ಕಾಲೇಜಿನಲ್ಲಿ ಜೊತೆಯಾಗುವ ಹುಡುಗ-ಹುಡುಗಿ. ಪರಸ್ಪರ ಬೆಳೆಯುವ ಪ್ರೀತಿ. ಮನೆಯವರ ವಿರೋಧದ ನಡುವೆಯೇ ಮದುವೆ. ಮದುವೆ ನಂತರ ಯಥಾ ಪ್ರಕಾರ ಶುರುವಾಗುವ ಸಣ್ಣ ಪುಟ್ಟ ಕಿರಿಕಿರಿ-ಕಿತ್ತಾಟ. ಬ್ರೇಕಪ್ಪು… ಮುಗೀತಲ್ಲಾ ಕತೆ. ಇನ್ನೇನಿದೆ? ʻಭುವನಂ ಗಗನಂʼ ಎನ್ನುವ ಸಿನಿಮಾ ನೋಡ ನೋಡುತ್ತಾ ಮೊದಲ ಭಾಗದಲ್ಲಿ ಮೂಡುವ ಭಾವನೆಯಿದು. ಇಷ್ಟು ಕಥೆ ಹೇಳಲು ಇಷ್ಟೊಂದು ಅದ್ಧೂರಿ ಮೇಕಿಂಗು, ಸ್ಟಾರ್ ಕಾಸ್ಟುಗಳೆಲ್ಲಾ ಬೇಕಿತ್ತಾ? ಒಂದು ಹಂತದಲ್ಲಿ ಹೀಗೂ ಅನ್ನಿಸುತ್ತದೆ. ಆದರೆ, ಈ ಅನಿಸಿಕೆಗಳನ್ನೆಲ್ಲಾ ನೀವಾಳಿಸಿ ಬಿಸಾಕುವಂತಾ ಪಾತ್ರ, ಮತ್ತೊಂದು ಕತೆ ಅಚ್ಛರಿಯಂತೆ ತೆರೆದುಕೊಳ್ಳುತ್ತದೆ. ಅರೆ, ಎಷ್ಟು ಚೆಂದ, ಗಾಢವಾಗಿದೆಯಲ್ಲಾ? ಅಂತಾ ಸಮಾಧಾನಿಸುತ್ತದೆ; ಖುಷಿ ನೀಡುತ್ತದೆ; ಕಟ್ಟ ಕಡೆಯ ತನಕ ಬಿಟ್ಟೂ ಬಿಡದೆ ಕಾಡಿಸುತ್ತದೆ- ಅದು ಭುವನಂ ಗಗನಂ!

ಇಬ್ಬರ ಬದುಕಿನಲ್ಲಾದ ಪ್ರೀತಿ-ಪ್ರೇಮದ ವಿಚಾರಗಳನ್ನು ಪರಸ್ಪರರು ಹೇಳಿಕೊಳ್ಳುತ್ತಾರೆ. ಇಬ್ಬರದ್ದೂ ಪ್ರತ್ಯೇಕ ಸ್ಟೋರಿ. ಒಂದಕ್ಕೊಂದು ಲಿಂಕ್ ಇರೋದಿಲ್ಲ. ಆದರೆ ಪ್ರೀತಿಯ ಗಾಢತೆ ಮಾತ್ರ ಒಂದೇ ಆಗಿರುತ್ತದೆ. ಪೃಥ್ವಿ ಅಂಬಾರ್ ಬದುಕಿನ ಗಾಥೆಯಂತೂ ತುಂಬಾ ಆಪ್ತವೆನಿಸುತ್ತದೆ. ಮನಸ್ಸಿನಾಳಕ್ಕಿಳಿದು ಕಾಡುತ್ತದೆ.
ಮೊದಲ ಭಾಗದಲ್ಲಿ ಪ್ರಧಾನವಾಗಿ ಬರುವ ಪ್ರಮೋದ್ ಹಿನ್ನೆಲೆಯನ್ನು ಅನಗತ್ಯವಾಗಿ ಹಿಗ್ಗಿಸಿ, ಹೀರೋಗಿರಿಯನ್ನು ಉಬ್ಬಿಸಿದ್ದಾರೆ ಅನಿಸುತ್ತದೆ. ಕಾಲೇಜಿನ ಕೆಲವು ದೃಶ್ಯಗಳು, ಫೈಟುಗಳೆಲ್ಲಾ ಈ ಕತೆಗೆ ಬೇಕಾಗೇ ಇರಲಿಲ್ಲ. ಉಪಕಥೆಯಂತಿರುವ ಪೃಥ್ವಿ ಅಂಬಾರ್ ಪಾತ್ರವನ್ನು ವೃದ್ಧಿಸಿ, ಪ್ರಮೋದ್ ಸ್ಟೋರಿಯನ್ನು ಕಡಿತಗೊಳಿಸಿದ್ದರೆ ಬಹುಶಃ ಇದು ಕನ್ನಡದ ಕ್ಲಾಸಿಕ್ ಸಿನಿಮಾ ಅನ್ನಿಸಿಕೊಳ್ಳುತ್ತಿತ್ತು. ಮೊದಲ ಭಾಗದ ವೀಕ್ ಪಾಯಿಂಟುಗಳನ್ನೆಲ್ಲಾ ದ್ವಿತೀಯಾರ್ಧ ಸಂಪೂರ್ಣವಾಗಿ ಮರೆಸಿ, ಬೇರೆಯದ್ದೇ ಜಗತ್ತಿಗೆ ಕರೆದುಕೊಂಡು ಹೋಗುತ್ತದೆ. ಪೃಥ್ವಿಯ ನಟನೆಯಲ್ಲಿ ಸಮ್ಮೋಹಕ ಗುಣವಿದೆ. ಇವರ ಪಾತ್ರಕ್ಕೆ ಬರೆದಿರುವ ಸಂಭಾಷಣೆಯ ಪದಪದವೂ ನೆನಪಿನಲ್ಲುಳಿಯುತ್ತದೆ. ಸುಖಾಸುಮ್ಮನೆ ಬರೆದಂತೆ ಕಾಣುವುದಿಲ್ಲ. ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ಪೃಥ್ವಿ ನೋಡುಗರೆದೆಗೆ ತಲುಪಿಸಿದ್ದಾರೆ ಕೂಡಾ.
