ಕಷ್ಟಗಳೇ ನೀವೆಲ್ಲಿ ಖುಷಿಯು ಮನೆಯೆಲ್ಲಾ ತುಂಬಿರುವಾಗ
ಪುಟ್ಟ ಮನೆಯಲ್ಲಿ ವಿಶಾಲವಾದ ಮನಸ್ಸಿರುವಾಗ
ಸಮಯವೇ ಸಂಪತ್ತು. ಸಹನೆಯೇ ಸಾಕತ್ತು
ಇದು ನಮ್ಮ ಅರ್ಜುನನ ಕಥೆ ಮಾತ್ರವಲ್ಲ, ಪ್ರತಿ ಮನೆಯ ಮನಸ್ಸಿನ ಕಥೆ
- ಇದು ಅರ್ಜುನ ಸನ್ಯಾಸಿ ಚಿತ್ರದ ಕಟ್ಟ ಕಡೆಯಲ್ಲಿ ಕಾಣಿಸಿಕೊಳ್ಳುವ ಸಾಲುಗಳು. ಈ ಸಾಲುಗಳಿಗೆ ಅನ್ವರ್ಥದಂತೆ ಮೂಡಿಬಂದಿರುವ ಸಿನಿಮಾ ಅರ್ಜುನ ಸನ್ಯಾಸಿ.
ಚಿತ್ರದ ಹೆಸರು ಅರ್ಜುನ ಸನ್ಯಾಸಿ ಅಂತಿದೆ ನಿಜ. ಹಾಗಂತ ಇದು ಸನ್ಯಾಸಿಯೊಬ್ಬನ ಲೈಫ್ ಸ್ಟೋರಿ ಅಲ್ಲ. ಇವತ್ತಿನ ಜನಗರದ ಜೀವನ ಮದುವೆಯಾಗಿದ್ದವರನ್ನೂ ಅವರವರದ್ದೇ ಖಾಸಗೀ ಕಾರಣಕ್ಕೆ ಸನ್ಯಾಸಿಯಂತೆ ಬದುಕುವಂತೆ ಮಾಡಿರುತ್ತದೆ. ಎಲ್ಲ ಇದ್ದವರೂ ಏನೂ ಇಲ್ಲದವರಂತೆ ಜೀವಿಸುತ್ತಿರುತ್ತಾರೆ. ಏನೇನೂ ಇಲ್ಲದೆಯೂ ನೆಮ್ಮದಿಯ ಜೀವನ ಮಾಡುವವರೂ ಇದ್ದಾರೆ. ಇಂಥದ್ದೇ ಒಂದು ಕತೆ ಈ ಸಿನಿಮಾದಲ್ಲಿದೆ.
ಅವನು ಆಟೋ ಡ್ರೈವರ್. ಒಂಟಿ ಹುಡುಗನಿಗೆ ಅಪ್ಪ-ಅಮ್ಮ ಜೋಡಿಯೊಂದನ್ನು ತಂದು ಜಂಟಿ ಮಾಡುತ್ತಾರೆ. ಮದುವೆಯೇನೋ ಆಗುತ್ತದೆ. ಆ ನಂತರದ ಪಾಡಿದೆಯಲ್ಲಾ…? ಅದೇ ಚಿತ್ರದ ಪ್ರಧಾನ ಅಂಶ.
ತುಂಬಾ ಜನಕ್ಕೆ ಒಂಥರಾ ಭ್ರಮೆ ಇರುತ್ತದೆ. ಮದುವೆಯಾಗಿಬಿಟ್ಟರೆ ಲೈಫು ಚೇಂಜ್ ಆಗಿಬಿಡುತ್ತದೆ. ಹಾಗಿರಬಹುದು. ಹೀಗಿರಬಹುದು… ಅಂತೆಲ್ಲಾ ಏನೇನೋ ಅಂದುಕೊಂಡಿರುತ್ತಾರೆ. ಬದುಕಿನ ಅಸಲಿ ವರಸೆ ಶುರುವಾಗೋದೇ ಮದುವೆಯಾದಮೇಲೆ. ದಿನಕ್ಕೊಂದು, ಕ್ಷಣಕ್ಕೊಂದು ಸವಾಲುಗಳು ಎದುರಾಗುತ್ತವೆ. ಬದುಕು ಸಾಕಪ್ಪಾ ಅನ್ನುವಷ್ಟು ಹೈರಾಣಾಗಿಸುತ್ತದೆ. ಅವನ್ನೆಲ್ಲಾ ದಾಟಿದ ಮೇಲಷ್ಟೇ ನಿಜವಾದ ಜೀವನ ಶುರುವಾಗೋದು.
