ರಚಿತಾ ರಾಮ್ ಸದ್ಯ ಕನ್ನಡ ಚಿತ್ರರಂಗದಲ್ಲಿ ಮುಖ್ಯ ನಾಯಕಿಯಾಗಿ ಚಾಲ್ತಿಯಲ್ಲಿದ್ದಾರೆ. ಸುದೀಪ್, ದರ್ಶನ್, ಪುನೀತ್, ದುನಿಯಾ ವಿಜಯ್, ನೀನಾಸಂ ಸತೀಶ್, ಧೃವ ಸರ್ಜಾ ಅವರಂಥಾ ಸ್ಟಾರ್ ನಟರ ಜೊತೆಗೂ ನಟಿಸಿರುವ ರಚಿತಾ ಗೆಲುವಿನ ಶಕೆ ಅಯೋಗ್ಯ ಚಿತ್ರದ ಮೂಲಕ ಯಥಾ ಪ್ರಕಾರ ಮುಂದುವರೆದಿದೆ. ಈ ಹಂತದಲ್ಲಿಯೇ ರಚಿತಾ ಸಕಾರಾತ್ಮಕ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ!
ಕಮರ್ಷಿಯಲ್ ಚಿತ್ರಗಳಲ್ಲೇ ಮಿಂಚುತ್ತಾ ಅದರಲ್ಲಿಯೇ ಬೇಡಿಕೆ ಹೊಂದಿರುವ ನಟಿಯರು ಆಚೀಚೆಗೆ ಹೊರಳಿಕೊಳ್ಳೋದು ವಿರಳ. ಆದರೆ ರಚಿತಾ ಕಮರ್ಷಿಯಲ್ ಹಂಗಾಮಾ ಚಾಲ್ತಿಯಲ್ಲಿರುವಾಗಲೇ ಕಲಾತ್ಮಕ ಚಿತ್ರವೊಂದರಲ್ಲಿಯೂ ನಟಿಸುತ್ತಿದ್ದಾರೆ. ಆ ಚಿತ್ರದ ಶೀರ್ಷಿಕೆಯೇ ‘ಏಪ್ರಿಲ್’!
ಇದು ಪಕ್ಕಾ ಮಹಿಳಾ ಪ್ರಧಾನ ಚಿತ್ರ. ಈ ಚಿತ್ರದ ಪೋಸ್ಟರ್ ಕೂಡಾ ಈಗ ಬಿಡುಗಡೆಯಾಗಿದೆ. ಅದರಲ್ಲಿ ರಚಿತಾ ಕೈಲಿ ಬೊಂಬೆ ಹಿಡಿದು ನಿಂತ ಪೋಸಿನಲ್ಲಿ ಕಂಗೊಳಿಸಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ರಚಿತಾ ಏಪ್ರಿಲ್ ಡಿಸೋಜಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ನಾಯಕಿಯ ಹೆಸರೇ ಏಪ್ರಿಲ್ ಡಿಸೋಜಾ ಎಂದಿರೋದರಿಂದ ಈ ಚಿತ್ರಕ್ಕೂ ಏಪ್ರಿಲ್ ಎಂದೇ ಹೆಸರಿಡಲಾಗಿದೆಯಂತೆ.
ಈ ಚಿತ್ರದ ಒಟ್ಟಾರೆ ಕಥೆ ಏಪ್ರಿಲ್ ಎಂಬ ಹೆಣ್ಣು ಮಗಳೊಬ್ಬಳ ಸುತ್ತಾ ನಡೆಯುತ್ತದೆ. ಮೊದಲ ಸಲ ರಚಿತಾ ರಾಮ್ ಇಂಥಾ ಮಹಿಳಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಈ ಮೂಲಕ ಕಮರ್ಷಿಯಲ್ ಚಿತ್ರಗಳ ಏಕತಾನತೆಯಿಂದ ರಚಿತಾ ಹೊರ ಬಂದು ಫ್ರೆಶ್ ಆಗೋ ನಿರ್ಧಾರ ಮಾಡಿದ್ದಾರೆ. ಇದೀಗ ಬಿಡುಗಡೆಯಾಗಿರೋ ಈ ಚಿತ್ರದ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರೀ ಮೆಚ್ಚುಗೆ ಗಳಿಸಿಕೊಂಡಿದೆ. ಇದುವರೆಗೂ ಗ್ಲಾಮರ್ ಪಾತ್ರಗಳಲ್ಲಿಯೇ ಅವರನ್ನು ನೋಡಿದ್ದ ಅಭಿಮಾನಿಗಳೆಲ್ಲ ರಚಿತಾರನ್ನು ಮೊದಲ ಸಲ ಮಹಿಳಾ ಪ್ರಧಾನವಾದ, ಭಿನ್ನವಾದ ಪಾತ್ರವೊಂದರಲ್ಲಿ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.
#
No Comment! Be the first one.