ಸೀರಿಯಲ್ಲು, ಸಿನಿಮಾ, ಬಿಗ್ ಬಾಸು – ನಟನೆ, ಸ್ಪರ್ಧೆ ಅಂತೆಲ್ಲಾ ಬ್ಯುಸಿಯಾಗಿರುವ ಹುಡುಗ ಚಂದನ್. ಚಂದನ್ʼಗೆ ಸ್ವಲ್ಪ ದೌಲತ್ತು, ಧಿಮಾಕು ಅನ್ನೋ ಆರೋಪಗಳೆಲ್ಲಾ ಮೊದಲಿನಿಂದಲೂ ಇವೆ. ಅದಕ್ಕೆ ತಕ್ಕಂತೆ ಈ ಹುಡುಗನ ನಡವಳಿಕೆ ಕೂಡಾ ಇರುತ್ತದೆ. ಈ ಹುಡುಗನಿಗಿರುವ ಫಿಸಿಕ್ಕು, ಟ್ಯಾಲೆಂಟಿಗೆ ಈ ಹೊತ್ತಿಗೆ ಬೇರೆ ಲೆವೆಲ್ಲಿಗೆ ನಿಲ್ಲಬಹುದಿತ್ತು. ಒಳ್ಳೊಳ್ಳೇ ಅವಕಾಶಗಳು ಸಿಕ್ಕರೂ ಅವು ಹೇಳಿಕೊಳ್ಳುವಂತಾ ಗೆಲುವು ತಂದುಕೊಡಲಿಲ್ಲ.
ಪ್ರೇಮಬರಹ ಸಿನಿಮಾಗೆ ಬಂದ ವಿಮರ್ಶೆಗಳನ್ನು ಅರಗಿಸಿಕೊಳ್ಳಲಾರದೆ ʻರಿವ್ಯೂ ಬರೆಯುವವರು ನನ್ನ …..ಗೆ ಸಮʼ ಅಂದುಬಿಟ್ಟಿದ್ದ. ಇದಾದ ಮೇಲಂತೂ ಚಂದನ್ ಮತ್ತಷ್ಟು ಮಂಕಾದ ಅನ್ನೋದು ನಿಜ. ಮತ್ತೆ ಸೀರಿಯಲ್ ಕ್ಷೇತ್ರಕ್ಕೆ ಮರಳಿದ ಚಂದನ್ ಗೆ ಚಿತ್ರರಂಗದಲ್ಲಿ ಏನೇ ಸಾಧಿಸಬೇಕಾದರೂ ಮತ್ತೆ ಸೊನ್ನೆಯಿಂದಲೇ ಶುರು ಮಾಡಬೇಕು ಎನ್ನುವ ಪರಿಸ್ಥಿತಿ ಈಗಿದೆ.
ಇವೆಲ್ಲಾ ಏನೇ ಇರಲಿ, ಸಿನಿಮಾ ಇಂಡಸ್ಟ್ರಿಯಲ್ಲಿ ಇಂಥಾ ತಪ್ಪುಗಳು, ಹೀರೋಗಳ ಯಡವಟ್ಟುಗಳು ಘಟಿಸುತ್ತಲೇ ಇರುತ್ತವೆ. ಇವೆಲ್ಲದರ ನಡುವೆ ಚಂದನ್ ಬಗ್ಗೆ ಎಂತವರಾದರೂ ಖುಷಿ ಪಡಲೂ ಒಂದು ಕಾರಣವಿದೆ. ಸಾಮಾನ್ಯವಾಗಿ ಸಿನಿಮಾ, ಸೀರಿಯಲ್ಲು ಅಂತಾ ಬ್ಯುಸಿ ಇರುವ ಕಲಾವಿದರು ಆ ಪ್ರಭಾವಳಿಗಳನ್ನು ತಲೆಗೇರಿಸಿಕೊಂಡು, ಬಿಲ್ಡಪ್ಪು ತಗೊಂಡು, ಬರುತ್ತಿರುವ ಆದಾಯವನ್ನು ಕರಗಿಸಿಕೊಂಡುಬಿಡುತ್ತಾರೆ. ಈ ಕಲರ್ ಫುಲ್ ದುನಿಯಾದಲ್ಲಿನ ವರಮಾನ ಯಾವಾಗಲೂ ಒಂದೇ ರೀತಿಯಲ್ಲಿರೋದಿಲ್ಲ. ಒಂದು ಸಿನಿಮಾದ ಗೆಲುವು ಕಲಾವಿದ, ತಂತ್ರಜ್ಞರನ್ನು ಎಲ್ಲಿಗೋ ಕೊಂಡೊಯ್ದು ನಿಲ್ಲಿಸುತ್ತದೆ. ಅದೇ ಸಣ್ಣ ಸೋಲು ಕೂಡಾ ಹಾವು ಏಣಿ ಆಟದಂತೆ ಕೆಳಕ್ಕೆ ತಂದು ಕುಕ್ಕರಿಸಿಬಿಡುತ್ತದೆ. ಹೀಗಿರುವಾಗ ಕಲೆಯನ್ನು ನಂಬಿದವರು ಅದರ ಜೊತೆ ಜೊತೆಗೇ ಪರ್ಯಾಯ ಮಾರ್ಗವನ್ನೂ ಕಂಡುಕೊಳ್ಳುವ ಅನಿವಾರ್ಯತೆ ಇರುತ್ತದೆ.
ಈ ನಿಟ್ಟಿನಲ್ಲಿ ಚಂದನ್ ಇಟ್ಟಿರುವ ಹೆಜ್ಜೆ ನಿಜಕ್ಕೂ ಮೆಚ್ಚಬೇಕಾದ್ದು. ಬೆಂಗಳೂರಿನ ಸಹಕಾರ ನಗರದಲ್ಲಿ ಈತ ಬಿರಿಯಾನಿ ಪ್ಯಾಲೇಸ್ ಹೆಸರಿನ ಹೊಟೇಲ್ ಆರಂಭಿಸಿದ್ದಾನೆ. ಅದರ ಆರಂಭದ ದಿನದಂದು ಶಿವರಾಜ್ ಕುಮಾರ್ ಸೇರಿದಂತೆ ಸಾಕಷ್ಟು ಜನ ಕಲಾವಿದರು ಬಂದು ಹೋಗಿದ್ದಾರೆ. ಅಲ್ಲಿಗೆ ಆ ಏರಿಯಾದಲ್ಲಿ ಹೊಟೇಲ್ ಒಂದು ಮಟ್ಟಕ್ಕೆ ಗೆದ್ದಂತೆ. ಇನ್ನು, ಕ್ವಾಲಿಟಿ, ಕ್ವಾಂಟಿಟಿಗಳೆಲ್ಲಾ ಉತ್ತಮವಾಗಿದ್ದರೆ ಜನ ಬಂದೇ ಬರುತ್ತಾರೆ. ಹೊಟೇಲು ವಿಚಾರದಲ್ಲಿ ಚಂದನ್ ಹೆಚ್ಚು ಶ್ರದ್ಧೆ ತೋರಿದಂತೆ ಕಾಣುತ್ತಿದೆ. ಚಂದನ್ ಪಾಲಿಗೆ ಬಿರಿಯಾನಿ ವ್ಯಾಪಾರ ಕೈಗೂಡಲಿ…
No Comment! Be the first one.