ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ದಿಢೀರಂತಾ ಮದುವೆಯಾಗಿ ಒಟ್ಟು ಸೇರಿದ ಎರಡು ಜೀವಗಳು ಇಡೀ ಜೀವನ ಒಂದಾಗಿ ಬಾಳಬೇಕು. ಪರಸ್ಪರರ ಇಷ್ಟ ಕಷ್ಟ, ನಡೆ, ನುಡಿ, ಮಾತು, ಮಂಥನಗಳು ಬೇರೆಬೇರೆಯಾಗಿರುತ್ತವೆ. ಇಬ್ಬರು ಬೆಳೆದ ವಾತಾವರಣ, ಸಂಸ್ಕೃತಿ, ರಿವಾಜುಗಳು ಕೂಡಾ ಭಿನ್ನವಾಗಿರುತ್ತವೆ. ಅಸಲಿಗೆ ಒಬ್ಬರಿಗೆ ಒಬ್ಬರ ಪರಿಚಯವೇ ಇರೋದಿಲ್ಲ. ಮದುವೆಗೆ ಮುಂಚೆ ಸಿಕ್ಕಾಪಟ್ಟೆ ಕನಸು ಕಂಡಿರುತ್ತಾರೆ. ಬದುಕು ಇನ್ನೇನೋ ಆಗಿಬಿಡಬಹುದು ಅಂತಾ ಭ್ರಮಿಸಿರುತ್ತಾರೆ. ಆದರೆ ಮದುವೆ ಅಂತಾದಮೇಲೆ ಆಗೋದೇ ಬೇರೆ. ಇಬ್ಬರೂ ನೀರಿಂದ ತೆಗೆದು ನೆಲಕ್ಕೆಸೆದ ಮೀನಂತಾಡಲು ಶುರು ಮಾಡುತ್ತಾರೆ. ಸುತ್ತಲಿನವರಾದರೂ ಅವರನ್ನು ನೇರ್ಪಾಗಿ ಬದುಕಲು ಬಿಡೋದಿಲ್ಲ. ಎಲ್ಲರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಒಗ್ಗಿಸಿಕೊಳ್ಳುವ ಪ್ರಯತ್ನವನ್ನೇ ಚಾಲ್ತಿಯಲ್ಲಿಟ್ಟಿರುತ್ತಾರೆ. ಇವೆಲ್ಲದರ ಪರಿಣಾಮವಾಗಿ ಅದೊಂದು ದಿನ ಹೊಂದಾಣಿಕೆಯ ಸಮಸ್ಯೆ, ನೂರೆಂಟು ನೆಪಗಳನ್ನು ಸೃಷ್ಟಿಸಿ ಬೇರೆಯಾಗುತ್ತಾರೆ. ಇವತ್ತು ಸಿಟಿ ಲೈಫಲ್ಲಿ ಅರ್ಧಕ್ಕೂ ಹೆಚ್ಚು ಜನರ ಬದುಕು ಹಡಾಲೆದ್ದಿರೋದೋ ಹೀಗೆ…
ಮದುವೆಯ ಹೆಸರಲ್ಲಿ ಒಂದಾದಮೇಲೆ ಒಂದು ಜೋಡಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಸಹಯಾನ ಮಾಡಲು ಅದಕ್ಕೇ ಆದ ಸಮಯ ಹಿಡಿಯುತ್ತದೆ. ಏಕಾಏಕಿ ಎಲ್ಲವೂ ಹೊಂದಾಣಿಕೆಯಾಗಲು ಸಾಧ್ಯವಿಲ್ಲ. ಹಾಗೆ ತಾಳ್ಮೆಯಿಂದ, ಸಮಯ ಕೊಟ್ಟು, ಪರಸ್ಪರರು ಅರಿತು ಬಾಳಿದರೆ ನಿಜಕ್ಕೂ ಬದುಕಿದ್ದಾಗಲೇ ಸ್ವರ್ಗ ಸಿಗುತ್ತದೆ. ಬಾಂಧವ್ಯ ಪರ್ಮನೆಂಟಾಗಿ ಬೆಸೆದುಕೊಳ್ಳುತ್ತದೆ.
