ನೆರಳಿನಂತೆ ಕಾಡುವ ನೆನಪು, ನಿದ್ರೆ ಕದ್ದ ರಾತ್ರಿಗಳ ಕಥೆ!

Picture of Cinibuzz

Cinibuzz

Bureau Report

ನಿರಾಳವಾದ ಆಕಾಶದ ತಿಳೀ ಗುಲಾಬಿ ಬಣ್ಣ, ಸುತ್ತಲೂ ನಿಂತಿರುವ ನೀರಲ್ಲಿ ಅದರದ್ದೇ ಪ್ರತಿಬಿಂಬ. ಕೈಗೆಟುಕದಿರುವಷ್ಟು ಎತ್ತರದಲ್ಲಿ ತೇಲಾಡುತ್ತಿರೋ ಮೋಡಗಳು… ಅದರ ಮಧ್ಯೆ ನಿದ್ರೆಗೆ ಜಾರ್ತಾ ಇರೋ ಚಂದಮಾಮ… ಅವನಿಗೆ ಲಾಲಿ ಹಾಡಬೇಕು ಅಂತಲೇ ನಿದ್ರಾ ದೇವಿ ನಿಧಾನಕ್ಕೆ ನಡೆದುಕೊಂಡು ಬರ್ತಿದ್ದಾಳೆ…

  • ಹೀಗೆ ಹೇಳಿ ಮಗನನ್ನು ಮಲಗಿಸುವ ಅಮ್ಮ. ಅದೇ ಅಮ್ಮ ಹೋದಮೇಲೆ ಅವನಿಗೆ ನಿದ್ರೇನೇ ಇಲ್ಲ. ಕಣ್ಮುಚ್ಚಿದರೆ, ಗೊಂದಲ, ಕಸಿವಿಸಿ. ರಾತ್ರಿಯಿಡೀ ಬರೀ ಒದ್ದಾಟ…

ಕೆಲವು ನೆನಪುಗಳು ನೆರಳಿನಂತೆ. ನಾವು ಎಷ್ಟೇ ಮುಂದೆ ಸಾಗಿದರೂ ನಮ್ಮನ್ನು ಅವು ಬಿಟ್ಟೂಬಿಡದೆ ಹಿಂಬಾಲಿಸುತ್ತಲೇ ಇರುತ್ತವೆ. ಅದರಲ್ಲೂ ಬಾಲ್ಯವೆಂಬುದು ಚಿಟ್ಟೆಗಳಂತೆ ಹಾರಾಡುವ, ಬಣ್ಣಬಣ್ಣದ ಕನಸುಗಳನ್ನು ಕಾಣುವ ಸುಂದರ ತೋಟವಾಗಬೇಕು. ಕೆಲವರ ಬಾಲ್ಯವೆಂಬುದು ಬರೀ ಮುಳ್ಳುಗಳಿಂದ ಆವರಿಸಿರುತ್ತದೆ. ಆ ಮುಳ್ಳು ಚುಚ್ಚಿದಾಗ ಆಗುವ ಗಾಯವೇ “ಬಾಲ್ಯದ ಆಘಾತ”. ಸೈಕಾಲಜಿ ಭಾಷೆಯಲ್ಲಿ ಇದನ್ನು Childhood Trauma ಅಂತಾರೆ!
ತೀರಾ ಸಣ್ಣ ವಯಸ್ಸಿನಲ್ಲಾದ ಅವಮಾನ, ಆಘಾತಗಳೆಲ್ಲ ಮಕ್ಕಳ ಮನಸ್ಸಿನ ಆಳದಲ್ಲಿ ಕಿಚ್ಚು ಹತ್ತಿಸಿ ಸುಡಲು ಶುರು ಮಾಡುತ್ತದೆ. ಎಷ್ಟೇ ದೊಡ್ಡವರಾದಮೇಲೂ ಇದರ ಕಾವು ಕಡಿಮೆಯಾಗೋದಿಲ್ಲ. ಭಯ, ಕೋಪ, ಖಿನ್ನತೆ ಇವೆಲ್ಲದರಿಂದ ಎದುರಾಗುವ ನಿದ್ರಾಹೀನತೆ… ಅಬ್ಬ ಒಬ್ಬ ವ್ಯಕ್ತಿಯ ಬದುಕನ್ನು ಹಿಂಡಿ ಹಿಪ್ಪೆ ಮಾಡಬಲ್ಲ ಶಕ್ತಿ ಇರುವುದು ಕೆಟ್ಟ ನೆನಪುಗಳಿಗೆ ಮಾತ್ರ…
ಇದೇ ಕಥಾವಸ್ತುವನ್ನು ಆಧರಿಸಿ ರೂಪುಗೊಂಡಿರುವ ಚಿತ್ರ ನಿದ್ರಾದೇವಿ Next Door!

