ಪ್ರಾಣಿ ಮತ್ತು ಮನುಷ್ಯರ ನಡುವಿನ ಸುಂದರ ಬಾಂಧವ್ಯವನ್ನು ತೆರೆಯ ಮೇಲೆ ತಂದು ಪ್ರೇಕ್ಷಕರ ಮನಗೆದ್ದಿದ್ದ ಸಿನಿಮಾ “ನಾನು ಮತ್ತು ಗುಂಡ”. ಈ ಚಿತ್ರದ ಯಶಸ್ಸಿನ ನಂತರ, ಆ ಭಾವನಾತ್ಮಕ ಪಯಣದ ಮುಂದುವರೆದ ಭಾಗ “ನಾನು ಮತ್ತು ಗುಂಡ-2”. ಮೊದಲ ಭಾಗದಲ್ಲಿ ತನ್ನ ಪ್ರೀತಿಯ ಗುಂಡನನ್ನು ಕಳೆದುಕೊಂಡ ಮುಂದಿನ ಕಥೆ ಇದರಲ್ಲಿದೆ. ನೋವಿನಲ್ಲಿ ಅಂತ್ಯವಾಗಿದ್ದ ಆ ಚಿತ್ರದ ಕಥೆ ಮುಂದುವರೆಯಲು ಹೇಗೆ ಸಾಧ್ಯ? ಮೊದಲ ಚಿತ್ರದಂತೆಯೇ ಈ ಚಿತ್ರವೂ ಮನಸ್ಸನ್ನು ಆರ್ದ್ರಗೊಳಿಸುವಲ್ಲಿ ಯಶಸ್ವಿಯಾಗಿದೆಯಾ? ಗುಂಡ-2ನಲ್ಲಿ ಏನೆಲ್ಲಾ ಹೊಸ ಅಂಶಗಳಿವೆ?

ಮೊದಲ ಭಾಗದಲ್ಲಿ ಕೊನೆಯಾದ ಪಾತ್ರ ಶಂಕರ. ಶಂಕರನ ಅಗಲಿಕೆಯಿಂದ ಮನನೊಂದ ನಾಯಿ ಅವನ ಸಮಾಧಿ ಬಳಿಯೇ ವಾಸ್ತವ್ಯ ಹೂಡಿರುತ್ತದೆ. ಅದೊಂದು ದಿನ ಸತ್ತ ಶಂಕರನ ಪತ್ನಿಯ ಹೊಟ್ಟೆಯಲ್ಲಿ ಮಗುವೊಂದು ಜನಿಸುತ್ತಿರುವುದು ಗೊತ್ತಾಗುತ್ತದೆ. ತಕ್ಷಣ ಗುಂಡ ಮನೆಕಡೆ ಧಾವಿಸುತ್ತದೆ. ಅಲ್ಲಿ ಮಗುವಿಗೆ ಜೀವಕೊಟ್ಟ ಶಕರನ ಹೆಂಡತಿ ಜೀವ ಚೆಲ್ಲುತ್ತಾಳೆ. ಹುಟ್ಟುವ ಮುಂಚೆಯೇ ಅಪ್ಪನನ್ನು, ಹುಟ್ಟುವ ಸಮಯದಲ್ಲಿ ಅಮ್ಮನನ್ನೂ ಕಳೆದುಕೊಂಡ ಶಂಕರನ ಈ ಕುಡಿಯನ್ನು ಜನ ಮೂದಲಿಸುತ್ತಾರೆ. ಆ ಹೊತ್ತಿಗೆ ಶಂಕರನ ಸ್ನೇಹಿತ (ಜಿಜಿ) ಮಗುವನ್ನು ತೆಗೆದುಕೊಂಡು ತನ್ನ ಮನೆಗೆ ಬರುತ್ತಾನೆ. ಮಗುವಿನೊಂದಿಗೆ ನಾಯಿ ಕೂಡಾ ಬಂದು ಸೇರುತ್ತದೆ. ಹುಡುಗ ದೊಡ್ಡವನಾಗುತ್ತಿದ್ದಂತೇ ಗುಂಡ ಅವನೆಲ್ಲಿ ಹೋದರೂ ಹಿಂಬಾಲಿಸುತ್ತದೆ. ಶಾಲೆಗೂ ಅವನೊಟ್ಟಿಗೆಯೇ ಹೋಗುತ್ತದೆ. ಸಹಜವಾಗಿ ಇದು ಅವನಿಗೆ ಇರುಸುಮುರುಸಾಗುತ್ತದೆ. ನಾಯಿ ಗುಂಡನನ್ನು ದ್ವೇಷಿಸಲು ಶುರು ಮಾಡುತ್ತಾನೆ. ಆ ಹೊತ್ತಲ್ಲಿ ಆ ಜೂನಿಯರ್ ಶಂಕ್ರನಿಗೆ ಗುಂಡನ ಅಸಲೀಯತ್ತು, ತನ್ನ ತಂದೆಯೊಂದಿಗಿನ ಅವನ ಬಾಂಧವ್ಯ… ಎಲ್ಲವೂ ತಿಳಿಯುತ್ತದೆ. ಇಷ್ಟೆಲ್ಲಾ ಆಗುವ ಹೊತ್ತಿಗೆ ಗುಂಡನಿಗೆ ವಯಸ್ಸಾಗುತ್ತದೆ. ವಯೋ ಸಹಜ ಬಳಲಿಕೆಯ ನಡುವೆ ತಾನು ಉಳಿಯುವುದಿಲ್ಲವೆಂದೂ ಗೊತ್ತಾಗುತ್ತದೆ. ಮನೆ ಬಿಟ್ಟು ಎಲ್ಲೋ ಹೋಗಿ ಕೊನೆಯುಸಿರೆಳೆಯುತ್ತದೆ. ಅಷ್ಟರಲ್ಲಿ ಶಂಕ್ರನಿಗೆ ಗುಂಡನ ಮೇಲೆ ಅತೀವ ಪ್ರೀತಿ ಹುಟ್ಟಿರುತ್ತದೆ. ನಾಯಿ ಸತ್ತು ಎಷ್ಟೋ ವರ್ಷಗಳ ನಂತರ ಬೆಳೆದು ನಿಂತ ಶಂಕ್ರ ಅದರ ಕೊರಗಿನಲ್ಲೇ ಇರುತ್ತಾನೆ. ಗುಂಡ ಮತ್ತೆ ಹುಟ್ಟಿ ಬಂದುದರ ಬಗ್ಗೆ ಗಂಟೆ ಸೌಂಡು ಕೇಳಿಸುತ್ತದೆ. ಅದರ ಜಾಡು ಹುಡುಕುತ್ತಾ ಊಟಿ ಸೇರುತ್ತಾನೆ. ಅಲ್ಲಿ ಮರುಜನ್ಮವೆತ್ತಿ ಬಂದ ಗುಂಡ ಶಂಕ್ರನ ಜೊತೆಯಾಗುತ್ತಾನಾ? ಊಟಿಯಲ್ಲಿ ಸಿಗುವ ಹುಡುಗಿಯ ಪಾತ್ರವೇನು? ಶಂಕರ ಮತ್ತೆ ತನ್ನೂರಿಗೆ ಬರುತ್ತಾನಾ? ಎಂಬಿತ್ಯಾದಿ ವಿಚಾರಗಳ ಸುತ್ತ ಬೆಸೆದುಕೊಂಡು ಅತ್ಯಂತ ಭಾವುಕ ಮತ್ತು ಸಮ್ಮೋಹಕ ಚಿತ್ರ ನಾನು ಮತ್ತು ಗುಂಡ-2.
