ಕಳ್ಮುಂಡೇ ನಿನ್ನ ತಲೆಗೆ ಹೊಡ್ದು ಸಾಯಿಸ್ತೀನಿ ಕಣೇ… ಎಂಬಿತ್ಯಾದಿಯಾಗಿ ಬೈಯುತ್ತಾ ತಿರುಗಾಡೋದು ಯಾರನ್ನ ಅಂದುಕೊಂಡಿರಿ? ಬಹುಶಃ ಕನ್ನಡ ಸಿನಿಮಾಗಳ ಇತಿಹಾಸದಲ್ಲೇ ಹೆತ್ತ ತಾಯಿಯನ್ನೇ ಕೊಲ್ಲಲು ಹೊರಟವನ ಕತೆ ಮೂಡಿಬಂದಿರೋದು ಇದೇ ಮೊದಲಿರಬೇಕು.

ಅಮ್ಮನ ಸೆರಗಂಚು ಹಿಡಿದು ಬಿಕ್ಕಳಿಸಬೇಕು, ಅಮ್ಮ ನೀನು ಇಷ್ಟೇನಾ? ಕವಲು ದಾರೀನಾ? ಬಂದ ದಾರಿ ತಪ್ಪೋ? ಬಂದಿದ್ದೇ ತಪ್ಪೋ? ಆದರರೂ ಅಮ್ಮನೂರಿಗೆ ದಾರಿ ಇದೇನಾ? – ಹೀಗೆ ಪ್ರಶ್ನಿಸಿಕೊಳ್ಳುತ್ತಲೇ ತಾಯಿಯನ್ನು ಹುಡುಕುವ ಪಾತ್ರಗಳು, ಈ ಹುಡುಕಾಟದ ದಾರಿಯಲ್ಲಿ ಸಿಗುವ ಥರಹೇವಾರಿ ಬಣ್ಣಗಳು, ಕಾರಣವೇ ಇಲ್ಲದೆ ಪ್ರೀತಿ ತೋರುವವಳು, ಅಡ್ಡಕಸುಬಿಯನ್ನು ನಂಬಿ, ಊರುಬಿಟ್ಟು, ಅಮ್ಮನಿಂದ ದೂರಾಗಿ ಕಡೆಗೆ ಸೆರಗು ಹಾಸಿದವಳು, ಅಟ್ಟಾಡಿಸಿ ಬಡಿಯುತ್ತಿದ್ದ ಸಾಬಣ್ಣ ಅಣ್ಣನಾಗುವ ಪರಿ, ಮತ್ತೆ ಮತ್ತೆ ಸಹಾಯಕ್ಕೆ ನಿಲ್ಲುವ ಯೋಧರು, ಕೊಲ್ಲಲು ಕಾಯುವ ಪೊಲೀಸು ಮನಸ್ಸು, ಕೊಲ್ಲದೇ ಬಿಡುವ ಪ್ರೀತಿ… ಒಂದಾ ಎರಡಾ? ಬದುಕಿನ ಅಷ್ಟೂ ಭಾವನೆಗಳನ್ನು ಒಂದೇ ಮೂಟೆಯಲ್ಲಿ ಕಟ್ಟಿಟ್ಟಂತೆ ಮೂಡಿ ಬಂದಿರುವ ಸಿನಿಮಾ ಸಾಗುತ ದೂರ ದೂರ.

ಹೆಸರಿಗೆ ತಕ್ಕಂತೆ ಇದೊಂದು ಜರ್ನಿ ಸಬ್ಜೆಕ್ಟು. ಅಮ್ಮನನ್ನು ಹುಡುಕುತ್ತಾ ಸಾಗುವ ಒಬ್ಬ ಹುಡುಗ ಮತ್ತೊಬ್ಬ ಬುದ್ದಿಮಾಂದ್ಯನಂತಾ ವ್ಯಕ್ತಿ. ಅಚಾನಕ್ಕಾಗಿ ಘಟಿಸುವ ಕೊಲೆ, ಅಮ್ಮನ ಹುಡುಕಲು ಹೊರಟವರ ಬೆನ್ನುಬೀಳುವ ಪೊಲೀಸರು. ಆ ದಾರಿಯಲ್ಲಿ ಸಿಗುವ ತಿರುವುಗಳು, ಹತ್ತು ಹಲವು ಪಾತ್ರಗಳು ಈ ಚಿತ್ರದ ಪ್ರಧಾನ ಅಂಶ. ಎಲ್ಲವೂ ಸರಿಹೋಯಿತು ಅನ್ನುವಷ್ಟರಲ್ಲಿ ಆ ಅರೆಹುಚ್ಚನಂತಾ ಹುಡುಗನನ್ನು ಕೊಂದು ಕೆಡವುತ್ತಾರಾ? ಅಸಿಲಿಗೆ ಅವನು ಹುಚ್ಚಾನಾ? ಮತ್ತೊಬ್ಬ ಹುಡುಗ ತಾಯಿ ಮಡಿಲು ಸೇರುತ್ತಾನಾ? ಹೀಗೆ ಸಿನಿಮಾ ಆರಂಭದಿಂದ ಕೊನೆಯ ಫ್ರೇಮಿನ ವರೆಗೂ ಕುತೂಹಲ ಕಾಯ್ದುಕೊಳ್ಳುತ್ತಾ ಸಾಗುತ್ತದೆ.

ಸಿನಿಮಾದಲ್ಲಿ ಮಹೇಶ್ ಸಿದ್ದು ಅದ್ಭುತವಾಗಿ ನಟಿಸಿದ್ದಾರೆ. ಆಶಿಕ್ ಆರ್ಯ ಕೂಡಾ ಅಷ್ಟೇ ಚೆಂದಗೆ ಸಾತ್ ನೀಡಿದ್ದಾನೆ. ಪೊಲೀಸ್ ಅಧಿಕಾರಿಯಾಗಿ ನಗದೇ ನಗಿಸುವ, ತಣ್ಣಗಿದ್ದೂ ಭಯ ಹುಟ್ಟಿಸುವ ಪಾತ್ರದಲ್ಲಿ ಕುಮಾರ್ ನವೀನ್ ಅಭಿನಯ ಮನೋಜ್ಞ. ರವಿಚಂದ್ರನ್ ಅವರ ಆರಂಭದ ಸಿನಿಮಾಗಳು, ಅವರು ಪಾತ್ರ ನಿರ್ವಹಿಸುತ್ತಿದ್ದ ರೀತಿ, ಶ್ರೀನಿವಾಸ ಪ್ರಭು ಅವರ ದನಿಯನ್ನು ನವೀನ್ ಪದೇ ಪದೇ ನೆನಪು ಮಾಡಿಸುತ್ತಾರೆ. ಅಪೇಕ್ಷಾ ಒಡೆಯರ್ ಯಾವ ಅಂಜಿಕೆಯನ್ನೂ ತೋರದೆ ಪಾತ್ರ ಕೇಳಿದ್ದನ್ನೆಲ್ಲಾ ಮುಲಾಜಿಲ್ಲದೆ ನೀಡಿದ್ದಾರೆ. ನಡುವೆ ಬರುವ ಗಡ್ಡಪ್ಪ ನಗಿಸಿ ಮಾಯವಾಗುತ್ತಾರೆ. ಕಡೆಯಲ್ಲಿ ಬಂದರೂ ಸ್ಕೋರು ಮಾಡೋದು ಅಣ್ಣನ ