ಈ ಹಿಂದೆ ನಮ್ ಏರಿಯಾಲ್ ಒಂದಿನ, ತುಘ್ಲಕ್, ಹುಲಿರಾಯ, ಶಾರ್ದೂಲ ಮುಂತಾದ ಚಿತ್ರಗಳನ್ನು ನೀಡಿದ್ದ ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ಅರ್ದಂಬರ್ಧ ಪ್ರೇಮಕಥೆ. ನಿರ್ದೇಶಕ ಅರವಿಂದ್ ಕೌಶಿಕ್ ಆರಂಭದಿಂದಲೂ ಹೊಸತನದ ಕಥಾವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಬಂದವರು. ಈ ಕಾರಣಕ್ಕೆ ಅರ್ಧಂಬರ್ಧ ಪ್ರೇಮಕಥೆ ಚಿತ್ರದ ಬಗ್ಗೆಯೂ ಹಲವು ರೀತಿಯ ಕುತೂಹಲಗಳು ಮೂಡಿದ್ದವು. ಈ ಸಲ ಅರವಿಂದ್ ಯಾವ ಬಗೆಯ ಕಥಾ ವಸ್ತುವನ್ನು ಆಯ್ಕೆ ಮಾಡಿಕೊಂಡಿರಬಹುದು ಎನ್ನುವ ಪ್ರಶ್ನೆ ಎಲ್ಲರದ್ದಾಗಿತ್ತು. ಈ ವಾರ ಚಿತ್ರ ತೆರೆಗೆ ಬಂದಿದೆ. ಈ ಸಿನಿಮಾ ಬಗ್ಗೆ ಮತ್ತಷ್ಟು ಕ್ಯೂರಿಯಾಸಿಟಿ ಹೆಚ್ಚಲು ಕಾರಣವಾಗಿದ್ದು ದಿವ್ಯ ಉರುಡುಗ ಮತ್ತು ಅರವಿಂದ್ ಕೆಪಿ ಒಟ್ಟಿಗೆ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡಿರುವುದು. ನಿಜ ಜೀವನದಲ್ಲಿ ಇಬ್ಬರು ಒಂದಾಗಲಿದ್ದಾರೆ ಎನ್ನುವ ಗಾಳಿ ಸುದ್ದಿಯೇ ಈವರೆಗೂ ಚಾಲ್ತಿಯಲ್ಲಿದೆ. ಇದೇ ಜೋಡಿ ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಸಿನಿಮಾ ಒಂದರ ಮೂಲಕ ಜೊತೆಯಾಗಿ ನಟಿಸುತ್ತಿರುವುದು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಈ ವಾರ ಎಲ್ಲ ಕುತೂಹಲಗಳಿಗೂ ಅಂತಿಮವಾಗಿ ತೆರೆ ಎಳೆಯುವಂತಹ ಸಮಯ ಬಂದಿದೆ.
ಇವನ್ಯಾರು ಅಂತ ಅವಳಿಗೆ ಗೊತ್ತಿಲ್ಲ ಅವಳು ಯಾರು ಅಂತ ಇವನಿಗೂ ಗೊತ್ತಿಲ್ಲ. ಗೊತ್ತೂ ಗುರಿ ಇಲ್ಲದ ಇಬ್ಬರೂ ಅದೊಂದು ದಿನ ಅಚಾನಕ್ಕಾಗಿ ಮುಖಾಮುಖಿಯಾಗುತ್ತಾರೆ. ಎಲ್ಲವನ್ನೂ ನೇರಾನೇರವಾಗಿ ಮಾತಾಡಿಬಿಡುವ, ಅಂಜಿಕೆಯಿಲ್ಲದ ಉಡುಗಿಯೊಂದಿಗೆ ಈತನ ಜರ್ನಿ ಕೂಡಾ ಶುರುವಾಗಿಬಿಡುತ್ತದೆ. ಹೇಗೂ ಜೊತೆ ಸೇರಿದ್ದಾಯಿತು. ಒಬ್ಬರ ಬಗ್ಗೆ ಒಬ್ಬರು ಹೆಚ್ಚು ಪ್ರಶ್ನೆ ಕೇಳಿಕೊಳ್ಳಬಾರದು. ಅಸಲಿಗೆ ಈ ಸಂಬಂಧಕ್ಕೆ ನಿರ್ದಿಷ್ಟ ಹೆಸರೂ ಇರಬಾರದು. ಸಾಧ್ಯವಾದಷ್ಟೂ ದೂರ ಒಟ್ಟಿಗೇ ಪ್ರಯಾಣಿಸುವುದು. ನಂತರ ತಮ್ಮ ದಾರಿ ತಾವು ನೋಡಿಕೊಳ್ಳುವುದು. ಅಂದುಕೊಂಡಂತೇ ಜರ್ನಿ ಮುಂದುವರೆಯುತ್ತದೆ. ಇದರ ನಡುವೆ ಕೆಲವು ನಿರೀಕ್ಷಿತ ಘಟನೆಗಳೂ ನಡೆಯುತ್ತವೆ. ಅಲ್ಲಿ ಇಬ್ಬರ ಬಾಂಧವ್ಯ ಗಾಢವಾಗುತ್ತದೆ. ಇಷ್ಟಾಗಿಯೂ ಹೇಳದೇ ಕೇಳದೇ ಇಬ್ಬರೂ ಬೇರೆಯಾಗುವ ಸಂದರ್ಭವೂ ಎದುರಾಗುತ್ತದೆ. ಇದೆಲ್ಲದರ ನಂತರ ಮತ್ತೆ ಇವರಿಬ್ಬರೂ ಮೀಟ್ ಆಗುತ್ತಾರಾ? ಹಾಗೊಮ್ಮೆ ಅದು ಸಾಧ್ಯವಾದರೂ, ಅದು ಎಂಥ ಸಂದರ್ಭದಲ್ಲಿ? ಅನ್ನೋದಷ್ಟೇ ಪ್ರಶ್ನೆ!
