ಹುಡುಗಿಯನ್ನು ಬಲವಂತದಿಂದ ಎಳೆದೊಯ್ದು ಮದುವೆಯಾದ ಪ್ರಕರಣಗಳು ಸಾಕಷ್ಟು ಸಿಗುತ್ತವೆ. ಆದರೆ, ಹುಡುಗಿಯೇ ಹುಡುಗನನ್ನು ಎತ್ತಾಕೊಂಡು ಹೋಗಿ, ಹಠ ಮಾಡಿ, ಬೆದರಿಸಿ ತಾಳಿ ಕಟ್ಟಿಸಿಕೊಂಡಳು ಎನ್ನುವ ವಿಚಿತ್ರ ಸನ್ನಿವೇಶವೊಂದು ಸೃಷ್ಟಿಯಾಗಿದೆ!
ಹೌದು! ನಿನ್ನೆ ನಟಿ, ಬರಹಗಾರ್ತಿ, ಬಿಗ್ ಬಾಸ್ ಸ್ಪರ್ಧಿ ಮುಂತಾದ ಕಾರಣಗಳಿಗೆ ಫೇಮಸ್ ಆಗಿರುವ ʻಚೈತ್ರಾ ಕೊಟೂರು ಸರಳವಾಗಿ, ಕುಟುಂಬದ ಸದಸ್ಯರ ಸಮಕ್ಷಮದಲ್ಲಿ ಮದುವೆಯಾದರುʼ ಎನ್ನುವ ಸುದ್ದಿ ಹರಡಿಕೊಂಡಿತು. ಅರರೇ… ಕೂತರೂ ನಿಂತರೂ ಪ್ರಚಾರಕ್ಕೆ ಹಪಹಪಿಸುವ ಈ ಹುಡುಗಿ ಇಷ್ಟೊಂದು ಸಿಂಪಲ್ಲಾಗಿ ಮದುವೆಯಾದಳೇ ಅನ್ನೋ ಪ್ರಶ್ನೆ ಮೂಡಿತು. ಮದುವೆಯ ಫೋಟೋಗಳನ್ನು ನೋಡುತ್ತಿದ್ದಂತೇ ಇದು ಸರಳ ಮದುವೆಯಲ್ಲ, ಇದರ ಹಿಂದೆ ಏನೋ ಜಟಾಪಟಿ ಇದೆ ಎನ್ನುವ ಅನುಮಾನ ಮೂಡಿತ್ತು. ನೆಟ್ಟಗೆ ತಲೆಯನ್ನೂ ಬಾಚದೇ ಕಷ್ಟಪಟ್ಟು ಸ್ಮೈಲು ಕೊಟ್ಟಿದ್ದ ಚೈತ್ರಾ, ಯಾವುದೋ ಸಂಕಟಕ್ಕೆ ಸಿಲುಕಿದವನಂತೆ ಮುಖ ಗಂಟಿಕ್ಕಿಕೊಂಡಿದ್ದ ಹುಡುಗ. ಕಡೇ ಪಕ್ಷ ಇಬ್ಬರೂ ಮದುವೆಗೆ ಎನ್ನಿಸಿಕೊಳ್ಳುವಂತಾ ಬಟ್ಟೆಯನ್ನೂ ತೊಡದೆ ಉಟ್ಟಬಟ್ಟೆಯಲ್ಲೇ ಹಾರ ತಗುಲಿಸಿಕೊಂಡು ಫೋಟೋ ತೆಗೆಸಿಕೊಂಡಿದ್ದರು.
