ಸ್ಥಾವರಕ್ಕಳಿವುಂಟು.. ಜಂಗಮಕ್ಕಳಿವಿಲ್ಲ.. ಎನ್ನುವ ಜೋಗಿಯ ಪಯಣ..

Picture of Cinibuzz

Cinibuzz

Bureau Report

ಎಲ್ಲೋ ಜೋಗಪ್ಪ ನಿನ್ನರಮನೆ..

ಎಲ್ಲೋ ಜೋಗಪ್ಪ ನಿನ್ನರಮನೆ..

ಬದುಕು ಬಂದಂತೆ ಸ್ವೀಕರಿಸುತ್ತಾ ಸಾಗಬೇಕು ಎಂದು ನಂಬಿ ಬದುಕುತ್ತಿರುವ “ಆದಿ”.. ಇದಕ್ಕೆ ವಿರುದ್ದವೆಂಬಂತೆ, ನಮ್ಮ ಬದುಕನ್ನು ನಾವೇ ಕಟ್ಟಿಕೊಂಡು, ರೂಪಿಸಿಕೊಂಡು ನೆಲೆ ನಿಲ್ಲಬೇಕು ಎನ್ನುವ ಆದಿಯ ತಂದೆ. ಇಬ್ಬರ ನಡುವೆ ತಿಕ್ಕಾಟ, ಈ ನಡುವೆ ನೆಮ್ಮದಿಯಿಂದ ಇರಲು ಹಣವೇ ಮುಖ್ಯವಲ್ಲ ಎಂದು ಗಾಢವಾಗಿ ನಂಬಿರುವ ಆದಿ ಯಾರಿಗೂ ಹೇಳದೆ ಒಬ್ಬೊಂಟಿಯಾಗಿ ತನ್ನ ಪಯಣ ಆರಂಭಿಸುತ್ತಾನೆ. ದಾರಿಯಲ್ಲಿ ಸಿಗುವ ವಾಹನಗಳಲ್ಲಿ ಲಿಫ್ಟ್ ತೆಗೆದುಕೊಳ್ಳುತ್ತಾ, ಸಿಕ್ಕಲ್ಲಿ ರಾತ್ರಿ ಕಳೆಯುತ್ತಾ, ಅಲ್ಲಲ್ಲಿ ಅದೋ ಇದೋ ಕೆಲಸಗಳನ್ನು ಮಾಡುತ್ತಾ ಆದಿಯ ಪಯಣ ಸಾಗುತ್ತಿರುತ್ತದೆ. ಈ ಹಾದಿಯಲ್ಲಿ ಜೊತೆಯಾಗುವವನೇ ಸಂಗ್ಯಾ. ಸಂಗ್ಯಾನಿಗೆ, ಆತನದೇ ಆದ ಸಮಸ್ಯೆಗಳು. ಒಂದೆಡೆ, ಹಣಕಾಸಿನ ಒತ್ತಡವಾದರೆ, ಮತ್ತೊಂಡೆ ಕಳೆದು ಹೋದ ತನ್ನ ತಂದೆಯ ಹುಡುಕಾಟ. ಇವರಿಬ್ಬರ ಜೊತೆಗೆ ಸೇರಿಕೊಳ್ಳುವವಳು, ಮರಾಠಿ ಹುಡುಗಿ ಶೀತಲ್. ಈಕೆ ತನ್ನ ಪ್ರಿಯಕರನನ್ನು ಭೇಟಿಯಾಗಲು ಹೊರಟಿದ್ದಾಳೆ. ಇವಳಿಗೆ ಸಹಾಯ ಮಾಡಲು ನಿಲ್ಲುವ ಆದಿ. ಪಯಣ ಮುಂದವರೆಯುತ್ತಿದಂತೆ, ಮತ್ತೋರ್ವ ಸಹಪಯಣಿಗಳ ಪ್ರವೇಶವಾಗುತ್ತದೆ. ಆಕೆಯೇ ಟ್ರಾವೆಲ್‌ ವ್ಲೋಗರ್ ಸ್ವರ. ಇಲ್ಲಿಂದ ಮುಂದೆ ಸ್ವರಾಳ ಜೀಪಿನಲ್ಲಿ ಪಯಣ ಸಾಗುತ್ತದೆ. ಈ ನಡುವೆ ಇವರಿಗೆ ಸಿಗುವ ಹೋಟೆಲ್‌ ನಡೆಸುವ ಗರ್ಭಿಣಿ ಹೆಂಗಸಿನ ನೋವಿನ ಕಥೆ. ಹೀಗೆ ಭಿನ್ನ ಭಿನ್ನ ಗುರಿಗಳನ್ನು ಹೊಂದಿರುವ ಹಲವು ಪಯಣಿಗರ ನಡುವೆ ಆದಿಗೆ ತನ್ನ ಬದುಕಿನ ಬಗ್ಗೆ ಅರಿವು ಮೂಡುತ್ತಾ ಹೋಗುತ್ತದೆ. ಇಷ್ಟೇನಾ ಕಥೆ ಅಂದರೆ..? ಅಲ್ಲ.. ಇಲ್ಲಿರುವ ಹಲವು ವಿಚಿತ್ರ ತಿರುವುಗಳು.. ಪಯಣವನ್ನು ಕುತೂಹಲಕಾರಿಯಾಗಿಸುತ್ತದೆ.

