ಇದು ಬಣ್ಣದ ಚುಕ್ಕಿಯಲ್ಲ, ಭರವಸೆಯ ನಕ್ಷತ್ರ!

Picture of Cinibuzz

Cinibuzz

Bureau Report

ಬಾಹ್ಯ ಸೌಂದರ್ಯವೇ ಸಕಲ, ಬಣ್ಣ-ಬಾಹ್ಯ ಆಕರ್ಷಣೆಯೇ ಬಂಡವಾಳವೆಂದು ಬದುಕುತ್ತಿರುವ ಈ ದುನಿಯಾದಲ್ಲಿ, ಮನುಷ್ಯನ ಮನಸ್ಸನ್ನು ಮೀರಿದ ದೈಹಿಕ ವ್ಯತ್ಯಾಸಗಳನ್ನು ಇಟ್ಟುಕೊಂಡು ಅಪಹಾಸ್ಯ ಮಾಡುವುದು ಸಾಮಾನ್ಯ. ಕಪ್ಪಗಿದ್ದವರನ್ನು ‘ಕರೀ ಇಡ್ಲಿ’, ಕೂದಲಿಲ್ಲದವರನ್ನು ‘ಬೋಡ, ಬಾಂಡ್ಲಿ’, ದಪ್ಪಗಿದ್ದರೆ ‘ದಡಿಯ’… ಹೀಗೆ ದೇಹದ ಮೇಲೆ ಬಿಳೀ ಚುಕ್ಕಿ (ವಿಟಿಲಿಗೋ) ಇದ್ದರೆ ‘ತೊನ್ನ’ ಅಂತೆಲ್ಲಾ ಹೆಸರು ಕಟ್ಟಿ ಅಣಕ ಮಾಡಲಾಗುತ್ತದೆ. ಹೀಗೆ ಅಣಕಿಸುವವರಿಗೆ ಅದು ಆ ಕ್ಷಣದ ಖುಷಿ, ಸಮಾಧಾನವಾದರೆ, ಅನ್ನಿಸಿಕೊಳ್ಳೋರಿಗೆ ನಿತ್ಯ ನರಕ. ಇಂತಹ ಸೂಕ್ಷ್ಮ ಮತ್ತು ಮನಮಿಡಿಯುವ ಕಥಾಹಂದರವನ್ನು ಇಟ್ಟುಕೊಂಡಿರುವ ಸಿನಿಮಾ “ಬಿಳಿ ಚುಕ್ಕಿ ಹಳ್ಳಿ ಹಕ್ಕಿ”!


ಬೆಳ್ಳಿತೆರೆಯ ಮೇಲೆ ಸಾವಿರಾರು ಕಥೆಗಳು ಬಂದು ಹೋಗಿವೆ. ಆದರೆ ಕೆಲವು ಕಥೆಗಳು ಮಾತ್ರ ನಮ್ಮ ಹೃದಯವನ್ನು ಸ್ಪರ್ಶಿಸಿ, ನಮ್ಮ ಯೋಚನಾ ಲಹರಿಯನ್ನೇ ಬದಲಿಸುತ್ತವೆ. “ಬಿಳಿ ಚುಕ್ಕಿ ಹಳ್ಳಿ ಹಕ್ಕಿ” ಅಂತಹ ಒಂದು ಅಪರೂಪದ ಮತ್ತು ಪ್ರಾಮಾಣಿಕ ಪ್ರಯತ್ನವಾಗಿದೆ.
ಈ ಚಿತ್ರದ ನಿಜವಾದ ‘ಹೀರೋ’ ಇದರ ಕಥಾವಸ್ತು. ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ‘ವಿಟಿಲಿಗೋ’ (Vitiligo) ಅಥವಾ ‘ತೊನ್ನು’ ಎಂಬ ಸೂಕ್ಷ್ಮ ಮತ್ತು ಗಂಭೀರ ವಿಷಯವನ್ನು ಇಟ್ಟುಕೊಂಡು ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಮಾಡಲಾಗಿದೆ. ಇಲ್ಲಿನ ಅತಿದೊಡ್ಡ ವಿಶೇಷತೆ ಎಂದರೆ, ಈ ಚಿತ್ರದ ನಿರ್ದೇಶಕ, ನಿರ್ಮಾಪಕ ಮತ್ತು ನಾಯಕನಟರಾದ ಮಹೇಶ್ ಗೌಡ ಅವರೇ ಸ್ವತಃ ಈ ಸ್ಥಿತಿಯನ್ನು ಅನುಭವಿಸಿದವರು. ಅವರು ತಮ್ಮ ನೈಜ ಬದುಕಿನ ನೋವು-ನಲಿವನ್ನು, ಸಮಾಜದ ಕುಹಕವನ್ನು ಯಾವುದೇ ಮುಚ್ಚುಮರೆಯಿಲ್ಲದೆ, ಅತ್ಯಂತ ನೈಜವಾಗಿ ತೆರೆಯ ಮೇಲೆ ತಂದಿದ್ದಾರೆ.


