ತಮ್ಮ `ಕೃಷ್ಣ-ಲವ್ ಸಿರೀಸ್’ ಸಿನಿಮಾಗಳ ಮೂಲಕ ಪ್ರೇಮಕಥೆಗಳಿಗೆ ಒಂದು ಹೊಸ ಭಾಷ್ಯ ಬರೆದವರು ನಿರ್ದೇಶಕ ಶಶಾಂಕ್. ಆದರೆ, ಒಂದು ವಿಷಯ ಸ್ಪಷ್ಟ: ಚಾಲ್ತಿಯಲ್ಲಿ ಉಳಿಯಬೇಕು, ಮಾರುಕಟ್ಟೆ ಹಿಡಿದಿಟ್ಟುಕೊಳ್ಳಬೇಕು ಅಂದರೆ, ಕಾಲಕ್ಕೆ ತಕ್ಕಂತೆ ಬದಲಾಗುತ್ತಲೇ ಇರಬೇಕು. ಹಿಂದೆ ಗೆಲುವು ಕಂಡ ಫಾರ್ಮುಲಾವನ್ನೇ ಬಳಸಲು ಹೋದರೆ, ಅದು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ, ಶಶಾಂಕ್ ಅವರು ಕಾಲಕಾಲಕ್ಕೆ ತಮ್ಮನ್ನು ‘ಅಪ್ಡೇಟ್’ ಮಾಡಿಕೊಂಡಿರುವುದು, ಆಯಾ ಕಾಲಕ್ಕೆ ಬೇಕಾದ ಕಥೆಗಳನ್ನು ರೆಡಿಮಾಡಿಕೊಂಡು, ಜನರೇಷನ್‌ಗೆ ಬೇಡುವ ಸಿನಿಮಾಗಳನ್ನು ನೀಡುತ್ತಾ ಬಂದಿರುವುದು ಒಂದು ವಿಶೇಷ. ‘ಬಚ್ಚನ್’, ‘ಜರಾಸಂಧ’ ಥರದ ಕಮರ್ಷಿಯಲ್ ಸಿನಿಮಾಗಳನ್ನು ರೂಪಿಸಿದ ಶಶಾಂಕ್, ಡಾರ್ಲಿಂಗ್ ಕೃಷ್ಣ ಅವರೊಂದಿಗಿನ ‘ಕೌಸಲ್ಯ ಸುಪ್ರಜಾ ರಾಮ’ದ ನಂತರ, ಇದೀಗ ‘ಬ್ರ್ಯಾಟ್’ ಚಿತ್ರದ ಮೂಲಕ ಮತ್ತೊಂದು ರೌಂಡ್ ಅಪ್ಡೇಟ್ ಆಗಿದ್ದಾರೆ ಅನ್ನಿಸಿದ್ದು, ಚಿತ್ರ ನೋಡಿದ ಮೇಲೆ ಅದು ಅಕ್ಷರಶಃ ನಿಜವಾದಂತಿದೆ.

‘ಬ್ರ್ಯಾಟ್’ ಕೇವಲ ಆಕ್ಷನ್ ಥ್ರಿಲ್ಲರ್ ಕಥೆ ಮಾತ್ರವಲ್ಲ, ಇದು ಪೀಳಿಗೆಯ ಅಂತರ, ನೈತಿಕ ಸಂಘರ್ಷ ಮತ್ತು ಹಣದ ಮೇಲಿನ ವ್ಯಾಮೋಹದ ಕಥೆ. ಕೆಲವು ಮನೆಗಳಲ್ಲಿ ಹೀಗಾಗುವುದು ಸಹಜ. ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ನೌಕರಿ ಮಾಡಿದವರ ಮಕ್ಕಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಉದಾಹರಣೆಗಳಿವೆ. ಪೊಲೀಸ್ ಕ್ವಾಟ್ರಸಿನ ಒಂದೊಂದು ಮನೆಯಲ್ಲೂ ಒಂದೊಂದು ಕಥೆ ಇರುತ್ತದೆ. ಅಂತಹದ್ದೇ ಒಂದು ಕತೆಯನ್ನು ಶಶಾಂಕ್ ಕೈಗೆತ್ತಿಕೊಂಡಿದ್ದಾರೆ.