ಸಣ್ಣ ಮನೆ, ಅಡ್ಡಗೋಡೆ ಆಚೆಗೆ ಅಡುಗೆಮನೆ, ಒಂದು ಟಾಯ್ಲೆಟ್ಟು. ಪ್ರತ್ಯೇಕವಾಗಿ ರೂಮು ಕೂಡಾ ಇಲ್ಲದ ಆ ಮನೆಯಲ್ಲಿ ನವಜೋಡಿ ನಲಿದಾಡುವುದಾದರೂ ಹೇಗೆ? ಇವರ ಫಸ್ಟ್ ನೈಟ್ ಆಚರಣೆಯಾಗಬೇಕೆಂದರೆ, ಜೊತೆಗಿರುವ ಹೆತ್ತವರು ಮನೆಯಿಂದ ಹೊರಗೆ ಮಲಗಬೇಕು. ಅದಕ್ಕೆ ಪ್ರಕೃತಿ ಸ್ಪಂದಿಸಬೇಕಲ್ಲಾ? ಚಳಿ, ಮಳೆ, ಗಾಳಿಯಲ್ಲಿ ಅಪ್ಪ-ಅಮ್ಮನನ್ನು ಹೊರಗೆ ಮಲಗಿಸಲು ಮನಸ್ಸು ಒಪ್ಪುತ್ತಾ? ಇಂಥಾ ದುಸ್ಥಿತಿಯಲ್ಲಿ ಯಾವ ಸುಖ ತಾನೆ ಎಟುಕಲು ಸಾಧ್ಯ?
ಈ ಥರದ ಎಲ್ಲ ವಿವರಗಳೊಂದಿಗೆ ಸರಳವಾಗಿ ಸೃಷ್ಟಿಯಾಗಿರುವ ಸಿನಿಮಾ ಅರ್ಜುನ ಸನ್ಯಾಸಿ. ಈಶ್ವರ್ ಪೋಲಂಕಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕೆಳಮಧ್ಯಮ ವರ್ಗದ ಬದುಕಿನ ಇಂಚಿಂಚೂ ವಿವರ ಇಲ್ಲಿದೆ. ಅದರಲ್ಲೂ ಆಟೋ ಚಾಲಕರು ಒಂದೊಳ್ಳೆ ಬದುಕನ್ನು ಕಟ್ಟಿಕೊಳ್ಳಲು ಎಷ್ಟೆಲ್ಲಾ ಹೆಣಗಾಡಬೇಕು ಅನ್ನೋದು ಕೂಡಾ ಇಲ್ಲಿ ಅನಾವರಣಗೊಂಡಿದೆ. ಒಟ್ಟಾರೆ ಆಟೋ ಡ್ರೈವರ್ ಒಬ್ಬನ ಆತ್ಮಕಥೆಯಂತೆ ಮೂಡಿ ಬಂದಿರುವ ಈ ಚಿತ್ರ ನಮ್ಮ ಫ್ಲಿಕ್ಸ್ ಓಟಿಟಿಯಲ್ಲಿ ಪ್ರದರ್ಶನವಾಗುತ್ತಿದೆ.
ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದ ಆ ಕಾಲದ ಬಾಲನಟಿ, ಇವತ್ತಿನ ಹಿರಿಯ ನಟಿ ಅಭಿನಯ ಇಲ್ಲಿ ಅಮ್ಮನಾಗಿ ಕಾಣಿಸಿಕೊಂಡಿದ್ದಾರೆ. ನಾಗೇಂದ್ರ ಶಾ ಅಪ್ಪನಾಗಿ ಆಪ್ತವಾಗಿ ನಟಿಸಿದ್ದಾರೆ. ನಾಗೇಂದ್ರ ಶಾ ಥರದ ಹಿರಿಯ ಕಲಾವಿದರ ಅನುಭವವೋ? ಬದುಕಿನ ಎಲ್ಲ ಮಜಲುಗಳನ್ನು ಕಂಡಿರುವುದರಿಂದಲೋ ಗೊತ್ತಿಲ್ಲ. ಎಲ್ಲೂ ನಟನೆ ಅನ್ನಿಸದ ಮಟ್ಟಿಗೆ ಪಾತ್ರ ಪೋಷಣೆ ಮಾಡುತ್ತಾರೆ. ಅರ್ಜುನ ಸನ್ಯಾಸಿ ಚಿತ್ರದಲ್ಲಿ ನಾಗೇಂದ್ರ ಶಾ ಹೆಚ್ಚು ಗಮನ ಸೆಳೆಯುತ್ತಾರೆ.
ಸಿನಿಮಾದ ಕೊನೆಯ ದೃಶ್ಯದ ತನಕ ನಾಯಕಿ ಮಾತೇ ಆಡುವುದಿಲ್ಲ. ಬಡವರ ಬದುಕಲ್ಲಿ ಪರಿಸ್ಥಿತಿಗಳು ಬಾಯನ್ನು ಕಟ್ಟಿಹಾಕಿರುತ್ತವಲ್ಲಾ? ಅದರ ರೂಪಕದಂತೆ ಈ ಪಾತ್ರ ಮೂಡಿ ಬಂದಿದೆ. ಕೊನೆಯಲ್ಲಿ ಆಕೆ ಆಡುವ ಮಾತು ಮನಸ್ಸಿನಾಳಕ್ಕಿಳಿದು ಕಾಡುತ್ತದೆ. ಸೌಂದರ್ಯ ಗೌಡ ನಟನೆ ಕೂಡಾ ಅದಕ್ಕೆ ಪೂರಕವಾಗಿದೆ. ಅರ್ಜುನನಾಗಿ ಕಾಣಿಸಿಕೊಂಡಿರುವ ಸಿ.ಸಿ. ರಾವ್ ಕೂಡಾ ಸಹಜವಾಗಿ ಪಾತ್ರ ನಿಭಾಯಿಸಿದ್ದಾರೆ. ಈ ಹಿಂದೆ ಉಗ್ರಂ, ಕೆ.ಜಿಎಫ್. ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ರೂಪಾ ರಾಯಪ್ಪ ಇಲ್ಲಿ ವೇಶ್ಯೆಯ ಅವತಾರವೆತ್ತಿದ್ದಾರೆ. ರೂಪಾ ಮಾದಕತೆ ಅರ್ಜುನ ಸನ್ಯಾಸಿಯ ಮೆರುಗು ಹೆಚ್ಚಿಸಿದೆ.
ಒಟ್ಟಾರೆಯಾಗಿ ಸಾಕಷ್ಟು ಲಿಮಿಟೇಷನ್ನುಗಳ ನಡುವೆ, ಯಾವುದೇ ಅಬ್ಬರವಿಲ್ಲದೆ, ಅತಿರಂಜಕ ಅಂಶಗಳೂ ಇಲ್ಲದೆ ಸಹಜ, ಸರಳವಾಗಿ ನಿರೂಪಿತಗೊಂಡಿರುವ ಚಿತ್ರ ಅರ್ಜುನ ಸನ್ಯಾಸಿ. ನಮ್ಮ ಫ್ಲಿಕ್ಸ್ ಗೆ ಹೋಗಿ ನೋಡಿ. ಇಷ್ಟವಾಗುತ್ತದೆ.
No Comment! Be the first one.