ಕಲಾಕೃತಿಯಂಥಾ ಸಿನಿಮಾ ಸ್ಟಿಲ್ ಫೋಟೋಗ್ರಫಿಯಿಂದ ಖ್ಯಾತರಾಗಿದ್ದ ಭುವನ್ ಗೌಡ ಈಗ ಛಾಯಾಗ್ರಾಹಕರಾಗಿಯೂ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಭುವನ್ ಭರ್ಜರಿ ಚೇತನ್ ನಿರ್ದೇಶನದ ಭರಾಟೆ ಚಿತ್ರಕ್ಕೂ ಛಾಯಾಗ್ರಾಹಕರಾಗಿ ಆಯ್ಕೆಯಾಗೋ ಮೂಲಕ ಶ್ರೀಮುರಳಿಗೆ ಮೂರನೇ ಚಿತ್ರದಲ್ಲಿಯೂ ಒಂದಾಗಿದ್ದರು. ಆದರೀಗ ಭರಾಟೆಯಿಂದ ಭುವನ್ ಗೌಡ ಹೊರ ಬಂದಿದ್ದಾರೆಂಬ ಸುದ್ದಿ ಬಂದಿದೆ!
ಭುವನ್ ಗೌಡ ಭರಾಟೆ ಚಿತ್ರದ ಛಾಯಾಗ್ರಹಣದಿಂದ ಏಕಾಏಕಿ ಹೊರ ಬಿದ್ದ ಸುದ್ದಿ ಕೇಳಿ ಬಹುತೇಕರು ಅಚ್ಚರಿಗೊಂಡಿದ್ದಾರೆ. ಈ ಮೂಲಕ ಚಿತ್ರರಂಗದಲ್ಲಿ ಇತ್ತೀಚೆಗೆ ಹುಟ್ಟಿಕೊಂಡಿರೋ ಛಾಯಾಗ್ರಾಹಕರನ್ನು ಬದಲಾಯಿಸೋ ಟ್ರೆಂಡ್ ಒಂದು ಮುಂದುವರೆದಂತಾಗಿದೆ. ತಿಂಗಳುಗಳ ಕಾಲ ಚಿತ್ರ ತಂಡದ ಜೊತೆಗಿದ್ದು, ಚರ್ಚೆ ನಡೆಸಿ, ಇಡೀ ಚಿತ್ರಕ್ಕೊಂದು ಸ್ಪಷ್ಟವಾದ ಫ್ರೇಮು ಹಾಕುವಲ್ಲಿ ಪ್ರಧಾನ ಪಾತ್ರ ವಹಿಸೋ ಛಾಯಾಗ್ರಾಹಕರನ್ನು ಇನ್ನೇನು ಚಿತ್ರೀಕರಣ ಚಾಲೂ ಆಗುತ್ತದೆಂಬಷ್ಟರಲ್ಲಿ ಹೊರ ಹಾಕೋ ವಿದ್ಯಮಾನಕ್ಕೆ ಭುವನ್ ಪ್ರಕರಣವೂ ಸೇರಿಕೊಂಡಿದೆ.
ಶ್ರೀಮುರಳಿ ಅಭಿನಯದ ಉಗ್ರಂ ಚಿತ್ರದ ಮೂಲಕ ಛಾಯಾಗ್ರಾಹಕರಾಗಿದ್ದ ಭುವನ್ ಗೌಡ ಆ ಬಳಿಕ ರಥಾವರ ಚಿತ್ರದಲ್ಲಿಯೂ ಶ್ರೀಮುರಳಿಗೆ ಸಾಥ್ ನೀಡಿದ್ದರು. ಭರಾಟೆ ಸಿನಿಮಾದ ಮೂಲಕ ಮೂರನೇ ಬಾರಿ ಈ ಜೋಡಿ ಒಟ್ಟುಗೂಡಿತ್ತು. ಚಿತ್ರೀಕರಣವೂ ಶುರುವಾಗಿ ಒಂದಷ್ಟು ವಾರ ಕಳೆಯುತ್ತಲೇ ಏಕಾಏಕಿ ಭುವನ್ ಗೌಡ ಹೊರ ಬಂದಿದ್ದಾರೆಂದರೆ ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ಕಾಡೋದು ಸಹಜವೇ. ಈ ಬಗ್ಗೆ ಕೆದಕಿದರೆ ನಿರ್ದೇಶಕ ಚೇತನ್ ಮತ್ತು ಭುವನ್ ನಡುವಿನ ಭಿನ್ನಾಭಿಪ್ರಾಯವೇ ಈ ವಿದ್ಯಮಾನಕ್ಕೆ ಮೂಲ ಕಾರಣ ಎಂಬ ಅಂಶವೂ ಜಾಹೀರಾಗುತ್ತದೆ.
ಭುವನ್ ಗೌಡ ಬಗ್ಗೆ ಚಿತ್ರರಂಗದಲ್ಲಿ ಹರಿದಾಡುತ್ತಿರೋ ರಂಗು ರಂಗಾದ ಗಾಸಿಪ್ಪುಗಳೇನೇ ಇದ್ದರೂ ಆತ ಪ್ರತಿಭಾವಂತ ಎಂಬುದರಲ್ಲಿ ಎರಡು ಮಾತಿಲ್ಲ. ಪುಷ್ಪಕ ವಿಮಾನವೂ ಸೇರಿದಂತೆ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಿತ್ರಕ್ಕೂ ಭುವನ್ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಛಾಯಾಗ್ರಹಣದ ವಿಚಾರದಲ್ಲಿ ಬೇರೆ ಭಾಷೆಗಳ ಚಿತ್ರರಂಗವೇ ಕನ್ನಡದತ್ತ ಅಚ್ಚರಿಯಿಂದ ನೋಡುವಂತೆ ಮಾಡಬಲ್ಲ ಛಾತಿಯೂ ಭುವನ್ಗೆ ಇರೋದು ಸುಳ್ಳಲ್ಲ. ಆದರೆ ಅದೇಕೆ ಭುವನ್ ಶ್ರೀಮುರಳಿಯ ಭರಾಟೆಯಿಂದ ಹೊರಬಿದ್ದರೋ? ಭುವನ್ ಬಿಟ್ಟುಬಂದ ಜಾಗಕ್ಕೆ ವಿಲನ್ ಚಿತ್ರದ ಛಾಯಾಗ್ರಾಹಕ ಗಿರಿ ಬಂದು ಕೂತಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.
#
No Comment! Be the first one.