ಶರಣ್, ರಾಗಿಣಿ ಒಟ್ಟಿಗೇ ನಟಿಸಿರುವ ಅಧ್ಯಕ್ಷ ಇನ್ ಅಮೆರಿಕಾ ರಿಲೀಸಾಗಿದೆ.
ಹಣ, ಪ್ರತಿಷ್ಟೆಗಳನ್ನೇ ಮುಖ್ಯವೆಂದುಕೊಂಡ, ಸಂಬಂಧಗಳನ್ನು ಸಡಿಲವಾಗಿಸಿಕೊಂಡು, ದುಡ್ಡಿನಿಂದಲೇ ಎಲ್ಲ ತೂತುಗಳನ್ನು ತೇಪೆ ಹಾಕುವ ಮಂದಿ. ಹಣ ಸಂಪಾದನೆಗಾಗಿ ನವರಂಗೀ ಆಟಗಳನ್ನು ಕಟ್ಟುವ ಹೀರೋ. ಊರನ್ನೇ ಯಾಮಾರಿಸುವ ಈತ ಹುಡುಗಿಯೊಬ್ಬಳ ಮುಂದೆ ಬೆಪ್ಪನಂತಾಗುತ್ತಾನೆ. ಮಾರ್ವಾಡಿ ಹುಡುಗಿಗೆ ಕೈಕೊಟ್ಟು ಅಮೆರಿಕಾ ಹುಡುಗಿಯನ್ನು ಕಟ್ಟಿಕೊಳ್ಳುತ್ತಾನೆ. ಎಲ್ಲ ಮುಗಿದ ಮೇಲೆ ಗೊತ್ತಾಗೋದು ತನ್ನ ಪತ್ನಿ ದೊಡ್ಡ ಪಿವೋಟು ಅಂತಾ!
ಅಪಾರ ಆಸ್ತಿ, ಅವರನ್ನು ಬಿಟ್ಟು ಇವರು, ಇವರನ್ನು ಬಿಟ್ಟು ಅವರು ಮದುವೆಯಾದ ಪೋಷಕರು. ಅಮೆರಿಕಾ ಕಲ್ಚರ್ರು, ಅಲ್ಲಿನ ಕಾನೂನುಗಳ ಹಿಡಿತಕ್ಕೆ ಸಿಲುಕಿರುತ್ತಾರೆ. ಮಗಳ ಭವಿಷ್ಯ ರೂಪಿಸಬೇಕಿರುವ ತಾಯಿ ತನ್ನ ವಿಲಾಸೀ ಜೀವನಕ್ಕೆ ಹೆಚ್ಚು ಮಹತ್ವ ಕೊಟ್ಟಿರುತ್ತಾಳೆ. ಇದರ ಪ್ರತಿಫಲವೆನ್ನುವಂತೆ ಮಗಳು ಕುಡಿತಕ್ಕೆ ದಾಸಿಯಾಗಿರುತ್ತಾಳೆ.
ಸದಾ ನಶೆಯಲ್ಲಿ ತೇಲುವ ಹೆಂಡತಿಯಾಗಿ ರಾಗಿಣಿ ಅನುಭವಸ್ಥೆಯಂಥೆ ನಟಿಸಿದ್ದಾರೆ! ಶರಣ್ ಕಾಮಿಡಿ ಟೈಮಿಂಗಿನ ಬಗ್ಗೆ ಮಾತಾಡುವಂತಿಲ್ಲ. ಪರದೆ ಮೇಲೆ ಶರಣ್ ಸುಮ್ಮನೇ ಅಲ್ಲಾಡಿದರೂ ಜನ ಉಳ್ಳಾಡಿಕೊಂಡು ನಗುತ್ತಾರೆ. ಶಿವರಾಜ್ ಕೆ.ಆರ್.ಪೇಟೆ, ತಬಲಾ ನಾಣಿ, ಪ್ರಕಾಶ್ ಬೆಳವಾಡಿ, ಚಿತ್ರಾ ಶೆಣೈ, ಅವಿನಾಶ್, ಅಶೋಕ್, ಸಾಧು ಕೋಕಿಲ, ರಂಗಾಯಣ ರಘು ಹೀಗೆ ತೆರೆ ಮೇಲೆ ಕಾಣಿಸಿಕೊಳ್ಳುವ ಪ್ರತಿಯೊಂದು ಪಾತ್ರಗಳನ್ನೂ ಸರಳವಾಗಿಸಿ, ನೋಡುಗರಿಗೆ ನಗು ಬರುವಂತೆ ಮಾಡಿರುವುದು ನಿರ್ದೇಶಕ ಯೋಗಾನಂದ ಮುದ್ದಾನ್ ಅವರ ಗೆಲುವು.
ಪ್ರಕಾಶ್ ಬೆಳವಾಡಿ, ಅವಿನಾಶ್, ಮಕರಂದ್ ದೇಶಪಾಂಡೆಯಂಥಾ ಸೀರಿಯಸ್ ನಟರನ್ನೂ ಕಾಮಿಡಿ ಪಾತ್ರಕ್ಕೆ ಒಗ್ಗಿಸುವುದೆಂದರೆ ಸುಲಭವಲ್ಲ. ಅದನ್ನು ಯೋಗಾನಂದ್ ಸಾಧ್ಯವಾಗಿಸಿದ್ದಾರೆ. ಶರಣ್ಗೆ ಹೇಳಿಮಾಡಿಸಿದಂತಾ ಪಾತ್ರವಿದು. ಸಣ್ಣದೊಂದು ಕತೆ, ಪದಪದಗಳಲ್ಲೂ ನಗಿಸುವ ಶಕ್ತಿಯಿರುವ ಸಂಭಾಷಣೆ, ಚುರುಕು ಚಿತ್ರಕತೆ, ಅದರೊಳಗೊಂದು ಮೆಸೇಜು, ಸೆಂಟಿಮೆಂಟು – ಹೀಗೆ ಎಲ್ಲವನ್ನೂ ಸೇರಿಸಿ ರೆಡಿಮಾಡಿಟ್ಟ ಹಾಸ್ಯಪ್ರಧಾನ ಚಿತ್ರ ಅಧ್ಯಕ್ಷ ಇನ್ ಅಮೆರಿಕಾ.
ಸಿನಿಮಾ ಆರಂಭವಾದಾಗಿನಿಂದ ಹಿಡಿದು ಮುಗಿಯುವ ತನಕ ಪ್ರತೀ ದೃಶ್ಯದಲ್ಲೂ ಜನ ಕುಂತಲ್ಲಿ ಕೂರದೆ ತಕತಕನೆ ಎದ್ದೆದ್ದು ಕುಣಿಯುತ್ತಾ, ಮೈ ಕುಲುಕಿಸುತ್ತಾ ನಗುವಂತೆ ಮಾಡಿರುವ ‘ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರ ಈ ದಸರಾ ಹಬ್ಬಕ್ಕೆ ಕನ್ನಡಿಗರ ಪಾಲಿಗೆ ಉಡುಗೊರೆಯಾಗಿದೆ.
No Comment! Be the first one.