ಯಾರೋ ನೆಗೆದುಬಿದ್ದು ದೆವ್ವವಾಗಿ ಕಾಡುವಂಥಾ ಹಳಸಲು ಕಥೆಯನ್ನು ಅದೆಷ್ಟು ಸಲ ಮಗುಚಿ ಹಾಕಿದರೂ ಕೆಲ ಮಂದಿಗೆ ಸುಸ್ತಾಗೋದೇ ಇಲ್ಲ. ಆ ಕ್ರಿಯೆ ಬೋರು ಹೊಡೆಸಿದ್ದರೂ ಬಹುಶಃ ಅಮವಾಸೆ ಎಂಬ ಹಾರರ್ ಟೈಪಿನ ಚಿತ್ರವೊಂದು ರೆಡಿಯಾಗಿ ಥೇಟರಿಗೆ ದಾಳಿ ಮಾಡುವ ಪ್ರಮೇಯವೇ ಬರುತ್ತಿರಲಿಲ್ಲ!
ಅಮವಾಸೆ ಅಂದಾಕ್ಷಣ ಒಂದು ವಿಲಕ್ಷಣ ಛಾಯೆ ಸರಿದು ಹೋಗುತ್ತದೆ. ಅದರ ಹಿಂದೆ ಚಿತ್ರ ವಿಚಿತ್ರವಾದ ಕಥಾನಕಗಳೂ ಇದ್ದಾವೆ. ಅಂಥಾದ್ದರಲ್ಲಿ ಅಮಾವಾಸೆಯನ್ನೇ ಶೀರ್ಷಿಕೆಯಾಗಿಟ್ಟುಕೊಂಡ ಈ ಚಿತ್ರದ ಬಗ್ಗೆ ಪ್ರೇಕ್ಷಕರು ಹಾರರ್ ಮೂಡಲ್ಲಿ ಆಲೋಚಿಸದೇ ಇರುತ್ತಾರಾ? ಆದರೆ ನಿರ್ದೇಶಕ ಪ್ರಶಾಂತ್ ತಮ್ಮ ಚಿತ್ರದಲ್ಲಿ ಅಂಥಾ ಮಾಮೂಲು ಹಾರರ್ ಸನ್ನಿವೇಶಗಳಿಲ್ಲ, ಇಡೀ ಕಥೆಯೇ ಡಿಫರೆಂಟು ಎಂಬರ್ಥದಲ್ಲಿ ಹೇಳಿಕೊಂಡಿದ್ದರು. ಯುವ ಹುಮ್ಮಸ್ಸಿನಲ್ಲಿ ಹೊಸಾ ಥರದ ಭೂತ ಚೇಷ್ಠೆ ಅಮಾವಾಸೆಯಲ್ಲಿ ಸೃಷ್ಟಿಯಾಗಿದ್ದೀತೆಂಬ ನಿರೀಕ್ಷೆ ಹೊತ್ತ ಪ್ರೇಕ್ಷಕರು ಅಮವಾಸೆಯತ್ತ ಹಣಕಿ ಹಾಕಿದಾಗ ಕಂಡಿದ್ದು ಮಾತ್ರ ತವುಡು ಕುಟ್ಟುವ ಹಳೇ ದೆವ್ವ!
