ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೋರಾಟದ ದಿವ್ಯ ಬದುಕಿನ ಸಂಪೂರ್ಣ ಚರಿತ್ರೆ ಹೊಂದಿರುವ ತೂಗುದೀಪ ದರ್ಶನ ಪುಸ್ತಕವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕವರ್ ಪೇಜ್ ಲಾಂಚ್ ಮಾಡಿದ್ದು ನಿಮಗೆಲ್ಲಾ ಗೊತ್ತೇ ಇದೆ. ಇದೇ ಪುಸ್ತಕದ ಅಪರೂಪದಲ್ಲಿ ದಾಖಲಾಗಿರುವ ಮರು ಸೃಷ್ಟಿ (ಕ್ಯಾರಿಕೇಚರ್ ಗಳು) ಇದೀಗ ಮತ್ತೆ ಸುದ್ದಿಯಾಗಿದೆ.
ಮೀನಾ ತೂಗುದೀಪ ದರ್ಶನ್ ಅವರ ಶ್ರಮದ ಬದುಕಿನ ಜೊತೆ ತೂಗುದೀಪ ಶ್ರೀನಿವಾಸ್ ಅವರ ಅಮರ ಬದುಕಿನ ನೇರ ಚಿತ್ರಣ ಇರುವ ಅಪರೂಪದ ಚಿತ್ರಗಳು ಮನಸಿಗೆ ಹತ್ತಿರವಾಗುವಂತಿದ್ದು, ದರ್ಶನ್ ಅವರ ಬಾಲ್ಯದ ಬದುಕು, ನೀನಾಸಂ ನ ದಿನಗಳಲ್ಲಿ ಅವರು ತಮ್ಮ ತಂದೆಯ ಅಗಲಿಕೆಯ ದಿನ ಹೇಗೆ ಶಿವಮೊಗ್ಗದ ಸಾಗರದಿಂದ ಮೈಸೂರು ತಲುಪಿದರು ಎಂಬ ಕುರಿತ ವಿಶೇಷ ಚಿತ್ರ ಸಹಿತ ಚಿತ್ರಣ ಪುಸ್ತಕದ ಬಗ್ಗೆ ಇನ್ನಷ್ಟು ನಿರೀಕ್ಷೆ ಹುಟ್ಟಿಸಿದೆ. ದರ್ಶನ್ ಅವರ ಚಾಲೆಂಜಿಂಗ್ ವೃತ್ತಿ ಬದುಕಿಗೆ ಕನ್ನಡಿ ಹಿಡಿಯುವಂತಿರುವ ಈ ಕ್ಯಾರಿಕೇಚರ್ ಗಳು ಸದ್ಯ ಅಭಿಮಾನಿಗಳನ್ನು ಆಕರ್ಷಿಸುವ ಕೆಲಸ ಮಾಡುತ್ತಿದ್ದು, ಅತೀ ಶೀಘ್ರದಲ್ಲೇ ಪುಸ್ತಕ ಲೋಕಾರ್ಪಣೆ ಆಗಲಿದೆ.
ಈಗಾಗಲೇ ಪುಸ್ತಕದ ಪ್ರತಿ ಸಿದ್ಧವಾಗಿದ್ದು, ಲೇಖಕ, ನಾಟಕಕಾರ, ನಿರ್ಮಾಪಕ ಬಿ. ಸುರೇಶ್ ಈ ಪುಸ್ತಕದ ಮುನ್ನುಡಿ ಬರೆದಿದ್ದು, ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಅವರ ಮಾತುಗಳು ಬೆನ್ನುಡಿಯ ರೂಪದಲ್ಲಿ ಪ್ರಕಟವಾಗಲಿದೆ. ನೂರಾ ಎಂಬತ್ತು ಪುಟಗಳ ಈ ಪುಸ್ತಕದ ಲೇಖಕರು ವಿನಾಯಕರಾಮ್ ಕಲಗಾರು. ಸ್ಮೈಲ್ ಶ್ರೀನು ಅವರ ಜೋಹರ್ ಪಬ್ಲಿಕೇಷನ್ ನ ಕಡೆಯಿಂದ ಈ ಪುಸ್ತಕ ಪಬ್ಲಿಷ್ ಆಗಲಿದ್ದು, ಲಾಕ್ ಡೌನ್ ಮುಗಿದ ನಂತರ ತೂಗುದೀಪ ದರ್ಶನ ಪುಸ್ತಕ ನಿಮ್ಮ ಕೈ ಸೇರಲಿದೆ. ಸದ್ಯ ಕಾಂತೇಶ್ ಬಡಿಗೇರ್ ಚಿತ್ರಿಸಿರುವ ಈ ಪುಸ್ತಕದ ಅಪರೂಪದ ಕ್ಯಾರಿಕೇಚರ್ ಗಳು ಸುದ್ದಿಯಲ್ಲಿದೆ…