ನಿರ್ದೇಶನ:
ಕೀರ್ತಿ ಕೃಷ್ಣಪ್ಪ
ತಾರಾಗಣ: ವಿನಯ್ ರಾಜ್‌ಕುಮಾರ್, ಅದಿತಿ ಪ್ರಭುದೇವ, ನಿಶಾ ರವಿಕೃಷ್ಣನ್, ಅರುಣಾ ಬಾಲರಾಜ್, ಜಗಪ್ಪ ಮತ್ತು ಇತರರು.
ಸಂಗೀತ: ರಾಘವೇಂದ್ರ ವಿ.
ಛಾಯಾಗ್ರಹಣ: ಅಭಿಷೇಕ್ ಕಾಸರಗೋಡು
ವಿನಯ್ ರಾಜ್‌ಕುಮಾರ್ ಅಭಿನಯದ, ಕೀರ್ತಿ ಕೃಷ್ಣಪ್ಪ ನಿರ್ದೇಶನದ “ಅಂದೊಂದಿತ್ತು ಕಾಲ” ಚಿತ್ರ ಪ್ರೇಕ್ಷಕರನ್ನು 90ರ ದಶಕದ ಸುಂದರ ನೆನಪುಗಳ ಜಗತ್ತಿಗೆ ಕರೆದೊಯ್ಯುವ ಒಂದು ಭಾವನಾತ್ಮಕ ಪಯಣವಾಗಿದೆ. ಸಿನಿಮಾ ನಿರ್ದೇಶಕನಾಗಬೇಕೆಂದು ಕನಸು ಕಾಣುವ ಹಳ್ಳಿ ಹುಡುಗನೊಬ್ಬನ ಬದುಕು, ಬವಣೆ, ಬಾಲ್ಯದ ಪ್ರೀತಿ ಮತ್ತು ವರ್ತಮಾನದ ಸಂಘರ್ಷಗಳೇ ಈ ಚಿತ್ರದ ಕಥಾವಸ್ತು.
ಮಲೆನಾಡಿನ ಹಳ್ಳಿಯೊಂದರಲ್ಲಿ ಟೆಂಟ್ ಸಿನಿಮಾದ ಪ್ರೊಜೆಕ್ಟರ್ ಆಪರೇಟರ್ ಮಗನಾದ ಕುಮಾರ, ಬಾಲ್ಯದಿಂದಲೇ ಸಿನಿಮಾದ ಹುಚ್ಚು ಹಿಡಿಸಿಕೊಂಡಿರುತ್ತಾನೆ.

ಬೆಳೆದು ದೊಡ್ಡ ನಿರ್ದೇಶಕನಾಗಬೇಕೆಂಬ ಕನಸನ್ನು ಹೊತ್ತು ಬೆಂಗಳೂರಿಗೆ ಬರುತ್ತಾನೆ. ಈ ಪಯಣದಲ್ಲಿ ಆತ ಎದುರಿಸುವ ಸವಾಲುಗಳು, ಚಿತ್ರರಂಗದ ಕಷ್ಟನಷ್ಟಗಳು, ಬಾಲ್ಯದ ಗೆಳತಿಯೊಂದಿಗಿನ ಮುಗ್ಧ ಪ್ರೇಮ ಮತ್ತು ವರ್ತಮಾನದಲ್ಲಿ ಜೊತೆಯಾಗುವ ನಾಯಕಿಯೊಂದಿಗಿನ ಸಂಬಂಧ – ಹೀಗೆ ಎರಡು ಕಾಲಘಟ್ಟಗಳಲ್ಲಿ ಕಥೆ ಸಾಗುತ್ತದೆ. ಒಂದು ಯಶಸ್ವಿ ನಿರ್ದೇಶಕನಾಗುವ ಅವನ ಕನಸು ನನಸಾಗುವುದೇ ಎಂಬುದು ಚಿತ್ರದ ತಿರುಳು.
ಚಿತ್ರದ ಅತಿ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಅದು ಕಟ್ಟಿಕೊಡುವ 90ರ ದಶಕದ ಜಗತ್ತು. ಹಳ್ಳಿಯ ಶಾಲೆ, ಟೆಂಟ್ ಸಿನಿಮಾ, ಮುಗ್ಧ ಸ್ನೇಹ ಮತ್ತು ಅಂದಿನ ಜೀವನಶೈಲಿಯನ್ನು ನಿರ್ದೇಶಕರು ಅತ್ಯಂತ ಸಹಜವಾಗಿ ತೆರೆಯ ಮೇಲೆ ತಂದಿದ್ದಾರೆ. ಇದು ಆ ಕಾಲಘಟ್ಟದಲ್ಲಿ ಬೆಳೆದ ಪ್ರತಿಯೊಬ್ಬ ಪ್ರೇಕ್ಷಕನಿಗೂ ತನ್ನದೇ ಕಥೆ ಎನಿಸುವಂತೆ ಮಾಡುತ್ತದೆ.
ನಟನೆಯಲ್ಲಿ ವಿನಯ್ ರಾಜ್‌ಕುಮಾರ್ ಎರಡು ಶೇಡ್‌ಗಳಿರುವ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹಳ್ಳಿಯ ಮುಗ್ಧ ಯುವಕನಾಗಿ ಮತ್ತು ಚಿತ್ರರಂಗದಲ್ಲಿ ಕಷ್ಟಪಡುವ ಸಹಾಯಕ ನಿರ್ದೇಶಕನಾಗಿ ಅವರ ನಟನೆ ಮನಮುಟ್ಟುತ್ತದೆ. ನಾಯಕಿಯಾಗಿ ಅದಿತಿ ಪ್ರಭುದೇವ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ತಾಯಿಯ ಪಾತ್ರದಲ್ಲಿ ಅರುಣಾ ಬಾಲರಾಜ್ ಎಂದಿನಂತೆ ಗಮನ ಸೆಳೆಯುತ್ತಾರೆ.
