ಕಣ್ಣೆದುರೇ ಕೊಡಗು ಸೀಮೆಯಲ್ಲಾಗುತ್ತಿರುವ ಪ್ರಾಕೃತಿಕ ದುರಂತ ಎಲ್ಲರನ್ನೂ ಆಘಾತಕ್ಕೀಡು ಮಾಡಿದೆ. ಊರಿಗೂರೇ ನೆರೆ, ನೀರು, ಭೂಕುಸಿತದಿಂದ ಕಣ್ಮರೆಯಾದಂತಾಗಿ ರಾತ್ರಿ ಹಗಲಾಗೋದರೊಳಗೆ ಜನ ಎಲ್ಲ ಕಳೆದುಕೊಂಡು ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ಚಿತ್ರರಂಗವೂ ಮಿಡಿದಿದೆ. ತಾರೆಯರೆಲ್ಲ ಕೈಲಾದ ಸಹಾಯಕ್ಕೆ ಮುಂದಾಗಿದ್ದಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಕೊಡಗಿನ ಜನರಿಗೆ ಸಹಾಯ ಮಾಡುವಂತೆ ಅಭಿಮಾನಿಗಳಲ್ಲಿ ಕಳಕಳಿಯಿಂದ ಮನವಿ ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಲ್ಲವನ್ನೂ ಕಳೆದುಕೊಂಡಿರೋ ಕೊಡಗಿನ ಜನರಿಗೆ ಆ ಕ್ಷಣಕ್ಕೆ ಅಗತ್ಯವಿರುವ ಆಹಾರ, ದಿನ ಬಳಕೆಯ ವಸ್ತುಗಳು ಸೇರಿದಂತೆ ಏನೇನೆಲ್ಲ ಸಾಧ್ಯವೋ ಅದನ್ನೆಲ್ಲ ಪೂರೈಕೆ ಮಾಡುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
ಈ ಮೂಲಕ ದರ್ಶನ್ ಭಯಾನಕವಾದ ಪ್ರಾಕೃತಿಕ ದುರಂತದಿಂದ ಕಂಗೆಟ್ಟಿರುವ ಕೊಡಗಿನ ಜನತೆಯ ಸಂಕಷ್ಟಕ್ಕೆ ಮಿಡಿದಿದ್ದಾರೆ. ದರ್ಶನ್ ಅವರ ಮಾತನ್ನು ಶಿರಸಾವಹಿಸಿ ಪಾಲಿಸುವ ಅಭಿಮಾನಿಗಳು ಖಂಡಿತವಾಗಿಯೂ ಈ ಮನವಿಯೆ ಮಿಡಿಯದಿರಲಾರರು. ದರ್ಶನ್ ಅಭಿಮಾನಿಗಳೆಲ್ಲ ಮನಸು ಮಾಡಿದರೆ ಖಂಡಿತವಾಗಿಯೂ ಕೊಡಗು ಜನರ ಒಂದಷ್ಟಾದರೂ ಹಸಿವು ನೀಗುತ್ತದೆ. ಪ್ರತೀ ಕ್ಷಣವೂ ಕುಸಿಯುತ್ತಿರುವ ಪ್ರದೇಶದಲ್ಲಿಯೇ ಜೀವದ ಹಂಗು ತೊರೆದು ಕಾರ್ಯಾಚರಣೆಗಿಳಿದಿರುವ ಎಲ್ಲ ಮಾನವೀಯ ಮನಸುಗಳಿಗೂ ಮತ್ತಷ್ಟು ಕಸುವು ಸಿಕ್ಕಂತಾಗುತ್ತದೆ.
ಇಂದು ಬೆಳಿಗ್ಗೆ ‘ಡಿ ಕಂಪೆನಿಯ ಸದಸ್ಯರು ಮತ್ತು ದರ್ಶನ್ ಅವರ ಮ್ಯಾನೇಜರ್ ಸೀನಣ್ಣ ಸೇರಿದಂತೆ ಒಂದಷ್ಟು ಜನ ಕೊಡಗಿಗೆ ಹೋಗಿ ಒಂದು ಟ್ರಕ್ ಸಾಮಗ್ರಿಗಳನ್ನು ಇಳಿಸಿದ್ದಾರೆ. ಸರಿಸುಮಾರು ಹದಿನೈದರಿಂದ ಇಪ್ಪತ್ತು ಲಕ್ಷ ರುಪಾಯಿ ಬೆಲೆ ಬಾಳುವ ಪದಾರ್ಥಗಳು ಇದರಲ್ಲಿವೆ.
ಹೀಗೆ… ಅಭಿಮಾನಿಗಳನ್ನು ನೊಂದ ಜನರ ನೆರವಿಗೆ ಧಾವಿಸುವಂತೆ ಪ್ರೇರೇಪಿಸುವ ಮೂಲಕ ದರ್ಶನ್ ನಿಜಕ್ಕೂ ಮಾದರಿಯಾಗಿದ್ದಾರೆ.
#