- ಶಿವು ಅರಿಸಿನಗೆರೆ
ಇತ್ತೀಚಿನ ದಿನಗಳಲ್ಲಿ ಬ್ರೇಕಪ್, ಟೈಮ್‌ಪಾಸ್ ಪ್ರೀತಿಯ ಕಥೆಗಳೇ ಹೆಚ್ಚಾಗಿರುವಾಗ, “ಪ್ರೀತಿ ಅಂದ್ರೆ ಹೀಗಿರಬೇಕು” ಎಂದು ಎದೆ ತಟ್ಟಿ ಹೇಳುವಂತಹ, ಹೃದಯ ಹಿಂಡುವ ಒಂದು ನೈಜ ಪ್ರೇಮಗಾಥೆ ಸ್ಯಾಂಡಲ್‌ವುಡ್‌ನಲ್ಲಿ ತೆರೆಕಂಡಿದೆ. ಅದು ‘ಲವ್ ಯೂ ಮುದ್ದು’. ಇದು ಬರಿಯ ಕಾಲ್ಪನಿಕ ಕಥೆಯಲ್ಲ, ಬದಲಾಗಿ ಮಹಾರಾಷ್ಟ್ರದ ಸೊಲ್ಲಾಪುರದ ಆಕಾಶ್ ಮತ್ತು ಅಂಜಲಿ ಎಂಬ ದಂಪತಿಯ ಬದುಕಿನ ನೈಜ ಹೋರಾಟದ ಕಥೆ. ನಿರ್ದೇಶಕ ಕುಮಾರ್ ಅವರು ಈ ಭಾವನಾತ್ಮಕ ಎಳೆಯನ್ನು ಹಿಡಿದು, ಅದನ್ನು ಅಷ್ಟೇ ಸರಳವಾಗಿ ಮತ್ತು ಸುಂದರವಾಗಿ ತೆರೆಗೆ ತಂದಿದ್ದಾರೆ.

ಚಿತ್ರದ ಕಥಾನಾಯಕ ಕರ್ಣ (ಸಿದ್ದು ಮೂಲಿಮನಿ) ಮತ್ತು ನಾಯಕಿ ಸುಮತಿ (ರೇಷ್ಮಾ). ಮೊದಲಾರ್ಧದಲ್ಲಿ ಇವರಿಬ್ಬರ ಮುದ್ದಾದ ಪ್ರೀತಿ, ಸರಸ-ಸಲ್ಲಾಪ, ಪಾತ್ರಗಳ ಪರಿಚಯ ನಿಧಾನವಾಗಿ ಸಾಗುತ್ತದೆ. ಇಲ್ಲಿ ಬರುವ ಒಂದಷ್ಟು ಕಾಮಿಡಿ ದೃಶ್ಯಗಳು ಕಥೆಯ ಗಂಭೀರತೆಗೆ ಪೂರ್ತಿಯಾಗಿ ಹೊಂದಿಕೊಳ್ಳುವುದಿಲ್ಲ, ಅಲ್ಲಲ್ಲಿ ಸ್ವಲ್ಪ ಹಾದಿ ತಪ್ಪಿದಂತೆ ಅನಿಸಿದರೂ, ಕಥೆ ಒಮ್ಮೆ ಗಂಭೀರ ತಿರುವು ಪಡೆದುಕೊಳ್ಳುತ್ತಿದ್ದಂತೆ ಪ್ರೇಕ್ಷಕ ಹಿಡಿದಿಟ್ಟ ಉಸಿರನ್ನು ಬಿಗಿಹಿಡಿದು ಕೂರುತ್ತಾನೆ.
ಎರಡು ಮನಸ್ಸುಗಳು ಒಂದಾಗಿ, ದಾಂಪತ್ಯ ಜೀವನ ಆರಂಭಿಸಿದ ಕೆಲವೇ ದಿನಗಳಲ್ಲಿ ನಡೆಯುವ ಒಂದು ಅನಿರೀಕ್ಷಿತ ಘಟನೆ, ಇಡೀ ಬದುಕನ್ನೇ ತಲೆಕೆಳಗಾಗಿಸುತ್ತದೆ. ಇಲ್ಲಿಂದಲೇ ಚಿತ್ರದ ನಿಜವಾದ ಪರೀಕ್ಷೆ ಶುರು. ದ್ವಿತೀಯಾರ್ಧ ಪೂರ್ತಿ ಭಾವನೆಗಳ ಸೆಳೆತ. ಪ್ರೀತಿ, ಬದ್ಧತೆ ಮತ್ತು ನಂಬಿಕೆಯನ್ನೇ ಉಸಿರಾಗಿಸಿಕೊಂಡ ನಾಯಕನ ಹೋರಾಟವೇ ಸಿನಿಮಾದ ಹೈಲೈಟ್. ಪ್ರತಿಕ್ರಿಯೆ ನೀಡದ ತನ್ನ ಪ್ರೀತಿಗಾಗಿ ನಾಯಕ ಪಡುವ ಪಾಡು, ಆತನ ಸ್ಥಿರವಾದ ಬದ್ಧತೆ ಪ್ರೇಕ್ಷಕರ ಕಣ್ಣನ್ನು ತೇವಗೊಳಿಸದೆ ಬಿಡುವುದಿಲ್ಲ.
