ಮೋಹಕ ಪ್ರಕೃತಿಯ ನಡುವೆ ಘಟಿಸುವ ವಿಷ್ಣು-ಪ್ರಿಯ ಲವ್ ಸ್ಟೋರಿ!

Picture of Cinibuzz

Cinibuzz

Bureau Report

Mr. Rani_Kannada_Movie_Cinibuzz_Review_ArunkumarG_Kannada

ಪ್ರೀತಿಯಿಂದ, ಪ್ರೀತಿಗಾಗಿ ಬರೆದ ಪ್ರೀತಿಯ ಸಾಲುಗಳು

ಪ್ರೀತಿಯಿಂದ, ಪ್ರೀತಿಗಾಗಿ ಬರೆದ ಪ್ರೀತಿಯ ಸಾಲುಗಳು ಅವೆಷ್ಟೋ, ಎಷ್ಟೇ ಬರೆದರೂ ಮುಗಿಯದ ಬಣ್ಣ ಬಣ್ಣದ ಭಾವನೆಗಳ ಸಾಗರವಿದು. ಕ್ಯಾಂಪಸ್, ಕ್ಲಾಸ್ ರೂಮ್, ಲೈಬ್ರರಿ, ಕ್ಯಾಂಟೀನ್, ಬಸ್ಸು, ರೋಡು, ಪಾರ್ಕು, ಹೀಗೆ ಎಲ್ಲೆಲ್ಲೂ ಪ್ರೀತಿಸುವ ಹೃದಯಗಳ ಬಡಿತ ನಿರಂತರ… ಈತ್ತೀಚೆಗೆ ಕ್ಲಬ್ಬು, ಪಬ್ಬು ಕಾಫಿಡೇಗಳಲ್ಲಿ ಒನ್ ಡೇ ಲವ್ ಸ್ಟೋರಿಗಳು ಕಾಣಸಿಗುತ್ತವೆ. ಫೇಸ್ ಬುಕ್, ವಾಟ್ಸಾಪ್ ಸ್ಟೇಟಸ್ಸಿಗಿಂತಲೂ ಚಿಕ್ಕದಾಗಿ ಮುಗಿದು ಹೋಗೋ ಲವ್ ಸ್ಟೋರಿಗಳೂ ನಡೆಯುತ್ತಿವೆ. ಇದು 1990ರ ದಶಕಗಳ ಎರಡಯ ಹೃದಯಗಳ ವಿಷಯ. ಒಂದು ಪ್ರಾಮಾಣಿಕ ಪ್ರೀತಿಯ ಹುಚ್ಚು ಪ್ರೇಮಕಥೆ ಇಲ್ಲಿದೆ… – ಹೀಗೆ ಯೋಗರಾಜ್ ಭಟ್ ಅವರ ಹಿನ್ನೆಲೆ ನಿರೂಪಣೆಯೊಂದಿಗೆ ಆರಂಭಗೊಳ್ಳುವ ಕತೆ ವಿಷ್ಣುಪ್ರಿಯ ಚಿತ್ರದ್ದು!

