ಇಡೀ ಜಗತ್ತು ಕರೋನಾ ಅನ್ನೋ ಕೊಂದು ಬಿಸಾಡುವ ವೈರಸ್ಸಿನ ಭಯಕ್ಕೆ ಬಿದ್ದಿದೆ. ಅದರ ಎಫೆಕ್ಟು ನೇರವಾಗಿ ಕನ್ನಡ ಸಿನಿಮಾರಂಗಕ್ಕೂ ಬಡಿದಿದೆ. ಕಳೆದ ಎರಡು ವಾರಗಳಿಂದ ಸಾಕಷ್ಟು ಸಿನಿಮಾಗಳು ಅಂದುಕೊಂಡಂತೆ ಚಿತ್ರೀಕರಣ ನಡೆಸಲು ಸಾಧ್ಯವಾಗದೇ ಇರುವುದು ಎಲ್ಲರಿಗೂ ಗೊತ್ತು. ಈಗ ಬಿಡುಗಡೆಯಾಗಬೇಕಿರುವ ಚಿತ್ರಗಳಿಗೂ ಸಮಸ್ಯೆ ಎದುರಾಗಿದೆ. ಸದ್ಯ ವೈರಸ್ ಭೀತಿಯಿಂದ ಶಾಲೆಗಳಿಗೂ ರಜೆ ಘೋಷಣೆಯಾಗಿದೆಯಲ್ಲಾ? ರಜೆ ಸಿಕ್ಕಿದ್ದೇ ಛಾನ್ಸು ಎಂದು ಎಲ್ಲಿ ಪೋಷಕರು ಮಕ್ಕಳನ್ನು ಕರೆದುಕೊಂಡು ಮಾಲು, ಥಿಯೇಟರಿಗೆ ಹೋಗುತ್ತಾರೋ ಅಂತಾ ಸ್ವತಃ ಶಾಲೆಯ ಆಡಳಿತಮಂಡಳಿಗಳು ‘ಥಿಯೇಟರು ಸೇರಿದಂತೆ ಹೆಚ್ಚು ಜನ ಸೇರುವ ಸ್ಥಳಗಳಿಗೆ ಮಕ್ಕಳನ್ನು ಕರೆದುಕೊಂಡುಹೋಗಬೇಡಿ. ಆ ಮೂಲಕವೂ ವೈರಸ್ ಹರಡುವ ಸಾಧ್ಯತೆ ಇದೆ’ ಎಂದು ನೋಟೀಸು ಹಂಚುತ್ತಿದ್ದಾರೆ. ಹೀಗಾಗಿ ಮನೆ ಮಂದಿ ಧೈರ್ಯವಾಗಿ ಥೇಟರಿಗೆ ಬರೋದೂ ಡೌಟು. ಹಿರಿಯ ನಿರ್ಮಾಪಕ ಉಮೇಶ್ ಬಣಕಾರ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಜನ ಥಿಯೇಟರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣದಿಂದ ಬಿಡುಗಡೆಯಾಗಲು ತಯಾರಾಗುತ್ತಿರುವ ಸಿನಿಮಾಗಳನ್ನು ಸದ್ಯಕ್ಕೆ ಮುಂದೂಡುವಂತೆ ತಿಳಿಸಲು ವಿನಂತಿಸಿದ್ದಾರಂತೆ.
ಪರಿಸ್ಥಿತಿ ಹೀಗಿರುವಾಗ ಇದೇ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿರುವ ಸಿನಿಮಾಗಳ ಬಿಡುಗಡೆ ಮುಂದೂಡುವ ಸಾಧ್ಯತೆ ಎದ್ದು ಕಾಣುತ್ತಿದೆ. ಇದೇ ಹನ್ನೆರಡಕ್ಕೆ ತೆರೆಗೆ ಬರಬೇಕಿದ್ದ ಕುಷ್ಕ ಸಿನಿಮಾ ಸ್ವಲ್ಪ ಮುಂದಕ್ಕೆ ಹೋಗಿದೆ. ಇನ್ನು ಇದೇ ತಿಂಗಳ ೨೭ಕ್ಕೆ ಟಕ್ಕರ್ ಮತ್ತು ಸಲಗ ಚಿತ್ರಗಳೂ ತೆರೆಗೆ ಬರಲು ಸಜ್ಜಾಗುತ್ತಿವೆ. ನಾಡಿದ್ದು ೧೨ಕ್ಕೆ ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ರಿಲೀಸಾಗುತ್ತಿದೆ. ರವಿಚಂದ್ರನ್ ಮಗ ಮನು ರಂಜನ್ ನಟನೆಯ ಪ್ರಾರಂಭ ಮತ್ತು ಕಿರುತೆರೆ ಹುಡುಗ ರಕ್ಷಿತ್ ಅಭಿನಯದ ನರಗುಂದ ಬಂಡಾಯ ಚಿತ್ರಗಳೂ ಇದೇ ತಿಂಗಳಲ್ಲಿ ಬರುತ್ತಿವೆ.
