ಜೈದ್ ಖಾನ್ ಇತ್ತೀಚೆಗೆ ಹೆಚ್ಚು ಪ್ರಚಾರದಲ್ಲಿರುವ ಹೆಸರು. ಅಪ್ಪ ಕರ್ನಾಟಕ ರಾಜ್ಯ ರಾಜಕಾರಣದ ವರ್ಣರಂಜಿತ ವ್ಯಕ್ತಿ. ಕೂತರೂ ನಿಂತರೂ ಸುದ್ದಿಯಾಗುವ ಉದ್ಯಮಿ. ಇಂಥರವ ಮಗ ಸಿನಿಮಾರಂಗಕ್ಕೆ ಬಂದಾಗ ಜನ ತಲೆಗೊಂದು ಮಾತಾಡಿದ್ದರು. ಯಾವಾಗ ಜೈದ್ ನಟನೆಯ ಮೊದಲ ಸಿನಿಮಾ ʻಬನಾರಸ್ʼ ಚಿತ್ರದ ʻಮಾಯ ಗಂಗೆʼ ಹಾಡು ಲೋಕಾರ್ಪಣೆಯಾಯಿತೋ? ಆಗ ಅಂದವರ ಅಂಡು ಸದ್ದು ನಿಲ್ಲಿಸಿತು. ʻಹುಡುಗ ಸಿನಿಮಾರಂಗದಲ್ಲಿ ಭದ್ರವಾಗಿ ನಿಲ್ಲೋದು ಗ್ಯಾರೆಂಟಿʼ ಅಂತಾ ಒಳಗೊಳಗೇ ಮಾತಾಡಿಕೊಂಡರು.

ಅಪ್ಪನ ರಾಜಕಾರಣದ ವರ್ಚಸ್ಸು, ವ್ಯವಹಾರ, ಶ್ರೀಮಂತಿಕೆ – ಇವೆಲ್ಲದರ ಹೊರತಾಗಿ ಜೈದ್ಗೆ ಒಬ್ಬ ನಟನಾಗಲು ಏನೇನು ಅರ್ಹತೆ ಬೇಕು? ತಾನು ಹೇಗಿದ್ದರೆ ಇಲ್ಲಿ ಎದ್ದು ನಿಲ್ಲಲು ಸಾಧ್ಯ ಎಂಬುದರ ಕರಾರುವಕ್ಕಾದ ತಿಳಿವಳಿಕೆ ಇದ್ದಂತಿದೆ. ತನ್ನ ಸಿನಿಮಾದ ಮೇಲೆ ಎಲ್ಲೂ ಅಪ್ಪನ ನೆರಳು ಸೋಕಬಾರದು ಅಂತಾ ತೀರ್ಮಾನಿಸಿದಂತೆಯೂ ಕಾಣುತ್ತಿದೆ. ʻಬನಾರಸ್ʼ ಚಿತ್ರದ ಮೊದಲ ಸಮಾರಂಭದಲ್ಲೂ ಜಮೀರ್ ಕಾಣಿಸಿಕೊಂಡಿರಲಿಲ್ಲ. ಇಷ್ಟಾಗಿಯೂ ಜಮೀರ್ಗೆ ಸಂಬಂಧಿಸಿದ ಕೆಲ ವಿಚಾರಗಳನ್ನು ಕೆಲವರು ಜೈದ್ಗೆ ಅಂಟಾಕುತ್ತಿದ್ದಾರೆ. ಆದರೆ ಜೈದ್ ಯಾವುದೇ ಸಂದರ್ಭದಲ್ಲೂ ದುಡುಕಿನ ಹೇಳಿಕೆ ನೀಡುತ್ತಿಲ್ಲ. ಸ್ಥಿತಪ್ರಜ್ಞತೆಯಿಂದ ವರ್ತಿಸುತ್ತಾ ತಾವಾಯಿತು ತಮ್ಮ ಸಿನಿಮಾದ ಕೆಲಸವಾಯಿತು ಅಂತಿದ್ದಾರೆ.
