ಬೆಂಗಳೂರಿನ ದ್ರೌಪದಮ್ಮನ ಕರಗ ವಿಶ್ವಾದ್ಯಂತ ಹೆಸರುವಾಸಿ. ಜಾತಿ ಮತ ಮೀರಿ ಎಲ್ಲರೂ ಒಂದಾಗಿ ಸೇರಿ ಇದನ್ನು ಆಚರಿಸುತ್ತಾರೆ. ಈ ಧರ್ಮರಾಯನ ಗುಡಿಗೆ ಬರೋಬ್ಬರಿ ಎಂಟು ನೂರು ವರ್ಷಗಳ ಇತಿಹಾಸವಿದೆ. ನಾಡಪ್ರಭು ಕೆಂಪೇಗೌಡರು ಇದೇ ಗುಡಿಯನ್ನು ಕೇಂದ್ರವಾಗಿಟ್ಟುಕೊಂಡೇ ಬೆಂಗಳೂರನ್ನು ಕಟ್ಟಿದ್ದು ಎನ್ನುವ ಮಾತಿದೆ. ಇದೇ ಬೆಂಗಳೂರಿನ ಧರ್ಮರಾಯನ ದೇವಸ್ಥಾನದ ಆಸುಪಾಸಿನಲ್ಲಿರುವ ತಿಗಳರ ಪೇಟೆಯಲ್ಲಿ ಕಳೆದ ನಲವತ್ತು ವರ್ಷಗಳ ಅವಧಿಯಲ್ಲಿ ಹರಿದಿರೋ ನೆತ್ತರು ಒಬ್ಬಿಬ್ಬರದ್ದಲ್ಲ. ಅಂಥದ್ದೇ ಒಂದು ರಕ್ತ ಚರಿತ್ರೆ ʻಕೈವʼದ ಮೂಲಕ ತೆರೆದುಕೊಂಡಿದೆ..
ಪ್ರೀತಿಯೊಂದಕ್ಕೆ ಬಿಟ್ಟು ಅವನ ಹೃದಯದಲ್ಲಿ ಬೇರೆ ಯಾವ ದುಶ್ಮನಿಗೆಲ್ಲಾ ಜಾಗವೇ ಇರೋದಿಲ್ಲ. ಅವಳು ಮುಸಲ್ಮಾನರ ಮನೆಯ ಹೆಣ್ಣುಮಗಳು. ಅವನು ಧರ್ಮರಾಯನ ಆರಾಧಕ. ಏರಿಯಾದಲ್ಲಿ ಅದೂ ಇದೂ ಕೆಲಸ ಮಾಡಿಕೊಂಡು ಓಡಾಡುತ್ತಿದ್ದ ಕೈವನ ಮನಸ್ಸು ಆ ಹುಡುಗಿಯ ಪ್ರೀತಿಗೆ ಜಾರಿಬೀಳತ್ತೆ. ಸಾಮಾನ್ಯಕ್ಕೆ ಹಿಂದೂ-ಮುಸ್ಲಿಮ್ ಲವ್ ಅಂದಾಕ್ಷಣ ಧರ್ಮವನ್ನು ಅಡ್ಡ ತಂದು ನಿಲ್ಲಿಸುತ್ತಾರೆ. ಪುಣ್ಯಕ್ಕೆ ಇಲ್ಲಿ ಅಂತಾ ಯಾವ ಅವಾಂತರವೂ ಆಗೋದಿಲ್ಲ. ಇವರಿಬ್ಬರೂ ಒಟ್ಟೊಟ್ಟಿಗೇ ಓಡಾಡಿಕೊಂಡು, ಪ್ರೀತಿಯಲ್ಲಿ ಮೈ ಮರೆತರೂ ಯಾರೂ ಬಂದು ಅಡ್ಡಿ ಪಡಿಸೋದಿಲ್ಲ. ಡಾನ್ ದೇವರಾಜ್ ಮೇಲೆ ಅಟ್ಯಾಕ್ ಮಾಡಿದ್ದ ತಿಗಳರ ಪೇಟೆ ಗೋವಿಂದನ ಜೊತೆ ಕೈವ ಓಡಾಡಿಕೊಂಡಿರುತ್ತಾನೆ. ಈ ಗೋವಿಂದನ ತಲೆ ತೆಗೆದು ದೊಡ್ಡವರಾಗಲು ಬಕಾಲಿ, ತಂಬು ಮತ್ತು ಕಲೀಮ್ ಸ್ಕೆಚ್ಚು ಹಾಕಿರುತ್ತಾರೆ. ಅಸಲಿಗೆ ಡಾನ್ ದೇವರಾಜ್ ಗೂ ಈ ಮೂವರಿಗೂ ಸಂಬಂಧವೇ ಇರೋದಿಲ್ಲ. ಅದೊಂದು ದಿನ ಗೋವಿಂದನನ್ನು ಹೊಡೆದುರುಳಿಸಲು ಮುಹೂರ್ತ ಫಿಕ್ಸ್ ಆಗಿರುತ್ತದೆ. ಅದು ಸ್ವಲ್ಪವೇ ಮಿಸ್ ಆಗಿ ದೊಡ್ಡದೊಂದು ಅನಾಹುತ ಸಂಭವಿಸಿಬಿಡುತ್ತದೆ. ಅಂದು