ಸಚಿನ್ ಧನಪಾಲ್ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ ಚಿತ್ರ ‘ಚಾಂಪಿಯನ್’ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದೊಂದು ಕ್ರೀಡಾ ಚಿತ್ರವಾಗಿದ್ದು, ಅಥ್ಲೀಟ್ ಒಬ್ಬನ ಜೀವನದ ಕುರಿತಾಗಿ ಈ ಚಿತ್ರ ಸಾಗುತ್ತದಂತೆ. ಈ ಚಿತ್ರದಲ್ಲಿ ಅಥ್ಲೀಟ್ ಆಗಿ ಸಚಿನ್ ನಟಿಸಿದ್ದಾರೆ.
ಚಿತ್ರದಲ್ಲಿ ಹೀರೋ ಆಗಿ ನಟಿಸಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ಸಚಿನ್ಗೆ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಇದ್ದರೂ, ಅದಕ್ಕಿಂತ ಹೆಚ್ಚಾಗಿ ಆರ್ಮಿಗೆ ಸೇರಿ ದೇಶಸೇವೆ ಮಾಡಬೇಕು ಎಂದು ಮನಸ್ಸಿತ್ತಂತೆ. ಅದು ಸಾಧ್ಯವಾಗದಿದ್ದರಿಂದ, ಅವರು ಈ ಕಡೆ ಬಂದಿದ್ದಾರೆ.
ಈ ಕುರಿತು ಮಾತನಾಡುವ ಅವರು, ‘ಕಾಲೇಜ್ ಸಮಯದಲ್ಲಿ ಸಿನಿಮಾ ನೋಡುವಾಗ ಪ್ರತಿಯೊಬ್ಬರಿಗೂ ಮುಂದೊಂದು ದಿನ ತಾನು ಸಿನಿಮಾನದಲ್ಲಿ ನಟಿಸಬೇಕು ಅಂತನಿಸುತ್ತದೆ. ಆದರೆ, ನಮ್ಮ ಕುಟುಂಬದಲ್ಲಿ ಎಲ್ಲರೂ ಆರ್ಮಿ ಹಿನ್ನೆಲೆಯವರು. ತಂದೆ, ಸಹೋದರ ಎಲ್ಲರಿಗೂ ಆರ್ಮಿಯವರೇ. ನನಗೆ ರೋಲ್ ಮಾಡಲ್ ಎಂದರೆ ನನ್ನ ತಂದೆ. ಅವರು ಯೂನಿಫಾರ್ಮ್ ಹಾಕಿಕೊಂಡಿದ್ದು ನೋಡಿದಾಗಲೆಲ್ಲ, ನನಗೂ ಆರ್ಮಿ ಆಫೀಸರ್ ಆಗಬೇಕು ಎಂಬ ಆಸೆ. ಆ ಯೂನಿಫಾರ್ಮ್ ಎಂದರೆ ಕ್ರೇಜ್. ಅದರಲ್ಲೊಂದು ಭಾವನೆ ಇದೆ. ನಮ್ಮ ತಂದೆ ನೋಡಿ ನನಗೂ ಆರ್ಮಿ ಸೇರಬೇಕು ಎಂಬ ಆಸೆ ಇತ್ತು. ನಾನು ಮೂಲತಃ ಬೆಳಗಾವಿಯವನು. ನನಗೆ ಸಿನಿಮಾ ಬ್ಯಾಕ್ಗ್ರೌಂಡ್ ಇರಲಿಲ್ಲ. ಬೆಂಗಳೂರು ಮತ್ತು ಚಿತ್ರರಂಗ ಎರಡೂ ದೂರ. ಹಾಗಾಗಿ, ನಾನು ಸಿನಿಮಾ ಬಗ್ಗೆ ಹೆಚ್ಚು ಗಮನಹರಿಸಿರಲಿಲ್ಲ. ನಾನು ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಮಾಡಿ ಆರ್ಮಿಗೆ ಸೇರಬೇಕು ಅಂತಿದ್ದೆ. ಆದರೆ, ಮೆರಿಟ್ನಲ್ಲಿ ನನ್ನ ಹೆಸರು ಬರಲಿಲ್ಲವಾದ್ದರಿಂದ ನನ್ನ ಆಸೆ ಕಾರಣಾಂತರಗಳಿಂದ ಈಡೇರಲಿಲ್ಲ’ ಎಂದು ಬೇಸರದಿಂದಲೇ ಹೇಳಿಕೊಳ್ಳುತ್ತಾರೆ ಅವರು.
ಆ ಸಂದರ್ಭದಲ್ಲಿ ಅವರು ಬೆಂಗಳೂರಿಗೆ ಬಂದು ಇಲ್ಲಿ ಕೆಲಸ ಮಾಡುತ್ತಿದ್ದರಂತೆ. ಅವರ ಸ್ನೇಹಿತರೊಬ್ಬರು ಫೋನ್ ಮಾಡಿ ಸಿನಿಮಾ ಮಾಡೋಣ ಎಂದರಂತೆ. ಅವರೇ ನಿರ್ಮಾಪಕ ಶಿವಾನಂದ್ ನೀಲಣ್ಣನವರ್. ‘ನನ್ನ ಸ್ನೇಹಿತ ಒಂದು ದಿನ ಫೋನ್ ಮಾಡಿ ಸಿನಿಮಾ ಮಾಡೋಣ ಅಂದ. ನಾವು ಕಾಲೇಜಿನಲ್ಲಿದ್ದಾಗ ಇಬ್ಬರೂ ಒಂದು ರೂಮ್ನಲ್ಲಿದ್ದೆವು. ಆಗ ಅವನು ಜೀವನದಲ್ಲಿ ಬೆಳೆದರೆ ಒಂದು ಸಿನಿಮಾ ಮಾಡೋಣ ಅಂತ ಹೇಳುತ್ತಿದ್ದ. ಹಾಗೆ ಹೇಳಿ 15 ವರ್ಷಗಳ ನಂತರ ಅವನು ಚಿತ್ರ ಮಾಡೋಣ ಅಂದ. ಆರ್ಮಿಗೆ ಆಯ್ಕೆಯಾಗದಿದ್ದರೂ ನಾನು ಫಿಟ್ನೆಸ್ ಹಾಗೆಯೇ ಮೇಂಟೇನ್ ಮಾಡಿದ್ದೆ. ಒಂದು ಪಕ್ಷ ಫಿಟ್ನೆಸ್ ಇಲ್ಲದಿದ್ದರೆ, ನನಗೆ ಸಿನಿಮಾ ಮಾಡುವ ವಿಶ್ವಾಸ ಇರುತ್ತಿರಲಿಲ್ಲ. ಬಹಳ ಕಷ್ಟಪಟ್ಟು ದುಡಿದ ದುಡ್ಡು. ಅದನ್ನು ತಂದು ನನ್ನ ಮೇಲೆ ಹಾಳು ಮಾಡುವುದು ನನಗೆ ಇಷ್ಟವಿರಲಿಲ್ಲ. ವಿಶ್ವಾಸ ಇದ್ದಿದರಿಂದಲೇ ಒಪ್ಪಿಕೊಂಡೆ’ ಎನ್ನುತ್ತಾರೆ ಸಚಿನ್.
ಚಾಂಪಿಯನ್ ಚಿತ್ರವನ್ನು ದಿವಂಗತ ಶಾಹುರಾಜ್ ಶಿಂಧೆ ನಿರ್ದೇಶನ ಮಾಡಿದ್ದು, ಶಿವಾನಂದ ಎಸ್. ನೀಲಣ್ಣನವರ್ ನಿರ್ಮಿಸಿದ್ದಾರೆ. ಸಚಿನ್ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದು, ಮಿಕ್ಕಂತೆ ದೇವರಾಜ್, ಸುಮನ್, ಪ್ರದೀಪ್ ರೌತ್, ಚಿಕ್ಕಣ್ಣ, ಮಂಡ್ಯ ರಮೇಶ್, ಆದಿ ಲೋಕೇಶ್, ಅವಿನಾಶ್ ಮುಂತಾದವರಿದ್ದಾರೆ. ಡಿಂಗರ ಬಿಲ್ಲಿ ಎಂಬ್ ವಿಶೇಷ ಐಟಂ ಸಾಂಗ್ನಲ್ಲಿ ಸನ್ನಿ ಲಿಯೋನ್ ಕುಣಿದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತವಿರುವ ಈ ಚಿತ್ರಕ್ಕೆ ಶರಣವಣನ್ ನಟರಾಜನ್ ಅವರ ಛಾಯಾಗ್ರಹಣವಿದೆ.
Leave a Reply
You must be logged in to post a comment.