ಅದು ಆಗಸ್ಟ್ ೨೩ ೧೯೯೨. ಕನ್ನಡ ಚಿತ್ರರಂಗದ ಮೇರು ನಿರ್ಮಾಪಕ, ಈಶ್ವರಿ ಪ್ರೊಡಕ್ಷನ್ಸ್ ಎನ್ನುವ ಸಂಸ್ಥೆಯ ಮೂಲಕ ಹತ್ತು ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿ ಎಷ್ಟೋ ಜನ ಕಲಾವಿದ, ನಿರ್ದೇಶಕರನ್ನು ಹುಟ್ಟು ಹಾಕಿದ, ಆ ಮೂಲಕ ಲೆಕ್ಕವಿಲ್ಲದಷ್ಟು ಮನೆ-ಮನಗಳನ್ನು ಬೆಳಗಿದ ಜೀವ ಕಣ್ಮುಚ್ಚಿ ಮಲಗಿತ್ತು. ಅವರು ಎನ್. ವೀರಾಸ್ವಾಮಿ!
ಹಿರಿಯ ಮಗ ರವಿಚಂದ್ರನ್ ಆ ಕಾಲಕ್ಕೇ ಕನಸುಗಾರನೆಂಬ ಬಿರುದು ಪಡೆದು ಡೈರೆಕ್ಟರ್ ಅನ್ನಿಸಿಕೊಂಡಿದ್ದರು. ಜೊತೆಗೆ ಕನ್ನಡ ಚಿತ್ರರಂಗದ ಸ್ಟಾರ್ ಕೂಡಾ ಆಗಿದ್ದರು. ಆದರಿನ್ನೂ ವಿದ್ಯಾಭ್ಯಾಸವನ್ನು ಕೂಡಾ ಕಂಪ್ಲೀಟ್ ಮಾಡದ ಮುದ್ದುಮಗನಿದ್ದನಲ್ಲಾ? ಅದು ಬಾಲಾಜಿ ವೀರಾಸ್ವಾಮಿ. ತಂದೆ ತೀರಿಕೊಂಡು ಕರೆಕ್ಟಾಗಿ ಹನ್ನೊಂದು ದಿನ ಕಳೆದಿತ್ತು. ರವಿಚಂದ್ರನ್ ಕನ್ನಡ ಚಿತ್ರರಂಗದ ಬ್ಯುಸೀ ಹೀರೋ. ಒಪ್ಪಿಕೊಂಡ ಸಿನಿಮಾಗಳೇ ಬೇಕಾದಷ್ಟಿದ್ದವು. ಹೀಗಿರುವಾಗ ಈಶ್ವರಿ ಪ್ರೊಡಕ್ಷನ್ಸ್ ಕೆಲಸಗಳನ್ನು ಯಾರು ನೋಡಿಕೊಳ್ಳುತ್ತಾರೆ ಅನ್ನೋ ಪ್ರಶ್ನೆ ಉದ್ಭವಿಸಿತ್ತು. ಅಪ್ಪನ ತಿಥಿ ಕಾರ್ಯಗಳನ್ನೆಲ್ಲಾ ಮುಗಿಸಿ ಬಂದ ಬಾಲಾಜಿ ತಂದೆಯ ಸೀಟಿನಲ್ಲಿ ಕುಳಿತಿದ್ದರು. ಆಗ ಬಾಲಾಜಿಗೆ ಬರೀ ಹದಿನೇಳು ವರ್ಷ!
