ ಸುತ್ತಾಡುವ ಕತೆ ʻರಾಜು ಜೇಮ್ಸ್ ಬಾಂಡ್ʼ ಚಿತ್ರದಲ್ಲಿದೆ.

ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ ಎನ್ನುವ ಬಡ ಮಧ್ಯಮ ವರ್ಗದವರ ಸ್ಥಿತಿಗತಿ, ಮನಸ್ಥಿತಿಗಳು ಚಿತ್ರದುದ್ದಕ್ಕೂ ಪ್ರತಿಫಲಿಸಿದೆ. ದಾರಿ ಯಾವುದಾದರೂ ಸರಿ, ಬದುಕನ್ನು ಕಂಫರ್ಟ್ ಜೋನಿಗೆ ತಂದು ನಿಲ್ಲಿಸಿಕೊಳ್ಳಬೇಕು ಎನ್ನುವ ಬಯಕೆ, ಆ ಹೊತ್ತಲ್ಲಿ ಎದುರಾಗುವ ಸವಾಲುಗಳು, ಪೀಕಲಾಟಗಳನ್ನೆಲ್ಲಾ ಇಲ್ಲಿ ಬಿಡಿಸಿಟ್ಟಿದ್ದಾರೆ.
ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು ಎನ್ನುವುದನ್ನು ತೋರಿಸಿರೋದೇನೋ ಸರಿ. ಆದರೆ, ಮತ್ಯಾವನೋ ಜೋಡಿಸಿಟ್ಟ ಹಡಬಿ ದುಡ್ಡನ್ನು ತಮ್ಮದಾಗಿಸಿಕೊಳ್ಳುವ ಕ್ರಿಮಿನಲ್ ಐಡಿಯಾವನ್ನು ನಿರ್ದೇಶಕರು ಸಮರ್ಥಿಸಿಕೊಂಡಿದ್ದಾರೆ. ಇದೊಂದು ವಿಚಾರ ರಾಂಗ್ ಮೆಸೇಜ್ ಕನ್ವೇ ಮಾಡುತ್ತದಲ್ಲವಾ? ಅಂದುಕೊಂಡರೆ, ಅದನ್ನು ನೋಡುಗರ ನಿರ್ಧಾರಕ್ಕೆ ಬಿಟ್ಟಿದ್ದಾರೆ!
ಅದ್ಯಾವ ಬ್ಯಾಂಕ್ ಆದರೂ, ಇಷ್ಟು ಸಲೀಸಾಗಿ ರಾಬರಿ ಮಾಡಬಹುದಾ? ಎನ್ನುವುದರಿಂದ ಹಿಡಿದು ಅನೇಕ ಕಡೆ ಲಾಜಿಕ್ ಮಿಸ್ ಆಗಿದೆ. ಇದು ಹೆಚ್ಚೂಕಡಿಮೆ ಕಾಮಿಡಿ ಜಾನರಿನ ಸಿನಿಮಾ ಆಗಿರುವುದರಿಂದ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವಂತಿಲ್ಲ!
ರಾಜು ಅಂತಲೇ ಫೇಮಸ್ಸಾಗಿರುವ ಗುರುನಂದನ್ ಎಂದಿನಂತೆ ನಟಿಸಿದ್ದಾರೆ. ಅಚ್ಯುತ್, ಚಿಕ್ಕಣ್ಣ, ಸಾಧು ಕೋಕಿಲಾ ತಕ್ಕ ಮಟ್ಟಿಗೆ ನಗಿಸುತ್ತಾರೆ. ನಾಯಕನಟಿ ಮೃದುಲಾ ಪಟ್ಟಣಶೆಟ್ಟಿ ವಿಪರೀತ ಶ್ರಮ ವಹಿಸಿ ನಟಿಸಿದ್ದಾರೆ. ಸಡನ್ನಾಗಿ ಬರುವ ರವಿಶಂಕರ್ ಇಡೀ ಸಿನಿಮಾವನ್ನೇ ಆವರಿಸಿಕೊಳ್ಳುತ್ತಾರೆ. ಜೈಜಗದೀಶ್ ದೈಹಿಕವಾಗಿ ಮಾತ್ರವಲ್ಲ, ನಟನೆಯಲ್ಲೂ ವಿಪರೀತ ದಣಿದಂತೆ ಕಾಣುತ್ತಾರೆ!
