ವಿಲನ್ ಹರೀಶ್ ರಾಯ್ ಬದುಕಿನ ಕಣ್ಣೀರ ಕಥೆ!
ಕನ್ನಡ ಚಿತ್ರರಂಗದ ಖಡಕ್ ವಿಲನ್, ‘ಕೆಜಿಎಫ್’ ಚಿತ್ರದ ಮೂಲಕ ‘ಚಾಚಾ’ ಎಂದೇ ಮನೆಮಾತಾಗಿದ್ದ ಹರೀಶ್ ರಾಯ್ ಲೈಫ್ ಸ್ಟೋರೀನೇ ಒಂದು ಸಿನಿಮಾದಂತಿದೆ. ಅಪಾರ ಆಸ್ತಿವಂತರ ಮನೆಯಲ್ಲಿ ಹುಟ್ಟಿ, ಭೂಗತ ಲೋಕದ ಕರಾಳ ದಾರಿಯಲ್ಲಿ ಮುಳುಗಿ, ನಂತರ ಚಿತ್ರರಂಗದಲ್ಲಿ ಮಿಂಚಿ, ಕೊನೆಗೆ ಕ್ಯಾನ್ಸರ್ ಎಂಬ ಮಹಾಮಾರಿಯೊಂದಿಗೆ ಹೋರಾಡಿ ಸೋತ ಈ ನಟನ ಜೀವನಚರಿತ್ರೆ ನಿಜಕ್ಕೂ ಎಂಥವರ ಕಣ್ಣಂಚನ್ನೂ ತೇವಗೊಳಿಸುತ್ತದೆ.

ಉಡುಪಿಯ ದೊಡ್ಡ ಶ್ರೀಮಂತ ಕುಟುಂಬದಲ್ಲಿ ಜನಿಸಿದವರು ಹರೀಶ್ ರಾಯ್. ತಾಯಿಯ ಕಡೆ ಚಿನ್ನದ ಅಂಗಡಿಗಳ ವ್ಯಾಪಾರ, ತಂದೆಯ ಬಳಿ ಎಕರೆಗಟ್ಟಲೆ ಜಮೀನು. ಆದರೆ “ಉಳುವವನೇ ಭೂಮಿಯ ಒಡೆಯ” ಕಾನೂನು ಇವರ ಕುಟುಂಬದಿಂದ ಸಾಕಷ್ಟು ಭೂಮಿಯನ್ನು ಕಸಿದುಕೊಂಡಿತು. ಅಷ್ಟೇ ಅಲ್ಲ, ಬಾಲ್ಯದಲ್ಲೇ ತಾಯಿಯ ಪ್ರೀತಿಯಿಂದ ವಂಚಿತರಾದರು. ತಂಗಿ ಹುಟ್ಟಿದ ಕಾರಣ, ಕೇವಲ ಒಂದು ವರ್ಷದ ಮಗುವಾಗಿದ್ದ ಹರೀಶ್‌ರನ್ನು ಬೇರೆಯವರ ಮನೆಯಲ್ಲಿ ಬಿಡಲಾಯಿತು. ಐದಾರು ವರ್ಷಗಳ ನಂತರ ಮನೆಗೆ ಮರಳಿದರೂ, ಆ ನೋವು ಅವರನ್ನು ಪೋಲಿಯನ್ನಾಗಿ ಮಾಡಿತ್ತು.