ಇನ್ನೂ ಮೀಸೆ ಕೂಡಾ ಸರಿಯಾಗಿ ಮೊಳೆಯದ ಇಷ್ಟು ಚಿಕ್ಕ ಹುಡುಗ ಏನು ತಾನೆ ಮಾಡಲು ಸಾಧ್ಯ? ಅಷ್ಟು ದೊಡ್ಡ ಸಂಸ್ಥೆಯನ್ನು ಮುನ್ನಡೆಸಲು ಸಾಧ್ಯವಾ? ವೀರಾಸ್ವಾಮಿಯಂಥಾ ಕಿಂಗ್ ಮೇಕರ್ ಜಾಗದಲ್ಲಿ ಕುಳಿತು ಈ ಹುಡುಗ ಹೇಗೆ ಕೆಲಸ ಮಾಡುತ್ತಾನೋ? ಅಂಥೆಲ್ಲಾ ಜನ ಮಾತಾಡಿಕೊಳ್ಳುತ್ತಿದ್ದರು. ವಾಸ್ತವದಲ್ಲಿ ಬಾಲಾಜಿಗೆ ಕೂಡಾ ಚಿತ್ರರಂಗ ಹೊಸದೇ. ಓದುವುದನ್ನೂ ಮೊಟಕುಗೊಳಿಸಿ ತಂದೆ ಕಟ್ಟಿನಿಲ್ಲಿಸಿದ ಸಾಮ್ರಾಜ್ಯವನ್ನು ಕಾಪಾಡುವ ಶಪಥ ಮಾಡಿದ್ದರು.
ರವಿಚಂದ್ರನ್ ನಟನೆಯ ಸಿನಿಮಾಗಳನ್ನು ಮೈಸೂರು ಏರಿಯಾಕ್ಕೆ ವಿತರಣೆ ಮಾಡುವ ಕೆಲಸ ಆರಂಭಿಸಿದ್ದರು ಬಾಲಾಜಿ. ಮೊಟ್ಟ ಮೊದಲಿಗೆ ಶ್ರೀರಾಮಚಂದ್ರ ಚಿತ್ರವನ್ನು ಮೈಸೂರು ಏರಿಯಾಗೆ ಡಿಸ್ಟ್ರಿಬ್ಯೂಟ್ ಮಾಡಿದರು. ಮೊದಲ ಪ್ರಯತ್ನದಲ್ಲೇ ಒಳ್ಳೇ ಲಾಭವಾಯಿತು. ನಂತರ ಗಡಿಬಿಡಿ ಗಂಡ ವಿತರಣೆ ಮಾಡಿದಾಗ ಅದೂ ಸೂಪರ್ ಹಿಟ್ ಆಯ್ತು. ಆ ನಂತರ ಅಣ್ಣಯ್ಯ ಸೇರಿದಂತೆ ಅಣ್ಣ ರವಿಚಂದ್ರನ್ ನಟನೆಯ ಸಾಕಷ್ಟು ಚಿತ್ರಗಳನ್ನು ಬಾಲಾಜಿ ವಿತರಣೆ ಮಾಡುತ್ತಿದ್ದರು. ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತೆ ಎಲ್ಲ ಚಿತ್ರಗಳೂ ಇವರ ಕೈ ಹಿಡಿದವು. ಅದೇ ಹೊತ್ತಿಗೆ ಪುಟ್ನಂಜ ಚಿತ್ರವನ್ನು ಆಲ್ ಓವರ್ ಕರ್ನಾಟಕ ವಿತರಣೆ ಹಕ್ಕು ಪಡೆದರು.
