ಬದುಕಿಗೂ ಪ್ರಯಾಣಕ್ಕೂ ದಶದಿಕ್ಕುಗಳಿಂದಲೂ ಸಂಬಂಧವಿದೆ. ಆದ್ದರಿಂದಲೇ ಸಿನಿಮಾ ಚೌಕಟ್ಟಿಗೆ ಅದನ್ನು ನಾನಾ ಥರದಲ್ಲಿ ಒಗ್ಗಿಸಿಕೊಳ್ಳುವ ಪ್ರಯತ್ನಗಳೂ ಕೂಡಾ ಸದಾ ಚಾಲ್ತಿಯಲ್ಲಿವೆ. ಅಂಥಾದ್ದೊಂದು ಪ್ರಯತ್ನದ ಭಾಗವಾಗಿ ಮೂಡಿ ಬಂದಿರೋ ಒಂಥರಾ ಬಣ್ಣಗಳು ಚಿತ್ರ ಇಂದು ತೆರೆ ಕಂಡಿದೆ. ಮೂವರು ಯವಕರು ಮತ್ತು ಇಬ್ಬರು ಯುವತಿಯರ ಜರ್ನಿಯಿಂದ ಆರಂಭವಾಗಿ ಅದರಲ್ಲೇ ಕೊನೆಗೊಳ್ಳುವ ಈ ಚಿತ್ರ ಪ್ರೇಕ್ಷಕರ ಮನಸುಗಳಲ್ಲಿಯೂ ಒಂದೊಂಥರಾ ಭಾವ ಮೂಡಿಸಿದೆ!
ಈ ಮೂವರು ಯುವಕರು ಮತ್ತು ಇಬ್ಬರು ಹುಡುಗೀರ ಪಯಣ ಬಾದಾಮಿ ಹುಬ್ಬಳಿ ಮತ್ತು ಮಂಗಳೂರಿನತ್ತ ಹೊರಡುತ್ತದೆ. ಅದೊಂದು ನಿರುದ್ದಿಶ್ಯ ಪಯಣ. ಯಾವ ಪ್ಲಾನಿಂಗೂ ಇಲ್ಲದೆ, ಯಾವುದೋ ಕಳವಳದಿಂದ ತಪ್ಪಿಸಿಕೊಳ್ಳೋ ಇರಾದೆಯಿಂದ ಎಲ್ಲರೂ ಹೊರಟು ಬಿಟ್ಟಿರುತ್ತಾರೆ. ಅದೊಂಥರಾ ಇದ್ದಕ್ಕಿಂದ್ದಂತೆ ದೇಶಾಂತರ ಹೊರಡುವಂಥಾ ಸ್ಥಿತಿ. ಕಥೆಯೆಂಬುದು ಚಿತ್ರದ ಪಾತ್ರಗಳಂತೆಯೇ ನಿರ್ಧಿಷ್ಟವಾದ ದಿಕ್ಕು ದೆಸೆ ಇಲ್ಲದಂತೆ ಕಂಡರೂ ಇಡೀ ಪ್ರಯಾಣವನ್ನೂ ಬೋರು ಹೊಡೆಸದ ರೀತಿಯಲ್ಲಿ ಕಟ್ಟಿ ಕೊಡುವ ಮೂಲಕ ನಿರ್ದೇಶಕ ಸುನೀಲ್ ಭೀಮರಾವ್ ಮೊದಲ ಪ್ರಯತ್ನದಲ್ಲಿಯೇ ಗಮನ ಸೆಳೆದಿದ್ದಾರೆ.
ಹಾಗೆ ನೋಡಿದರೆ ಈ ಚಿತ್ರದಲ್ಲಿ ಪ್ರಯಾಣವೂ ಒಂದು ಪಾತ್ರವೇ. ಹೀಗೆ ಪ್ರಯಾಣ ಹೊರಟ ಐದೂ ಮಂದಿಯದ್ದೂ ಒಂದೊಂದು ಪ್ಲ್ಯಾಶ್‌ಬ್ಯಾಕ್. ಮೊದಲಾರ್ಧದ ತುಂಬಾ ಐದೂ ಪಾತ್ರಗಳ ಮಾತಿನಲ್ಲಿಯೇ ಕಳೆದು ಹೋಗುತ್ತದೆ. ಆದರೆ ಪಾತ್ರಗಳಿಂದ ಬರೀ ಮಾತಾಡಿಸಿ ರೇಜಿಗೆ ಹುಟ್ಟಿಸದೇ, ಪ್ರಯಾಣದ ಮೂಲಕ ಎಲ್ಲವನ್ನೂ ಸರಿದೂಗಿಸಲಾಗಿದೆ. ಅತ್ತ ಹೇಳಿಕೊಳ್ಳುವಂಥಾ ಕಥೆಯಿಲ್ಲದೆಯೂ, ಸುಖಾಸುಮ್ಮನೆ ಮಾತಿಲ್ಲದೆಯೂ ಈ ಚಿತ್ರ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಯಾಕೆಂದರೆ ನಿರೀಕ್ಷೆಯೇ ಮಾಡದಂತೆ ಕೆಲವಾರು ತಿರುಗಳನ್ನಿಡಲಾಗಿದೆ. ಅವೆಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗುವಂತಿವೆ.
ನಿರ್ದೇಶಕರು ಕಥೆಯನ್ನು ಇನ್ನೊಂದಷ್ಟು ಪಳಗಿಸಿಕೊಳ್ಳುವ ತಾಳ್ಮೆ ತೋರಿಸಿದ್ದರೆ ಇಡೀ ಚಿತ್ರ ಇನ್ನೊಂದಷ್ಟು ಪರಿಣಾಮಕಾರಿಯಾಗಿರುತ್ತಿತ್ತು. ಆದರೆ ಇಡೀ ಚಿತ್ರದಲ್ಲಿ ಎಲ್ಲಿಯೂ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡುವಂಥಾ ಸನ್ನಿವೇಶಗಳಿಲ್ಲ. ಒಂಥರಾ ಬಣ್ಣಗಳು ಕಥೆಯ ಕೊರತೆಯನ್ನೂ ಕೂಡಾ ನೀಟ್ ಆದ ನಿರೂಪಣೆಯಿಂದಲೇ ನೀಗಿಕೊಳ್ಳುತ್ತವೆ. ಕೆಲವೊಂದೆಡೆ ದೃಷ್ಯಗಳೇ ಮಂಕಾದಂತೆ ಕಂಡರೂ ಅನಾವಶ್ಯಕವಾದ ಯಾವುದೇ ಅಂಶಗಳಿಲ್ಲದೇ ಇರೋದರಿಂದ ಇಡೀ ಚಿತ್ರ ಸಲೀಸಾಗಿ ನೋಡಿಸಿಕೊಂಡು ಹೋಗುತ್ತದೆ.
ಪ್ರತಾಪ್ ನಾರಾಯಣ್, ಕಿರಣ್ ಶ್ರೀನಿವಾಸ್ ಮತ್ತು ಪ್ರವೀಣ್, ಸೋನುಗೌಡ ಮತ್ತು ಹಿತಾ ಚಂದ್ರ ಶೇಖರ್ ಪಾತ್ರಕ್ಕೆ ಒಗ್ಗಿಕೊಂಡು ನಟಿಸಿದ್ದಾರೆ. ಛಾಯಾಗ್ರಹಣ, ಸಂಗೀತ ಸೇರಿದಂತೆ ಎಲ್ಲವೂ ಚಿತ್ರಕ್ಕೆ ಪೂರಕವಾಗಿ ಮೂಡಿ ಬಂದಿವೆ.
#