ಬಹುಕಾಲದ ಬಳಿಕ ಅಂಬರೀಶ್ ನಾಯಕರಾಗಿ ನಟಿಸಿರೋ ಚಿತ್ರ ಅಂಬಿ ನಿಂಗೆ ವಯಸಾಯ್ತೋ. ಖುದ್ದು ಅಂಬರೀಶ್ ಅವರೇ ಈ ಚಿತ್ರವನ್ನು ಗಂಭೀರವಾಗಿ ಪರಿಗಣಿಸಿ ಬೇಗನೆ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರೆ. ಅದರ ಎಲ್ಲ ಕಾರ್ಯಕ್ರಮಗಳನ್ನು ಆಸಕ್ತಿ ವಹಿಸಿಯೇ ಮಾಡಿದ್ದಾರೆ. ಇನ್ನೇನು ಈ ತಿಂಗಳಾಂತ್ಯದಲ್ಲಿ ಈ ಚಿತ್ರವನ್ನು ತೆರೆಗಾಣಿಸಲು ನಿರ್ಧರಿಸಲಾಗಿತ್ತು.
ಆದರೀಗ ಬಂದಿರೋ ಸುದ್ದಿಯ ಪ್ರಕಾರ ಹೇಳೋದಾದರೆ ವಯಸಾದ ಅಂಬಿ ಥೇಟರುಗಳ ಕಡೆ ಬರೋದು ಇನ್ನೂ ಸ್ವಲ್ಪ ಲೇಟು!
ಹಾಗಂತ ಇದಕ್ಕೆ ಯಾವ ತಾಂತ್ರಿಕ ಅಡೆತಡೆಗಳೂ ಕಾರಣವಲ್ಲ. ಬಿಡುಗಡೆಗೆ ಬೇಕಾದ ಸರ್ವ ತಯಾರಿಗಳೂ ಪೂರ್ಣಗೊಂಡಿವೆ. ಆದರೆ ಈ ಚಿತ್ರ ತೆರೆ ಕಾಣುವ ಕ್ಷಣ ಮುಂದೂಡಲ್ಪಟ್ಟಿರೋದಕ್ಕೆ ಕಾರಣ ಕೊಡಗಿನ ಮೇಲಾಗಿರೋ ಭೀಕರ ಜಲ ಪ್ರಹಾರ!
ಕಂಡು ಕೇಳರಿಯದ ಪ್ರವಾಹ, ಭೂಕುಸಿತದಿಂದ ಕೊಡಗು ಜಿಲ್ಲೆಯ ನಕ್ಷೆಯೇ ಬದಲಾಗಿದೆ. ಜನ ಕಂಗೆಟ್ಟಿದ್ದಾರೆ. ಆದ್ದರಿಂದ ಇದು ಬಿಡುಗಡೆಗೆ ಸೂಕ್ತ ಸಮಯವಲ್ಲ ಅಂತ ಚಿತ್ರ ತಂಡ ನಿರ್ಧರಿಸಿದೆ. ಆದ್ದರಿಂದಲೇ ಬಿಡುಗಡೆಯನ್ನು ಇನ್ನೊಂದಷ್ಟು ಕಾಲ ಮುಂದೂಡಲಾಗಿದೆಯಂತೆ. ಅಂಬಿ ನಿಂಗೆ ವಯಸಾಯ್ತೋ ಚಿತ್ರ ಬಿಡುಗಡೆಯಾಗಲಿರೋ ನಿಖರ ದಿನಾಂಕವೂ ಇಷ್ಟರಲ್ಲಿಯೇ ಹೊರ ಬೀಳಲಿದೆ.
ಕಿಚ್ಚಾ ಸುದೀಪ್ ನಿರ್ಮಾಣದಲ್ಲಿಯೂ ಭಾಗಿಯಾಗಿ ಯಂಗ್ ಅಂಬಿಯಾಗಿಯೂ ಈ ಚಿತ್ರದಲ್ಲಿ ನಟಿಸಿದ್ದಾರೆ. ಅಂಬಿ ಕೂಡಾ ಬಲು ವಿಶಿಷ್ಟವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಸುಹಾಸಿನಿ ಕೂಡಾ ಜೊತೆಯಾಗಿ ನಟಿಸಿದ್ದಾರೆ. ಈಗಾಗಲೇ ಇದೊಂದು ಬಹು ನಿರೀಕ್ಷಿತ ಚಿತ್ರವಾಗಿ ಹೊರ ಹೊಮ್ಮಿದೆ. ಆದರೀಗ ಬಿಡುಗಡೆ ದಿನಾಂಂಕ ಮುಂದಕ್ಕೆ ಹೋಗಿದ್ದರಿಂದ ಅಭಿಮಾನಿಗಳು ನಿರಾಸೆ ಹೊಂದಿದ್ದಾರಾದರೂ ಈ ಚಿತ್ರ ಬಿಡುಗಡೆ ಬಹಳ ತಡವಾಗಲಾರದು.
#