‘ಅವನಿಗೇನು ಗೊತ್ತು ವ್ಯಾಪಾರ? ಕರ್ನಾಟಕ ಪೂರ್ತಿ ಡಿಸ್ಟ್ರಿಬ್ಯೂಟ್ ಮಾಡೋದೆಂದರೆ ಸುಮ್ಮನೇ ಮಾತಾ?’ ಅಂತಾ ಜನ ಆಗಲೂ ಮಾತಾಡಿದರು. ಎಲ್ಲರೂ ಅಚ್ಚರಿಗೊಳ್ಳುವಂತೆ ಪಬ್ಲಿಸಿಟಿ ಮಾಡಿ, ಅದ್ದೂರಿಯಾಗಿ ಬಿಡುಗಡೆ ಮಾಡಿದ ಪುಟ್ನಂಜ ಕೂಡಾ ಭರ್ಜರಿ ಲಾಭವನ್ನೇ ತಂದುಕೊಟ್ಟಿತು. ಅದಾಗುತ್ತಿದ್ದಂತೇ ಸಿಪಾಯಿ ಕೂಡಾ ಬಾಲಾಜಿ ಪಾಲಿಗೆ ವರವಾಗಿ ಪರಿಣಮಿಸಿತು. ಹೀಗೆ ವಿತರಣೆಯಲ್ಲಿ ಬ್ಯುಸಿಯಾಗಿದ್ದ ಸಂದರ್ಭದಲ್ಲೇ ಬಾಲಾಜಿ ಹೀರೋ ಆಗಿಯೂ ಅದೃಷ್ಟಪರೀಕ್ಷೆಗಿಳಿದರು. ಅಂದುಕೊಂಡ ಮಟ್ಟಿಗೆ ಗೆಲುವು ದಕ್ಕದಿದ್ದರೂ ಎಂದಿನ ವಿತರಣಾ ಕಾರ್ಯ ಮಾತ್ರ ಮುಂದುವರೆಸುತ್ತಾ ಸಾಗಿದರು. ಆ ಮೂಲಕ ಅತೀ ಕಿರಿಯ ವಯಸ್ಸಿನ ಯಶಸ್ವೀ ವಿತರಕ ಅಂತಲೂ ಅನ್ನಿಸಿಕೊಂಡರು!
ಹಾಗೆ ನೋಡಿದರೆ ತಮ್ಮ ಕಿರಿಯ ಪುತ್ರ ಕೂಡಾ ಉತ್ತಮ ನಟನಾಗಬೇಕು ಅನ್ನೋದು ವೀರಾಸ್ವಾಮಿಯವರ ಬಯಕೆಯಾಗಿತ್ತು. ಡಿ. ರಾಜೇಂದ್ರ ಬಾಬು ನಿರ್ದೇಶನದಲ್ಲಿ ೧೯೮೬ರಲ್ಲಿ ತೆರೆಗೆ ಬಂದಿದ್ದ ರವಿಚಂದ್ರನ್ ಅಭಿನಯದ ಅಸಂಭವ ಸಿನಿಮಾದಲ್ಲೇ ಬಾಲಾಜಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ರವಿಚಂದ್ರನ್ ನಿಭಾಯಿಸಿದ್ದ ಪಾತ್ರದ ಕಿರಿಯ ವಯಸ್ಸಿನ ರೋಲು ನಿಭಾಯಿಸಿದ್ದಿದ್ದು ಇದೇ ಬಾಲಾಜಿ. ಹೀರೋ ಆಗಿ ಕೂಡಾ ದೊಡ್ಡ ಮಟ್ಟದಲ್ಲಿ ಲಾಂಚ್ ಆಗಬೇಕು ಅನ್ನೋದು ವೀರಾಸ್ವಾಮಿಯವರ ತುಡಿತವಾಗಿತ್ತು. ಆದರೆ ಆ ಹೊತ್ತಿಗೆ ಅವರೇ ಇಲ್ಲವಾದರು.
ಬಾಲಾಜಿ ಹಿಡಿದ ಯಾವುದೇ ಕೆಲಸವನ್ನು ಹಠದಿಂದ ಮಾಡಿ ಮುಗಿಸುತ್ತಾರೆ ಅನ್ನೋದಕ್ಕೆ ವರ್ಷಕ್ಕೆ ಮುನ್ನವಷ್ಟೇ ಮರು ಬಿಡುಗಡೆಯಾದ ನಾಗರಹಾವು ಸಿನಿಮಾವೇ ಸಾಕ್ಷಿ.
