ಅನಂತ್ ಕನ್ನಡ ಚಿತ್ರರಂಗದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದ ಅತ್ಯುತ್ಕೃಷ್ಟ ಕಲಾವಿದ. ಅವರಿಗೆ ಇನ್ನೂ ಪದ್ಮಶ್ರೀ ಬಂದಿಲ್ಲ ಅನ್ನೋದೇ ನಂಬಲಾಗದ ವಿಚಾರ.
ಅನಂತ್ ನಾಗ್ ಕನ್ನಡ ಮಾತ್ರವಲ್ಲ ವಿಶ್ವದ ಶ್ರೇಷ್ಠ ನಟರ ಲಿಸ್ಟಗೆ ಸೇರುವ ಮಹಾನ್ ನಟ. ಪಾತ್ರ ಯಾವುದೇ ಆದರೂ ಅದರ ಆಳಕ್ಕಿಳಿದು ನಟಿಸುವ ಕಲಾವಿದ. ಕನ್ನಡದ ಮಟ್ಟಿಗೆ ʻಮೆಥೆಡ್ ಆಕ್ಟಿಂಗ್ʼ ಅನ್ನು ಮೈಗೂಡಿಸಿಕೊಂಡ ಅಪರೂಪ ಆಕ್ಟರ್.
ಎಷ್ಟೋ ಪಾತ್ರಗಳನ್ನು ನಿರ್ದೇಶಕರು ಅನಂತ್ ನಾಗ್ ಅರನ್ನೇ ಗಮನದಲ್ಲಿಟ್ಟುಕೊಂಡು ಬರೆದುಕೊಂಡಿರುತ್ತಾರೆ. ಆದರೆ, ಆ ಎಲ್ಲ ಪಾತ್ರಗಳನ್ನೂ ಮಾಡಲು ಅನಂತ್ ಅವರಿಗೂ ಶಕ್ತಿ ಬೇಕಲ್ಲವಾ? ನಟನೆಯಲ್ಲಿ ಅಪಾರ ಎನರ್ಜಿ ಇರುವ ಅನಂತ್ ಅವರಿಗೆ ದೇಹದ ಕಸುವು ಕಡಿಮೆಯಾಗುತ್ತಿದೆ. ದೈಹಿಕವಾಗಿ ಅನಂತ್ ಸಾಕಷ್ಟು ಬಳಲಿದ್ದಾರೆ. 74ರ ಅನಂತ್ ಮಾನಸಿಕವಾಗಿಯೂ ಕುಂದಿದ್ದಾರೆ. ಅದೂ ಕೋವಿಡ್ ಥರದ ಮಹಾಮಾರಿ ಬಂದು ಅಗಣಿತ ಜನರನ್ನು ಹೊತ್ತೊಯ್ದಮೇಲಂತೂ ಈ ಹಿರಿಯ ನಟ ವಿಪರೀತ ಭೀತಿಗೊಳಗಾಗಿದ್ದಾರೆ. ಸಣ್ಣ ನೆಗಡಿ, ಕೆಮ್ಮು ಬಂದರೂ ಪತರಗುಟ್ಟಿಹೋಗುತ್ತಾರೆ.

