ಭಾರತೀಯ ಚಿತ್ರರಂಗದಲ್ಲಿ ತಮಿಳು ನಟ ವಿಜಯ್ ಸೇತುಪತಿ ಬಿಟ್ಟರೆ ಬಹುಶಃ ಅತೀ ಹೆಚ್ಚು ಬ್ಯುಸೀ ಇರುವ ನಟ ಅಂದರೆ ಅದು ಡಾಲಿ ಧನಂಜಯ ಇರಬೇಕು!
ಅದ್ಯಾವ ಘಳಿಗೆಯಲ್ಲಿ ದುನಿಯಾ ಸೂರಿ ಟಗರು ಅನ್ನೋ ಸಿನಿಮಾಗೆ ʻಡಾಲಿʼ ಎನ್ನುವ ಪಾತ್ರವನ್ನು ಬರೆದರೋ? ಅದಕ್ಕೆ ಧನಂಜಯಾನೇ ಬೇಕು ಅಂತಾ ಚಾಯ್ಸ್ ಮಾಡಿದರೋ ಗೊತ್ತಿಲ್ಲ. ನುಗ್ಗಿಬಂದ ʻಟಗರುʼ ಜೊತೆ ಡಾಲಿಯ ನಸೀಬೇ ಬದಲಾಗಿಹೋಯ್ತು. ಕನ್ನಡ ಮಾತ್ರವಲ್ಲದೆ, ನೆರೆಯ ತಮಿಳು, ತೆಲುಗು ಚಿತ್ರರಂಗದಿಂದಲೂ ಅವಕಾಶಗಳು ಅರಸಿಬಂದವು. ಟಗರು ಬರುವ ಮುಂಚೆ ಇದೇ ಧನಂಜಯ ಎಂಟು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದರು. ಆರಂಭದ ಡೈರೆಕ್ಟರ್ ಸ್ಪೆಷಲ್ ಸಿನಿಮಾದಿಂದ ಹ್ಯಾಪಿ ನ್ಯೂ ಇಯರ್ ತನಕ ಎಲ್ಲ ಚಿತ್ರಗಳಲ್ಲೂ ಧನಂಜಯ ನಟನೆಯ ಬಗ್ಗೆ ಅತ್ಯದ್ಭುತ ಪ್ರತಿಕ್ರಿಯೆ ಬಂದವು. ಆದರೆ ಕಮರ್ಷಿಯಲ್ಲಾಗಿ ಯಾವುದೂ ʻಧನಾʼತ್ಮಕವಾಗಲಿಲ್ಲ. ಎಂಟು ಸಿನಿಮಾ ಮುಗಿಸಿ ಒಂಭತ್ತಕ್ಕೆ ಕಾಲಿಡೋ ಹೊತ್ತಿಗೆ ಧನಂಜಯನಿಗೆ ಹಿಡಿದಿದ್ದ ಸಾಡೇಸಾತ್ ಕೂಡಾ ಕೊನೆಯಾಗಿತ್ತು. ಡಾಲಿಯಾಗಿ ಮಾರ್ಪಟ್ಟು ಹೊಸಾ ಲುಕ್ಕಲ್ಲಿ ದಿಗ್ದರ್ಶನ ನೀಡಿದ್ದ ಧನಂಜಯನನ್ನು ಜನ ಅಪ್ಪಿ ಮುದ್ದಾಡಿದರು. ವಿಲನ್ ರೋಲಲ್ಲಿ ಕಾಣಿಸಿಕೊಂಡ ನಟನ ಫೋಟೋಗಳು ಆಟೋಗಳ ಹಿಂದೆ ರಾರಾಜಿಸಿದವು.