ನಲವತೈದು ವರ್ಷಗಳ ಹಿಂದೆ ತಮ್ಮ ತಂದೆ ವೀರಾಸ್ವಾಮಿ ನಿರ್ಮಾಣ ಮಾಡಿದ್ದ ಚಿತ್ರವದು. ಬಾಲಾಜಿ ಈ ಚಿತ್ರಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಷ ನೀಡಿ ಬಿಡುಗಡೆಗೊಳಿಸಿದ್ದರು. ಆ ಚಿತ್ರ ಮತ್ತೊಂದು ರೌಂಡು ಅಭೂತಪೂರ್ವ ಗೆಲುವು ದಾಖಲಿಸಿತ್ತು.. ಈ ಮೂಲಕ ಸಾಹಸಸಿಂಹ ಡಾ.ವಿಷ್ಣುವರ್ಧನ್ ಸ್ಟಾರ್ ನಟನಾಗಿ ಹೊರ ಹೊಮ್ಮಿದ್ದ ನಾಗರಹಾವು ಈ ತಲೆಮಾರಿನ ಪ್ರೇಕ್ಷಕರನ್ನೂ ಮೋಡಿಗೀಡು ಮಾಡಿತು. ಆದರೆ, ನಾಗರಹಾವಿಗೆ ಆಧುನಿಕ ತಂತ್ರಜ್ಞಾನದ ಟಚ್ ನೀಡಲು ಬಾಲಾಜಿ ಪಟ್ಟಿದ್ದ ಪಾಡಿದೆಯಲ್ಲಾ? ಅದು ಅಷ್ಟು ಸುಲಭಕ್ಕೆ ವರ್ಣಿಸೋದು ಕಷ್ಟ. ರವಿಚಂದ್ರನ್ ಅವರಿಗೆ ಆ ಕಾಲದಿಂದಲೂ ತಮ್ಮ ತಂದೆ ವೀರಾಸ್ವಾಮಿಯವರು ನಿರ್ಮಾಣ ಮಾಡಿರುವ ನಾಗರಹಾವು ಚಿತ್ರವನ್ನು ಅತ್ಯಾಧುನಿಕ ಟಚ್ ನೀಡಿ ಈ ತಲೆಮಾರಿಗೂ ತಲುಪಿಸಬೇಕೆಂಬ ಕನಸಿತ್ತಂತೆ.
ಈ ಚಿತ್ರದ ಬಗ್ಗೆ ಇಂಥಾದ್ದೇ ಕನಸು ಆಸೆ ಹೊಂದಿದ್ದ ಬಾಲಾಜಿ ಮೂರು ವರ್ಷಗಳ ಹಿಂದೆ ತಂದೆಯ ಸೃಷ್ಟಿಗೆ ಹೊಸಾ ರೂಪ ನೀಡುವ ಕಾಯಕಕ್ಕೆ ಚಾಲನೆ ನೀಡಿದ್ದರು. ಆದರೆ ಇದು ನಿಜಕ್ಕೂ ಸಲೀಸಿನ ವಿಚಾರವಾಗಿರಲಿಲ್ಲ. ಈ ಸಿನಿಮಾವನ್ನೂ ಇವತ್ತಿನ ಟೆಕ್ನಾಲಜಿಗೆ ಅಪ್ಡೇಟ್ ಮಾಡುವ ಕನಸಿಟ್ಟುಕೊಂಡು ಚೆನ್ನೈನ ಜೆಮಿನಿ ಸ್ಟುಡಿಯೋಗೆ ಹೋಗಿದ್ದರು. ಅಲ್ಲಿ ಚಿತ್ರದದ ನೆಗೆಟೀವ್‌ಗಳು ಅಕ್ಷರಶಃ ಕಸದತೊಟ್ಟಿಯಂತಾ ಜಾಗದಲ್ಲಿತ್ತು. ಇದನ್ನು ಸಂಸ್ಕರಣೆ ಮಾಡಿ ಹೊಸಾ ಪ್ರಿಂಟ್ ಮಾಡಿಸೋದು ಅಸಾಧ್ಯ ಅಂತಾ ಸ್ಟುಡಿಯೋದವರು ಹೇಳಿಬಿಟ್ಟಿದ್ದರು. ದಿಕ್ಕು ತೋಚದವರಂತೆ ಫ್ಲೈಟು ಹಿಡಿದು ವಾಪಾಸು ಬಂದಿದ್ದರು ಬಾಲಾಜಿ. ಆದರೆ, ಹಠಮಾರಿತನ, ಎಷ್ಟೇ ಕಷ್ಟವಾದರೂ ಮಾಡಲೇಬೇಕೆನ್ನುವ ಛಲ ಸುಮ್ಮನೆ ಬಿಡುತ್ತದಾ? ಮತ್ತೆ ಚೆನ್ನೈ ಸ್ಟುಡಿಯೋಗೆ ಹೋದವರೇ ‘ಕಸವಾಗಿದ್ದರೂ ಕೊಡಿ ಪರವಾಗಿಲ್ಲ ಅಂತಾ ನೆಗೆಟೀವ್ ಡಬ್ಬಗಳನ್ನು ಪಡೆದುತಂದು, ಪ್ರತಿಯೊಂದು ಫ್ರೇಮನ್ನೂ ಹೊಸದಾಗಿ ಸ್ಕ್ಯಾನ್ ಮಾಡಿಸಿ, ವರ್ಷಗಟ್ಟಲೆ ಕೂತು ಕಣಕಣವನ್ನೂ ಸರಿಪಡಿಸಿ, ಆ ಮೂಲಕ ನಾಗರಹಾವಿಗೆ ಹೊಸ ಜೀವ ಕಳೆ ತಂದುಕೊಟ್ಟಿದ್ದರು.
ಈಗ ತಮ್ಮ ತಂದೆ ನಿರ್ಮಿಸಿದ್ದ ನಾನಿನ್ನ ಮರೆಯಲಾರೆ ಸಿನಿಮಾವನ್ನೂ ಇದೇ ರೀತಿ ಹೊಸ ಲೇಪನದೊಂದಿಗೆ ಬಿಡುಗಡೆ ಮಾಡಿ ಅನ್ನೋ ಬೇಡಿಕೆಯಿದೆ. ಪ್ರೇಮ ಲೋಕವನ್ನು ಕೂಡಾ ಮರು ಬಿಡುಗಡೆ ಮಾಡಬೇಕೆನ್ನುವ ಆಲೋಚನೆ ಬಾಲಾಜಿ ಅವರಿಗಿದೆ. ಈ ನಡುವೆ ತಮ್ಮ ಅಣ್ಣನ ಮಕ್ಕಳೂ ಈಗ ಚಿತ್ರರಂಗಕ್ಕೆ ಬಂದಿದ್ದಾರೆ. ೨೦೨೦ಕ್ಕೆ ಈಶ್ವರಿ ಸಂಸ್ಥೆ ಆರಂಭಗೊಂಡು ಐವತ್ತು ವರ್ಷ ಪೂರೈಸಿದೆ. ಈ ಸಂದರ್ಭದಲ್ಲಿ ಬಾಲಾಜಿ ಮತ್ತೆ ನಟನಾಗಿ ಎಂಟ್ರಿ ಕೊಡಬೇಕೆನ್ನುವ ಕನಸು ಹೊತ್ತಿದ್ದಾರೆ. ತಮ್ಮ ಕುಟುಂಬದ ನಾಲ್ಕೂ ಜನ ಸೇರಿ ವಿಭಿನ್ನವಾದ ಚಿತ್ರವೊಂದನ್ನು ನೀಡಬೇಕೆನ್ನುವ ಪ್ಲಾನೂ ಇದೆಯಂತೆ.
ಅವೆಲ್ಲಾ ಸಾಕಾರಗೊಳ್ಳಲಿ. ಇವತ್ತು ಬಾಲಾಜಿ ಅವರ ಹುಟ್ಟಿದ ದಿನ. ಈ ಸಂದರ್ಭದಲ್ಲಿ ಅವರಿಗೆ cinibuzz ಪರವಾಗಿ ಹುಟ್ಟುಹಬ್ಬದ ಶುಭಾಶಯಗಳು….
No Comment! Be the first one.