ಚೆಂದಕಿಂತಾ ಚೆಂದವಾದ ಪ್ರಕೃತಿಯ, ಪರಿಸರದ ಹಿನ್ನೆಲೆಯಲ್ಲಿ ಕಟ್ಟಿರುವ ಅಪ್ಪಟ ಪ್ರೇಮ ಕಥಾನಕ ವಿಷ್ಣುಪ್ರಿಯ. ಕಾಲೇಜು ಹುಡುಗಿಯನ್ನು ಚುಡಾಯಿಸುವ ಪೊರ್ಕಿಗಳು, ಅವರಿಗೆ ದಾದಾ ಸ್ಟೈಲಲ್ಲಿ ಬಂದು ಗುಮ್ಮುವ ಹೀರೋ- ಹೀಗೆ ನಿರೀಕ್ಷಿತ ವಿಚಾರದೊಂದಿಗೆ ಆರಂಭವಾಗುವ ಚಿತ್ರ ನಂತರ ಯಾರೂ ನಿರೀಕ್ಷಿಸದ ಹಂತಗಳನ್ನು ತಲುಪುತ್ತದೆ. ಸ್ನೇಹಿತನ ಇಷ್ಟದ ಹುಡುಗಿಯ ಮುಂದೆ ಹೋಗಿ ʻಅವನು ನಿನ್ನನ್ನು ಲವ್ ಮಾಡ್ತಿದ್ದಾನೆʼ ಎನ್ನುವ ಹೀರೋ. ʻನಾನು ನಿನ್ನನ್ನು ಲವ್ ಮಾಡ್ತಿದ್ದೀನಿʼ ಎಂದು ನೇರವಾಗಿ ಹೇಳಿಬಿಡುವ ಹುಡುಗಿ… ಮುಂದೆ ಏನೇನಾಗಬಹುದು? ಏನಾಗಬಾರದು? ಎಲ್ಲವೂ ಹಂತ ಹಂತವಾಗಿ ಘಟಿಸುತ್ತಾ ಹೋಗುತ್ತದೆ. ಹೌದಲ್ವಾ ಆಗೆಲ್ಲಾ ಪ್ರೀತಿ ಎಷ್ಟು ಗಾಢವಾಗಿ ಉಳಿಯುತ್ತಿತ್ತು… ಒಬ್ಬರನ್ನೊಬ್ಬರು ಪ್ರೀತಿಸಿದ ಮೇಲೆ ಅಕ್ಷರಶಃ ಅವರು ಹುಚ್ಚರಂತಾಡುತ್ತಿದ್ದರು. ಈಗಿನಂತೆ ದಿನಕ್ಕೊಂದು ಬ್ರೇಕಪ್ಪು, ಲಿವ್ ಇನ್ ರಿಲೇಷನ್ಶಿಪ್ಪು, ಡೇಟಿಂಗು, ಚಾಟಿಂಗುಗಳೆಲ್ಲಾ ಆಗಿರಲಿಲ್ಲ. ಪತ್ರ ಬರೆಯುವುದು ಬಿಟ್ಟರೆ, ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವುದು. ಕೈ ಹಿಡಿದು ಸುತ್ತಾಡುವುದು, ಬೆನ್ನಿಗೆ ಬೆನ್ನು ಕೊಟ್ಟು ಕಾಲ ಕಳೆಯುವುದು – ಇಂಥ ಮಧುರ ಅನುಭೂತಿಗಳನ್ನು ಮತ್ತೆ ಪ್ರೇಕ್ಷಕರೆದೆಗೆ ದಾಟಿಸಿರುವ ಚಿತ್ರ ವಿಷ್ಣುಪ್ರಿಯ.

ನಿರ್ದೇಶಕ ವಿ.ಕೆ. ಪ್ರಕಾಶ್ ಆ ಕಾಲದವರೇ ಆಗಿರುವುದರಿಂದ, ಆವತ್ತಿನ ದೃಶ್ಯಗಳನ್ನು ಸಲೀಸಾಗಿ ಕಟ್ಟಿದ್ದಾರೆ. ವಿನೋದ್ ಭಾರತಿ ಎನ್ನುವ ಕಲೆಗಾರ ಛಾಯಾಗ್ರಾಹಕ ಇಟ್ಟಿರುವ ಒಂದೊಂದು ಫ‍್ರೇಮು ಕೂಡಾ ʻವಾಹ್ʼ ಎನ್ನುವಂತಿವೆ. ಆ ಹಸಿರು, ಮಳೆ, ಬೆಟ್ಟ, ಗುಡ್ಡ ಪರಿಸರಗಳನ್ನು ಹಿಡಿಹಿಡಿಯಾಗಿ ಹಿಡಿದು ಪರದೆಗೆ ಒರಗಿಸಿದ್ದಾರೆ. ಮನಸ್ಸಿಗೆ ಹತ್ತಿರವಾದ ಕಥೆಯನ್ನು ಹೇಳುವಾಗ, ವಿಶಾಲವಾದ ಹಿನ್ನೆಲೆಯನ್ನು ಆಯ್ಕೆ ಮಾಡಿಕೊಂಡಾಗ ಪೂರಕವಾದ ತಾಂತ್ರಿಕತೆ ಕೂಡಾ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ʻವಿಷ್ಣುಪ್ರಿಯʼಗೆ ವಿನೋದ್ ಭಾರತಿ ಕ್ಯಾಮೆರಾ ತುಂಬಾನೇ ಸಹಕಾರಿಯಾಗಿದೆ. ನಾಗೇಂದ್ರ ಪ್ರಸಾದ್ ಅವರು ಬರೆದಿರುವ ʻಚಿಗುರು ಚಿಗುರುʼ ಮತ್ತು ʻಏಳು ಗಿರಿಗಳʼ ಎರಡೂ ಹಾಡು ಚಿತ್ರದ ಕಥೆಗೆ ಪೂರಕವಾಗಿರುವುದರ ಜೊತೆಗೆ ಭಾವತೀವ್ರಗೊಳಿಸುತ್ತದೆ. ಗೋಪಿ ಸುಂದರ್ ನೀಡಿರುವ ಸಂಗೀತ ಮತ್ತು ಹಿನ್ನೆಲೆ ಸಂಗೀತ ಕೂಡಾ ಅತ್ಯುತ್ತಮ ಗುಣಮಟ್ಟ ಹೊಂದಿದೆ.