ಮಹೇಶ್ ಸುಖಧರೆ, ಯೋಗರಾಜ್ ಭಟ್ ಅವರ ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ನಂತರ ಸೂಜಿದಾರ ಸಿನಿಮಾದಲ್ಲಿ ಸಣ್ಣ ಪಾತ್ರ ಮತ್ತು ಹರಿಪ್ರಿಯಾ ಜೊತೆಗಿನ ದೊಡ್ಡ ವಿವಾದದಿಂದ ಚಾಲ್ತಿಗೆ ಬಂದ ಹುಡುಗಿ ಚೈತ್ರಾ. ಈಕೆಯನ್ನು ಹತ್ತಿರದಿಂದ ಬಲ್ಲವರು ನಿಜಕ್ಕೂ ಆಕೆ ಪ್ರತಿಭಾವಂತೆ, ಪದ್ಯ ಗದ್ಯಗಳೆರಡನ್ನೂ ಅಚ್ಚುಕಟ್ಟಾಗಿ ಬರೀತಾಳೆ. ಚೆಂದದ ನಿರೂಪಣೆಯ ಕಥೆಗಳನ್ನೂ ಬರೆಯುತ್ತಾಳೆ. ನಟನೆಯಲ್ಲೂ ಕೂಡಾ ಅದೇ ಟ್ಯಾಲೆಂಟು… ಎಂದು ಕೊಂಡಾಡುತ್ತಾರೆ. ಆದರೆ ತನ್ನ ಪ್ರತಿಭೆಯನ್ನು ಒಂದು ಕಡೆ ಫೋಕಸ್ ಮಾಡದೆ ಎಲ್ಲ ಕಡೆ ತಲೆ ತೂರಿಸೋದರಿಂದ ಬಹುಶಃ ಈಕೆ ಹೇಳಿಕೊಳ್ಳುವ ಸಾಧನೆ ಮಾಡಲು ಸಾಧ್ಯವಾಗಿಲ್ಲವೇನೋ ಎನ್ನುವ ಅಭಿಪ್ರಾಯ ಆಕೆಯ ಸುತ್ತಲಿನವರದ್ದು. ಈ ನಡುವೆ ಈಗ ಮದುವೆ ವಿವಾದವೂ ಈ ಹುಡುಗಿಯ ನೆತ್ತಿಗೆ ಸುತ್ತಿಕೊಂಡಿದೆ.
ಚೈತ್ರ ಮದುವೆ ವಿವಾದದ ಹಿಂದಿನ ಅಸಲಿ ವಿಚಾರಗಳೇನು? ಯಾಕೆ ಹೀಗೆ ಊಹಾಪೋಹಗಳು ಹರಿದಾಡುತ್ತಿವೆ? ಅಂತಾ ಖುದ್ದು ಚೈತ್ರಾಳನ್ನೇ ಸಂಪರ್ಕಿಸಿದಾಗ ಆಕೆ ಹೇಳಿದ್ದಿಷ್ಟು.
ನನ್ನ ಫ್ರೆಂಡ್ ಒಬ್ಬರಿಂದ ಪರಿಚಯವಾದ ಹುಡುಗ ನಾಗಾರ್ಜುನ್. ಪರಿಚಯ-ಸ್ನೇಹ ಪ್ರೀತಿಗೆ ತಿರುಗಿತು. ಇಬ್ಬರೂ ಪರಸ್ಪರ ಲವ್ ಮಾಡಿದೆವು. ಒಟ್ಟಿಗೇ ಓಡಾಡಿದೆವು. ನಾನು ಆತನ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲಬರೇಟ್ ಮಾಡಿದೆ. ಇಬ್ಬರೂ ಮದುವೆಯಾಗೋಣ ಅಂತಾ ಡಿಸೈಡ್ ಮಾಡಿದೆವು. ಅವರ ಮನೆಯವರು ವಿರೋಧ ವ್ಯಕ್ತಪಡಿಸಿದರು. ನೀನು ಸಿನಿಮಾದವಳು, ಮೂರೂ ಬಿಟ್ಟವಳು ನಿನ್ನ ಜೊತೆ ನನ್ನ ಮಗನ ಮದುವೆ ಮಾಡೋ ದರ್ದು ನಮಗಿಲ್ಲ ಅಂತೆಲ್ಲಾ ಅವರ ಮನೆಯವರು ವಿರೋಧಿಸಿದರು. ಎಲ್ಲಿ ಅವನ ಮನೆಯವರು ಬೇರೆ ಮದುವೆ ಮಾಡಿಬಿಡುತ್ತಾರೋ ಅನ್ನೋ ಆತಂಕ ಇತ್ತು. ಜೊತೆಯಲ್ಲಿ ಓಡಾಡಿರ್ತೀವಿ, ಒಬ್ಬರನ್ನೊಬ್ಬರು ನಂಬಿರ್ತೀವಿ. ಸಹಜವಾಗೇ ಎಲ್ಲಿ ಬಿಟ್ಟು ಹೋಗುತ್ತಾರೋ ಅಂತಾ ಆತಂಕ ಇರುತ್ತಲ್ವಾ?