ಹತ್ತನೇ ಕ್ಲಾಸ್ ಮುಗಿಸಿ ಮುಂಬೈಗೆ ಓಡಿದ ಹರೀಶ್, ವಾಪಸ್ ಉಡುಪಿಗೆ ಬಂದು ಚಿನ್ನದ ವ್ಯವಹಾರ, ಫೈನಾನ್ಸ್ ಶುರುಮಾಡಿದರು. ಕೊಟ್ಟ ಸಾಲ ವಸೂಲಿ ಮಾಡಲು ರೌಡಿಗಳ ಸಹವಾಸ ಬೆಳೆಸಿಕೊಂಡರು. ಇದೇ ವೇಳೆ, ವಕೀಲರೊಬ್ಬರ ಜೊತೆಗಿನ ಗಲಾಟೆ ತಾರಕಕ್ಕೇರಿ, ತಲವಾರ್ ಹಿಡಿದು ಕೋರ್ಟ್ ಬಳಿ ಹಲ್ಲೆ ನಡೆಸಿದ ಆರೋಪ ಇವರ ನೆತ್ತಿ ಮೇಲೆ ಬಿತ್ತು. ಅಲ್ಲಿಂದಲೇ ಇವರಿಗೆ ‘ಡಾನ್’ ಪಟ್ಟ ಕಟ್ಟಲಾಯಿತು, ರೌಡಿ ಶೀಟ್ ಓಪನ್ ಆಯಿತು. ಸಾಧು ಶೆಟ್ಟಿಯಂತಹ ಡಾನ್‌ಗಳ ಸಂಪರ್ಕ ಬೆಳೆದು, ಕೈಗೆ ಗನ್ ಬಂತು. ಈ ಕರಾಳ ಜಗತ್ತು ಎಲ್ಲೋ ದಾರಿ ತಪ್ಪಿಸುತ್ತಿದೆ ಎಂದು ಅರಿವಾದಾಗ, ಬೆಂಗಳೂರಿಗೆ ಕಾಲಿಟ್ಟರು.

ಇಲ್ಲಿಯೇ ಅವರ ಬದುಕಿಗೆ ಸಿಕ್ಕಿತು ದೊಡ್ಡ ತಿರುವು. ಗೆಳೆಯನ ಮೂಲಕ ನಟ-ನಿರ್ದೇಶಕ ಉಪೇಂದ್ರ ಅವರ ಪರಿಚಯವಾಗಿ, 1995ರ ಸೂಪರ್‌ಹಿಟ್ ‘ಓಂ’ ಚಿತ್ರದಲ್ಲಿ ಡಾನ್ ಮುತ್ತಪ್ಪ ರೈ ಪಾತ್ರ ಮಾಡುವ ಅವಕಾಶ ಸಿಕ್ಕಿತು. ಹರೀಶ್ ಆಚಾರ್ಯ ಎಂಬ ಹೆಸರು ʻಹರೀಶ್ ರಾಯ್’ ಆಯಿತು. ಅಲ್ಲಿಂದ ಶುರುವಾದ ಪಯಣದಲ್ಲಿ ನೂರಾರು ಸಿನಿಮಾಗಳಲ್ಲಿ ಖಳನಟನಾಗಿ ಆರ್ಭಟಿಸಿದರು. ಸಿನಿಮಾದಲ್ಲಿ ಬ್ಯುಸಿಯಾಗಿದ್ದಾಗಲೇ ಪ್ರೀತಿಸಿ ಮದುವೆಯಾದರು. ಆದರೆ, ಹಳೆಯ ಕೇಸುಗಳು ಇವರನ್ನು ಬಿಡಲಿಲ್ಲ. ಕೊಲೆ ಕೇಸೊಂದರಲ್ಲಿ ಸಿಲುಕಿ, 9 ತಿಂಗಳು ಜೈಲುವಾಸ ಅನುಭವಿಸಿದರು. ಆಗಿನ್ನೂ ಇವರ ಮಗನಿಗೆ ಬರೀ ಮೂರು ತಿಂಗಳು. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಇವರನ್ನು, ಸ್ವತಃ ಮುತ್ತಪ್ಪ ರೈ ಅವರೇ ದೊಡ್ಡ ವಕೀಲರನ್ನು ನೇಮಿಸಿ ಹೊರತಂದರು.