ಬನಾರಸ್ ಸಿನಿಮಾ ಬರುವ ನವೆಂಬರ್ 4ಕ್ಕೆ ತೆರೆಗೆ ಬರೋದು ಖಚಿತವಾಗಿದೆ. ಇನ್ನು ಸಿನಿಮಾ ಪ್ರಚಾರ ಭರ್ಜರಿಯಾಗಿಯೇ ಆರಂಭವಾಗಲಿದೆ. ಮೂಲಗಳ ಪ್ರಕಾರ ಕನ್ನಡ ಚಿತ್ರರಂಗದ ಶಕ್ತಿಶಾಲಿ ನಟರೆಲ್ಲರೂ ಜೈದ್ ನಟನೆಯ ಮೊದಲ ಚಿತ್ರದ ಬೆಂಬಲಕ್ಕೆ ನಿಲ್ಲಲಿದ್ದಾರೆ.

ಸದ್ಯ ಇವೆಲ್ಲದಕ್ಕಿಂತಾ ವಿಶೇಷವಾದ ವಿಚಾರವೊಂದಿದೆ. ಅದೇನೆಂದರೆ, ಇನ್ನೂ ಮೊದಲ ಸಿನಿಮಾ ತೆರೆಗೆ ಬರುವ ಮುಂಚೆಯೇ ಸಾಕಷ್ಟು ನಿರ್ಮಾಪಕರು ಜೈದ್ ಕಾಲ್ ಶೀಟ್ ಕೇಳಲು ಶುರು ಮಾಡಿದ್ದಾರೆ. ಸದ್ಯ ಕನ್ನಡದ ಮೂಲಕ ಎದ್ದು ನಿಂತು ಇಡೀ ಜಗತ್ತಿನಲ್ಲಿ ಹೆಸರು ಮಾಡಿರುವ ಸಂಸ್ಥೆಯ ಮುಖ್ಯಸ್ಥರು ಕೂಡಾ ಜೈದ್ ಜೊತೆ ಸಿನಿಮಾ ಮಾಡುವ ಪ್ಲಾನ್ ಮಾಡಿದ್ದಾರೆ.
ಬರುವ ಫೆಬ್ರವರಿ 11ಕ್ಕೆ ಜೈದ್ ಖಾನ್ ಹುಟ್ಟು ಹಬ್ಬ. ಆ ದಿನದಂದು ಕನಿಷ್ಟ ನಾಲ್ಕೈದು ಸಿನಿಮಾಗಳು ಅನೌನ್ಸ್ ಆಗೋದು ಗ್ಯಾರೆಂಟಿ ಎನ್ನುವಂತಾಗಿದೆ. ಅದರಲ್ಲಿ ಭಜರಂಗಿ ಖ್ಯಾತಿಯ ಎ. ಹರ್ಷ ನಿರ್ದೇಶನದ ಸಿನಿಮಾ ಕೂಡಾ ಒಂದು. ಅದೇ ದಿನ ಈ ಚಿತ್ರದ ಮುಹೂರ್ತ ಕೂಡಾ ನೆರವೇರಲಿದೆ. ಭಾರತ ಚಿತ್ರರಂಗದಲ್ಲಿ ಹೆಸರು ಮಾಡಿರುವ ದೊಡ್ಡ ನಟ ಕೂಡಾ ಇದರಲ್ಲಿ ಜೈದ್ ಜೊತೆಯಾಗಲಿದ್ದಾರೆ. ದೊಡ್ಡ ಬಜೆಟ್ಟಿನಲ್ಲಿ ನಿರ್ಮಾಣವಾಗಲಿರುವ ಈ ಚಿತ್ರದ ಕುರಿತ ಇನ್ನಷ್ಟು ಮಾಹಿತಿಗಳನ್ನು ಸದ್ಯದಲ್ಲೇ ನೀಡುತ್ತೇವೆ!
No Comment! Be the first one.