ಶ್ರೇಯಸ್ ಮಂಜು ಒಳಗಿರುವ ನಿಜವಾದ ಕಲಾವಿದ ʻವಿಷ್ಣುಪ್ರಿಯʼ ಮೂಲಕ ಹೊರಬಂದಿದ್ದಾನೆ. ಎಂಥದ್ದೇ ಪಾತ್ರ ಕೊಟ್ಟರೂ ಅದರ ಆಳಕ್ಕಿಳಿದು ಅಭಿನಯಿಸುವ ಶಕ್ತಿ ಇದೆ ಎನ್ನುವುದನ್ನು ಸಾರಿ ಹೇಳಲು ಶ್ರೇಯಸ್ ಅವರಿಗೆ ವಿಷ್ಣುಪ್ರಿಯಗಿಂತಾ ಬೇರೆ ಸಿನಿಮಾ ಬೇಕಿಲ್ಲ. ಇದೊಂದು ಸಿನಿಮಾ ಬಹುಶಃ ಶ್ರೇಯಸ್ ವೃತ್ತಿ ಬದುಕನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯಬಲ್ಲದು. ಅಷ್ಟರ ಮಟ್ಟಿಗೆ ಎಫರ್ಟ್ ಹಾಕಿ, ಪಾತ್ರಕ್ಕೆ ಏನು ಬೇಕೋ ಎಲ್ಲವನ್ನೂ ನೀಡಿದ್ದಾರೆ. ಪ್ರಿಯಾ ವಾರಿಯರ್ ಕೂಡಾ ಉತ್ತಮ ಆಯ್ಕೆ ಎನ್ನುವುದು ವಿಷ್ಣು ಪ್ರಿಯ ನೋಡಿದವರಿಗೆ ಗೊತ್ತಾಗುತ್ತದೆ.

ಕಥೆ 90ರ ದಶಕದ್ದಾದರೂ ಇವತ್ತಿಗೆ ತಕ್ಕಂತೆ ಸ್ಪೀಡು ಇರಬೇಕಿತ್ತು ಅಂತಾ ಕೆಲವೊಂದು ಕಡೆ ಅನ್ನಿಸುತ್ತದೆ. ಅದು ಬಿಟ್ಟರೆ, ಎಲ್ಲಿಯೂ ಬೇಸರ ಮೂಡಿಸದೇ ಸರಾಗವಾಗಿ ಚಲಿತ್ತಾ, ಬೆಚ್ಚನೆಯ ಭಾವ ಮೂಡಿಸುವುದರ ಜೊತೆಗೆ ಏನಾಗಿಬಿಡುತ್ತದೋ ಅಂತಾ ಆತಂಕ ಮೂಡಿಸುವ ವಿಚಾರಗಳು ಇಲ್ಲಿವೆ. ಇಡೀ ಸಿನಿಮಾ ಹಸಿರಿನ ಹಿನ್ನೆಲೆ, ಒದ್ದೆಯಾದ ಪಕೃತಿಯ ನಡುವೆ ರೂಪುಗೊಂಡಿದೆ. ಕಡೆಯಲ್ಲಿ ನೋಡುಗರ ಮನಸ್ಸನ್ನು ತೇವಗೊಳಿಸುವ, ಕಣ್ಣಂಚಲ್ಲಿ ನೀರು ಜಿನುಗಿಸುವ ಕ್ಲೈಮ್ಯಾಕ್ಸ್ ಕೂಡಾ ಇಲ್ಲಿದೆ. ಒಂದೊಳ್ಳೇ ಫೀಲ್ ಇರುವ ಸಿನಿಮಾ ನೋಡಬಯಸುವವರೆಲ್ಲಾ ʻವಿಷ್ಣುಪ್ರಿಯʼ ಚಿತ್ರವನ್ನು ಮಿಸ್ ಮಾಡದೇ ನೋಡಿ!

ಇನ್ನಷ್ಟು ಓದಿರಿ

Scroll to Top