ನಿದ್ರಾದೇವಿ Next Door ಮಾಮೂಲಿ ಸಿನಿಮಾಗಳಂತೆ, ಒಂದು ಬಗೆಯ ಗ್ರಾಫು, ಚೌಕಟ್ಟಿನೊಳಗೆ ಬಂಧಿಯಾಗಿಲ್ಲ. ಥೇಟು ನಿದ್ರಾ ಹೀನ ಮನಸ್ಸಿನಂತೆ ಯಾವಾಗ ಹೇಗೆ ಬೇಕೋ ತಿರುವು ಪಡೆಯುತ್ತೆ. ಮೊದಲ ಭಾಗ ನೋಡುತ್ತಿದ್ದಾಗ ಕಥೆಯೊಳಗೆ ಹೀರೋಗೆ ನಿದ್ರೆಯಿಲ್ಲದೆ ಆಗುವ ಗೊಂದಲ, ಸಂಕಟ ಪ್ರೇಕ್ಷಕರಿಗೂ ಆಗುತ್ತದೆ. ಏನು ನಡೆಯುತ್ತಿದೆ ಅನ್ನೋದೇ ಗೊತ್ತಾಗೋದಿಲ್ಲ. ಸೆಖೆಂಡ್ ಹಾಫ್ ಅವೆಲ್ಲಾ ಗೌಜಿಗಳನ್ನೂ ಕೊನೆಗೊಳಿಸುತ್ತದೆ.

ಹಾಗೆ ನೋಡಿದರೆ, ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ರೀತಿಯ ಮಾನಸಿಕ ಸಮಸ್ಯೆಗಳು ಇದ್ದೇ ಇರುತ್ತವೆ. ಸಿನಿಮಾ ನೋಡುತ್ತಿದ್ದಂತೇ ಬಾಲ್ಯದಲ್ಲಾದ ತಮ್ಮ ಅನುಭವಗಳ ಬಗ್ಗೆ ಪ್ರತಿಯೊಬ್ಬರೂ ಕನೆಕ್ಟ್ ಆಗುತ್ತಾರೆ. ನಿದ್ರಾದೇವಿ Next Door ಕಮರ್ಷಿಯಲ್ಲಾಗಿ ಎಷ್ಟರ ಮಟ್ಟಿಗೆ ಸಫಲವಾಗಿದೆಯೋ ಗೊತ್ತಿಲ್ಲ. ಆದರೆ, ಇದೊಂದು ಮನೋವಿಜ್ಞಾನಕ್ಕೆ ಸಂಬಂಧಿಸಿದಂತೆ, ಆಳವಾದ ಅಧ್ಯಯನದ ಫಲವಾಗಿ ಈ ಸಿನಿಮಾದ ಕಂಟೆಂಟ್ ರೂಪುಗೊಂಡಿದೆ. ಇಂಥದ್ದೊಂದು ಸಬ್ಜೆಕ್ಟನ್ನು ಬರೆದು, ತೆರೆಗೆ ತರೋದು ಕಷ್ಟದ ಕೆಲಸ. ನಿರ್ದೇಶಕ ಸುರಾಗ್ ಸಾಗರ್ ಶ್ರಮಟ್ಟು ಇದನ್ನು ಸಾಧ್ಯವಾಗಿಸಿದ್ದಾರೆ. ಅಜ್ ಕುಲಕರ್ಣಿ ಬಳಸಿರುವ ಲೈಟಿಂಗ್ ಪ್ಯಾಟ್ರನ್ ಮತ್ತು ಅವರ ದೃಷ್ಟಿಕೋನದಿಂದ ಸಿನಿಮಾದ ಗುಣಮಟ್ಟ ಹೆಚ್ಚಿದೆ. ನಕುಲ್ ಅಭಯಂಕರ್ ಹಿನ್ನೆಲೆ ಸಂಗೀತ ಕೂಡಾ ಅಷ್ಟೇ ಉತ್ಕೃಷ್ಟವಾಗಿದೆ.

ಪ್ರವೀರ್ ಶೆಟ್ಟಿ ಇನ್ನೂ ಇಂಥ ಸಾಕಷ್ಟು ಪ್ರಯೋಗಗಳನ್ನು ಮಾಡಬಹುದು. ಅಷ್ಟು ಸಹಜವಾಗಿ ಕಾಣಿಸಿಕೊಂಡಿದ್ದಾರೆ. ಶೈನ್ ಶೆಟ್ಟಿ ಕೂಡಾ ತುಂಬಾನೇ ಸೆಟಲ್ಡ್ ಆಗಿ ಅಭಿನಯಿಸಿದ್ದಾರೆ. ಶೃತಿ ಹರಿಹರನ್, ಸುಧಾರಾಣಿ, ಮಾಸ್ಟರ್ ಸುಜೈ, ಐಶ್ವರ್ಯ ಮೊದಲಾದರ ನಟನೆ ಕೂಡಾ ಇಷ್ಟವಾಗುತ್ತದೆ.

ಹೊಸ ತಲೆಮಾರಿನ, ಹೊಸತನ್ನು ವಿಚಾರಗಳನ್ನು ಬಯಸುವವರಿಗೆ ನಿದ್ರಾದೇವಿ Next Door ಇಷ್ಟವಾಗುತ್ತದೆ. ಮನೋವಿಜ್ಞಾನದ ಕುರಿತು ಆಸಕ್ತಿ ಹೊಂದಿರುವವರು ಕೂಡಾ ಈ ಚಿತ್ರವನ್ನೊಮ್ಮೆ ನೋಡಿ.

ಇನ್ನಷ್ಟು ಓದಿರಿ

Scroll to Top