ಹಾಗೆಯೇ ಪ್ರಮೋದ್ ನಟನೆಯಲ್ಲಿ ಪಕ್ಕಾ ಮಾಸ್ ಫೀಲ್ ಇದೆ. ಇಬ್ಬರೂ ನಾಯಕನಟಿಯರು ಚೆಂದಕಿಂತ ಚೆಂದಗೆ ನಟಿಸಿದ್ದಾರೆ. ಪೃಥ್ವಿ ಅಂಬಾರ್ ಭಾಗದಲ್ಲಿ ಬರುವ ವಿಲನ್ ನಟನೆ ಕೂಡಾ ಪರ್ಫೆಕ್ಟ್…
ತಮಿಳಿನಲ್ಲಿ ಬಂದ ಅನ್ಬೇ ಶಿವಮ್, ದೈವ ತಿರುಮಗಳ್, ತೆಲುಗಿನ ಅರ್ಜುನ್ ರೆಡ್ಡಿ ಮೊದಲಾದ ಸಿನಿಮಾಗಳಲ್ಲಿ ಬಂದಿರುವ ಕೆಲವು ಸನ್ನಿವೇಶಗಳು, ಪಾತ್ರಗಳನ್ನೆಲ್ಲಾ ಭುವನಂ ಗಗನಂ ನೆನಪಿಸುತ್ತದಾದರೂ, ಆ ಚಿತ್ರಗಳಿಗೂ ಇದಕ್ಕೂ ಯಾವುದೇ ಬಗೆಯ ಸಂಬಂಧವಿಲ್ಲ!
ಗಿರೀಶ್ ಮೂಲಿಮನಿ ನಿರ್ದೇಶನದಲ್ಲಿ ಮೂಡಿಬಂದಿರುವ ʻಭುವನಂ ಗಗನಂʼ ಅನೇಕ ವಿಚಾರಗಳಲ್ಲಿ ಬೆಸ್ಟ್ ಅನ್ನಿಸಿಕೊಳ್ಳುತ್ತದೆ- ನಿರ್ದೇಶನ, ಕಲಾವಿದರ ನಟನೆ, ಛಾಯಾಗ್ರಹಣ, ಸಂಗೀತ, ಲೊಕೇಷನ್ನುಗಳು, ಡಿಐ, ಸೌಂಡ್ ಡಿಸೈನಿಂಗ್… ಹೀಗೆ ಅನೇಕ ವಿಭಾಗಗಳು ಎದ್ದುಕಾಣುತ್ತವೆ.
ಒಂದೇ ಒಂದು ಫ್ರೇಮಿನಲ್ಲೂ ಔಟ್ ಆಫ್ ಫೋಕಸ್ ಆಗಲಿ, ಟೆಕ್ನಿಕಲ್ ಎರರ್ ಗಳಾಗಲಿ ಇಲ್ಲಿ ಕಾಣಸಿಗುವುದಿಲ್ಲ. ಸಿನಿಮಾ ಪೂರ್ತಿ ಕನ್ನಡಿಯ ಹೊಳಪು ಪಡೆದಿದೆ. ಹೆಚ್ಚು ಲೈಟುಗಳನ್ನು ಬಳಸಿ, ಅತಿಸುಂದರವಾಗಿ ಮೂಡಿಸಿರುವ ಉದಯ್ ಲೀಲಾ ಅವರ ಕ್ಯಾಮೆರಾ ಕಲೆಯನ್ನು ಅದ್ಭುತ ಅನ್ನದಿದ್ದರೆ ತಪ್ಪಾಗುತ್ತದೆ. ವಿಜಯ್ ಗುಮ್ಮನಿನೇನಿ ಸಂಗೀತ ನಿರ್ದೇಶನದ ಹಾಡುಗಳು, ಅದರ ಸಾಹಿತ್ಯ ಎಲ್ಲವೂ ಗುಣಮಟ್ಟದಿಂದ ಕೂಡಿದೆ. ಗುಮ್ಮಿನೇನಿ ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಶ್ರಮ ವಹಿಸಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಈ ಹಿಂದೆ ರಾಜರು ಸಿನಿಮಾವನ್ನು ನೀಡಿದ್ದ ಗಿರೀಶ್ ಮೂಲಿಮನಿ ಈ ಬಾರಿ ತಮ್ಮ ಕೆಲಸದ ಮೂಲಕ ಮತ್ತೊಂದು ಹಂತ ತಲುಪಿದ್ದಾರೆ. ಸದ್ಯ ಬಿಡುಗಡೆಗೊಂಡಿರುವ ಸಿನಿಮಾಗಳ ಪೈಕಿ ಭುವನಂ ಗಗನಂ ಹೆಚ್ಚು ಕ್ವಾಲಿಟಿ ಮತ್ತು ಕಂಟೆಂಟ್ ಹೊಂದಿದೆ. ಥೇಟರಿನಲ್ಲೇ ನೋಡಬೇಕಾದ ಚಿತ್ರವಿದು…












































