ಜೈಲರ್, ಬೋಳಾ ಶಂಕರ್ ಮೊದಲಾದ ಪರಭಾಷೆ ಸಿನಿಮಾಗಳು ಇದೇ ವಾರ ತೆರೆ ಮೇಲೆ ಲಗ್ಗೆ ಇಡುತ್ತಿವೆ. ಇದರ ನೇರ ಪರಿಣಾಮ ಬಿದ್ದಿರುವುದು ಕನ್ನಡ ಚಿತ್ರರಂಗದ ಮೇಲೆ.
ಕೆಟ್ಟ ಸೋಲಿನಿಂದ ಸೊರಗಿದ್ದ ಸ್ಯಾಂಡಲ್ ವುಡ್ ನಲ್ಲಿ
ಕಳೆದ ಎರಡು ಮೂರು ವಾರಗಳಿಂದ ಆಹ್ಲಾದಕರ ವಾತಾವರಣ ನಿರ್ಮಾಣವಾಗಿದೆ. ಅದಕ್ಕೆ ಕಾರಣ ಹಾಸ್ಟೆಲ್ ಹುಡುಗರು ಮತ್ತು ಕೌಸಲ್ಯಾ ಸುಪ್ರಜಾ ರಾಮ ಎಂಬ ಎರಡು ಸಿನಿಮಾಗಳು ಹುಟ್ಟುಹಾಕಿದ ಭರವಸೆ. ಹೆಚ್ಚೂಕಮ್ಮಿ ಕನ್ನಡ ಸಿನಿಮಾ ಉದ್ಯಮ ಬಾಗಿಲು ಮುಚ್ಚುತ್ತದಾ ಎನ್ನುವ ಹಂತ ತಲುಪಿತ್ತು. ಕಾಂತಾರಾ ನಂತರ ಯಾವೊಂದು ಚಿತ್ರ ಕೂಡಾ ಥೇಟರುಗಳಲ್ಲಿ ನಿಂತಿಲ್ಲ. ಏನುಮಾಡಿದರೂ ಕನ್ನಡ ಸಿನಿಮಾಗಳನ್ನು ನೋಡಲು ಜನ ಬರುತ್ತಿಲ್ಲವೆಂಬ ಸಂಕಟ ಮನೆಮಾಡಿದೆ. ಇದೇ ಹೊತ್ತಿನಲ್ಲೀಗ ಹಾಸ್ಟೆಲ್ ಹುಡುಗರು ಯೂತ್ ಆಡಿಯೆನ್ಸನ್ನು ಅಟ್ರಾಕ್ಟ್ ಮಾಡಿತು. ಇದರ ನಂತರ ಬಿಡುಗಡೆಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಚಿತ್ರ ಶಶಾಂಕ್ ನಿರ್ದೇಶನದ ಕೌಸಲ್ಯಾ ಸುಪ್ರಜಾ ರಾಮ. ಎಲ್ಲ ವರ್ಗಕ್ಕೂ ಇಷ್ಟವಾಗುವ ಕಂಟೆಂಟ್ ಹೊಂದಿರುವ ಈ ಸಿನಿಮಾ ಎಲ್ಲೆಡೆ ಒಳ್ಳೆ ಕಲೆಕ್ಷನ್ ಮಾಡುತ್ತಿದೆ. ಇದು ಎಲ್ಲರ ಖುಷಿಯನ್ನು ಹೆಚ್ಚಿಸಿದೆ ನಿಜ. ಆದರೆ, ಇದೇ ಹೊತ್ತಿಗೆ ಮಲ್ಟಿಪ್ಲೆಕ್ಸ್ ಮಂದಿ ನೀಚ ಕೆಲಸವೊಂದಕ್ಕೆ ಮುಂದಾಗಿದ್ದಾರೆ. ಅದೇನೆಂದರೆ, ಕೌಸಲ್ಯಾ ಸುಪ್ರಜಾಗೆ ನೀಡಿದ್ದ ಶೋಗಳನ್ನು ಕಡಿತಗೊಳಿಸಿ, ಪರಭಾಷೆಯ ನಾಲ್ಕು ಸಿನಿಮಾಗಳಿಗೆ ಶೋಗಳನ್ನು ಕಾದಿರಿಸಿದ್ದಾರೆ.
ಕನ್ನಡ ನೆಲದಲ್ಲಿ ನಮ್ಮ ಚಿತ್ರಗಳಿಗೆ ಮೊದಲ ಆದ್ಯತೆ ನೀಡಬೇಕಿದ್ದುದು ಧರ್ಮ. ಆದರೆ ಮಲ್ಟಿಪ್ಲೆಕ್ಸ್ ಕಂಪೆನಿಗಳು ಕನ್ನಡ ದ್ರೋಹಿ ನೀತಿಯನ್ನು ಅನುಸರಿಸುತ್ತಿವೆ. ಇಂಥ ಸಂದರ್ಭ ಎದುರಾಗಿರುವುದು ಇದೇ ಮೊದಲಲ್ಲ. ಕಾಲಾನುಕಾಲದಿಂದ ತಮಿಳು, ತೆಲುಗು ಮತ್ತು ಹಿಂದಿಯ ದೊಡ್ಡ ಸಿನಿಮಾಗಳು ಕನ್ನಡದ ಚಿತ್ರಗಳನ್ನು ತುಳಿದುತುಳಿದೇ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡಿವೆ. ಹಿಂದೆ ವಾಣಿಜ್ಯಮಂಡಳಿಯಲ್ಲಿ ಅಧಿಕಾರ ಹಿಡಿದು ಕುಳಿತ ಕೆಲವರು ಪರಭಾಷೆಯ ಸಿನಿಮಾಗಳು ಸದ್ದು ಮಾಡುತ್ತಾ ಬಂದಾಗ ಎಗರಾಡಿ, ಅರಚಾಡಿ ಕಡೆಗೆ ಡೀಲು ಕುದುರಿಸಿಕೊಂಡು ತೆಪ್ಪಗಾಗಿದ್ದಿದೆ. ಆದರೆ ಭಾ ಮಾ ಹರೀಶ್ ಈಗ ಅಧ್ಯಕ್ಷಗಾದಿಯ ಕೊನೆಯ ದಿನಗಳಲ್ಲಿದ್ದಾರೆ. ಈಗಲಾದರೂ ಕನ್ನಡ ಚಿತ್ರರಂಗಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿಯೆತ್ತುತ್ತಾರಾ ನೋಡಬೇಕು. ಒಂದುವೇಳೆ ಈ ಸಮಸ್ಯೆಗೆ ಪರಿಹಾರ ಸಿಗದೇಹೋದರೆ ವಾಣಿಜ್ಯ ಮಂಡಳಿಯ ಮೇಲೆ ಚಿತ್ರಕರ್ಮಿಗಳು ಇರೋಬರೋ ನಂಬಿಕೆಯನ್ನೂ ಕಳೆದುಕೊಂಡುಬಿಡುತ್ತಾರೆ. ಹಾಗಾಗದಿರಲಿ…
No Comment! Be the first one.