ತರ್ಕಕ್ಕೆ ನಿಲುಕದ್ದು!

Picture of Cinibuzz

Cinibuzz

Bureau Report

ತರ್ಕಕ್ಕೆ ನಿಲುಕದ್ದು!

ನೀರಿನಲ್ಲಿ ಕಾಣದ ಮೀನಿನ ಹೆಜ್ಜೆಯ ಹಾಗೆ ಒಬ್ಬ ಮನುಷ್ಯನ ಅಂತರಾಳವನ್ನು, ಆಲೋಚನೆಗಳನ್ನು ಅವನೊಬ್ಬನನ್ನು ಬಿಟ್ಟು ಬೇರೆ ಯಾರಿಂದಲೂ ಗ್ರಹಿಸಲು ಸಾಧ್ಯವಿಲ್ಲ… ಹತ್ತಾರು ವರ್ಷಗಳು ಹೆತ್ತು, ಹೊತ್ತು, ತಮ್ಮೆಲ್ಲಾ ಸುಖ-ಸಂತೋಷಗಳನ್ನು ತ್ಯಜಿಸಿ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಸಾಕಿ ಸಲುಹಿ ಬೆಳೆಸಿದ ತಂದೆ-ತಾಯಿಗಳಿಗಿಂತ, ಹೊರ ಜಗತ್ತಿಗೆ ಅಮಾಯಕನಂತೆ ತನ್ನನ್ನು ತಾನು ಪ್ರದರ್ಶಿಸಿಕೊಳ್ಳುತ್ತಾ, ಅಂತರಂಗದಲ್ಲಿ ಕಾಮ, ಕ್ರೋಧ, ಕ್ರೌರ್ಯಗಳನ್ನೇ ತುಂಬಿಕೊಂಡವರಿರುತ್ತಾರೆ. ತಮ್ಮ ಸ್ವಾರ್ಥಕ್ಕಾಗಿ ಮಾನವೀಯತೆಯನ್ನೇ ಮರೆತು ಅಮಾನವೀಯ ಕೃತ್ಯವನ್ನೆಸಗುವ ಗೋಮುಖ ವ್ಯಾಘ್ರಗಳಿರುತ್ತಾರೆ. ಪ್ರೀತಿಯ ಅಮಲಿಗೆ ಮರುಳಾಗಿ, ಅಪರಿಚಿತನ ಬಾಹುಬಂಧನದ ಸುಖದ ಆಲಿಂಗನದಲ್ಲಿ ಬಾಡಿ ಎಂದೂ ಮುಡಿಯಲಾರದ ಮಸಣದ ಹೂವಾಗಬಾರದು. ತಂದೆ-ತಾಯಿಯ ಪ್ರೀತಿ ವಾತ್ಸಲ್ಯದ ಮಡಿಲಿನಲ್ಲಿ ಅರಳಿ ಐಕ್ಯವಾಗುವ ದೇವರ ಹೂವುಗಳಾಗಿ. – ಇವೆಲ್ಲಾ ಸಿನಿಮಾದ ಅಂತ್ಯದಲ್ಲಿ ಬರುವ ಸಾಲುಗಳು.

ನಿಜ. ಅನೇಕರ ಬದುಕು ಅಂದುಕೊಂಡಹಾಗೆ ಇರೋದೇ ಇಲ್ಲ. ಮೇಲ್ನೋಟಕ್ಕೆ ಕಾಣುವುದಕ್ಕಿಂತಾ ಆಂತರ್ಯದಲ್ಲಿ ಬೇರೆಯದ್ದೇ ಮನಸ್ಥಿತಿಯಿಂದ ಬದುಕುತ್ತಿರುತ್ತಾರೆ. ಸಮಾಜ ಯಾರಿಗೆಲ್ಲಾ ʻಮುಗ್ದʼ, ʻಸಭ್ಯʼ, ʻಭಾಳಾ ಒಳ್ಳೇ ವ್ಯಕ್ತಿʼ… ಎಂಬಿತ್ಯಾದಿಯಾಗಿ ಹಣೆ ಪಟ್ಟಿ ಕಟ್ಟಿರುತ್ತದೋ, ವಾಸ್ತವದಲ್ಲಿ ಅವರು ಹಾಗೆ ಇರೋದೇ ಇಲ್ಲ. ಸಮಾಜ ಹೊರಿಸಿದ ಆರೋಪವನ್ನು ಅನಾಯಾಸವಾಗಿ ಹೊತ್ತು ತಿರುಗುತ್ತಿರುತ್ತಾರೆ ಅಷ್ಟೇ!