ಚಿತ್ರದ ತಾಂತ್ರಿಕ ವಿಭಾಗ ಬಲಿಷ್ಠವಾಗಿದೆ. ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣ ಮಲೆನಾಡಿನ ಸೌಂದರ್ಯವನ್ನು ಮತ್ತು 90ರ ದಶಕದ ಸೊಗಡನ್ನು ಅದ್ಭುತವಾಗಿ ಸೆರೆಹಿಡಿದಿದೆ. ರಾಘವೇಂದ್ರ ವಿ. ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತವು ಚಿತ್ರದ ಭಾವನಾತ್ಮಕ ದೃಶ್ಯಗಳಿಗೆ ಮತ್ತಷ್ಟು ಜೀವ ತುಂಬಿದೆ. ಆದಾಗ್ಯೂ, ಚಿತ್ರದ ನಿರೂಪಣೆ ಕೆಲವೊಮ್ಮೆ ನಿಧಾನಗತಿಯಲ್ಲಿ ಸಾಗುತ್ತದೆ. ಮೊದಲಾರ್ಧದಲ್ಲಿ ಬರುವ ಬಾಲ್ಯದ ಸನ್ನಿವೇಶಗಳು ಸುಂದರವಾಗಿದ್ದರೂ, ಚಿತ್ರಕಥೆ ಇನ್ನಷ್ಟು ಬಿಗಿಯಾಗಿರಬಹುದಿತ್ತು ಎನಿಸುತ್ತದೆ. ದ್ವಿತೀಯಾರ್ಧವು ಮುಂದೇನಾಗುತ್ತದೆ ಎನ್ನುವುದನ್ನು ಊಹಿಸಬಹುದಾದ ಧಾಟಿಯಲ್ಲಿ ಸಾಗುತ್ತದೆ. ರವಿಚಂದ್ರನ್ ಅವರ ಭಾಗ ಅನಗತ್ಯವಾಗಿ ಎಳೆದಂತೆ ಕಾಣುತ್ತದೆ. ಮುಂಗಾರು ಮಳೆಯಲ್ಲಿ ಹಾಡು ಇಡೀ ಸಿನಿಮಾದ ಶಕ್ತಿಕೇಂದ್ರ. ಸಿದ್ ಶ್ರೀರಾಮ್ ದನಿಯಲ್ಲಿ ಸಮ್ಮೋಹಕ ಗುಣವಿದೆ. ಹಾಡಿನ ಸಾಲುಗಳು ಕೂಡಾ ಅಷ್ಟೇ ಗುಣಮಟ್ಟದಿಂದ ಕೂಡಿದೆ.
ನಿರ್ದೇಶಕನಾಗಬಯಸುವವರು ಬೆಂಗಳೂರಿಗೆ ಬಂದು ಪಡುವ ಪಾಡನ್ನು, ಬಹುಶಃ ತಾವೇ ಅನುಭವಿಸಿದ, ಎದುರಿಸಿ ಘಟನೆಗಳನ್ನು ನಿರ್ದೇಶಕರು ಇಲ್ಲಿ ಯಥಾವತ್ತಾಗಿ ತೆರೆಗೆ ತಂದಂತೆ ಕಾಣುತ್ತದೆ. ಸಾಧಿಸಬೇಕು ಎನ್ನುವ ತಪನೆಗೆ ಎದುರಾಗುವ ಅವಮಾನಗಳು, ಪ್ರತಿಭೆಗೆ ತಕ್ಕ ಅವಕಾಶ ಸಿಗದಿದ್ದಾಗ ಆಗುವ ಮನೋವ್ಯಾಕುಲಗಳನ್ನು ಕೂಡಾ ಪರಿಣಾಮಕಾರಿಯಾಗಿ ತೋರಿಸಿದ್ದಾರೆ. ಇಷ್ಟೆಲ್ಲದರ ನಡುವೆ ಸಿನಿಮಾ ಜಗತ್ತಿನ ಕುರಿತಾದ ವಿಚಾರಗಳನ್ನು ಸಾಮಾನ್ಯ ಪ್ರೇಕ್ಷಕರು ಎಷ್ಟರ ಮಟ್ಟಿಗೆ ಸ್ವೀಕರಿಸುತ್ತಾರೆ ಅನ್ನೋದು ಸದ್ಯದ ಪ್ರಶ್ನೆ.
ಇವೆಲ್ಲ ಏನೇ ಆಗಲಿ, “ಅಂದೊಂದಿತ್ತು ಕಾಲ” ಒಂದು ಅದ್ದೂರಿ, ಮಾಸ್ ಸಿನಿಮಾವಲ್ಲ. ಇದು ಹೃದಯಕ್ಕೆ ಹತ್ತಿರವಾಗುವ ಒಂದು ಸರಳ ಮತ್ತು ಭಾವನಾತ್ಮಕ ಕಥೆ. ಚಿತ್ರರಂಗದ ಕನಸು ಹೊತ್ತವರ ಕಷ್ಟಗಳು ಮತ್ತು 90ರ ದಶಕದ ನೆನಪುಗಳನ್ನು ಮೆಲುಕು ಹಾಕಲು ಇಷ್ಟಪಡುವವರಿಗೆ ಈ ಸಿನಿಮಾ ಖಂಡಿತಾ ಇಷ್ಟವಾಗುತ್ತದೆ. ಇದೊಂದು ಅಚ್ಚುಕಟ್ಟಾದ, ಕ್ಲೀನ್ ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದು, ಕುಟುಂಬ ಸಮೇತ ನೋಡಬಹುದಾಗಿದೆ.












