ಕಟ್ಟಿ ಹಾಕಿ, ಕೂಡಿ ಹಾಕಿ ತಾಳಿ ಕಟ್ಟಿಸಿಕೊಳ್ಳುವಂಥದ್ದೇನೂ ಇಲ್ಲ. ಆತ ಬೆಂಗಳೂರಿನ ನಾಗರಬಾವಿಯಲ್ಲಿ ರೂಂ ಮಾಡಿಕೊಂಡಿದ್ದಾನೆ. ಅವರ ಮನೆ ಓನರ್ ನ ಕೇಳಿದರೂ ಇದರ ಬಗ್ಗೆ ಗೊತ್ತಾಗುತ್ತದೆ. ಅವನ ಬಳಿ ಮೊಬೈಲ್ ಇತ್ತಲ್ವಾ? ಕಾಲ್ ಡಿಟೇಲ್ಸ್, ಲೊಕೇಷನ್ ಡಿಟೇಲ್ಸ್ ತೆಗೆಸಿದರೆ ಗೊತ್ತಾಗತ್ತೆ ಅಲ್ಲವಾ? ನೆನ್ನೆ ಮದುವೆಯಾಗಲೇಬೇಕು ಅಂತಾ ನಾನು ಕೇಳಿದಾಗ ʻಆಯ್ತು, ಕೂತು ಮಾತಾಡೋಣ ಅಂತಾ ಬಂದ. ಮದುವೆಯಾಗೋ ತೀರ್ಮಾನವಾಯ್ತು. ತಾಳಿ ಕಟ್ಟಿದ… ಅವನೇ ಅವರ ಮನೆಯವರಿಗೆ ಫೋನ್ ಮಾಡಿ ವಿಚಾರ ತಿಳಿಸಿದ. ಅವಾಗ ಅವರ ಮನೆಯವರು ಬಂದು ಅವನ ಮೈಂಡ್ ವಾಷ್ ಮಾಡಿದರು. ನಾಗಾರ್ಜುನ್ ಮೊದಲಿನಿಂದಲೂ ಹಾಗೇ ಇದ್ದ. ಮದುವೆಯಾಗೋಣ ಅಂದಾಗಲೆಲ್ಲಾ ಒಮ್ಮೆ ಓಕೆ ಅನ್ನುತ್ತಿದ್ದವನು, ಮತ್ತೊಮ್ಮೆ ಬೇಡ ಅನ್ನುತ್ತಿದ್ದ. ಬಹುಶಃ ನನ್ನನ್ನು ಬಳಸಿಕೊಂಡು ಬಿಡಬೇಕು ಎನ್ನುವ ಉದ್ದೇಶ ಆತನ ಮನಸ್ಸಿನಲ್ಲಿ ಇತ್ತೇನೋ ಗೊತ್ತಿಲ್ಲ. ಹೀಗಾಗಿ ಈಗ ಉಲ್ಟಾ ಹೊಡೆಯುತ್ತಿದ್ದಾನೆ.