ಒಬ್ಬೊಬ್ಬರ ಬದುಕಲ್ಲೂ ಒಂದೊಂದು ಇತಿಹಾಸವಿರುತ್ತದೆ. ಈ ಬದುಕಿನ ಹಾದಿಯಲ್ಲಿ ಸಾಕಷ್ಟು ಮಂದಿ ಜೊತೆಯಾಗಿರುತ್ತಾರೆ. ಅವರಲ್ಲಿ ಕೆಲವರು ಉಳಿದುಕೊಂಡರೆ, ಹಲವರು ದೂರಾಗಿರುತ್ತಾರೆ. ಇನ್ನೆಲ್ಲೋ ಮಧ್ಯದಲ್ಲಿ ಸುಮ್ಮನೇ ಸಿಕ್ಕವರು ಇಡೀ ಜೀವನದ ಸಹಪಯಣಿಗರಾಗಿಬಿಡುತ್ತಾರೆ. ಇಂಥ ಅನೇಕ ವಿಚಾರಗಳನ್ನು ತೀರಾ ಸರಳವಾಗಿ ವಿವರಿಸಿರುವ ಚಿತ್ರ ಅರ್ದಂಬರ್ಧ ಪ್ರೇಮಕಥೆ. ಮೊದಲ ಭಾಗ ಬಹುತೇಕ ಜರ್ನಿಯಲ್ಲೇ ಜಾರಿಹೋಗುತ್ತದೆ. ದ್ವಿತೀಯ ಭಾಗದಲ್ಲಿ ಒಂದಿಷ್ಟು ಹೊಸ ವಿಚಾರಗಳು ಎದುರಾಗುತ್ತವೆ. ಮೂಲತಃ ಇದು ಪ್ರಯಾಣದ ಸಬ್ಜೆಕ್ಟಾಗಿದ್ದರೂ, ವಿಪರೀತ ತಿರುವುಗಳು, ಅನಿರೀಕ್ಷಿತ ಘಟನೆಗಳಲ್ಲಿ ಸಿಲುಕಿಕೊಳ್ಳುವುದಿಲ್ಲ. ಇವತ್ತಿನ ಜಾಯಮಾನದ ಹುಡುಗ ಹುಡುಗಿಯ ಜೀವನ ಶೈಲಿಯನ್ನು ಯಥಾವತ್ತಾಗಿ ತೆರೆದಿಟ್ಟಂತಿದೆ.
ಇಬ್ಬರ ನಡುವೆ ನಡೆಯುವ ಸಹಜ ಮಾತುಗಳೇ ಇಲ್ಲ ಸಂಭಾಷಣೆಯಾಗಿದೆ. ಅರವಿಂದ್ ಮತ್ತು ದಿವ್ಯಾ ಕೂಡಾ ಅಷ್ಟೇ ಸಹಜವಾಗಿ ಕಾಣಿಸಿಕೊಂಡಿದ್ದಾರೆ. ಅಭಿ ದ್ವಾರಕೀಶ್ ನಗಿಸುತ್ತಾರೆ. ರೇಸರ್ ಅರವಿಂದ್ ಇಲ್ಲೂ ಸಾಧಕನ ಪಾತ್ರವನ್ನೇ ನಿಭಾಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಎರಡು ಹಾಡುಗಳು ಅದ್ಭುತವಾಗಿವೆ. ಸೂರ್ಯ ಛಾಯಾಗ್ರಹಣ ಫ್ರೆಷ್ & ಬ್ಯೂಟಿಫುಲ್. ಸರಳ, ಸುಂದರ ಪ್ರೇಮಕಥೆಯೊಂದನ್ನು ಅರವಿಂದ್ ಕೌಶಿಕ್ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ರೂಪಿಸಿದ್ದಾರೆ.
No Comment! Be the first one.