500 ವರ್ಷಗಳ ಹಿಂದೆ ಒಂದು ಸಂಸ್ಥಾನದಲ್ಲಿ ರಾಜ ಯಾವಾಗಲೂ ಮಂತ್ರಿಯನ್ನು ʻದಡ್ಡ ದಡ್ಡʼ ಎಂದು ಹೀಯಾಳಿಸುತ್ತಿರುತ್ತಾನೆ. ಈ ಕಾರಣಕ್ಕೆ ಮನಸ್ಸಿನಲ್ಲಿ ದ್ವೇಷ ಇಟ್ಟುಕೊಂಡಿದ್ದ ಮಂತ್ರಿ ಅದೊಂದು ದಿನ ಸಮಯ ನೋಡಿ ರಾಜ್ಯದ ಸಮಸ್ತ ಸಂಪತ್ತನ್ನು ಲಪಟಾಯಿಸಿ, ಒಂದು ಜಾಗದಲ್ಲಿ ಇಟ್ಟು ರಾಜನಿಗೆ ಒಂದು ಪತ್ರ ಬರೆದು ʻನೀನು ಬುದ್ಧಿವಂತ ಆಗಿದ್ದರೆ ಇದೇನು ಹುಡುಕುʼ ಅಂತಾ ಹೇಳಿರುತ್ತಾನೆ… ನಂತರ ಆ ರಾಜ ಹುಡುಕುವುದಿಲ್ಲ… ಇವೆಲ್ಲವೂ ಚಿತ್ರದ ಫ್ಲಾಶ್ಬ್ಯಾಕಿನಲ್ಲಿ ಬರುವ ಕತೆ..

ನಾಲ್ಕು ಜನ ಹುಡುಗರು ಊರಿನ ಜನ ಮತ್ತು ಊರಿನ ಗೌಡನ ಜೊತೆ ಸೇರಿ ನಿಧಿಯನ್ನು ಹುಡುಕುವಾಗ ಏನೆಲ್ಲಾ ಆಗುತ್ತದೆ ಅನ್ನೋದು ನಾರಾಯಣ ನಾರಾಯಣ ಚಿತ್ರದ ಒಂದು ಎಳೆ ಕಥೆ. ನಿಧಿಯನ್ನು ಹುಡುಕಲು ಗೌಡ ಒಬ್ಬ ಮಂತ್ರವಾದಿಯನ್ನು ಕರೆತಂದಿರುತ್ತಾನೆ. ಇವರಿಗೆ ತೊಂದರೆ ಆಗಬಾರದು ಎಂದು 4 ಜನ ಹುಡುಗರನ್ನು ಜೈಲಿಗೆ ದಬ್ಬಿಸಿರುತ್ತಾನೆ. ಈ ವಿಷಯ ಹೇಗೋ ತಿಳಿದು ಹುಡುಗರು ಜೈಲಿನಿಂದ ಬಂದು ಆ ಪೂಜೆಯನ್ನು ತಪ್ಪಿಸುತ್ತಾರೆ. ಈ ಮೂಲಕ ಊರ ಜನರಿಗೆಲ್ಲ ನಿಧಿಯ ವಿಷಯ ತಿಳಿಯುತ್ತದೆ.. ಈ ನಡುವೆ ಒಬ್ಬ ಹುಡುಗನಿಗೆ (ಪೂಜಾರಿ) ಕೃಷ್ಣ ಕಾಣಿಸಿಕೊಂಡು ನಿಧಿಯ ಬಗ್ಗೆ ಆಸೆ ಬೇಡ ಎಂದು ತಿಳಿಸುತ್ತಾನೆ. ನಿಧಿ ಇರುವ ಜಾಗ ತಿಳಿದವರು ದುರಾಸೆಗೆ ಬಿದ್ದು, ತಮ್ಮ ಬದುಕನ್ನು ಏನು ಮಾಡಿಕೊಳ್ಳುತ್ತಾರೆ ಅನ್ನೋದು ಚಿತ್ರದ ಅಂತ್ಯ ಮತ್ತು ಕುತೂಹಲ. ನಿಧಿಯ ಆಸೆಗೆ ಯಾವುದೇ ಬಲಿ, ಜೀವಹಾನಿ ಆಗಬಾರದು ಅನ್ನೋದು ಚಿತ್ರದ ಅಂತಿಮ ಸಂದೇಶ ಕೂಡಾ ಹೌದು.
ಮೊದಲ ಭಾಗ ಹಾಗೆ ಹೀಗೆ ಓಲಾಡಿದರೂ, ದ್ವಿತೀಯಾರ್ಧ ಅಲುಗಾಡದಂತೆ ಕೂರಿಸುತ್ತದೆ. ಹಿನ್ನಲೆ ಸಂಗೀತದಲ್ಲಿ ಇನ್ನೊಂಚೂರು ಧಮ್ ಇದ್ದಿದ್ದರೆ ಸಿನಿಮಾ ಮತ್ತೊಂದು ಲೆವೆಲ್ಲಿಗೆ ರೀಚ್ ಆಗುತ್ತಿತ್ತು. ಹಾಡುಗಳು ಕೇಳುವಂತಿವೆ. ಹೊಡೆದಾಟದ ದೃಶ್ಯಗಳು ಸರಳವಾಗಿ ಮೂಡಿಬಂದಿವೆ. ನಾಯಕ ಕೀರ್ತಿ ಕೃಷ್ಣ, ಪವನ್ ಸೇರಿದಂತೆ ಒಂದಿಷ್ಟು ಜನರ ನಟನೆ ಗಮನ ಸೆಳೆಯುತ್ತದೆ. ನಿರ್ದೇಶಕ ಶ್ರೀಕಾಂತ್ ಕೆಂಚಪ್ಪ ತುಂಬಾ ಗಂಭೀರವಾದ ವಿಚಾರಕ್ಕೆ ಕಾಮಿಡಿ ಲೇಪಿಸಿ, ಮನರಂಜಿಸಿದ್ದಾರೆ.
ಹೇಳಿ ಕೇಳಿ, ಇದು ಮೂಢ ನಂಬಿಕೆಯ ಜೊತೆಗೆ ತಮಾಷೆ ಪ್ರಸಂಗಗಳು ಸೇರಿ ರೂಪುಗೊಂಡಿರುವುದರಿಂದ ತೀರಾ ಲಾಜಿಕ್ಕುಗಳನ್ನೆಲ್ಲಾ ಹುಡುಕದೇ ಸುಮ್ಮನೇ ನೋಡಿಬಂದರೆ ಒಳ್ಳೇದು. ಮನರಂಜನೆಯೇ ಪ್ರಧಾನ ಉದ್ದೇಶವಾಗಿರುವಾಗ ತಪ್ಪುಗಳಿಗೆ ವಿನಾಯ್ತಿ ಕೊಡಬಹುದೇನೋ.