ಅವರ ತಂದೆ ಶಿವರಾಂ ನನ್ನ ಮಗನ ತಂಟೆಗೆ ಬಂದರೆ ನಿನ್ನನ್ನು ಸಾಯಿಸಿಬಿಡ್ತೀನಿ ಅಂತಾ ಮೊದಲೇ ಬೆದರಿಕೆ ಹಾಕಿದ್ದರು. ಈ ಕಾರಣಕ್ಕೆ ನಾನು ಸಂಘಟನೆಗಳವರನ್ನು ಕರೆಸಿಕೊಂಡು ಮದುವೆಯಾದೆ. ಅವರ ಅಮ್ಮ ಶಾಂತ ಅಂತಾ. ಅವರ ಅಕ್ಕ ಶ್ವೇತ ಅಂತೂ ನನಗೆ ಅನ್ನಬಾರದ್ದನ್ನೆಲ್ಲಾ ಅಂದಿದ್ದಾರೆ. ನೀನು ಸಿನಿಮಾದವಳು, ಮೂರೂ ಬಿಟ್ಟವಳು, ನಡತೆಗೆಟ್ಟವಳು. ನಮ್ಮ ಹತ್ರ ಅಷ್ಟೊಂದು ಆಸ್ತಿಯಿದೆ. ಇಷ್ಟೊಂದು ಹಣವಿದೆ. ನಿನ್ನ ಹತ್ರ ಏನಿದೆ? ನಿನ್ನನ್ನು ನಮ್ಮ ಮನೆ ಸೊಸೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಅಂತಾ ಸಾಕಷ್ಟು ನಿಂದಿಸಿದ್ದಾರೆ.
ನಿನ್ನೆ ಮದುವೆಯ ನಂತರ ನಮ್ಮ ಮನೆ ಮುಂದೆ ಬಂದು ಸಿಕ್ಕಾಪಟ್ಟೆ ಗಲಾಟೆ ಮಾಡಿದ್ದಾರೆ. ಹೊಡೆದಾಟದ ಮಟ್ಟಕ್ಕೂ ಹೋಗಿ ನನ್ನ ಅಣ್ಣನ ಕೈಗೆ ಗಾಯಗಳಾಗಿವೆ. ಇಷ್ಟೆಲ್ಲಾ ಆದ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಡಲು ನಾನೇ ಖುದ್ದು ಮುಂದಾದೆ. ಕಡೆಗೆ ಅವರು ಬಂದು ಎರಡು ದಿನ ಸಮಯ ಕೊಡಿ. ಫ್ಯಾಮಿಲಿ ಫ್ಯಾಮಿಲಿ ಕೂತು ಮಾತಾಡಿ ಬಗೆಹರಿಸಿಕೊಳ್ಳೋಣ ಅಂದರು. ಈಗ ನೋಡಿದರೆ ನಾನೇ ಕಿಡ್ನಾಪ್ ಮಾಡಿದೆ ಅಂತಾ ಸುದ್ದಿ ಹಬ್ಬಿಸುತ್ತಿದ್ದಾರೆ. ಓಳ್ಳೇ ರೀತಿ ಮಾತಾಡಿಕೊಳ್ಳೋಣ ಅಂತಾ ನಾನು ಸುಮ್ಮನಾಗಿದ್ದರೆ ಬೆನ್ನಿಗೇ ಹೀಗೆಲ್ಲಾ ಸುದ್ದಿ ಬರುತ್ತಿದೆ… ಏನು ಮಾಡಬೇಕು ಅನ್ನೋ ಗೊಂದಲದಲ್ಲಿದ್ದೇನೆ.
ಮೇಲ್ನೋಟಕ್ಕೆ ನೋಡಿದರೆ ಈ ಮದುವೆ ವಿಚಾರ ಇಲ್ಲಿಗೇ ಮುಗಿಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಸಿನಿಮಾ, ಬಿಗ್ ಬಾಸು, ನಾಟಕಕ್ಕೂ ನಿಜ ಬದುಕಿಗೂ ತುಂಬಾ ವ್ಯತ್ಯಾಸವಿದೆ. ಆ ಎಲ್ಲ ಸೂಕ್ಷ್ಮತೆಗಳನ್ನು ಅರಿತು ಚೈತ್ರ ಹೆಜ್ಜೆ ಇಡಲಿ.. ಈ ಹುಡುಗಿಯ ಬದುಕು ಬಂಗಾರವಾಗಲಿ ಅಂತ ಹಾರೈಸಬಹುದಷ್ಟೇ…