ತಮ್ಮ ಖಾಸಗೀ ಬದುಕಿನ ಅಶಿಸ್ತುಗಳೇನೇ ಇದ್ದರೂ, ಸಮಾಜಿಕವಾಗಿ ಅನಂತ್ ನಾಗ್ ವಿಪರೀತ ಶಿಸ್ತನ್ನು ಪಾಲಿಸುತ್ತಿದ್ದವರು. ಸಮಯಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದವರು. ಶೂಟಿಂಗ್ ಮಾತ್ರವಲ್ಲ, ಸಭೆ, ಸಮಾರಂಭಳಿಗೆ ಸಮಯ ಕೊಟ್ಟರೆಂದರೆ, ಯಾವ ಕಾರಣಕ್ಕೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಆದರೆ ಅವರೀಗ ಮೊದಲಿನಂತಿಲ್ಲ. ಅವರನ್ನು ಜೀವ ಭಯ ಹೆಚ್ಚು ಕಾಡುತ್ತಿದೆ. ಈ ಕಾರಣದಿಂದ ʻಅನಂತ್ ಪದೇ ಪದೇ ಮಾತಿಗೆ ತಪ್ಪುತ್ತಾರೆʼ ಎನ್ನುವ ಆರೋಪಕ್ಕೂ ಗುರಿಯಾಗುವಂತಾಗಿದೆ. ಸಂಭಾವನೆ ಪಡೆದು ನಟಿಸಿದ ಸಿನಿಮಾಗಳಿಗೆ ಅನಂತ್ ನಾಗ್ ಡಬ್ಬಿಂಗ್ ಗೆ ಹೋಗೋದು ಕಡಿಮೆ ಮಾಡಿದ್ದಾರೆ. ಥೇಟು ಅನಂತ್ ಅವರಂತೆಯೇ ಮಾತಾಡುವ ಡಬ್ಬಿಂಗ್ ಕಲಾವಿದ ಸುದರ್ಶನ್ ಅವರನ್ನು ಕರೆಸಿಕೊಂಡು ಪಾತ್ರಕ್ಕೆ ಡಬ್ಬಿಂಗ್ ಮಾಡಿಸಲಾಗುತ್ತಿದೆ. ಇಂಥದ್ದೇ ಕಾರಣದಿಂದಲೇ ಕೆಜಿಎಫ್ ಚಾಪ್ಟರ್ 2ರಲ್ಲಿ ಅನಂತ್ ಬದಲು ಪ್ರಕಾಶ್ ರೈ ಬಂದಿದ್ದು. ಇನ್ನು ಸಮಾರಂಭಗಳಿಗೆ ಇವರನ್ನು ಕರೆದರಂತೂ ಬಂದಮೇಲಷ್ಟೇ ಗ್ಯಾರೆಂಟಿ. ಸಣ್ಣದಾಗಿ ಸೀನು ಬಂದರೂ ಮನೆಯಲ್ಲಿ ರೂಮಿಗೆ ಕದವಿಕ್ಕಿಕೊಂಡು ಮಲಗಿಬಿಡುತ್ತಾರೆ.

ಮೊದಲೆಲ್ಲಾ ಧಾರಾಳವಾಗಿದ್ದ ಅನಂತ್ ನಾಗ್ ಅವರ ಸಂಪೂರ್ಣ ವ್ಯವಹಾರ ಇವತ್ತು ಪತ್ನಿ ಗಾಯತ್ರಿ ನಿಭಾಯಿಸುತ್ತಿದ್ದಾರೆ. ಒಂದು ರುಪಾಯಿ ಪೇಮೆಂಟು ಕಡಿಮೆಯಾದರೂ ಚಿತ್ರೀಕರಣಕ್ಕೆ ಕಳಿಸೋದಿಲ್ಲ. ಅಷ್ಟೇ ಅಲ್ಲ ಸಣ್ಣ ಪುಟ್ಟ ಸಮಾರಂಭಗಳಿಗೆ ಕರೆದರೂ ತಮ್ಮ ಖಾಸಗೀ ವಾಹನವನ್ನು ಬಳಸಲು ಗಾಯತ್ರಿ ಮೇಡಂ ಅನುಮತಿ ನೀಡೋದಿಲ್ಲವಂತೆ. ʻಪಿಕಪ್ಪು ಡ್ರಾಪಿಗೆ ಒಂದು ಕಾರಿನ ವ್ಯವಸ್ಥೆ ಮಾಡಿಬಿಡಿʼ ಅನ್ನುತ್ತಾರಂತೆ. ತೀರಾ ನಿರ್ಗತಿಕ ಕಲಾವಿದರೋ, ಅಶಕ್ತ ನಟರು ಯಾರಾದರೂ ಹೀಗೆ ಕೇಳಿದರೆ ಯಾರೂ ಏನೂ ಅಂದುಕೊಳ್ಳುವುದಿಲ್ಲ. ಅನಂತ್ ನಾಗ್ ಕಲಾವಿದ ಮಾತ್ರವಲ್ಲ, ಕರ್ನಾಟಕ ರಾಜ್ಯದ ಮಾಜಿ ಮಂತ್ರಿ ಕೂಡಾ ಹೌದು. ಆರ್ಥಿಕವಾಗಿ ಸುಭದ್ರವಾಗಿರುವ ಅನಂತ್ ನಾಗ್ ಹೀಗೆ ಕೇಳಿದಾಗ ಯಾರಿಗಾದರೂ ಆಶ್ಚರ್ಯವಾಗೋದು ಸಹಜ. ʻಹಿರಿಯ ನಟನ ಬೇಡಿಕೆಯನ್ನು ಈಡೇರಿಸೋದರಲ್ಲಿ ತಪ್ಪೇನಿದೆʼ ಅಂತಾ ವಾಹನದ ವ್ಯವಸ್ಥೆ ಮಾಡಿದಮೇಲೂ ಅನಂತ್ ʻಯಾಕೋ ನೆಗಡಿಯಾದಂತಿದೆʼ ಅಂತಾ ನೆಪ ಹೇಳಿ ಒಪ್ಪಿಕೊಂಡ ಸಮಾರಂಭಕ್ಕೆ ಗೈರು ಹಾಜರಾಗುತ್ತಾರಂತೆ. ಪಾಪ! ಅನಂತ್ ಆರೋಗ್ಯ ಆದಷ್ಟು ಬೇಗ ಸರಿಹೋಗಲಿ…

ವಿಚಾರ ಇದಲ್ಲ. ನೆರೆಯ ತಮಿಳು ತೆಲುಗಿನಲ್ಲಿ ಸಣ್ಣ ಮಟ್ಟದ ಸಾಧನೆ ಮಾಡಿರುವ ಕಲಾವಿದರಿಗೆಲ್ಲ ಪದ್ಮ ಪ್ರಶಸ್ತಿ ಸಿಕ್ಕಿದೆ. ಕಮಲ್ ಹಾಸನ್ ಥರದ ನಟನ ಮುಂದೆ ಕನ್ನಡಿಗರು ಯಾರಾದರೂ ಹೋಗಿ ಹೊಗಳಿದರೆ, ಅವರು ಹೇಳೋದು ಒಂದೇ ಮಾತು. ʻಅನಂತ್ ನಾಗ್ ಅವರಂಥಾ ಅಮೂಲ್ಯ ನಟ ಕನ್ನಡದಲ್ಲಿದ್ದಾರಲ್ಲಾ?ʼ ಎಂದು. ಮೊದಲೇ ಹೇಳಿದಂತೆ ಅನಂತ್ ಕನ್ನಡ ಚಿತ್ರರಂಗದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದ ಅತ್ಯುತ್ಕೃಷ್ಟ ಕಲಾವಿದ. ಅವರಿಗೆ ಇನ್ನೂ ಪದ್ಮಶ್ರೀ ಬಂದಿಲ್ಲ ಅನ್ನೋದೇ ನಂಬಲಾಗದ ವಿಚಾರ. 2001ರಲ್ಲಿ #AnanthnagforPadma ಎನ್ನುವ ಹ್ಯಾಷ್ ಟ್ಯಾಗ್ ಅಭಿಯಾನ ಕೂಡಾ ನಡೆದಿತ್ತು. ರಕ್ಷಿತ್, ರಿಷಬ್ ರಂತಹ ನಟರು ಅದಕ್ಕೆ ಕೈಜೋಡಿಸಿದ್ದರು. ಇಷ್ಟೆಲ್ಲಾ ಪ್ರಯತ್ನಗಳು ನಡೆದರೂ ಯಾಕೋ ಪದ್ಮ ಅನಂತ್ ಗೆ ಒಲಿಯುತ್ತಲೇ ಇಲ್ಲ. better luck next time…
No Comment! Be the first one.