ಅನೂಪ್ ಸಿಳೀನ್ ಹಿನ್ನೆಲೆ ಸಂಗೀತ ಬಗ್ಗೆ ಕೆಮ್ಮಂಗೂ ಇಲ್ಲ, ಸೀನಂಗೂ ಇಲ್ಲ; ಅಷ್ಟು ಸೊಗಸಾಗಿದೆ. ಅಂಥೋಣಿ ದಾಸನ್ ಹಾಡಿರುವ ಹಾಡು ಕೂಡಾ ಮಜವಾಗಿದೆ. ಪ್ರತೀ ಚಿತ್ರದಲ್ಲೂ ಏನಾದರೊಂದು ಪ್ರಯೋಗ ಮಾಡುವ ಮನೋಹರ್ ಜೋಷಿ ಕ್ಯಾಮೆರಾ ಈ ಸಲ ಕೈ ಕೊಟ್ಟತೆ ಕಾಣುತ್ತದೆ. ಅನೇಕ ಕಡೆ ಅದ್ಭುತ ಲೊಕೇಷನ್ನುಗಳಲ್ಲಿ ವೈಡ್ ಎಸ್ಟಾಬ್ಲಿಷ್ ಮಾಡದಿರಲು ಏನು ಕಾರಣವೋ ಗೊತ್ತಿಲ್ಲ. ವೀರೇಶ್ ಥೇಟರಿನ ಪರದೆಯ ಸಮಸ್ಯೆಯೋ ಏನೋ ಅನೇಕ ಕಡೆ ದೃಶ್ಯಗಳು ಬ್ಲೀಚ್ ಆಗಿ ಕೆಟ್ಟದಾಗಿ ಪ್ರೊಜೆಕ್ಟ್ ಆಗಿವೆ!
ನಿರ್ದೇಶಕ ದೀಪಕ್ ಮಧುವನ ಹಳ್ಳಿ ಅವರಿಗೆ ದರೋಡೆ, ಟ್ರಜರ್ ಹಂಟ್ ಜಾನರಿನ ಕಥೆಗಳನ್ನು ಹೇಳುವ ಧಾಟಿ ಸಿದ್ದಿಸಿದೆ. ಹೀಗಾಗಿ ರಾಜು ಜೇಮ್ಸ್ ಬಾಂಡ್ ಎಲ್ಲಿಯೂ ಬೋರು ಹೊಡೆಸದಂತೆ ನೋಡಿಸಿಕೊಂಡು ಹೋಗುತ್ತದೆ. ಒಂದು ಚೌಕಟ್ಟನ್ನು ಹಾಕಿಕೊಂಡು, ಅದರೊಳಗೆ ಏನೇನು ಹೇಳಬೇಕೋ ಎಲ್ಲವನ್ನೂ ಸ್ಪಷ್ಟವಾಗಿ ಹೇಳಿದ್ದಾರೆ. ಅಷ್ಟರಮಟ್ಟಿಗೆ ಅಮಿತ್ ಅವರ ಸಂಕಲನವೂ ವರ್ಕ್ ಆಗಿದೆ. ಮನರಂಜನೆಗೆ ಬೇಕಿರುವ ಎಲ್ಲ ಎಲಿಮೆಂಟುಗಳನ್ನೂ ಹೊಂದಿರುವ ರಾಜು ಜೇಮ್ಸ್ ಬಾಂಡ್ ಅನ್ನು ಮಿಸ್ ಮಾಡದೇ ನೋಡಿ…












