ಕಥಾ ನಾಯಕ ಕ್ರಿಸ್ಟಿಯ ಅಪ್ಪ ಪೊಲೀಸ್ ಕಾನ್‌ಸ್ಟೇಬಲ್ ಮಹಾದೇವಯ್ಯ (ಅಚ್ಯುತ್ ಕುಮಾರ್), ಮೇಲಧಿಕಾರಿಗಳು, ಜೊತೆಗಿರುವವರು ಏನೇ ಭ್ರಷ್ಟಾಚಾರ ಮಾಡಿದರೂ, ತಾನು ಮಾತ್ರ ಪ್ರಾಮಾಣಿಕತೆಯುನ್ನು ಉಳಿಸಿಕೊಂಡಿರುತ್ತಾರೆ. ಇವರ ನಿಷ್ಠೆಗೆ ಅಪವಾದವೆನ್ನುವಂತೆ ಬೆಳೆಯುವ ಮಗ ಕ್ರಿಸ್ಟಿ (ಡಾರ್ಲಿಂಗ್ ಕೃಷ್ಣ). ಆತ ಸಣ್ಣ ವಯಸ್ಸಲ್ಲೇ ಅಪ್ಪನ ಸಿದ್ದಾಂತಕ್ಕೆ ವಿರೋಧವಾಗಿ ಬೆಳೆದಿರುತ್ತಾನೆ. ಹಣ ಮಾಡೋದನ್ನೇ ಪರಮೋದ್ದೇಶವಾಗಿಸಿಕೊಂಡ ಆತ ಕಾಸು ದುಡಿಯಲು ಎಂಥಾ ರಿಸ್ಕನ್ನೂ ತೆಗೆದುಕೊಳ್ಳುತ್ತಾನೆ. ಅವನ ಈ ಪಯಣ ಅವನನ್ನು ಕ್ರಿಕೆಟ್ ಬೆಟ್ಟಿಂಗ್ನ ಕರಾಳ ಲೋಕಕ್ಕೆ ಕರೆದೊಯ್ಯುತ್ತದೆ.
ಮಗನನ್ನು ಸರಿದಾರಿಗೆ ತರಲು ವಿಫಲವಾಗುವ ತಂದೆ ಅವನ ಬದುಕನ್ನು ತಿದ್ದಲು ಏನೆಲ್ಲಾ ಪ್ರಯತ್ನ ಮಾಡುತ್ತಾರೆ, ಅದಕ್ಕೆ ಮಗನಿಂದ ಎದುರಾಗುವ ಪ್ರತಿರೋಧಗಳೇನು? ಪೊಲೀಸ್ ಇಲಾಖೆಯೇ ಹೇಗೆ ಸಮಾಜಘಾತುಕರನ್ನು ಪೊರೆಯುತ್ತದೆ? ಅನಾಮತ್ತು ಸಂಪಾದನೆಯ ದಾರಿ ಕಂಡುಕೊಂಡ ಕ್ರಿಮಿಯೊಬ್ಬ ಪೊಲೀಸ್ ಅಧಿಕಾರಿಯನ್ನೇ ಹೇಗೆ ತನ್ನ ವ್ಯವಹಾರಕ್ಕೆ ಬಳಸಿಕೊಳ್ಳುತ್ತಾನೆ? ಎಂಬಿತ್ಯಾದಿ ವಿವರಗಳ ಸುತ್ತ ಕತೆ ಸಾಗುತ್ತದೆ. ಅಪ್ಪನ ಹೆಸರು ಕೆಡಿಸಬಾರದು ಅಂತಾ ಆತ ಬದಲಾಗಲು ಪ್ರಯತ್ನಿಸಿದರೂ, ಬೆವರು ಹರಿಸಿ ದುಡಿಯಬೇಕು ಅನ್ನೋ ಅಪ್ಪನ ‘ಔಟ್‌ಡೇಟೆಡ್ ಫಾರ್ಮುಲಾ’ ಅವನಿಗೆ ಅವಮಾನವನ್ನಷ್ಟೇ ಕೊಡಮಾಡುತ್ತದೆ.
ಬೆಟ್ಟಿಂಗ್ ಜಾಲ, ಅಲ್ಲಿ ನಡೆಯುವ ಕುತಂತ್ರ, ಸ್ನೇಹ ಮತ್ತು ವಿಶ್ವಾಸಘಾತದ ನಡುವೆ ಕ್ರಿಸ್ಟಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುವುದು ಪ್ರೇಕ್ಷಕರನ್ನು ಕುತೂಹಲದಲ್ಲಿ ಹಿಡಿದಿಡುತ್ತದೆ. ವಿಶೇಷವಾಗಿ, ಮಧ್ಯಂತರದ ನಂತರ ಚಿತ್ರವು ಗ್ರಿಪ್ಪಿಂಗ್ ಥ್ರಿಲ್ಲರ್ ಆಗಿ ಪರಿವರ್ತನೆಗೊಳ್ಳುತ್ತದೆ, ಅಲ್ಲಿ ಪ್ರತಿಯೊಂದು ನಡೆಯೂ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ.
