ಕಿಚ್ಚಾ ಸುದೀಪ್ ಬಿಗ್ ಬಾಸ್ ಶೋ ಮುಗಿಯುತ್ತಿದ್ದಂತೆಯೇ ಒಂದರ ಹಿಂದೊಂದರಂತೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಅವರು ಪ್ರಧಾನವಾಗಿ ಗಮನ ನೆಟ್ಟಿರುವುದು ಪೈಲ್ವಾನ್ ಚಿತ್ರದ ಮೇಲೆ. ಬಹು ಭಾಷೆಗಳಲ್ಲಿ ಏಕಕಾಲದಲ್ಲಿಯೇ ಬಿಡುಗಡೆಯಾಗಲಿರೋ ಈ ಸಿನಿಮಾ ಈಗಾಗಲೇ ದೇಶಾಧ್ಯಂತ ಸುದ್ದಿಯಲ್ಲಿದೆ. ಇದೇ ಹೊತ್ತಿನಲ್ಲಿ ಕಿಚ್ಚ ನಟಿಸಲಿರುವ ಬಿಲ್ಲಾರಂಗ ಚಿತ್ರದ ಬಗ್ಗೆ ನಾನಾ ಸುದ್ದಿಗಳು ಹೊರಬೀಳಲಾರಂಭಿಸಿವೆ. ಸುದೀಪ್ ಇದೀಗ ಪೈಲ್ವಾನ್ ಚಿತ್ರದಲ್ಲಿ ನಟಿಸುತ್ತಿದ್ದರೂ ಕೂಡಾ ಅವರ ಅಭಿಮಾನಿಗಳಿಗೆ ಬಿಲ್ಲಾರಂಗ ಭಾಷಾನ ಮೇಲೆ ಅದೆಂಥಾದ್ದೋ ಮೋಹವಿದೆ. ಇಂಥಾ ಅಭಿಮಾನಿಗಳ ಕ್ರೇಜ್ ಅನ್ನು ಮತ್ತಷ್ಟು ಉದ್ದೀಪಿಸುವಂಥಾ ಸುದ್ದಿಯೊಂದು ಇದೀಗ ಜಾಹೀರಾಗಿದೆ. ಅದು ಬಿಲ್ಲಾ ರಂಗ ಭಾಷಾನ ಭಾರೀ ಮೊತ್ತದ ಬಜೆಟ್ ಬಗೆಗಿನದ್ದು!
ಈ ಚಿತ್ರ ಕಿಚ್ಚನ ಹೋಂ ಬ್ಯಾನರಿನಡಿಯಲ್ಲಿಯೇ ನಿರ್ಮಾಣಗೊಳ್ಳಲಿದೆ. ಸುಪ್ರಿಯಾನ್ವಿ ಸಂಸ್ಥೆಯ ನೆರಳಲ್ಲಿ ಈ ಚಿತ್ರ ಬರೋಬ್ಬರಿ ಎಪ್ಪತೈದು ಕೋಟಿ ಬಜೆಟ್ಟಿನಲ್ಲಿ ನಿರ್ಮಾಣಗೊಳ್ಳಲಿದೆಯಂತೆ. ಈ ಮೂಲಕ ನಿರ್ಮಾಣದಲ್ಲಿಯೂ ಸುದೀಪ್ ಹೊಸಾ ದಾಖಲೆಯನ್ನ ಮಾಡ ಹೊರಟಿದ್ದಾರೆ. ಅಲ್ಲಿಗೆ ಈ ಚಿತ್ರ ಕೇವಲ ಕನ್ನಡಕ್ಕೆ ಮಾತ್ರ ಸೀಮಿತವಾಗಿರದೆ, ಬೇರೆ ಭಾಷೆಗಳಲ್ಲಿಯೂ ನಿರ್ಮಾಣಗೊಳ್ಳಲಿದೆ ಎಂಬ ಸ್ಪಷ್ಟ ಸೂಚನೆ ಸಿಕ್ಕಿ ಹೋಗಿದೆ. ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ರಾಜರಥ ಚಿತ್ರದ ಸೋಲಿನ ಏಟಿನಿಂದ ಚೇತರಿಸಿಕೊಂಡಿರೋ ಅನೂಪ್ ಮತ್ತೊಂದು ಮಹಾ ಗೆಲುವಿನ ಮಹದಾಸೆಯಿಂದಲೇ ಬಿಲ್ಲಾ ರಂಗ ಭಾಷಾ ಚಿತ್ರಕ್ಕಾಗಿ ತಯಾರಿ ಆರಂಭಿಸಿದ್ದಾರೆ. ಕಿಚ್ಚಾ ಸುದೀಪ್ ಈಗ ಪೈಲ್ವಾನ್ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅದಾದ ನಂತರ ಕೋಟಿಗೊಬ್ಬ ೩ ಚಿತ್ರೀಕರಣಕ್ಕಿಳಿಯಲಿದ್ದಾರೆ. ಅದಾದ ನಂತರ ಬಿಲ್ಲಾ ರಂಗ ಭಾಷಾ ಚಿತ್ರಕ್ಕೆ ಚಾಲನೆ ಸಿಗಲಿದೆ.
No Comment! Be the first one.