ಕೆಲವರ ನಸೀಬೇ ಹಾಗೆ! ಯಾವುದನ್ನು ಹೆಚ್ಚು ಪ್ರೀತಿಸುತ್ತಾರೋ? ಅತಿಯಾಗಿ ಮೋಹಿಸುತ್ತಾರೋ? ಇನ್ನಿಲ್ಲದಂತೆ ಇಷ್ಟಪಡುತ್ತಾರೋ… ಕಟ್ಟಕಡೆಯವರೆಗೂ ಅದು ಅವರ ಕೈಗೆಟುಕುವುದೇ ಇಲ್ಲ. ಕಾಡಿಸಿ, ಪೀಡಿಸಿ ನಿರಾಸೆಯನ್ನಷ್ಟೇ ಉಳಿಸುತ್ತದೆ. ಸಿದ್ಲಿಂಗುಗೆ ಕಾರು ಬಿಟ್ಟರೆ ಟೀಚರ್ ಇಬ್ಬರೆಂದರೆ ಸರ್ವಸ್ವ. ಕಳೆದ ಸಲ ಎರಡೂ ಆತನಿಗೆ ದಕ್ಕಿರಲೇ ಇಲ್ಲ. ಮಂಗಳಾ ಟೀಚರಂತೂ ಇನ್ಯಾವತ್ತೂ ಸಿಗದ ಜಾಗಕ್ಕೆ ಹೋಗಿಬಿಟ್ಟಿದ್ದರು.

ಹತ್ತೆನ್ನೆರಡು ವರ್ಷಗಳ ನಂತರ ಸಿದ್ಲಿಂಗು ಮತ್ತೆ ಪ್ರತ್ಯಕ್ಷವಾಗಿದ್ದಾನೆ. ಟೀಚರು ಹೋದಮೇಲೂ ಇವನಿಗೆ ಕಾರಿನ ಮೇಲಿನ ಸೆಳೆತ ಹೋಗಿಲ್ಲ. ಕಾರು ಮತ್ತೆ ಕಣ್ಣೆದುರು ಬರುತ್ತದೆ. ಈಸಲವಾದರೂ ಕಾರು ಸಿದ್ಲಿಂಗು ಪಾಲಾಗುತ್ತಾ? ಸಿದ್ಲಿಂಗು ಅಂದುಕೊಂಡಂತೆ ʻಇಷ್ಟ ಪಟ್ಟಿದ್ದೇ ಶಾಪʼವಾಗಿ ಪರಿಣಮಿಸುತ್ತಾ? ಕಾರಿನ ನೆಪದಲ್ಲಿ ಇವನ ಜೊತೆಯಾದವರು ಯಾರು ಯಾರು? ಇವೆಲ್ಲಾ ವಿವರಗಳನ್ನು ನಿರ್ದೇಶಕ ವಿಜಯ್ ಪ್ರಸಾದ್ ವಿವರವಾಗಿ ವಿವರಿಸಿದ್ದಾರೆ.
ಘನ-ಗಂಭೀರ ಕತೆ ರಚಿಸಿ, ಅದನ್ನು ಸಿನಿಮಾ ರೂಪಕ್ಕಿಳಿಸೋದು ವಿಜಯ್ ಪರಸಾದ್ ಅವರ ವರಸೆ ಅಲ್ಲ. ಸಿದ್ಲಿಂಗು ಭಾಗ-೧ರ ನಂತರದ ಅವಧಿಯಲ್ಲಿ ಬಾಯಿಗೆ ಹೆಲ್ಮೆಟ್ ಹಾಕಿಸದೇ, ಮಾತಾಡಿಸೋದನ್ನೇ ಮಹಾ ಶೂರತ್ವ ಅಂದುಕೊಂಡಿದ್ದವರು ವೀಪಿ. ಎರಡನೇ ಸಿದ್ಲಿಂಗು ವಿಜಯ್ ಪ್ರಸಾದ್ ಅವರನ್ನು ಸಾಕಷ್ಟು ಬದಲಾವಣೆ ಮಾಡಿದ್ದಾನೆ. ಕತೆಯಲ್ಲಿ ಹೇಳಿಕೊಳ್ಳುವಂಥದ್ದೇನೂ ಇಲ್ಲದಿದ್ದರೂ, ವೆರೈಟಿ ಪಾತ್ರಗಳನ್ನು ಹುಟ್ಟಿಸಿದ್ದಾರೆ. ಅವುಗಳು ಮಿತಿಮೀರಿ ವರ್ತಿಸದಂತೆ ನಿಗಾ ವಹಿಸಿದ್ದಾರೆ. ಎದುರಾಗುವ ಸವಾಲುಗಳಿಗೆ ಎದೆಯೊಡ್ಡಿ ನಡೆಯುವುದು ಹೇಗೆ ಎನ್ನುವುದರ ಪಾಠ ಹೇಳಿಕೊಟ್ಟಿದ್ದಾರೆ. ಕೋರ್ಟ್ ಹಾಲಿಗೆ ಬಂದು ನಿಂತಮೇಲೆ ಕಾರಿನ ವಿಚಾರ ಗೇರು ಬದಲಿಸದೇ ನಿಧಾನಕ್ಕೆ ಚಲಿಸಿದಂತೆ ಕಾಣುತ್ತದೆ. ಮಂಜುನಾಥ್ ಹೆಗಡೆ, ಕೋಟೆ ಸೀತಮ್ಮ, ಪದ್ಮಜಾ ಅವರಿಗೆ ಒಳ್ಳೆ ರೋಲು ಸಿಕ್ಕಿದೆ. ವಿಜಯ ಪ್ರಸಾದ್ ಅವರ ಅಸ್ಥಾನ ಕಲಾವಿದರಾದ ಸುಮನ್ ರಂಗನಾಥ್ ಮತ್ತು ಸಂಗಡಿಗರ ಜೊತೆಗೆ ಈ ಸಲ ಫ್ರೆಂಚ್ ಬಿರಿಯಾನಿ ಹಂತೇಶ್ ಕೂಡಾ ಸೇರಿಕೊಂಡಿದ್ದಾರೆ. ಪಾತ್ರಗಳಿಗಿಟ್ಟಿರುವ ಹೆಸರುಗಳು ಮಜವಾಗಿವೆ. ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಯೋಗಿಯ ಮತ್ತಷ್ಟು ಮಾಗಿದ ನಟನೆ ಇಲ್ಲಿ ಕಂಡುಬರುತ್ತದೆ. ಅನೂಪ್ ಸಿಳೀನ್ ಸಂಗೀತ ಈ ಸಲ ತುಂಬಾನೇ ಸೊರಗಿ ಸುಸ್ತಾಗಿದೆ.
ತಮಾಷೆಯ ಜೊತೆಗೇ ಪರ್ಸನಾಲಿಟಿ ಡೆವಲೆಪ್ ಮೆಂಟ್ ಕ್ಲಾಸು ಅಟೆಂಡ್ ಮಾಡಿದ ಫೀಲು ಸಿದ್ಲಿಂಗು-೨ ನೋಡಿದಾಗಲೂ ಸಿಗುತ್ತದೆ.