ಅಮರ್, ಮಹೇಶ್, ವಾಸು ಮತ್ತು ಸೇಂದಿ ಎಂಬ ನಾಲ್ವರು ಗೆಳೆಯರ ಸುತ್ತಾ ಹರಡಿಕೊಳ್ಳೋದು ತೀರಾ ಮಾಮೂಲಾದ, ಹೇಳಿಕೊಳ್ಳುವಂಥಾ ಕಸುವೂ ಇಲ್ಲದ ಮಾಮೂಲು ಕಥೆ. ಈ ನಾಲ್ವರು ಸ್ನೇಹಿತರ ಹೆಸರಿನ ಮೊದಲ ಅಕ್ಷರಗಳನ್ನು ಪೋಣಿಸಿ ಈ ಚಿತ್ರಕ್ಕೆ ಅಮವಾಸೆ ಅಂತ ಹೆಸರಿಡಲಾಗಿದೆಯಂತೆ. ಈ ಹೆಸರಿಗೂ ಚಿತ್ರಕ್ಕೂ ಸಂಬಂಧವಿಲ್ಲವಾದರೂ ಇರೋ ಕಥೆಯೂ ಹಳಸಲು. ಟ್ಯಾಗ್ಲೈನಿಗೆ ಸರಿಹೊಂದುವಂತೆ ಫ್ರೆಂಡ್ಶಿಪ್ ವರ್ಸಸ್ ಲವ್ ಎಂಬ ಸರಳ ಸೂತ್ರದ ಮೇಲೆ ಕಥೆ ಕಟ್ಟಲಾಗಿದೆ. ಸ್ನೇಹ ಮತ್ತು ಪ್ರೀತಿ ಎಂಬ ಆಪ್ಷನ್ನು ಬಂದಾಗ ನಾಯಕ ಯಾವುದನ್ನು ಆರಿಸಿಕೊಳ್ಳುತ್ತಾನೆಂಬುದೇ ಪ್ರಧಾನ ಅಂಶ. ಆದರೆ ನಾಯಕ ಸ್ನೇಹಕ್ಕೆ ಮಣೆ ಹಾಕಿ ಪ್ರೀತಿಸಿದಾಕೆಯನ್ನು ಕಳೆದುಕೊಂಡು ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದೆಲ್ಲದಕ್ಕೆ ಕಾರಣವಾದ ಸ್ನೇಹಿತರ ಮೇಲೆ ಸತ್ತ ಹುಡುಗಿ ಪ್ರೇತವಾಗಿ ರಿವೇಂಜು ತೀರಿಸಿಕೊಳ್ಳುತ್ತಾಳಾ ಎಂಬುದು ಏಕೈಕ ಕ್ಯೂರಿಯಾಸಿಟಿ.
ಆದರೆ, ಒಂದು ಮಾಮೂಲಿಯಾದ, ಯಾವ ಹೊಸತನವೂ ಇಲ್ಲದ ಕಥೆಯೊಂದನ್ನು ಅಷ್ಟೇ ಜಾಳು ಜಾಳಾಗಿ ಚಿತ್ರ ಮಾಡಲಾಗಿದೆ. ಇದನ್ನು ರಿವರ್ಸ್ ಸ್ಕ್ರೀನ್ ಪ್ಲೇ ಮೂಲಕ ತೋರಿಸೋ ಸಾಹಸ ಮಾಡಿರೋದೂ ಕೂಡಾ ವ್ಯರ್ಥ ಪ್ರಯತ್ನದಂತೆಯೇ ಭಾಸವಾಗುತ್ತದೆ. ಇದೆಲ್ಲದರ ನಡುವೆಯೂ ಒಂದಷ್ಟು ಸಹ್ಯವಾಗಬಹುದಿದ್ದ ಈ ಚಿತ್ರಕ್ಕೆ ವಿನಾ ಕಾರಣ ತೂರಿಸಿದಂತಿರೋ ದೃಷ್ಯಾವಳಿಗಳೇ ದೆವ್ವ, ಭೂತಗಳಂತೆ ಕಾಡಿವೆ.
ಇದೆಲ್ಲದರಾಚೆಗೆ ಅಮವಾಸೆಯ ತವುಡು ಕುಟ್ಟುವ ದೆವ್ವವನ್ನು ಕಣ್ತುಂಬಿಸಿಕೊಳ್ಳೋ ಇರಾದೆಯಿರುವವರು ಧಾರಾಳವಾಗಿ ಚಿತ್ರವನ್ನು ನೋಡಬಹುದು. ಆದರೆ ಕುಟ್ಟುವ ದೆವ್ವ ಮತ್ತು ಕುಟ್ಟಿಸಿಕೊಳ್ಳೋ ತವುಡು; ಇವೆರಡೂ ಓಬೀರಾಯನ ಕಾಲದವೆಂಬುದು ಅಸಲೀ ದುರಂತ!
ಇತ್ತ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಪ್ರಯೋಗಗಳು ನಡೆಯುತ್ತಿವೆ. ಅಮವಾಸೆಯಂಥ ಸಿನಿಮಾವನ್ನು ನೋಡಿದ ಪ್ರೇಕ್ಷಕ ಉತ್ತಮ ಚಿತ್ರಗಳು ಬಂದರೂ ಅದರ ಕಡೆ ತಿರುಗಿ ನೋಡದೆ ವಾಟ ಕೀಳುವ ಸಂದರ್ಭ ಸೃಷ್ಟಿಯಾಗುತ್ತದೆ. ಇಂಥ ಸಿನಿಮಾ ಮಾಡಿ ನಿರ್ಮಾಪಕರನ್ನು ಹಳ್ಳಕ್ಕೆ ತಳ್ಳೋದಕ್ಕಿಂತಾ ಸುಮ್ಮನಿರೋದು ಒಳ್ಳೇದು.
#
No Comment! Be the first one.