ಸಾಕಷ್ಟುಕಡೆ ಪೋಸ್ಟರು, ಬ್ಯಾನರುಗಳಲ್ಲಿ ʻರೂರಲ್ ಸ್ಟಾರ್ʼ ಎನ್ನುವ ಹೆಸರು ಕಾಣುತ್ತದೆ. ಸಿಟಿ ಜನ ಅದನ್ನು ನೋಡಿ ಆಶ್ಚರ್ಯಗೊಳ್ಳೋದು ಸಹಜ. ʻಯಾರಪ್ಪಾ ಇದು ರೂರಲ್ ಸ್ಟಾರ್?ʼ ಅಂತಾ. ಅಂಜನ್ ಅವರನ್ನು ಎಲ್ಲರೂ ರೂರಲ್ ಸ್ಟಾರ್ ಅಂತಲೇ ಮೆರೆಸುತ್ತಾರೆ. ಅದಕ್ಕೆ ಕಾರಣವೂ ಇದೆ. ಉತ್ತರ ಕರ್ನಾಟಕ ಸೀಮೆಯಲ್ಲಿ ಸಿನಿಮಾ ಸಾಹಸಗಳನ್ನು ಮಾಡುತ್ತಾ ಕರ್ನಾಟಕದಾದ್ಯಂತ ಪ್ರಸಿದ್ಧಿ ಪಡೆದುಕೊಂಡಿರುವವರು ಅಂಜನ್. ರೂರಲ್ ಸ್ಟಾರ್ ಅಂಜನ್ ಅಂದರೆ ಕಲಾ ಪ್ರೇಮಿಗಳೆಲ್ಲ ನಿಜಕ್ಕೂ ಹುಬ್ಬೇರಿಸುತ್ತಾರೆ. ತಮ್ಮದೇ ವಲಯ ಸೃಷ್ಟಿಸಿಕೊಂಡು, ಅಲ್ಲಿ ಅಪಾರ ಹೆಸರು ಮಾಡಿರುವ ಅಂಜನ್ ಈಗ `ಚೋಳ’ ಎಂಬ ಚಿತ್ರದ ಮೂಲಕ ಮಾಸ್ ಲುಕ್ಕಿನಲ್ಲಿ ಎಂಟ್ರಿ ಕೊಡಲು ತಯಾರಾಗಿದ್ದಾರೆ. ವಿಶೇಷವೆಂದರೆ, ಇದುವರೆಗೂ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಸುರೇಶ್ ಡಿ.ಎಂ ಅವರು `ಚೋಳ’ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಈ ಸಿನಿಮಾದ ಟೀಸರ್ ಇದೇ ಆಗಸ್ಟ್ 20ರಂದು ಬಿಡುಗಡೆಗೊಳ್ಳಲಿದೆ.
ತಮ್ಮ ಸೃಷ್ಟಿ ಎಂಟರ್ಪ್ರೈಸಸ್ ಬ್ಯಾನರಿನಡಿಯಲ್ಲಿ ಸುರೇಶ್ ಡಿ.ಎಂ `ಪ್ರಯಾಣಿಕರ ಗಮನಕ್ಕೆ’ `ರಣಹೇಡಿ’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದವರು. ಸದ್ಯ ಭಿನ್ನ ಕಥಾನಕದೊಂದಿಗೆ ʻಚೋಳʼ ಸಿನಿಮಾದ ಸಾರಥ್ಯ ವಹಿಸಿಕೊಂಡಿದ್ದಾರೆ. ಇದರಲ್ಲಿ ಗ್ರಾಮೀಣ ಪ್ರತಿಭೆಯಾದ ರೂರಲ್ ಸ್ಟಾರ್ ಅಂಜನ್ರನ್ನು ನಾಯಕನನ್ನಾಗಿಸುವ ಮೂಲಕ, ಅವರ ಕನಸುಗಳಿಗೆ ಜೀವ ತುಂಬುತ್ತಿದ್ದಾರೆ. ಅಂದಹಾಗೆ, ಚೋಳ ಎಂಬ ಟೈಟಲ್ಲು ಕೇಳಿದ ಕ್ಷಣಕ್ಕೆ ಇದೊಂದು ಐತಿಹಾಸಿಕ ಕಥಾ ಹಂದರದ ಚಿತ್ರವಾ ಎಂಬಂಥಾ ಅನುಮಾನ ಹುಟ್ಟುತ್ತದೆ. ಆದರೆ, ಇದು ಪಕ್ಕಾ ಆಧುನಿಕ ಸಬ್ಜೆಕ್ಟು. ಇದೊಂದು ಪ್ರೀತಿ, ರೌಡಿಸಂ ಸೇರಿದಂತೆ ಎಲ್ಲವೂ ಬೆರೆತಿರುವ ಸಿನಿಮಾ ಅನ್ನೋದನ್ನು ಸ್ವತಃ ನಿರ್ದೇಶಕ ಸುರೇಶ್ ಸ್ಪಷ್ಟೀಕರಿಸಿದ್ದಾರೆ.