ಗೆಲುವು ಕಂಡ ಸಿನಿಮಾವೊಂದರ ಮುಂದುವರಿದ ಭಾಗವನ್ನು ಕಟ್ಟುವುದು ನಿಜಕ್ಕೂ ತ್ರಾಸದ ಕೆಲಸ. ಈ ನಿಟ್ಟಿನಲ್ಲಿ ಗುಂಡ-2 ಕಂಟೆಂಟನ್ನು ತುಂಬಾ ಜಾಣ್ಮೆಯಿಂದ ಪೋಣಿಸಿದ್ದಾರೆ. ರಾಕೇಶ್ ಅಡಿಗ ಇಷ್ಟು ದಿನದ ತಮ್ಮ ಶೈಲಿಯನ್ನು ಸಂಪೂರ್ಣವಾಗಿ ಬದಲಿಸಿಕೊಂಡು ಹೊಸ ಬಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲನಟನಾಗಿ ಕಾಣಿಸಿಕೊಂಡಿರುವ ಜೀವನ್ ಎನ್ನುವ ಪುಟ್ಟ ಹುಡುಗನ ಪ್ರತಿಭೆ ದೊಡ್ಡದು. ಮೊದಲ ಸಿನಿಮಾಗೇ ಈತ ಸಲೀಸಾಗಿ ಪಾತ್ರಪೋಷಣೆ ಮಾಡಿದ್ದಾನೆ. ರಚನಾ ಇಂದರ್ ದ್ವಿತೀಯಾರ್ಧವನ್ನು ಆವರಿಸಿಕೊಳ್ಳುವಂತೆ ನಟಿಸಿದ್ದಾರೆ. ಇವರಿಬ್ಬರ ನಡುವೆ ನಾಯಿ ಸಿಂಬಾ ಮತ್ತು ರಾಕೇಶ್ ಅಡಿಗ ಗಮನ ಸೆಳೆಯುತ್ತಾರೆ.
ತೀರಾ ಹೊಸ ಪ್ರಯೋಗಗಳಿಗೆ ಕೈ ಇಡದ ತನ್ವಿಕ್ ತನ್ಮಯರಾಗಿ ಶ್ರದ್ಧೆಯಿಂದ ಛಾಯಾಗ್ರಹಣ ಮಾಡಿದ್ದಾರೆ. ತಾಂತ್ರಿಕವಾಗಿ ಎಲ್ಲಿಯೂ ಯಡವಟ್ಟುಗಳಾಗದಂತೆ ಎಚ್ಚರ ವಹಿಸಿದ್ದಾರೆ. ಡ್ರೋನ್ ಕ್ಯಾಮೆರಾದ ದೃಶ್ಯಗಳನ್ನು ಸಮರ್ಥವಾಗಿ ಸೆರೆ ಹಿಡಿದಿದ್ದಾರೆ.
ಆರ್.ಪಿ. ಪಟ್ನಾಯಕ್ ಸಂಗೀತ, ಕೆ.ಎಂ. ಪ್ರಕಾಶ್ ಸಂಕಲನಗಳೆಲ್ಲಾ ಗುಂಡನನ್ನು ಶಕ್ತಿಶಾಲಿಯಾಗಿಸುವಲ್ಲಿ ಸಫಲವಾಗಿವೆ. ಇವೆಲ್ಲಕ್ಕಿಂತಾ ಮುಖ್ಯವಾಗಿ ಚಿತ್ರವನ್ನು ರಚಿಸಿ, ನಿರ್ದೇಶಿಸಿರುವ ರಘು ಹಾಸನ್ ಶ್ರಮ ದೊಡ್ಡದು. ಸಿನಿಮಾದಲ್ಲಿ ಕಲಾವಿದರನ್ನು ಪಳಗಿಸಿಕೊಂಡು ಚಿತ್ರೀಕರಣ ಮಾಡೋದೇ ಸಾಹಸದ ಕೆಲಸ. ಇಂಥದ್ದರಲ್ಲಿ, ಇಡೀ ಸಿನಿಮಾ ಪೂರ್ತಿ ನಾಯಿಗಳನ್ನು ಬಳಸಿಕೊಂಡು ಎಲ್ಲಿಯೂ ಫೀಲ್ ಹಾಳಾಗದಂತೆ ಸಿನಿಮಾ ಕಟ್ಟಿಕೊಟ್ಟಿರುವ ರಘು ನಿಜಕ್ಕೂ ಗೆದ್ದಿದ್ದಾರೆ.
ಮಕ್ಕಳು, ಮನೆಮಂದಿಯ ಸಮೇತ ಕೂತು ನೋಡಬಹುದಾದ ಹೃದಯಸ್ಪರ್ಶಿ ಸಿನಿಮಾ ನಾನು ಮತ್ತು ಗುಂಡ-2.. ಮಿಸ್ ಮಾಡಿಕೊಳ್ಳಬೇಡಿ!












