ನಟನೆಯ ವಿಷಯದಲ್ಲಿ ಇದು ಸಿದ್ದು ಮೂಲಿಮನಿ ಅವರ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ಎನ್ನಬಹುದು. ಭಾವನಾತ್ಮಕ ದೃಶ್ಯಗಳಲ್ಲಿ ಅವರ ನಟನೆ, ನೋವನ್ನು ಹೊರಹಾಕುವ ರೀತಿ ಅಮೋಘವಾಗಿದೆ. ಪ್ರೇಕ್ಷಕರನ್ನು ಅಳಿಸುವಷ್ಟು ತೀವ್ರತೆ ಆ ಪಾತ್ರದಲ್ಲಿದೆ. ಅವರಿಗೆ ಪೈಪೋಟಿ ನೀಡುವಂತೆ ನಾಯಕಿ ರೇಷ್ಮಾ ಕೂಡ ತಮ್ಮ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ಇನ್ನುಳಿದಂತೆ ತಂದೆಯ ಪಾತ್ರದಲ್ಲಿ ರಾಜೇಶ್ ನಟರಂಗ, ಹಾಗೂ ತಬಲಾ ನಾಣಿ, ಗಿರೀಶ್ ಶಿವಣ್ಣ ಅವರಂತಹ ಅನುಭವಿ ಕಲಾವಿದರು ತಮ್ಮ ಲವಲವಿಕೆಯ ನಟನೆಯಿಂದ ಚಿತ್ರಕ್ಕೆ ದೊಡ್ಡ ಬಲ ತುಂಬಿದ್ದಾರೆ.
ನಿರ್ದೇಶಕ ಕುಮಾರ್ ಅವರು ಈ ನೈಜ ಕಥೆಗೆ ಯಾವುದೇ ಅನಗತ್ಯ ಆಡಂಬರಗಳನ್ನು ಸೇರಿಸದೆ, ಕಥೆಯ ಆಶಯಕ್ಕೆ ಬದ್ಧರಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಸಿನಿಮಾದ ಅವಧಿ ಕಡಿಮೆ ಇರುವುದು ಕೂಡ ಒಂದು ಪ್ಲಸ್ ಪಾಯಿಂಟ್. ಅನಿರುದ್ಧ ಶಾಸ್ತ್ರಿ ಅವರ ಸಂಗೀತ ಕಥೆಯ ಭಾವನೆಗಳಿಗೆ ಪೂರಕವಾಗಿದೆ ಮತ್ತು ಕೃಷ್ಣ ದೀಪಕ್ ಅವರ ಛಾಯಾಗ್ರಹಣ ಕಥೆಯ ತೀವ್ರತೆಯನ್ನು ಹೆಚ್ಚಿಸಿದೆ.
ಚಿತ್ರದ ಕೊನೆಯಲ್ಲಿ ಆ ನೈಜ ದಂಪತಿಗಳನ್ನು ತೆರೆಯ ಮೇಲೆ ತೋರಿಸಿದಾಗ, ಈ ಕಥೆ ಕೇವಲ ಸಿನಿಮಾವಲ್ಲ, ಅದು ಯಾರೋ ಬದುಕಿದ ಬದುಕು ಎಂಬ ಸತ್ಯ ಅರಿವಾಗಿ, ಚಿತ್ರಮಂದಿರದಿಂದ ಹೊರಬರುವ ಪ್ರೇಕ್ಷಕನ ಮನಸ್ಸಿನಲ್ಲಿ ಒಂದು ಭಾರವಾದರೂ, ಪವಿತ್ರ ಪ್ರೀತಿಯ ಬಗ್ಗೆ ಹೆಮ್ಮೆಯ ಭಾವ ಮೂಡುತ್ತದೆ. ‘ಪ್ರೀತಿಸಿದ ಮೇಲೆ ಯಾವ ಕಾರಣಕ್ಕೂ ಕೈ ಬಿಡಬಾರದು’ ಎಂಬ ಬಲವಾದ ಸಂದೇಶವನ್ನು ಸಾರುವ ‘ಲವ್ ಯೂ ಮುದ್ದು’, ಖಂಡಿತವಾಗಿಯೂ ಒಂದು ನೈಜ ಮತ್ತು ಭಾವುಕ ಅನುಭವ ನೀಡುವ ಚಿತ್ರ.











