ಗೋವಿಂದನನ್ನು ಮುಗಿಸಲು ಬಂದ ನೀಜ ಕೃತ್ಯ ಏನು? ಇದು ಕೈವನ ಬದುಕಿನ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ? ಅನ್ನೋದು ಸಿನಿಮಾದ ಬಹುಮುಖ್ಯ ಅಂಶ. ತನ್ನವಳಿಗಾದ ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಳ್ಳಬೇಕು ಅನ್ನೋದು ಕೈವನ ಚಡಪಡಿಕೆ. ಇವನನ್ನು ಹೇಗಾದರೂ ಮಾಡಿ ಫೀಲ್ಡಿಗೆ ಎಳೆದುಕೊಳ್ಳಬೇಕು ಅನ್ನೋದು ರೌಡಿಗಳ ಬಯಕೆ. ಇವೆರಡರಲ್ಲಿ ಯಾವುದು ಸಾಧ್ಯವಾಗುತದೆ ಅನ್ನೋದು ಸಿನಿಮಾ ನೋಡಿದಷ್ಟೇ ಗೊತ್ತಾಗಲಿದೆ.
ಕೈವ ಸಿನಿಮಾ ಪೂರ್ತಿ ಕತೆ ಎಂಭತ್ತರ ದಶಕದ ಆರಂಭದಲ್ಲಿ ನಡೆಯುತ್ತದೆ. ಅದನ್ನು ಯಥಾವತ್ತಾಗಿ ಕಣ್ಮುಂದೆ ತಂದಿದ್ದಾರೆ. ಕಪಾಲಿ ಥೇಟರು, ಅದರ ಹಿಂಭಾಗವಿದ್ದ ಗಂಗಾರಾಮ್ ಕಟ್ಟದ ಗಂಡಾಂತರ, ಕರಗ ಸೇರಿದಂತೆ ಅನೇಕ ವಿಚಾರಗಳನ್ನು ಪೂರಕವಾಗಿ ಬಳಸಿಕೊಂಡಿದ್ದಾರೆ. ಹೆಚ್ಚೂ ಕಡಿಮೆ ನೈಜ ಕಥಾವಸ್ತುವನ್ನು ಆಧರಿಸಿ ರೂಪಿಸಿರುವ ಚಿತ್ರ ಇದಾದರೂ, ಪಾತ್ರಗಳ ಹೆಸರನ್ನು ಬದಲಿಸಿದ್ದಾರೆ. ಜಯರಾಜ್ ಹೆಸರನ್ನು ದೇವರಾಜ್ ಎಂದು, ಕೊತ್ವಾಲ್ ರಾಮಚಂದ್ರನನ್ನು ರಾಮ್ ಲಾಲ್ ಅಂತಲೂ ಬದಲಿಸಿದ್ದಾರೆ.
ದಿನಕರ್ ತೂಗುದೀಪ ಇಲ್ಲಿ ರಾಮ್ ಲಾಲ್ ಪಾತ್ರದಲ್ಲಿ ಕಾಣಿಸಿಕೊಂಡು ಎರಡೇ ದೃಶ್ಯಗಳಲ್ಲಿ ಬಂದು ಹೋಗಿದ್ದಾರೆ. ಥೇಟು ತೂಗುದೀಪ ಶ್ರೀನಿವಾಸ್ ಅವರೇ ಬಂದುಬಿಟ್ಟರಾ ಅನ್ನುವಂತೆ ನಟಿಸಿದ್ದಾರೆ ದಿನಕರ್. ದೇವರಾಜ್ ಆಗಿ ನಟ ಜೆಕೆ ಕೂಡಾ ಅಷ್ಟೇ ಖಡಕ್ಕಾಗಿ ಕಾಣಿಸುತ್ತಾರೆ. ಬಕಾಲಿ, ತಂಬು ಮತ್ತು ಕಲೀಮ್ ಆಗಿ ನಂದಗೋಪಾಲ್, ರಾಘು ಶಿವಮೊಗ್ಗ ಮತ್ತು ಉಗ್ರಂ ಮಂಜು ಅಬ್ಬರಿಸಿದ್ದಾರೆ. ಅವರ ಮಾಸ್ಟರ್ ಮೈಂಡ್ ಥರದ ಪಾತ್ರದಲ್ಲಿ ಬಿ.ಎಂ. ಗಿರಿರಾಜ್ ನಟನೆ ಕೂಡಾ ನೈಜವಾಗಿದೆ. ವಿಲನ್ ಪಾತ್ರಗಳಲ್ಲಿ ಈಗೀಗ ಹೆಸರು ಮಾಡುತ್ತಿರುವ ರಮೇಶ್ ಇಂದಿರಾ ಕೂಡಾ ಉತ್ತಮ ಆಯ್ಕೆ.