ಹಳ್ಳಿಯ ಮುಗ್ಧ ಯುವಕ ಶಿವ (ಮಹೇಶ್ ಗೌಡ). ಅವನಿಗೆ ಬಿಳಿ ಚುಕ್ಕಿಗಳಿವೆ. ಸಮಾಜದ ಕೀಳರಿಮೆ, ಅನುಮಾನಗಳ ನಡುವೆಯೇ ಬೆಳೆದ ಅವನಿಗೆ, ಅಪ್ಸರೆಯಂತಿರುವ ಕವಿತಾ (ಕಾಜಲ್ ಕುಂದರ್) ಜೊತೆ ಮದುವೆ ನಿಶ್ಚಯವಾಗುತ್ತದೆ. ಬಂದ ಹುಡುಗರನ್ನೆಲ್ಲಾ ರಿಜೆಕ್ಟ್‌ ಮಾಡುವ ಈಕೆ ಶಿವಾನೇ ಬೇಕು ಅಂತಾ ಹಠ ಹಿಡಿದು, ಅಪ್ಪನ ಸಹಕಾರ, ಅಮ್ಮನ ವಿರೋಧದ ನಡುವೆಯೇ ಮದುವೆಯಾಗುತ್ತಾಳೆ. “ಹೋಗಿ ಹೋಗಿ ಇವಳು ಈವನನ್ನು ಯಾಕೆ ಒಪ್ಪಿಕೊಂಡಳು?” ಅನ್ನೋದು ಜಗತ್ತಿನ ಪ್ರಶ್ನೆಯಾಗುತ್ತದೆ.


ಇಂಥದ್ದೊಂದು ಗಂಭೀರ ಕಥಾವಸ್ತುವನ್ನು ಚಿತ್ರಕತೆಯ ರೂಪಕ್ಕಿಳಿಸಿ, ಎಲ್ಲೂ ಬೋಧನೆ ಎನಿಸದಂತೆ, ಕೇವಲ ಉಪದೇಶ ನೀಡುವ ಸಾಕ್ಷ್ಯಚಿತ್ರವಾಗದಂತೆ ತೆರೆಗೆ ತರುವುದು ನಿಜಕ್ಕೂ ಸವಾಲಿನ ಕೆಲಸ. ಆದರೆ, ನಿರ್ದೇಶಕರು ಈ ಕಠಿಣ ವಿಷಯವನ್ನು ತಿಳಿ ಹಾಸ್ಯದ ಮೂಲಕ, ಒಂದು ಸುಂದರ ಪ್ರೇಮಕಥೆಯ ರೂಪದಲ್ಲಿ ಮನರಂಜನೆಯ ಜೊತೆಗೆ ಸಂದೇಶವನ್ನು ಹೇಳಿರುವುದು ಸೂಕ್ತವಾಗಿದೆ.
ಸೌಂದರ್ಯದ ಸಾಂಪ್ರದಾಯಿಕ ವ್ಯಾಖ್ಯಾನಗಳನ್ನೆಲ್ಲಾ ಪಕ್ಕಕ್ಕಿಟ್ಟು, “ನಿಜವಾದ ಸೌಂದರ್ಯ ಇರುವುದು ಚರ್ಮದಲ್ಲಲ್ಲ, ಮನಸ್ಸಿನಲ್ಲಿ” ಎಂಬ ಸ್ಪಷ್ಟ ಸಂದೇಶವನ್ನು ಈ ಚಿತ್ರ ರವಾನಿಸುತ್ತದೆ.