ಕಳೆದ ತಿಂಗಳು ವಾರಕ್ಕೆ ಹತ್ತು ಹನ್ನೆರಡು ಸಿನಿಮಾಗಳು ರಿಲೀಸಾಗಿದ್ದವು. ಆದರೆ ಕನರೋನಾ ಭೀತಿಗೆ ಮುಂಬರುವ ದಿನಗಳಲ್ಲಿ ಸಿನಿಮಾ ಬಿಡುಗಡೆ ಕಡಿಮೆಯಾಗುವುದು ಗ್ಯಾರೆಂಟಿ. ಒಂದು ವೇಳೆ ಬಿಡುಗಡೆಯಾಗುವ ಸಿನಿಮಾಗಳ ಸಂಖ್ಯೆ ಕಡಿಮೆಯಾದರೆ, ಇರುವ ಕೆಲವೇ ಸಿನಿಮಾಗಳನ್ನು ಜನ ನೋಡಲೇಬೇಕಿರುವ ಪರಿಸ್ಥಿತಿ ಎದುರಾಗುತ್ತದೆ. ಎಂಥದ್ದೇ ಪ್ರಾಣ ಭಯವಿದ್ದರೂ ಜನ ಮನರಂಜನೆಯಿಲ್ಲದೆ ಬದುಕಲಾರರು. ಹೀಗಾಗಿ ನಿರೀಕ್ಷಿತ ಸಿನಿಮಾಗಳಾದ ಶಿವಾರ್ಜುನ, ಕುಷ್ಕ, ಸಲಗ, ಟಕ್ಕರ್ ಸಿನಿಮಾಗಳು ಧೈರ್ಯ ಮಾಡಿ ರಿಲೀಸ್ ಮಾಡಿದರೂ ಹೆಚ್ಚು ದಿನ ಥಿಯೇಟರಿನಲ್ಲಿ ಉಳಿಯಲಿವೆ. ಕರೋನಾ ಕಾಟದಿಂದ ಬಿಡುಗಡೆಯಾಗುವ ಸಿನಿಮಾಗಳ ಸಂಖ್ಯೆ ಕಡಿಮೆಯಾಗುವುದಂತೂ ನಿಜ. ಇದು ಉಳಿದ ಸಿನಿಮಾಗಳಿಗೆ ವರವಾ? ಶಾಪವಾ? ಅನ್ನೋದು ಒಂದೆರಡು ವಾರಗಳಲ್ಲಿ ಕ್ಲಿಯರ್ರಾಗಿ ಗೊತ್ತಾಗಲಿದೆ!
ಇತ್ತ ಕರೋನಾ ಕಂಟಕದಿಂದ ಸಿನಿಮಾ ನಿರ್ಮಾಪಕರು ಕಂಗಾಲಾಗಿರುವ ಜೊತೆಜೊತೆಗೇ ಪೈರಸಿ ಭಯ ಕೂಡಾ ಹೆಚ್ಚಾಗುತ್ತಿದೆ. ವೈರಸ್ ಭಯದಿಂದ ಜನ ಕಂಕಾಲಾಗಿರುವುದನ್ನೇ ಬಂಡವಾಳ ಮಾಡಿಕೊಂಡ ಪೈರಸಿ ಪೀಡೆಗಳು ಇದೇ ಹೊತ್ತಿನಲ್ಲಿ ಹೊಸ ಸಿನಿಮಾಗಳನ್ನು ಆನ್’ಲೈನಿಗೆ ಬಿಡುವ ದುಷ್ಟಪ್ರಯತ್ನ ಮಾಡುತ್ತಿದ್ದಾರೆ. ಹೇಗೂ ಜನ ಮನೆಬಿಟ್ಟು ಆಚೆ ಬರೋದಿಲ್ಲ, ಈ ಸಂದರ್ಭದಲ್ಲಿ ಪೈರಸಿ ಸಿನಿಮಾಗಳನ್ನು ಹರಿಯಬಿಟ್ಟರೆ ಲಾಭ ಮಾಡಬಹುದು ಅನ್ನೋದು ಪೈರಸಿ ಕ್ರಿಮಿನಲ್ಲುಗಳ ಪ್ಲಾನಾಗಿದೆ. ಈಗಾಗಲೇ ಪುನೀತ್ ರಾಜ್ ಕುಮಾರ್ ನಿರ್ಮಾಣದ ಮಾಯಾಬಜಾರ್ ಸಿನಿಮಾ ಪೈರಸಿ ಭೂತಕ್ಕೆ ಆಹಾರವಾಗಿರುವುದು ಸದ್ಯದ ನಿದರ್ಶನ.