ಅದಿತಿ ಅಭಿನಯದ ತಿಂಗಳಿಗೊಂದರಂತೆ ಬಿಡುಗಡೆಯಾಗುತ್ತಿವೆ. 15 ದಿನಗಳ ಹಿಂದಷ್ಟೇ ಅದಿತಿ ಅಭಿನಯದ ‘ತೋತಾಪುರಿ’ ಚಿತ್ರವು ಬಿಡುಗಡೆಯಾಗಿತ್ತು. ಈಗ ‘ಚಾಂಪಿಯನ್’ ಜೊತೆಗೆ ಮತ್ತೆ ಬರುತ್ತಿದ್ದಾರೆ ಅದಿತಿ. ಈ ಚಿತ್ರದಲ್ಲಿ ಅವರು ಸಚಿನ್ಗೆ ನಾಯಕಿಯಾಗಿ ನಟಿಸಿದ್ದು, ಅವನ ಜೀವನದಲ್ಲಿ ಪ್ರೀತಿಯ ಗಾಳಿ ಬೀಸುವ ಯುವತಿಯಾಗಿ ಕಾಣಿಸಿಕೊಂಡಿದ್ದಾರಂತೆ. ಈ ಚಿತ್ರದ ಬಗ್ಗೆ ವಿಶೇಷ ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಅದಿತಿ, ಚಿತ್ರದ ಬಗ್ಗೆ ಥ್ರಿಲ್ ಆಗಿ ಮಾತನಾಡುತ್ತಾರೆ.
‘ಎಲ್ಲರಿಗೂ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಆಸೆ ಇರುತ್ತದೆ. ಅಂಥವರಿಗೆ ಸ್ಫೂರ್ತಿ ತುಂಬುವ ಚಿತ್ರ ಇದು. ಇಲ್ಲೊಂದು ಅದ್ಭುತವಾದ ಕಥೆ ಇದೆ. ಇಲ್ಲಿ ಕಥೆಯೇ ಜೀವಾಳ. ಇಲ್ಲಿ ಸಚಿನ್ ಅಥ್ಲೀಟ್ ಆಗಿ ಕಾಣಿಸಿಕೊಂಡಿದ್ದಾರೆ. ಜೀವನದಲ್ಲಿ ಒಂದು ಕಡೆ ಸಾಧನೆ, ಫ್ಯಾಮಿಲಿಯ ಜೊತೆಗೆ ಲವ್ ಸಹ ಇನ್ನೊಂದು ಟ್ರಾಕ್ನಲ್ಲಿ ಹೋಗುತ್ತಿರುತ್ತದೆ. ಇವರ ಬದುಕಿನಲ್ಲಿ ನಾನು ಪ್ರೀತಿಯಾಗಿ ಬರುತ್ತೇನೆ ಎನ್ನುತ್ತಾರೆ’ ಅದಿತಿ.
ಅಥ್ಲೀಟ್ ಪಾತ್ರ ನಿಭಾಯಿಸುವುದು ಅಷ್ಟು ಸುಲಭವಲ್ಲ ಎನ್ನುವ ಅದಿತಿ, ‘ಕಲಾವಿದರಿಗೆ ಅಂಥದ್ದೊಂದು ಚಾಲೆಂಜಿಂಗ್ ಪಾತ್ರದಲ್ಲಿ ನಟಿಸುವ ಆಸೆ ಇರುತ್ತದೆ. ಅಥ್ಲೀಟ್ ಪಾತ್ರ ನಿಭಾಯಿಸುವುದು ಅಷ್ಟು ಸುಲಭವಲ್ಲ. ನಾನು ಕಾಲೇಜಿನಲ್ಲಿ ಹೈಪರ್ ಆಕ್ಟೀವ್ ಆಗಿದ್ದೆ. ಕ್ರೀಡೆ ಅಂದರೆ ಬಹಳ ಆಸಕ್ತಿ. ಆದರೆ, ಶಿಕ್ಷಣದ ಬಗ್ಗೆ ಜಾಸ್ತಿ ಗಮನಹರಿಸಲು ಮನೆಯಲ್ಲಿ ಹೇಳುತ್ತಿದ್ದರು. ಆಟ ಆಡೋಕೆ ಬಿಡುತ್ತಿದ್ದರು. ಆದರೆ, ಆ ಲೈನ್ನಲ್ಲಿ ಹೇಗೆ ಮುಂದುವರೆಯುವುದು ನನಗೆ ಗೊತ್ತಿರಲಿಲ್ಲ. ಹಾಗಾಗಿ, ನಾನು ಕ್ರೀಡೆಯಲ್ಲಿ ಮುಂದುವರೆಯೋಕೆ ಸಾಧ್ಯವಾಗಲಿಲ್ಲ’ ಎನ್ನುತ್ತಾರೆ ಅದಿತಿ.