ಬದುಕು ಕೊಂಚ ಹಳಿಗೆ ಮರಳಿತು ಎನ್ನುವಾಗಲೇ ಕ್ಯಾನ್ಸರ್ ರೂಪದಲ್ಲಿ ವಿಧಿ ಅಟ್ಟಹಾಸ ನಕ್ಕಿತು. ಗಂಟಲಲ್ಲಿ ಗಡ್ಡೆ ಕಾಣಿಸಿಕೊಂಡರೂ, ಕೈಯಲ್ಲಿ ದುಡ್ಡಿಲ್ಲದೆ ನಿರ್ಲಕ್ಷಿಸಿದ್ದರು. ‘ಕೆಜಿಎಫ್’ ಸಿನಿಮಾ ದೊಡ್ಡ ಹೆಸರು ತಂದುಕೊಟ್ಟರೂ, ‘ಕೆಜಿಎಫ್ 2’ ಹೊತ್ತಿಗೆ ರೋಗ ಉಲ್ಬಣಿಸಿತ್ತು. ಕ್ಯಾನ್ಸರ್ ಕೊನೆಯ ಹಂತ ತಲುಪಿತ್ತು. ಚಿಕಿತ್ಸೆಗೆ ಲಕ್ಷಗಟ್ಟಲೆ ಹಣ ಬೇಕಾದಾಗ ಯಶ್, ದರ್ಶನ್, ವಿಜಯ್ ಕಿರಗಂದೂರು ಸೇರಿದಂತೆ ಚಿತ್ರರಂಗ ಮತ್ತು ಅಭಿಮಾನಿಗಳು ನೆರವಾದರು. ಆದರೆ, ಈ ಹೋರಾಟದಲ್ಲಿ ಹರೀಶ್ ರಾಯ್ ಗೆಲ್ಲಲಾಗಲಿಲ್ಲ.
ಶ್ರೀಮಂತಿಕೆಯ ಸುಪ್ಪತ್ತಿಗೆಯಿಂದ ಭೂಗತ ಲೋಕದ ಅಂಧಕಾರಕ್ಕೆ ಜಾರಿ, ಅಲ್ಲಿಂದ ಬೆಳ್ಳಿತೆರೆಯ ಬೆಳಕಿಗೆ ಬಂದು, ಕೊನೆಗೆ ಬಣ್ಣದ ಲೋಕದಲ್ಲಿ ಬಸವಳಿದು ಜೀವ ಬಿಟ್ಟಿದ್ದಾರೆ. ಸಿನಿಮಾರಂಗದಲ್ಲಿ ಉಳಿದು, ಬೆಳೆಯಬೇಕು ಅಂದರೆ, ಕೈ-ಬಾಯಿ ಶುದ್ಧವಿರಬೇಕು. ಹರೀಶ್ ರಾಯ್ ವಿಚಾರದಲ್ಲಿ, ಕೈ ಸರಿಯಿದ್ದರೂ ಬಾಯಿ ಸರಿ ಇರಲಿಲ್ಲ. ಹೀರೋಗಳ ಮೇಲೆ ಬಾಯಿಗೆ ಬಂದಂಗೆ ಮಾತಾಡುತ್ತಿದ್ದ ಅನ್ನೋ ಕಾರಣಕ್ಕೇ ಎಷ್ಟೋ ಅವಕಾಶಗಳು ಮಿಸ್ ಆಗುತ್ತಿದ್ದವು. ಇರಲಿ, ಸತ್ತವರ ಕುರಿತ ಕೆಟ್ಟ ಅಂಶಗಳನ್ನು ಚರ್ಚಿಸಬಾರದು! ಹರೀಶ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ನಟ ಯಶ್ ತಕ್ಷಣವೇ ಆಸ್ಪತ್ರೆಗೆ ಧಾವಿಸಿ, ಅಂತಿಮ ದರ್ಶನ ಪಡೆದು, ಅವರ ಪತ್ನಿ ಮತ್ತು ಇಬ್ಬರು ಪುತ್ರರಿಗೆ ಸಾಂತ್ವನ ಹೇಳಿದ್ದಾರೆ. “ಕುಟುಂಬದ ಜವಾಬ್ದಾರಿ ನಮ್ಮದು, ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ” ಎಂದು ಭರವಸೆ ನೀಡಿದ್ದಾರೆ. ಧ್ರುವಾ ಸರ್ಜಾ ಕೂಡಾ ಅಂತಿಮ ದರ್ಶನಕ್ಕೆ ಬಂದು ಹೋಗಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜಕೀಯ ಹಾಗೂ ಚಿತ್ರರಂಗದ ಗಣ್ಯರು ಹರೀಶ್ ರಾಯ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ…











