ಕಳೆದ ಎರಡು ವರ್ಷಗಳಲ್ಲಿ ಧನಂಜಯ ನಟನೆಯ ಸಾಕಷ್ಟು ಸಿನಿಮಾಗಳು ಸೆಟ್ಟೇರಿವೆ; ಬಿಡುಗಡೆಯಾಗಿವೆ. ಈ ಅವಧಿಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಏಕಮಾತ್ರ ನಟ ಡಾಲಿ ಅನ್ನೋದಕ್ಕೆ ಲೆಕ್ಕವಿದೆ. ಬೇರೆ ಹೀರೋಗಳ ಜೊತೆಗೆ ಪೋಷಕ ಪಾತ್ರಗಳಲ್ಲಿಯೂ ನಟಿಸುತ್ತಾ, ಹೀರೋ ಆಗಿಯೂ ಮುಂದುವರೆಯುತ್ತಿರುವ ಕಲಾವಿದ ಕೂಡಾ ಇವರೇ. ಹೆಚ್ಚೂ ಕಮ್ಮಿ ವಿಜಯ್ ಸೇತುಪತಿ ಮತ್ತು ಡಾಲಿ ಇಬ್ಬರ ಆಯ್ಕೆ ಒಂದೇ ರೀತಿ ಇದೆ. ಒಮ್ಮೆ ಹೀರೋ ಆದನಂತರ ಮತ್ತೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಬಾರದು ಎನ್ನುವ ಅಘೋಷಿದ ನಿಯಮವನ್ನು ಈ ಇಬ್ಬರೂ ನಟರು ಎಡಗಾಲಲ್ಲಿ ಒದ್ದು ಮುಂದೆ ಸಾಗುತ್ತಿದ್ದಾರೆ.
ಡಾಲಿಯ ಬಗ್ಗೆ ಇಷ್ಟೆಲ್ಲಾ ಹೇಳಲೂ ಕಾರಣವಿದೆ. ಸಿನಿಮಾ ನಟನೆಯ ಜೊತೆ ನಿರ್ಮಾಪಕನಾಗಿಯೂ ಯಶಸ್ಸು ಕಂಡಿರುವ ಇವರು ಇನ್ನು ಎರಡು ವರ್ಷಗಳ ಕಾಲ ಫುಲ್ ಬ್ಯುಸಿ. ಕನ್ನಡ ಮಾತ್ರವಲ್ಲದೆ, ಭಾರತದ ಇತರೆ ಭಾಷೆಗಳಲ್ಲೂ ಹಲವಾರು ಸಿನಿಮಾಗಳನ್ನು ಒಪ್ಪಿರುವ ಧನು ಸದ್ಯ ಹೊಸ ಕತೆಗಳನ್ನು ಕೇಳಲೂ ಪುರುಸೊತ್ತಿಲ್ಲದಂತಾಗಿರೋದು ನಿಜ. ಇನ್ನು ತಕ್ಷಣಕ್ಕೆ ಕಾಲ್ ಶೀಟ್ ಕೊಡೋದು ಅಸಾಧ್ಯ ಎನ್ನುವಂತಾಗಿದೆ. ಒಂದು ಕಿವಿಗೆ ಮೊಬೈಲಿಟ್ಟು ಮಾತಾಡೋ ಹೊತ್ತಿಗೇ ಮತ್ತೊಂದು ಕೈಲಿರುವ ಮೊಬೈಲು ಸದ್ದು ಮಾಡುತ್ತಿದೆ. ಅಷ್ಟರ ಮಟ್ಟಿಗೆ ಧನುಗೆ ಕೆಲಸದ ದಟ್ಟಣೆ ಹೆಚ್ಚಾಗಿದೆ. ಸಾಕಷ್ಟು ಜನ ನಿರ್ದೇಶಕರು ಧನಂಜಯನನ್ನು ಮನಸ್ಸಿನಲ್ಲಿಟ್ಟುಕೊಂಡು ಕಥೆ ಬರೆದುಕೊಂಡಿದ್ದಾರೆ. ಅವರೆಲ್ಲಾ ನೀನೇ ಬೇಕು ಅಂತಾ ಹಠ ಹಿಡಿದರೆ ಬಹುಶಃ 2024ರ ನಂತರಷ್ಟೇ ಡಾಲಿಯ ಡೇಟ್ಸು ಸಿಗಬಹುದು. ಖುದ್ದು ಧನಂಜಯ ಅವರೇ ʻನಾನು ಫ್ರೀಯಾಗಿದ್ದೀನಿʼ ಅನ್ನುವವರೆಗೆ ಅವರ ಬೆನ್ನು ಬೀಳದೆ, ಇರುವ ಅವಕಾಶಗಳಲ್ಲಿ ಅವರು ತನ್ಮಯರಾಗಿ ನಟಿಸುವ ವಾತಾವರಣ ಕಲ್ಪಿಸಬೇಕು…
No Comment! Be the first one.