ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಅಜಿತ್ ವಿಕ್ಷಿಪ್ತ ಮನಸಿನ ನಟ. ತಮಿಳು ನಾಡಿನಲ್ಲಿ ರಜನೀಕಾಂತ್ ಹಾಗೂ ಕಮಲಹಾಸನ್ ಅವರಿಗೆ ತಮ್ಮದೇ ಆದ ಸ್ಥಾನ ಮಾನ ಹಾಗೂ ಬೃಹತ್ ಅಭಿಮಾನಿ ಬಳಗವಿದೆ. ಆದರೆ ಅಜಿತ್ ಚಿತ್ರಗಳು ಪಡೆಯುವ ಅದ್ದೂರಿ ಆರಂಭವನ್ನು ಕಮಲ ಹಾಸನ್ ಅವರ ಚಿತ್ರಗಳೂ ಪಡೆಯುವುದಿಲ್ಲ. ಅವರಷ್ಟು ಸಂಭಾವನೆಯನ್ನು ತಮಿಳಿನ ಇತರ ಸ್ಟಾರ್ಗಳು ಪಡೆಯುವುದಿಲ್ಲ!
ಆದರೇ ಈ ಪರಿ ಹೆಸರಾಗಿರುವ ಅಜಿತ್ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲದಿರುವ ಹಲವಾರು ಇಂಟರೆಸ್ಟಿಂಗ್ ಸಂಗತಿಗಳಿವೆ. ತಮಿಳು ಚಿತ್ರರಂಗದ ಅಭಿಮಾನಿಗಳಿಂದ ತಲಾ ಮತ್ತು ತಲೈ ಎಂದು ಕರೆಸಿಕೊಳ್ಳುವ ಈ ಸ್ಟಾರ್ ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ 25 ಕೋಟಿ ರೂಗಳು. ಈ ಸಂಭಾವನೆಯನ್ನು ಪೂರ್ತಿ ಪಾವತಿಸಿದ ನಂತರವೇ ಅಜಿತ್ ಈ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವುದು. ಯಾವುದೇ ಚಿತ್ರದ ಚಿತ್ರೀಕರಣ ಹಾಗೂ ಡಬ್ಬಿಂಗ್ ಕಾರ್ಯಕ್ರಮ ಮುಗಿಸಿದ ನಂತರ ಚಿತ್ರಕ್ಕೆ ಸಂಬಂಧಪಟ್ಟವರು ಯಾರೂ ಈ ಸ್ಟಾರ್ನನ್ನು ಸಂಪರ್ಕಿಸುವುದಕ್ಕಾಗುವುದಿಲ್ಲ. ಆತ ಯಾರ ಫೊನ್ ಕರೆಯನ್ನು ಸ್ವೀಕರಿಸುವುದಿಲ್ಲ. ಚಿತ್ರದ ಕೆಲಸ ಮುಗಿಸಿ ಆತ ಯಾವುದೋ ವಿದೇಶಕ್ಕೆ ಹೋಗಿ ಕಾರಿನ ರೇಸ್ನಲ್ಲಿ ಭಾಗವಹಿಸಿಬಿಡುತ್ತಾನೆ. ಆದರಾತ ಯಾವ ದೇಶದಲ್ಲಿದ್ದಾನೆನ್ನುವ ವಿಚಾರ ಯಾರಿಗೂ ಗೊತ್ತಾಗುವುದಿಲ್ಲ. ಆತನ ಪತ್ನಿ ಶಾಲಿನಿ ಈ ಹಿಂದೆ ಮಲೆಯಾಳಂ ಹಾಗೂ ತಮಿಳು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರೂ ಆತನ ಬಗ್ಗೆ ಯಾವುದೇ ಮಾಹಿತಿ, ಸೂಚನೆಯನ್ನು ಕೊಡುವ ಹಾಗಿಲ್ಲ!
ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವುದನ್ನು ಬಿಟ್ಟರೆ ಈ ನಟ ಬೇರೆ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವುದಿಲ್ಲ್ಲ. ತನ್ನ ಚಿತ್ರದ ಬಗ್ಗೆ ಯಾರಲ್ಲೂ ಒಂದು ಮಾತನ್ನೂ ಆಡುವುದಿಲ್ಲ್ಲ. ಚಿತ್ರದ ಆಡಿಯೋ ಕ್ಯಾಸೆಟ್ ಸಮಾರಂಭದಲ್ಲಾಗಲೀ ಅಥವ ಪತ್ರಿಕಾ ಗೋಷ್ಟಿಯಲ್ಲಾಗಲೀ ಆತ ಭಾಗವಹಿಸುವುದಿಲ್ಲ. ನಿರ್ಮಾಪಕರು ಚಿತ್ರದ ಪ್ರಚಾರಕ್ಕಾಗಿ ನಡೆಸುವ ಯಾವುದೇ ಗಿಮಿಕ್ಗಳಲ್ಲೂ ಆತ ಭಾಗಿಯಾಗುವುದಿಲ್ಲ. ತಾನು ಅಭಿನಯಿಸಿದ ಮೇಲೆ ಚಿತ್ರದ ಬಗ್ಗೆ ಮಾತನಾಡುವುದು, ಪ್ರಚಾರ ನೀಡುವುದು ಏನಿದೆ ಎಂದು ಈತ ತನ್ನ ಅಭಿನಯದ ಚಿತ್ರಗಳ ಅನೇಕ ಯುವ ನಿರ್ದೇಶಕರನ್ನೇ ಕೇಳಿದ್ದಾನಂತೆ. ಇಷ್ಟಾದರೂ ಆತನಿಗಿರುವ ಅಭಿಮಾನಿಗಳ ಸಂಖ್ಯೆ ದಿನ ದಿನಕ್ಕೆ ಏರುತ್ತಲೇ ಇದೆ.
ಇಷ್ಟುದಿನ ಚೆನ್ನೈನ ತಿರುವಾನ್ಮಿಯೂರಿನಲ್ಲಿದ್ದ ಅಜಿತ್ ಈಗ ಈಸ್ಟ್ ಕೋಸ್ಟ್ ರಸ್ತೆಯಲ್ಲಿ ಹೊಸದೊಂದು ಬಂಗಲೆ ನಿರ್ಮಿಸಿದ್ದಾರೆ. ಎಲ್ಲ ಸ್ಟಾರ್ಗಳ ಮನೆಯಲ್ಲಿರುವಂತೆಯೇ ಈ ಬಂಗಲೆಯಲ್ಲಿಯೂ ಜಿಮ್, ಸ್ಮಿಮಿಂಗ್ ಪೂಲುಗಳೆಲ್ಲವೂ ಇದ್ದು ಅದರೊಟ್ಟಿಗೆ ಅತ್ಯಾಧುನಿಕ ತಂತ್ರಜ್ಞಾನದ ಥಿಯೇಟರ್ ಕೂಡಾ ಹೊಂದಿದೆಯಂತೆ. ಅಷ್ಟೇ ಅಲ್ಲದೆ, ತನ್ನ ಮನೆಯಲ್ಲಿಯೇ ಡಬ್ಬಿಂಗ್ ಸ್ಟುಡಿಯೋ ಕೂಡಾ ನಿರ್ಮಿಸಿಕೊಂಡಿದ್ದಾರಂತೆ. ಚಿತ್ರೀಕರಣ ಮುಗಿಸಿ ಬಂದರೆಂದರೆ, ತನ್ನ ಮನೆಯೊಳಗೇ ಡಬ್ಬಿಂಗ್ ಕೂಡಾ ಮುಗಿಸಬೇಕು ಅನ್ನೋದು ಅಜಿತ್ ಪ್ಲಾನು. ಅಂತರ್ಮುಖಿ ವ್ಯಕ್ತಿತ್ವದ ಅಜಿತ್ ಕೆಲಸದ ನೆಪದಲ್ಲಾದರೂ ಹೊರಗೆ ಓಡಾಡುತ್ತಿದ್ದರು. ಈಗ ಹೊಸಾ ಬಂಗಲೆಯ ಕೃಪೆಯಿಂದ ಮನೆಯಲ್ಲಿಯೇ ಎಲ್ಲವೂ ನಡೆದುಹೋಗಲಿದೆ. ಇಂಥಾ ವಿಕ್ಷಿಪ್ತ ವರ್ತನೆಗಳ ಜೊತೆಗೇ ಭಾರೀ ಕ್ರಿಯೇಟೀವ್ ಆಗಿರುವ ಅಜಿತ್ ನಟನೆಯ ವಿಶ್ವಾಸಂ ಚಿತ್ರ ಇನ್ನೇನು ತೆರೆಗೆ ಬರಲು ಸಜ್ಜಾಗುತ್ತಿದೆ.
#