ಗಂಡ ಹೆಂಡತಿ ಹೇಗೆಲ್ಲಾ ಬದುಕಬಾರದು ಮತ್ತು ಏನು ಮಾಡಿದರೆ ಹೊಂದಿಕೊಳ್ಳಬಹುದು ಅನ್ನೋದನ್ನು ತೀರಾ ಸರಳವಾಗಿ ಬಿಚ್ಚಿಟ್ಟಿರುವ ಸಿನಿಮಾ ʻಅಥಿ ಐ ಲವ್ ಯೂʼ. ಲೋಕೇಂದ್ರ ಸೂರ್ಯ ಸ್ವತಃ ರಚಿಸಿ, ನಿರ್ದೇಶಿಸಿ ಜೊತೆಗೆ ನಾಯಕನಟನಾಗಿಯೂ ಅಭಿನಯಿಸಿದ್ದಾರೆ. ಲೋಕೇಂದ್ರ ಅವರಿಗೆ ಜೋಡಿಯಾಗಿ ಶ್ರಾವ್ಯಾ ರಾವ್ (ಸಾತ್ವಿಕಾ) ಕಾಣಿಸಿಕೊಂಡಿದಾರೆ. ಈ ಚಿತ್ರದಲ್ಲಿ ಇರೋದೇ ಈ ಎರಡು ಪಾತ್ರಗಳು!
ಎರಡು ಪಾತ್ರಗಳು ಮತ್ತು ಒಂದು ಮನೆಯ ಲೊಕೇಷನ್ನಿನಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದೆ. ಈ ಎರಡು ಪಾತ್ರಗಳೊಂದಿಗೆ ಇನ್ನೂ ಕೆಲವಾರು ರೋಲುಗಳು ಬಂದು ಹೋಗುತ್ತವೆ. ಅವು ನೆರಳು ಮತ್ತು ಧ್ವನಿಯ ಮುಖಾಂತರ ಮಾತ್ರ. ಲೋಕೇಂದ್ರ ಅವರ ನಟನೆ, ದನಿಯ ಏರಿಳಿತದಲ್ಲೇ ಮಜವಿದೆ. ಶ್ರಾವ್ಯಾ ನಟನೆ ಕೂಡಾ ತಕ್ಕಮಟ್ಟಿಗಿದೆ. ಮೊದಲ ಭಾಗ ಸ್ವಲ್ಪ ಸ್ಲೋ ಅನ್ನಿಸುತ್ತದೆಯಾದರೂ ಎರಡನೇ ಭಾಗ ಸಾಗೋದೇ ಗೊತ್ತಾಗೋದಿಲ್ಲ. ಇನ್ನೊಂದಿಷ್ಟು ತಿರುವುಗಳನ್ನಿಟ್ಟಿದ್ದಿದ್ದರೆ ಚಿತ್ರ ಇನ್ನೂ ಒಂದು ಮೆಟ್ಟಿಲು ಮೇಲೇರುತ್ತಿತ್ತು!
ಅಥಿ ಚಿತ್ರ ತೀರಾ ಕಮರ್ಷಿಯಲ್ ಅಲ್ಲದಿದ್ದರೂ ಒಂದು ಸರಳ ಸುಂದರ ಸಾಮಾಜಿಕ ಮತ್ತು ಸಾಂಸಾರಿಕ ಚಿತ್ರ ಅನ್ನಿಸಿಕೊಳ್ಳುತ್ತದೆ. ಅತಿರಂಜಕತೆ, ಅತಿಯಾದ ವೈಭವೀಕರಣ ಯಾವುದೂ ಇಲ್ಲದ ಈ ಸಿನಿಮಾ ಸಿಂಪಲ್ಲಾಗಿದ್ದರೂ ಮನಸ್ಸಿಗೆ ಹತ್ತಿರವಾಗುತ್ತದೆ. ಇಡೀ ಸಿನಿಮಾನ್ನು ಎರಡೇ ಪಾತ್ರಗಳ ಮೂಲಕ ರೂಪಿಸುವುದು ನಿಜಕ್ಕೂ ಛಾಲೆಂಜಿಂಗ್. ಅದನ್ನು ಲೋಕೇಂದ್ರ ಸೂರ್ಯ ಸಮರ್ಥವಾಗಿ ನಿಭಾಯಿಸಿದ್ದಾರೆ.
ರೆಡ್ ಅಂಡ್ ವೈಟ್ ಸೆವೆನ್ ರಾಜ್ ನಿರ್ಮಾಣದ ಅಥಿ ಐ ಲವ್ ಯೂ ಚಿತ್ರ ಮನರಂಜನೆಯ ಜೊತೆಗೆ ಸಂದೇಶವನ್ನೂ ನೀಡುತ್ತದೆ. ಮದುವೆಯಾದವರು, ಆಗಲು ಬಯಸಿದವರು, ಮಕ್ಕಳನ್ನು ಹೆತ್ತ ಪೋಷಕರು ಎಲ್ಲರೂ ಒಮ್ಮೆ ನೋಡಬಹುದಾದ ಮತ್ತು ನೋಡಲೇ ಬೇಕಾದ ಸಿನಿಮಾ ಇದು!
No Comment! Be the first one.