ಇಲ್ಲಿ ಜಗತ್ತಿನ ಕಣ್ಣಿಗೆ ಒಳ್ಳೆಯವರಂತೆ ಕಾಣುವವರ ಅಸಲಿಯತ್ತೇ ಬೇರೆ ಇರುತ್ತದೆ. ದುಷ್ಟ ಅನ್ನಿಸಿಕೊಂಡವನ ವಾಸ್ತವ ನಿಜಕ್ಕೂ ಭಿನ್ನವಾಗಿರುತ್ತದೆ. ಇಂಥದ್ದೇ ವಿಚಾರವನ್ನಿಟ್ಟುಕೊಂಡು ರೂಪುಗೊಂಡಿರುವ ಚಿತ್ರ ತರ್ಕ. ʻತರ್ಕಕ್ಕೆ ನಿಲುಕೋದಿಲ್ಲʼ ಎನ್ನುವ ಮಾತಿಗೆ ಅನ್ವರ್ಥದಂತೆ ಮೂಡಿ ಬಂದಿರುವ ಚಿತ್ರ ತರ್ಕ. ಮಿಡಲ್ ಕ್ಲಾಸ್ ಫ್ಯಾಮಿಲಿ, ಕೋಳಿ ಅಂಗಡಿ ನಡೆಸುವ ಹುಡುಗ, ಮುಸ್ಲಿಮ್ ಹುಡುಗಿಯೊಂದಿಗೆ ಆತನ ಪ್ರೀತಿ, ವಿರೋಧಗಳು… ಹೀಗೆ ಸಾಗುತ್ತಿದ್ದ ಸಿನಿಮಾದ ಕೊನೆಯ ಹತ್ತು ನಿಮಿಷ ಯಾರೂ ಊಹಿಸದ ಘಟನೆಗಳೊಂದಿಗೆ ಅಚ್ಛರಿ ನೀಡುತ್ತದೆ. ವಿಕೃತ ಮನಸ್ಥಿತಿ ಹೀಗೂ ಇರುತ್ತದಾ ಎನ್ನುವ ರೇಂಜಿಗೆ ಗಾಬರಿ ಹುಟ್ಟಿಸುತ್ತದೆ.

ಒಬ್ಬೊಬ್ಬರ ಮನೋವಿಕೃತಿ ಒಂದೊಂದು ಬಗೆಯದ್ದು. ಪ್ರೀತಿಸಿದವಳನ್ನೇ ಕೊಂದ ಪಾಗಲ್ ಪ್ರೇಮಿ, ಕೊಲೆ ಮಾಡಿ ತುಂಡು ತುಂಡು ಮಾಡಿದ ಸೈಕೋ ಕಿಲ್ಲರ್… ಹೀಗೆ ಸುದ್ದಿಗಳು ಪ್ರಕಟವಾಗುತ್ತಲೇ ಇರುತ್ತವಲ್ಲಾ? ಅಂಥದ್ದೇ ನೈಜ ಪ್ರಕರಣವನ್ನು ಆಧರಿಸಿ ಕಟ್ಟಿರುವ ಚಿತ್ರ ತರ್ಕ. ವಾಸ್ತವಕ್ಕೆ ಹತ್ತಿರವಾದ ಅನೇಕ ಪಾತ್ರಗಳು, ಘಟನೆಗಳು ಇಲ್ಲಿವೆ. ಚಿತ್ರದಲ್ಲಿ ಸಂಭಾಷಣೆ ಸರಳವಾಗಿದ್ದರೂ, ಮನಸ್ಸಿಗೆ ಹತ್ತಿರುವಾಗುವಂತಿದೆ. ʻಇವತ್ತ್ನ ಫ್ರೆಂಡು ನಾಳೆಗೆ ದುಶ್ಮನ್ನಾಗೋದುʼ ಎಂಬ ರೀತಿಯ ಮಾತಿದೆ. ಸ್ನೇಹದಿಂದಲೇ ಶುರುವಾಗುವ ಬಹುತೇಕ ವಿಚಾರಗಳು ಅನೇಕ ಸಲ ಮನಸ್ತಾಪಗಳಲ್ಲಿ, ಕೆಲವೊಮ್ಮೆ ದುರಂತಗಳಲ್ಲಿ ಕೊನೆಯಾಗುತ್ತದೆ. ಪುನೀತ್ ಮಾನವ ಈ ಚಿತ್ರದ ನಿರ್ದೇಶಕ. ಭ್ರಮೆಗಳನ್ನೆಲ್ಲಾ ಪಕ್ಕಕ್ಕಿಟ್ಟು, ಮನುಷ್ಯನ ನಿಜ ಮನಸ್ಥಿತಿಯನ್ನು ತರ್ಕ ಮೂಲಕ ಬೆತ್ತಲು ಮಾಡಿದ್ದಾರೆ. ಅಂಜನಮೂರ್ತಿ ಹೊಸಬರಾದರೂ ಪುರುಷೋತ್ತಮನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಮುರಳಿಮೋಹನ್, ಜ್ಯೋತಿ ಮೂರೂರು, ವೆಂಕಟಾಚಲ ಮತ್ತು ಕಾವ್ಯ ಪ್ರಕಾಶ್ ಕೂಡಾ ಸಹಜವಾಗಿ ಅಭಿನಯಿಸಿದ್ದಾರೆ. ಪ್ರತಿಮಾ ಠಾಕೂರ್ ನಟನೆ ಕೂಡಾ ಉತ್ತಮವಾಗಿದೆ.


ಲೋಕಲ್ ಏರಿಯಾದ ಕಥಾವಸ್ತು, ತೀರಾ ಸರಳವಾಗಿ ತೆರೆದುಕೊಂಡಿದೆ. ಸಿಕ್ಕಿರುವ ಸೌಲಭ್ಯದಲ್ಲೇ ತಾಂತ್ರಿಕವಾಗಿಯೂ ಗುಣಮಟ್ಟ ಕಾಯ್ದುಕೊಂಡಿರೋದು ತರ್ಕ ತಂಡದ ಹೆಚ್ಚುಗಾರಿಕೆ. ಅರುಣ್ ಕುಮಾರ್ ಮತ್ತು ನಿವಾಸ್ ಕ್ಯಾಮೆರಾ ಕೆಲಸ ನೀಟಾಗಿದೆ. ಉಜ್ವಲ್ ಚಂದ್ರ ಕಷ್ಟಪಟ್ಟು ಸಂಕಲನ ಮಾಡಿದ್ದಾರೆ. ಸೂರಜ್ ಜೋಯಿಸ್ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.

ಇನ್ನಷ್ಟು ಓದಿರಿ

Scroll to Top