ಸ್ವತಃ ʻವಿಟಿಲಿಗೋ’ ಸಮಸ್ಯೆಯಿಂದ ಯಾತನೆ ಅನುಭವಿಸಿರುವ ಮಹೇಶ್ ಗೌಡರು, ಹೆಚ್ಚು ಕಷ್ಟ ಪಡದೆ ಸಲೀಸಾಗಿ ನಟಿಸಿದ್ದಾರೆ. ಚರ್ಮದ ಕಾರಣಕ್ಕೆ ಅವರು ಪಟ್ಟ ಪಾಡು, ಸಂಕಟ, ಅವಮಾನಗಳನ್ನು ಪರಿಣಾಮಕಾರಿಯಾಗಿ ತೆರೆಗೆ ತಂದಿದ್ದಾರೆ. ಇಡೀ ಸಿನಿಮಾದ ಪ್ರಮುಖ ಆಕರ್ಷಣೆ ನಾಯಕಿ ಕಾಜಲ್‌ ಕುಂದರ್.‌ ಬಾಂಡ್‌ ರವಿ, ಕೆಟಿಎಂ, ಪೆಪೆ ಮೊದಲಾದ ಸಿನಿಮಾಗಳಲ್ಲಿ ನಟಿಸಿರುವ ಕಾಜಲ್‌ ಕುಂದರ್‌ ಸಿನಿಮಾದಿಂದ ಸಿನಿಮಾಗೆ ನಟನೆಯಲ್ಲಿ ಮಾಗುತ್ತಿದ್ದಾರೆ. ಅವರ ನೋಟ, ನಗುವಿನಷ್ಟೇ ನಟನೆ ಕೂಡಾ ಆಕರ್ಷಕವಾಗಿದೆ. ಬಿಳಿ ಚುಕ್ಕಿ ಸಿನಿಮಾದಲ್ಲಿ ಕಾಜಲ್‌ ನಿಜಕ್ಕೂ ನಕ್ಷತ್ರದಂತೆ ಮಿನುಗಿದ್ದಾರೆ. ಅಷ್ಟು ಚೆಂದ ನಟನೆ ಈಕೆಯದ್ದು. ವೀಣಾ ಸುಂದರ್ ಮತ್ತು ರವಿ ಭಟ್ ಕೂಡಾ ತಮ್ಮ ಪಾತ್ರಗಳ ಆಳಕ್ಕಿಳಿದು ನಟಿಸಿದ್ದಾರೆ. ಜಹಾಂಗೀರ್‌ ಪಾತ್ರವನ್ನು ಇನ್ನಷ್ಟು ವೃದ್ದಿಸಬಹುದಿತ್ತು. ಸಿನಿಮಾದ ಮೊದಲ ಭಾಗವನ್ನು ಒಂದಿಷ್ಟು ಟ್ರಿಮ್‌ ಮಾಡಿದರೆ, ಸಿನಿಮಾದ ವೇಗ ಮತ್ತಷ್ಟು ಹೆಚ್ಚುತ್ತಿತ್ತು.


ಅದೆಲ್ಲವೂ ಏನೇ ಇರಲಿ, ಇದು ಸಮಾಜದ ಕಣ್ಣು ತೆರೆಸುವ ಕಥೆ; ನೋವನ್ನು ನಗುವಾಗಿಸುವ ಕಲೆ. ಅಪರೂಪದ, ಧೈರ್ಯದ ಪ್ರಯತ್ನ. ಕುಟುಂಬ ಸಮೇತರಾಗಿ ನೋಡಲೇಬೇಕಾದ, ಮನಸ್ಸಿಗೆ ಹತ್ತಿರವಾಗುವ ಅರ್ಥಪೂರ್ಣ ಸಿನಿಮಾ ʻಬಿಳಿ ಚುಕ್ಕಿ’!

ಇನ್ನಷ್ಟು ಓದಿರಿ

Scroll to Top