ಸುಸ್ತಾಗುವಂತೆ ನಗಿಸುವ ಸು ಫ್ರಮ್ ಸೋ!

Picture of Cinibuzz

Cinibuzz

Bureau Report

ಈ ಜಗತ್ತು ನಿಂತಿರೋದು ನಂಬಿಕೆ ಎನ್ನುವ ಪದದ ಮೇಲೆ. ನಂಬಿಕೆ ಅನ್ನೋದು ಯಾರದ್ದೇ ವೈಯಕ್ತಿಕ, ಸಾಮಾಜಿಕ ಬದುಕಿನಲ್ಲಿ ಪ್ರಾಮುಖ್ಯತೆ ಪಡೆದಿರುತ್ತದೆ. ಅಜ್ಞಾತದ ಬಗ್ಗೆ ಭಯಪಡದೆ, ಧೈರ್ಯದಿಂದ ಮುನ್ನಡೆಸಬೇಕಿರುವ, ಹಾದಿಯನ್ನು ಬೆಳಗಬೇಕಿರುವ, ಜೀವನಕ್ಕೆ ಅರ್ಥ ತುಂಬುವ ಶಕ್ತಿ ನಂಬಿಕೆಗಿದೆ. ಕೆಲವೊಮ್ಮೆ ಈ ನಂಬಿಕೆಯೇ ಮೌಢ್ಯತೆಯ ಕೊಕ್ಕೆಗೆ ಸಿಲುಕಿ ಹರಿದುಹೋದಂತೆ ಕಾಣುತ್ತದೆ. ಈ ಬಟ್ಟೆಯನ್ನೇ ಬಂಡವಾಳ ಮಾಡಿಕೊಂಡು ಹೊದ್ದು ಬೆಚ್ಚಗೆ ಮಲಗುವವರೂ ಹುಟ್ಟಿಕೊಳ್ಳುತ್ತಾರೆ…

ಹೀಗೆ ಒಂದಿಡೀ ಊರು ಇಲ್ಲದ್ದನ್ನು ಇರುವಂತೆ ನಂಬಿ, ಅದಕ್ಕೆ ತಕ್ಕಂತೆ ವರ್ತಿಸುತ್ತಿರುತ್ತದೆ. ತಾನಿಷ್ಟ ಪಟ್ಟ ಹುಡುಗಿಯನ್ನು ಅವಳದ್ದೇ ಮನೆಯ ಬಾತ್ ರೂಮಿನ ಕಿಟಕಿಯಿಂದ ಇಣುಕಲು ಹೋದ ಹುಡುಗನಿಂದ ಅವಾಂತರ ಸೃಷ್ಟಿಯಾಗಿರುತ್ತದೆ. ಈ ಪ್ರಕರಣದಿಂದ ಸಿಕ್ಕಿಬೀಳುವುದನ್ನು ತಪ್ಪಿಸಿಕೊಳ್ಳಲು ಮೈಮೇಲೆ ಏನೋ ಬಂದಂತೆ ವರ್ತಿಸುತ್ತಾನೆ. ಅಲ್ಲಿಗೆ `ಸುಲೋಚನಾ’ಳ ಆತ್ಮದ ಆವಾಹನೆಯಾಗಿಯೇಬಿಡುತ್ತದೆ. ಅದೂ ಸೋಮೇಶ್ವರದಿಂದ ಬಂದಿಳಿದಿರುತ್ತದೆ. ಅಲ್ಲಿಂದ ಶುರುವಾಗುತ್ತೆ ನೋಡಿ ಊರಲ್ಲಿನ ತಮಾಷೆ ಪ್ರಹಸನ.


ದೆವ್ವ ಇದೆ ಅನ್ನೋ ಭ್ರಮೆಯೇ ಇಲ್ಲಿ ಪಾತ್ರಧಾರಿಗಳನ್ನು ಸಿಕ್ಕಾಪಟ್ಟೆ ಹೆದರಿಸುತ್ತದೆ. ʻದೆವ್ವಾನೂ ಇಲ್ಲ ಏನೂ ಇಲ್ಲ ಅನ್ನೋ ಸತ್ಯʼ ಪ್ರೇಕ್ಷಕರಿಗೆ ಮೊದಲೇ ಗೊತ್ತಿರುತ್ತದೆ. ಹೀಗಾಗಿ ಇಲ್ಲಿ ನಡೆಯುವ ಪ್ರತಿಯೊಂದೂ ಪ್ರಸಂಗಗಳು ನೋಡುಗರನ್ನು ಯದ್ವಾತದ್ವಾ ನಗಿಸುತ್ತವೆ. ತುಂಬಾ ಚೆಂದಗೆ ಕಥೆ ಕಟ್ಟುವುದರ ಜೊತೆಗೆ ಮಜಾ ಕೊಡುವಂತೆ ಪ್ರತೀ ಪಾತ್ರವನ್ನೂ ವಿನ್ಯಾಸಗೊಳಿಸಿದ್ದಾರೆ. ಹೀಗಾಗಿ ಎಲ್ಲ ಪಾತ್ರಗಳಿಗೂ ನಗಿಸುವುದು ಮತ್ತು ನಗಿಸುವುದಷ್ಟೇ ಕಾಯಕ.

ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಬರೋದು ಸ್ವಲ್ಪ ತಡವಾಗಿ. ಅಷ್ಟರಲ್ಲಾಗಲೇ ಇರುವ ಎಲ್ಲ ಪಾತ್ರಗಳೂ ನೋಡುಗರನ್ನು ಹಿಡಿದಿಟ್ಟುಕೊಂಡಿರುತ್ತವೆ. ರಾಜ್ ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಾರೆ ಅಷ್ಟೇ. ಶುರುವಿನಿಂದ ಕೊನೆಯತನಕ ನಗಿಸುವ ʻಸು ಫ್ರಮ್ ಸೋʼ ಒಂದು ಘಟ್ಟದಲ್ಲಿ ಎಂಥವರ ಮನಸ್ಸನ್ನೂ ಆರ್ದ್ರಗೊಳಿಸುವ ವಿಚಾರವೊಂದನ್ನು ತೆರೆದಿಡುತ್ತದೆ. ಹೆತ್ತವರನ್ನು ಕಳೆದುಕೊಂಡ ಹೆಣ್ಣುಮಕ್ಕಳು ಎಷ್ಟೋ ಸಲ ತಮ್ಮದೇ ಮನೆಯವರು-ನೆಂಟರಿಂದ ಲೈಂಗಿಕ ಶೋಷಣೆಗೆ ಒಳಗಾಗುತ್ತಿರುತ್ತಾರೆ. ವಿಷಯವನ್ನು ಹೊರಗೆ ಹೇಳಿಕೊಂಡರೆ ಎಲ್ಲಿ ಮರ್ಯಾದೆ ಹಾಳಾಗುತ್ತದೆ ಅನ್ನೋ ಕಾರಣಕ್ಕೆ ಒಳಗೊಳಗೇ ಸತ್ತು ಬದುಕುತ್ತಿರುತ್ತಾರೆ. ಅಂಥಾ ಹೆಣ್ಣುಮಕ್ಕಳಿಗೆ ಮನೆಯೊಳಗಿನ ರಾಕ್ಷಸರಿಂದ ಬಚಾವಾಗುವುದು ಪ್ರತಿನಿತ್ಯ, ಪ್ರತೀ ಕ್ಷಣದ ಸವಾಲಾಗಿರುತ್ತದೆ. ಹೀಗೆ ಚಿಕ್ಕಪ್ಪನಿಂದಲೇ ಯಾತನೆ ಅನುಭವಿಸುವ ಅವಿವಾಹಿತ ಹೆಣ್ಣಿನ ಕಥಾನಕ ಕಣ್ಣನ್ನು ತೇವಗೊಳಿಸುತ್ತದೆ. ಮಿಕ್ಕಂತೆ, ಭಾವನ ಪಾತ್ರ ಮತ್ತು ಆತ ಬಂದಾಗ ಹಿನ್ನೆಲೆಯಲ್ಲಿ ಕೇಳಿವರುವ ʻಬಂದರೋ ಬಂದರು ಭಾವ ಬಂದರೂ…ʼಸಾಲು ಸಖತ್ ಮಜಾ ಕೊಡುತ್ತದೆ.

ರವಿ ಅಣ್ಣನ ಪಾತ್ರದಲ್ಲಿ ಶನೀಲ್ ತುಂಬಾನೇ ಚೆಂದಗೆ ಅಭಿನಯಿಸಿದ್ದಾರೆ. ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡಿರುವ ಜೆ.ಪಿ. ತುಮಿನಾಡು ಕರಾವಳಿಯಿಂದ ಬೆಂಗಳೂರಿಗೆ ಬಂದು ನೆಲೆಸೋದರಲ್ಲಿ ಡೌಟೇ ಇಲ್ಲ; ಅಷ್ಟು ಸಹಜ ಅಭಿನಯ ಇವರದ್ದು. ಪ್ರಕಾಶ್ ತುಮಿನಾಡು, ಸಂಧ್ಯಾ ಅರಕೆರೆ, ದೀಪಕ್ ಪಣಜಿ, ಮೈಮ್ ರಾಮದಾಸ್, ಪೂರ್ಣಿಮಾ ಸುರೇಶ್ ಸೇರಿದಂತೆ ಚಿತ್ರದಲ್ಲಿರುವ ಇತರೆ ಎಲ್ಲ ಕಲಾವಿದರೂ ಅದ್ಭುತವಾಗಿ ನಟಿಸಿದ್ದಾರೆ. ಚಂದ್ರಶೇಖರನ್ ಛಾಯಾಗ್ರಹಣ, ಸಂದೀಪ್ ತುಳಸಿದಾಸ್ ಹಿನ್ನೆಲೆ ಸಂಗೀತ, ನಿತಿನ್ ಶೆಟ್ಟಿ ಸಂಕಲನ ಎಲ್ಲವೂ ಗುಣಮಟ್ಟದಿಂದ ಕೂಡಿದೆ.

ಭಾಷೆ ಕರಾವಳಿಯದ್ದಾದರೂ, ಕರುನಾಡಿನ ಎಲ್ಲರಿಗೂ ಆಪ್ತವಾಗಬಲ್ಲ ಶಕ್ತಿ ಈ ಚಿತ್ರಕ್ಕಿದೆ. ನೋಡಿ…

ಇನ್ನಷ್ಟು ಓದಿರಿ

Scroll to Top