ಸುತ್ತಲೂ ಪಾತ್ರಗಳನ್ನು ಸೃಷ್ಟಿಸಿ, ಅದನ್ನು ಅದ್ಭುತ ನಟರಿಗೆ ಕೊಟ್ಟು, ಮಧ್ಯದಲ್ಲಿ ಧನ್ವೀರ್ ಮತ್ತು ಮೇಘಾ ಶೆಟ್ಟಿಯನ್ನು ನಿಲ್ಲಿಸಿದ್ದಾರೆ. ಧನ್ವೀರ್ ಅವರ ಪ್ಲಸ್ಸು ಮೈನಸ್ಸುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡೇ ಚಿತ್ರಕತೆ ಪೋಣಿಸಿದಂತಿದೆ. ಈ ಹಿಂದಿನ ಎರಡು ಚಿತ್ರಕ್ಕೆ ಹೋಲಿಸಿದರೆ ಧನ್ವೀರ್ಗೆ ಕೈವ ಒಂದೊಳ್ಳೆ ಬ್ರೇಕ್ ನೀಡೋದಂತೂ ನಿಜ. ಮಹಂತೇಶ್ ಹಿರೇಮಠ್ ತೆರೆಮೇಲೆ ಕಾಣುತ್ತಿದ್ದಂತೇ ಜನ ನಗಾಡಲು ಶುರು ಮಾಡುತ್ತಾರೆ. ಅಷ್ಟರ ಮಟ್ಟಿಗೆ ಕಾಮಿಡಿ ಕೂಡಾ ವರ್ಕೌಟ್ ಆಗಿದೆ. ಜಾಹ್ನವಿ ರಾಯಲಾ ನಿರ್ದೇಶಕ ಜಯತೀರ್ಥ ಕೂಡಾ ಈ ಸಲ ಪಕ್ಕಾ ಮಾಸ್ ಮತ್ತು ವೈಲೆಂಟ್ ಸಬ್ಜೆಕ್ಟನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಟಾಸ್ಕ್ ಅನ್ನು ಜಯತೀರ್ಥ ಅತ್ಯಂತ ಜಾಣ್ಮೆಯಿಂದ ನಿಭಾಯಿಸಿ ಗೆದ್ದಿದ್ದಾರೆ.
ನಲವತ್ತು ವರ್ಷಗಳ ಹಿಂದಿನ ಮೂಡ್ ಕ್ರಿಯೇಟ್ ಮಾಡುವುದು ಇವತ್ತಿನ ದಿನದಲ್ಲಿ ಸುಲಭದ ಕೆಲಸವಲ್ಲ. ಕಲಾ ನಿರ್ದೇಶಕ ಗಂಗೆಪುತ್ರ ಧರಣಿಯ ಶ್ರಮ ಇಲ್ಲಿ ಎದ್ದು ಕಾಣುತ್ತದೆ. ಹಾಗೇ ಶ್ವೇತಪ್ರಿಯ ನಾಯಕ್ ಛಾಯಾಗ್ರಹಣ, ಅವರು ಬಳಸಿರುವ ಲೈಟಿಂಗ್ ಅದ್ಭುತವಾಗಿದೆ. ರಘು ನಿಡುವಳ್ಳಿ ಎಂದಿನಂತೆ ಮಜವಾದ ಮತ್ತು ಮನಸ್ಸಿಗೆ ಹತ್ತಿರವಾದ ಸಂಭಾಷಣೆ ಬರೆದಿದ್ದಾರೆ. ಕೆ.ಎಂ. ಪ್ರಕಾಶ್ ಸಂಕಲನ ತುಂಬಾನೇ ನೀಟಾಗಿದೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಕೂಡಾ ʻಕೈವʼದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ.
ಇಷ್ಟಲ್ಲಾ ಪ್ಲಸ್ಸುಗಳಿರುವ ಕೈವ ಚಿತ್ರದಲ್ಲಿ ಒಂಚೂರು ಹೆಚ್ಚು ಅನ್ನಿಸುವಷ್ಟು ವೈಲೆನ್ಸ್ ಇದೆ ನಿಜ. ಬದಲಾಗಿರುವ ಇವತ್ತಿನ ಸಿನಿಮಾ ಮಾರುಕಟ್ಟೆಯಲ್ಲಿ ಕ್ರೌರ್ಯವೇ ವ್ಯಾಪಾರದ ಸರಕಾಗಿರುವುದರಿಂದ ಅದರ ಬಗ್ಗೆ ಹೆಚ್ಚು ಆರೋಪಿಸೋದು ಬೇಡ.
No Comment! Be the first one.