ಇನ್ನು, ಚಿತ್ರದ ನಾಯಕ ಸಚಿನ್ ಚಿತ್ರರಂಗಕ್ಕೆ ಹೊಸಬರು. ಅದಿತಿ ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ನಟಿಸಿದವರು. ಹೀಗಿರುವಾಗ ಸಚಿನ್ ಅವರ ಜೊತೆಗೆ ನಟಿಸಿದ್ದು ಹೇಗಿತ್ತು? ಅವರಿಗೆ ಏನೆಲ್ಲಾ ಟಿಪ್ಸ್ ಕೊಟ್ಟಿರಿ? ಎಂದರೆ ನಾಚಿಕೊಳ್ಳುತ್ತಾರೆ ಅದಿತಿ. ‘ಎಲ್ಲರಿಗೂ ಅವರದ್ದೇ ಆದ ಶೈಲಿ ಇರುತ್ತದೆ. ಸಲಹೆ ಕೊಡುವುದಕ್ಕೂ, ಹೇಳಿಕೊಡುವುದಕ್ಕೂ ವ್ಯತ್ಯಾಸ ಇದೆ. ಒಂದಿಷ್ಟು ಸಲಹೆ ಕೊಟ್ಟಿರಬಹುದು. ಬಿಟ್ಟರೆ ಮಿಕ್ಕಂತೆ ಅವರೇ ಚೆನ್ನಾಗಿ ಮಾಡಿದ್ದಾರೆ’ ಎಂದು ಖುಷಿಯಾಗುತ್ತಾರೆ ಅದಿತಿ.
ಈ ಹಾಡಿನ ಚಿತ್ರೀಕರಣಕ್ಕೆ ಅವರು ದುಬೈಗೆ ಹೋಗಿದ್ದೂ ಇದೆ. ಹಾಡುಗಳ ಬಗ್ಗೆ ಮಾತನಾಡುವ ಅವರು, ‘ಚಿತ್ರದಲ್ಲಿ ಒಂದೊಂದು ಹಾಡಿಗೂ ಒಬ್ಬೊಬ್ಬ ನೃತ್ಯ ನಿರ್ದೇಶಕರಿದ್ದಾರೆ. ನನ್ನ ಹಾಡಿಗೆ ಧನು ಮಾಸ್ಟರ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ದುಬೈನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಬಹಳ ಸುಂದರವಾದ ಲೊಕೇಶನ್ಗಳು, ಕಾಸ್ಟೂಮ್ಗಳು ಸಿಕ್ಕಿವೆ. ಅದ್ಭುತವಾದ ಹಾಡು. ನನಗೆ ಬಹಳ ಇಷ್ಟವಾದ ಹಾಡು ಅದು. ಜತೆಗೆ ಇನ್ನೊಂದು ಇನ್ಸ್ಪಿರೇಷನ್ ಹಾಡು ಇದೆ. ನಾಯಕ ಸಚಿನ್ ತಯಾರಿ ನಡೆಸುವ ಹಾಡು ಅದು. ಆ ಹಾಡು ಸಹ ನನಗೆ ಬಹಳ ಇಷ್ಟ ಆಯ್ತು’ ಎಂದು ಹೇಳಿಕೊಳ್ಳುತ್ತಾರೆ ಅದಿತಿ.
ಶಿವಾನಂದ್ ನೀಲಣ್ಣನವರ್ ನಿರ್ಮಿಸಿರುವ ‘ಚಾಂಪಿಯನ್’ ಚಿತ್ರವನ್ನು ದಿವಂಗತ ಶಾಹುರಾಜ್ ಶಿಂಧೆ ನಿರ್ದೇಶಿಸಿದ್ದು, ಚಿತ್ರದಲ್ಲಿ ಸಚಿನ್, ಅದಿತಿ, ದೇವರಾಜ್, ಸುಮನ್, ಅವಿನಾಶ್, ಚಿಕ್ಕಣ್ಣ ಮುಂತಾದವರು ನಟಿಸಿದ್ದಾರೆ.
No Comment! Be the first one.