ಈ ಹಿಂದೆ ಯರ್ರಾಬಿರ್ರಿ ಎನ್ನುಬ ಸಿನಿಮಾ ಮಾಡಿದ್ದ ರೂರಲ್ ಸ್ಟಾರ್ ಅಂಜನ್ ಅವರ ಪ್ರತಿಭೆಯನ್ನು ಗಮನಿಸಿದ್ದ ನಿರ್ದೇಶಕ ಸುರೇಶ್ ಈ ಚಿತ್ರಕ್ಕೆ ನಾಯಕನನ್ನಾಗಿಸಿದ್ದಾರೆ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ದಿಶಾ ಪಾಂಡೆ ಮತ್ತು ಪ್ರತಿಭಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ದಿನೇಶ್ ಮಂಗಳೂರು ಮತ್ತು ʻಬಲʼ ರಾಜ್ ವಾಡಿ ವಿಲನ್ನುಗಳಾಗಿ ನಟಿಸಿದ್ದಾರೆ. ಮನಮೋಹನ್ ರಾಯ್ ಅವರಂಥ ಹಿರಿಯ ನಟ ಇಲ್ಲಿ ವಿಶೇಷ ಪಾತ್ರವನ್ನು ನಿಭಾಯಿಸಿದ್ದಾರೆ. ಮಜಾ ಭಾರತ ಖ್ಯಾತಿಯ ಜಗಪ್ಪ, ಮಿಂಚು, ಅಪರೂಪದ ನಟ ವರ್ಧನ್ ತೀರ್ಥಹಳ್ಳಿ ಮುಂತಾದವರು ಈ ಸಿನಿಮಾದ ಪಾತ್ರವಾಗಿದ್ದಾರೆ…
ಸಂದೀಪ್ ಹೊನ್ನಾಳ್ಳಿ ಛಾಯಾಗ್ರಹಣ, ಶಿವಶಂಕರ್ ಸಂಕಲನ ಈ ಚಿತ್ರಕ್ಕಿದೆ. ಸಾಕಷ್ಟು ತಯಾರಿ ನಡೆಸಿಕೊಂಡು ಅಖಾಡಕ್ಕಿಳಿದಿರುವ ಸುರೇಶ್ ಅವರು ಸ್ವತಃ ಈ ಚಿತ್ರವನ್ನು ನಿರ್ಮಾಣ ಮಾಡಿ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಈಗಾಗಲೇ ಬಹುಪಾಲು ಚಿತ್ರೀಕರಣ ಯಶಸ್ವಿಯಾಗಿ ನಡೆದಿದೆ. ಮುಖ್ಯ ಭಾಗಗಳ ಕೆಲವೇ ದೃಶ್ಯಗಳ ಚಿತ್ರೀಕರಣ ಬಾಕಿ ಇದೆ. ಅದು ಮುಗಿಯುತ್ತಿದ್ದಂತೇ ರಿಲೀಸ್ ಮಾಡಿ, ಅದರ ಬೆನ್ನಲ್ಲಿಯೇ ಟ್ರೈಲರ್ ಅನ್ನೂ ಬಿಡುಗಡೆಗೊಳಿಸುವ ಯೋಜನೆ ಚಿತ್ರತಂಡದ್ದು.
No Comment! Be the first one.