ಡಾರ್ಲಿಂಗ್ ಕೃಷ್ಣ ‘ಲವರ್ ಬಾಯ್’ ಇಮೇಜ್‌ನಿಂದ ಹೊರಬಂದು, ‘ಬ್ರ್ಯಾಟ್’ ಪಾತ್ರಕ್ಕೆ ಸಂಪೂರ್ಣವಾಗಿ ನ್ಯಾಯ ಒದಗಿಸಿದ್ದಾರೆ. ಅವರ ಹೊಸ ಅವತಾರ, ದರ್ಪ, ಸಂಭಾಷಣೆ ಮತ್ತು ಲೆಕ್ಕಾಚಾರದ ಮೋಡಿ ಪ್ರತಿಯೊಂದು ಫ್ರೇಮ್‌ನಲ್ಲೂ ಎದ್ದು ಕಾಣುತ್ತದೆ. ಅಚ್ಯುತ್ ಕುಮಾರ್ ಎಂದಿನಂತೆ ತಮ್ಮ ಪ್ರಾಮಾಣಿಕ ಪೋಲಿಸ್ ಪಾತ್ರದಲ್ಲಿ ಜೀವಿಸಿದ್ದಾರೆ. ಮನಿಶಾ ಕಂದಕೂರ್ ಅವರ ಅಭಿನಯವೂ ಗಮನ ಸೆಳೆಯುತ್ತದೆ. ಭ್ರಷ್ಟ ಪೊಲೀಸ್ ಅಧಿಕಾರಿಯಾಗಿ ರಮೇಶ್ ಇಂದಿರಾ ಅವರ ಪಾತ್ರವೂ ಅಷ್ಟೇ ಮನೋಬಲದಿಂದ ಕೂಡಿದೆ. ಡ್ರ್ಯಾಗನ್ ಮಂಜುಗೆ ನಟನೆ ಬರೋದಿಲ್ಲ ಅನ್ನೋದೇ ಇಲ್ಲಿ ಪ್ಲಸ್ ಪಾಯಿಂಟ್ ಕೂಡಾ ಆಗಿದೆ!
ಒಂದು ವರ್ಗದ ಪ್ರೇಕ್ಷಕರು ಕಥೆಯನ್ನು ಊಹೆ ಮಾಡುವಂತಿದ್ದರೂ, ನಿರ್ದೇಶಕ ಶಶಾಂಕ್ ತಂದೆ-ಮಗನ ನಡುವಿನ ಸೆಂಟಿಮೆಂಟ್ ಅನ್ನು ಬೆಟ್ಟಿಂಗ್ ಥ್ರಿಲ್ಲರ್‌ನೊಂದಿಗೆ ತೂಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದ ಮೊದಲಾರ್ಧವು ಕಥೆಗೆ ವೇದಿಕೆ ಸಿದ್ಧಪಡಿಸಿದರೆ, ದ್ವಿತೀಯಾರ್ಧ ರೋಚಕತೆಯಿಂದ ಕೂಡಿದೆ. ಕ್ಲೈಮ್ಯಾಕ್ಸ್ ಕೂಡ ಒಂದು ‘ಪರ್ಫೆಕ್ಟ್ ಸಿಕ್ಸರ್’ನಂತೆ ತಲುಪುತ್ತದೆ. ಅರ್ಜುನ್ ಜನ್ಯಾ ಅವರ ಸಂಗೀತ ಮತ್ತು ಅಭಿಲಾಷ್ ಕಲತ್ತಿ ಅವರ ಛಾಯಾಗ್ರಹಣ ಕಥೆಯ ಮೂಡ್‌ಗೆ ಪೂರಕವಾಗಿವೆ. ಒಟ್ಟಾರೆ, ‘ಬ್ರ್ಯಾಟ್’ ಕೇವಲ ಕ್ರಿಕೆಟ್ ಕುರಿತಾದ ಸಿನಿಮಾ ಅಲ್ಲ. ಇದು ವರ್ಗ, ಆಯ್ಕೆಗಳು ಮತ್ತು ಯುವಕರ ನೈತಿಕ ಸಂದಿಗ್ಧತೆಯ ಸುತ್ತ ಹೆಣೆದ ಕಥೆ. ಸುಲಭದ ಮಾರ್ಗಗಳ ಹಿಂದೆ ಓಡುವ ಇಂದಿನ ಯುವ ಪೀಳಿಗೆಯ ಮನಸ್ಥಿತಿಯನ್ನು ಬಿಚ್ಚಿಡುವ ಈ ಚಿತ್ರ ಇದಾಗಿದೆ!











































