ಚಿತ್ರರಂಗದ ಅಂತರಂಗದ ಕತೆ

Picture of Cinibuzz

Cinibuzz

Bureau Report

*ಶಿವು ಅರಿಸಿನಗೆರೆ
ತಾರಾಗಣ: ಇಮ್ರಾನ್ ಪಾಶಾ, ರಕ್ಷಾ ರಾಮ್, ಪ್ರಭಾಕರ್ ರಾವ್, ಅಶ್ವಿನಿ ಶ್ರೀನಿವಾಸ್, ನವೀನ್ ಮಹಾಬಲೇಶ್ವರ್, ಓಂಶ್ರೀ ಯಕ್ಷಶಿಫ್
ನಿರ್ದೇಶನ: ಕೆ. ಚೇತನ್ ಜೋಡಿದಾರ್ಒ ಬ್ಬ ಸೋತ, ಆಕ್ರೋಶಭರಿತ ನಿರ್ಮಾಪಕ (ಪ್ರಭಾಕರ್ ರಾವ್) ಮತ್ತು ಹೇಗಾದರೂ ಮಾಡಿ ನಿರ್ದೇಶಕ ಎನಿಸಿಕೊಳ್ಳಬೇಕೆಂದು ಹಂಬಲಿಸುವ ಪ್ರತಿಭಾವಂತ ಯುವಕನ (ಇಮ್ರಾನ್ ಪಾಶಾ) ಭೇಟಿಯೇ ಈ ಕಥೆಯ ತಿರುಳು. ಇಬ್ಬರು ಸೇರಿ ‘ಟೈಮ್ ಪಾಸ್’ ಎಂದು ಅಂದುಕೊಂಡು ಕೈಗೆತ್ತಿಕೊಂಡ ಸಿನೆಮಾ ಕೊನೆಗೆ ಯಶಸ್ಸಿನ ಹೆಜ್ಜೆ ಇಡುತ್ತಾ? ಈ ಯಶಸ್ಸು ಅದರ ಸೃಷ್ಟಿಕರ್ತನಾದ ನಿರ್ಮಾಪಕನಿಗೆ ತಂದೊಡ್ಡುವ ಸವಾಲುಗಳೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೇ ಈ ಸಿನೆಮಾ. ಚಿತ್ರರಂಗದ ಕನಸುಗಾರರ, ಹೋರಾಟಗಾರರ ಬದುಕು ತೆರೆದಿಡುವ ಪ್ರಯತ್ನವೇ ‘ಟೈಮ್ ಪಾಸ್’. ಇದು ಸ್ಟುಡಿಯೋಗಳ ಗೋಡೆಯೊಳಗಿನ ಗುಪ್ತ ಕಥೆ.


‘ಟೈಮ್ ಪಾಸ್’ ಚಿತ್ರವು ಹೆಸರಿಗೆ ತಕ್ಕಂತೆ ಮನರಂಜನೆಯ ಜೊತೆಗೇ ಪ್ರೇಕ್ಷಕರಿಗೆ ಸಂಪೂರ್ಣ ‘ಟೈಮ್ ಪಾಸ್’ ನೀಡುತ್ತದೆ. ಆದರೆ, ಇದು ಬರಿಯ ಮನರಂಜನೆ ಅಲ್ಲ. ಚಿತ್ರರಂಗದಲ್ಲಿ ಬದುಕು ಕಂಡುಕೊಳ್ಳಲು ಹಾತೊರೆಯುವ ಪುಟ್ಟ ಪುಟ್ಟ ಪಾತ್ರಗಳ ಕನಸು, ಹೋರಾಟ, ಭಾವುಕತೆಗಳು ಚಿತ್ರದ ಜೀವಾಳ. ನಟ-ನಟಿಯರಾಗಲು ಕಾಯುವವರು, ಪ್ರತಿಭಾವಂತ ನಿರ್ದೇಶಕನ ತೀವ್ರತೆ, ಸೋತ ನಿರ್ಮಾಪಕನ ಆಕ್ರೋಶ- ಈ ಎಲ್ಲಾ ಭಾವನೆಗಳ ಮಿಶ್ರಣವೇ ಕಥೆ.


ನಿರ್ದೇಶಕ ಕೆ. ಚೇತನ್ ಜೋಡಿದಾರ್ ಅವರು ಚಿತ್ರರಂಗದ ‘ಒಳಗುಟ್ಟು’ಗಳನ್ನು ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ತೋರಿಸಲು ಪ್ರಯತ್ನಿಸಿದ್ದಾರೆ. ನಿರ್ಮಾಪಕರ ಕಷ್ಟ-ಸುಖಗಳನ್ನು ಅತ್ಯಂತ ಆಪ್ತವಾಗಿ ಕಟ್ಟಿಕೊಡಲಾಗಿದೆ. ‘ಟೈಮ್ ಪಾಸ್’ಗೆ ಮಾಡಿದ ಸಿನೆಮಾ ದುಡ್ಡು ಮಾಡಿದರೂ, ಅದನ್ನು ಮಾಡಿದ ನಿರ್ಮಾಪಕನ ಕೊನೆಯ ಸ್ಥಿತಿ ಏನು ಎಂಬ ಎಮೋಷನಲ್ ಪಾಯಿಂಟ್ ಪ್ರೇಕ್ಷಕರ ಹೃದಯಕ್ಕೆ ನಾಟುತ್ತದೆ.
ಮೊದಲಾರ್ಧ ಹಾಸ್ಯದ ಜೊತೆಗಿದ್ದರೆ, ದ್ವಿತೀಯಾರ್ಧವು ಭಾವುಕತೆಯ ನೆರಳಿನಲ್ಲಿ ಸಾಗುತ್ತದೆ. ಸಣ್ಣಪುಟ್ಟ ಕೊರತೆಗಳ ನಡುವೆಯೂ ಇದು ಕನ್ನಡ ಚಿತ್ರರಂಗದ ಸತ್ಯವನ್ನು ತಿಳಿಯಲು ಬಯಸುವವರಿಗೆ ಒಂದು ಉತ್ತಮ ಆಯ್ಕೆ. ನಿರ್ದೇಶಕನ ಪಾತ್ರದಲ್ಲಿ ಇಮ್ರಾನ್ ಪಾಶಾ, ನಿರ್ಮಾಪಕನಾಗಿ ಪ್ರಭಾಕರ್ ರಾವ್, ನಾಯಕಿ ಪಾತ್ರದಲ್ಲಿ ಅಶ್ವಿನಿ ಶ್ರೀನಿವಾಸ್ ಮತ್ತು ನೆಗೆಟಿವ್ ರೋಲ್ನಲ್ಲಿ ಓಂಶ್ರೀ ಯಕ್ಷಶಿಫ್ ಅವರ ನಟನೆಗಳು ಗಮನ ಸೆಳೆಯುತ್ತವೆ. ಚಿತ್ರರಂಗದವರ ಪರದೆ ಹಿಂದಿನ ಜೀವನವನ್ನು ಹತ್ತಿರದಿಂದ ನೋಡಲು ಬಯಸುವಿರಾ? ಹಾಗಾದರೆ, ‘ಟೈಮ್ ಪಾಸ್’ ನಿಮ್ಮ ಆಯ್ಕೆಯಾಗಲಿ!

ಇನ್ನಷ್ಟು ಓದಿರಿ

Scroll to Top