ಈ ಬಗೆಯ ವಿಭಿನ್ನ ಕಥಾವಸ್ತುವಿಗೆ ಕೈ ಹಾಕಿರುವ ನಿರ್ದೇಶಕ ಹಯವದನ, ಕಥೆಯೊಂದಿಗೆ ಪ್ರೇಕ್ಷಕರೂ ಪಯಣಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಥಮಾರ್ಧದಲ್ಲಿ ಕೆಲವೊಂದು ಪ್ರಶ್ನೆಗಳನ್ನು ಮೂಡಿಸಿ, ದ್ವೀತೀಯಾರ್ಧದಲ್ಲಿ ಅದಕ್ಕೆ ಉತ್ತರ ನೀಡುವಲ್ಲಿ ಸಫಲರಾಗಿದ್ದಾರೆ ನಿರ್ದೇಶಕರು. ಇವೆಲ್ಲವನ್ನು ತೆರೆಯ ಮೇಲೆ ಅಚ್ಚುಕಟ್ಟಾಗಿ ಮೂಡಲು, ಸಿನೆಮಾಟೋಗ್ರಫರ್‌ ನಟರಾಜ್‌ ಸಾಥ್‌ ಕೂಡ ಇದೆ. ಸುಮಾರು ಎರಡು ಘಂಟೆ ಅವಧಿಯ ಈ ಸಿನೆಮಾ, ಅಷ್ಟೇನೂ ಧೀರ್ಘ ಪಯಣವಲ್ಲ ಎಂದೆನಿಸಲು ಕಾರಣ, ಸಂಕಲನಕಾರ ರವಿಚಂದ್ರನ್‌ ಅವರ ಒಪ್ಪವಾದ ಕತ್ತರಿ ಕೆಲಸ ಎಂದೆನ್ನಬಹುದು.

ನಾಯಕ ಆದಿಯ ಪಾತ್ರದಲ್ಲಿ, ಅಂಜನ್‌ ನಾಗೆಂದ್ರ, ನಾಯಕನ ಗೆಳೆಯನಾಗಿ ದಾನಪ್ಪ, ಮರಾಠಿ ಹುಡುಗಿಯಾಗಿ ವೆನ್ಯಾ ರೈ, ಟ್ರಾವೆಲ್‌ ವ್ಲಾಗರ್‌ ಸ್ವರಾಳಾಗಿ ಸಂಜನಾ ದಾಸ್ ಸೇರಿದಂತೆ ದಿನೇಶ್ ಮಂಗಳೂರು , ಸ್ವಾತಿ ಬಿರಾದಾರ್ , ಲಕ್ಷ್ಮಿ, ನಾಡಗೌಡ, ರೇಖಾ ರಾವ್ ಸೇರಿದಂತೆ ಎಲ್ಲರೂ ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.

ವಿಶೇಷವಾಗಿ ನಟಿ ಇಳಾ ವಿಟ್ಲ ಪಾತ್ರ ಮನ ಮುಟ್ಟುವಂತಿದೆ. ಜೊತೆಗೆ ತಂದೆಯ ಪಾತ್ರಕ್ಕೆ ಸಮರ್ಥವಾಗಿ ನ್ಯಾಯ ಒದಗಿಸಿದವರು ಶರತ್‌ ಲೋಹೀತಾಶ್ವ.


ಒಟ್ಟಾರೆಯಾಗಿ “ಎಲ್ಲೋ ಜೋಗಪ್ಪ ನಿನ್ನರಮನೆ” ಇತ್ತೀಚಿನ ದಿನಗಳಲ್ಲಿ ಬಂದ ಒಂದು ಅರ್ಥಪೂರ್ಣ ಕೌಟುಂಬಿಕ ಮನೋರಂಜನೆಯ ಚಿತ್ರವಾಗಿದ್ದು , ಎಲ್ಲರೂ ಒಮ್ಮೆ ನೋಡುವಂತಿದೆ.

ಇನ್ನಷ್ಟು ಓದಿರಿ

Scroll to Top