ಒಂದು ಸಲ ಪ್ರೀತಿ ಅನ್ನೋದು ಶುರುವಾಗುತ್ತಿದ್ದಂತೇ, ಮುಂದಿನ ಹಾದಿ ಏನು? ಹಣ ಸಂಪಾದನೆಗೆ ಯಾವ ಮಾರ್ಗ ಹುಡುಕಿಕೊಳ್ಳುವುದು? ಎನ್ನುವ ಪ್ರಶ್ನೆ ಮೂಡುತ್ತದೆ. ಬಹುತೇಕರಿಗೆ ಕೆಲಸ, ಸಂಬಳ, ಉಳಿತಾಯ – ಇವುಗಳಲ್ಲಿ ವಿಶ್ವಾಸವಿರುವುದಿಲ್ಲ. ಮೇಲಾಗಿ ಹಂತಹಂತವಾಗಿ ದುಡಿಯೋದರಲ್ಲಿ ನಂಬಿಕೆಯೂ ಇರುವುದಿಲ್ಲ. ಏಕಾಏಕಿ ಕಾಸು ಉತ್ಪತ್ತಿ ಮಾಡಲು ರೂಟು ಕಂಡುಕೊಳ್ಳಲು ಮುಂದಾಗುತ್ತಾರೆ. ಹಾಗೆ ಅನ್ಯಮಾರ್ಗಕ್ಕಿಳಿದವನ ಕತೆ ಏನಾಗುತ್ತದೆ? ಬದುಕನ್ನು ಬೇಡದ ರೀತಿಯಲ್ಲಿ ಸಾಗಿಸಿದರೆ ಎಂಥಾ ಪ್ರತಿಫಲ ಎದುರಾಗುತ್ತದೆ ಅನ್ನೋದನ್ನು ಒಬ್ಬ ಪ್ರತಿನಿಧಿಯ ಮೂಲಕ ತೆರೆದಿಡಲಾಗಿದೆ. ಅವನೇ ಡೆಮೋ ಪೀಸ್!

ಇಲ್ಲಿ ಸಿನಿಮಾ ಶುರುವಾಗೋದೇ ಅಂತ್ಯದಿಂದ. ಹುಡುಗಾಟಿಕೆ, ಪ್ರೀತಿ, ಬೇಜವಾಬ್ದಾರಿಗಳಿಂದ ಶುರುವಾಗಿ ಕ್ರಿಕೆಟ್ಟು, ಬುಕ್ಕಿಂಗು, ಜೂಜು, ಮೋಜುಗಳ ಕಡೆಗೆ ತಿರುಗಿಕೊಳ್ಳುತ್ತದೆ. ಮಕ್ಕಳು ತಪ್ಪು ದಾರಿ ತುಳಿದಾಗ ಹೆತ್ತವರ ಎದೆಯಲ್ಲಾಗುವ ಆತಂಕಗಳು ಡೆಮೋ ಪೀಸ್ ಚಿತ್ರದಲ್ಲಿ ಕಣ್ಣಿಗೆ ಕಟ್ಟಿದಂತೆ ಚಿತ್ರಿತವಾಗಿದೆ. ಸಿಂಪಲ್ಲಾದ ಕಥೆಯನ್ನು ಅಷ್ಟೇ ಸೀರಿಯಸ್ಸಾಗಿ ಕಟ್ಟಿಕೊಟ್ಟಿರುವ ನಿರ್ದೇಶಕ ವಿವೇಕ್ ಗೌಡರ ಪಾಲಿಗಿದು ಮೊದಲ ಸಿನಿಮಾ ಅಂತಾ ಎಲ್ಲೂ ಅನ್ನಿಸುವುದೇ ಇಲ್ಲ. ಪ್ರತಿಯೊಂದು ದೃಶ್ಯ, ಸಂದರ್ಭಗಳನ್ನೂ ಅಳೆದೂ ತೂಗಿ, ಹೀಗೀಗೇ ಇರಬೇಕು ಅಂತಾ ಮೊದಲೇ ಅಂದಾಜಿಸಿ ರೂಪಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರೀತಿ, ಪ್ರೇಮ, ಸಾವು, ನೋವುಗಳು ಮಾತ್ರವಲ್ಲ ಫ್ಯಾಂಟಸಿ ಲೋಕ ಕೂಡಾ ಸೃಷ್ಟಿಯಾಗಿದೆ. ಅದು ಏನು? ಯಾಕೆ? ಹೇಗೆ ಅನ್ನೋದನ್ನೆಲ್ಲಾ ಸಿನಿಮಾದಲ್ಲೇ ನೋಡಿದರೇನೆ ಮಜಾ ಸಿಗೋದು.

ಈ ಚಿತ್ರದ ಹೀರೋ ಸೀರಿಯಲ್ಲುಗಳಲ್ಲಿ ಈಗಾಗಲೇ ಫೇಮಸ್ಸಾಗಿರುವ ಭರತ್ ಬೋಪಣ್ಣ. ಬಹುಶಃ ಈಗಾಗಲೇ ಕಿರುತೆರೆಯಲ್ಲಿ ಸಾಕಷ್ಟು ಅನುಭವ ಪಡೆದಿರುವುದರಿಂದಲೋ ಏನೋ ಭರತ್’ಗೆ ನಟನೆಯೆನ್ನೋದು ಎಲ್ಲೂ ತ್ರಾಸವಾದಂತೆ ಕಂಡಿಲ್ಲ. ಬದಲಿಗೆ ಲೀಲಾಜಾಲವಾಗಿ ಅಭಿನಯಿಸುತ್ತಾ ಹೋಗಿದ್ದಾರೆ. ನಾಯಕಿ ಸೋನಲ್ ಕೂಡಾ ಸಲೀಸಾಗಿ ನಟಿಸಿದ್ದಾರೆ. ಭರತ್ ಮತ್ತು ಸೋನಲ್ ಜೋಡಿ ತೆರೆ ಮೇಲೆ ತೀರಾ ಮುದ್ದುಮುದ್ದಾಗಿ ಕಾಣುತ್ತಾರೆ. ಈ ಸಿನಿಮಾದ ಬಹುಮುಖ್ಯ ಪಾತ್ರವೆಂದರೆ, ಕ್ರಿಕೆಟ್ ಬುಕ್ಕಿಯದ್ದು. ಪತ್ರಕರ್ತ, ಹೋರಾಟಗಾರ, ಮಾತುಗಾರ, ಅಷ್ಟೇ ಯಾಕೆ ನಿರ್ದೇಶಕನಾಗಿಯೂ ಪರಿಚಯವಿದ್ದ ಚಕ್ರವರ್ತಿ ಚಂದ್ರಚೂಡ್ ಇಲ್ಲಿ ವಿಲನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲಸ ಯಾವುದಾದರೂ ಸರಿ ಸಂಪೂರ್ಣವಾಗಿ ತೊಡಗಿಸಿಕೊಂಡು ಅದಕ್ಕೆ ನ್ಯಾಯ ನೀಡುವುದಷ್ಟೇ ಕೆಲಸ ಎಂದುಕೊಂಡವರಂತೆ ಚಂದ್ರಚೂಡ್ ಅದ್ಭುತ ನಟನೆ ನೀಡಿದ್ದಾರೆ. ಬಹುಶಃ ಚಂದ್ರಚೂಡ್ ಇನ್ನು ಬೇರೆ ಕ್ಷೇತ್ರಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲು ಸಮಯಾವಕಾಶ ಸಿಗುತ್ತದೋ ಏನೋ ಗೊತ್ತಿಲ್ಲ. ಯಾಕೆಂದರೆ ಡೆಮೋ ಪೀಸ್ ಎನ್ನುವ ಒಂದು ಸಿನಿಮಾ ಇನ್ನೂ ಸಾಕಷ್ಟು ಸಿನಿಮಾಗಳು, ಪಾತ್ರಗಳನ್ನು ದಯಪಾಲಿಸೋದರಲ್ಲಿ ಡೌಟೇ ಇಲ್ಲ. ಹೀರೋ ತಾಯಿಯಾಗಿ ಸ್ವತಃ ನಿರ್ಮಾಪಕಿ ಸ್ಪರ್ಶ ರೇಖಾ ಮನಮಿಡಿಯುವಂತೆ ಅಭಿನಯಿಸಿದ್ದಾರೆ.

ಪ್ರಸಾದ್ ಬಾಬು ಇರುವ ಲಿಮಿಟೇಷನ್ನುಗಳಲ್ಲೇ ಅಚ್ಚುಕಟ್ಟಾದ ಕ್ಯಾಮೆರಾ ಕೆಲಸ ಮಾಡಿದ್ದಾರೆ. ಅರ್ಜುನ್ ರಾಮ್ ಸಂಗೀತ ನಿರ್ದೇಶನದ ಹಾಡುಗಳು ಚೆಂದ ಇವೆ. ಒಟ್ಟಾರೆಯಾಗಗಿ ಡೆಮೋ ಪೀಸ್ ಖಂಡಿತವಾಗಿಯೂ ನೋಡುಗರಿಗೆ ಹೊಸ ಅನುಭವ ನೀಡುತ್ತದೆ. ಡೆಮೋ ಪೀಸ್ ಸಿನಿಮಾವನ್ನು ಪ್ರತಿಯೊಬ್ಬ ಮಕ್ಕಳು, ಅವರನ್ನು ಹೆತ್ತ ಪೋಷಕರು ಒಮ್ಮೆ ನೋಡಲೇಬೇಕು.

CG ARUN

ದೂರ ಸಾಗಿದರೂ ಹತ್ತಿರವಾಗುವ ಬಂಧಗಳು!

Previous article

You may also like

Comments

Leave a reply

Your email address will not be published. Required fields are marked *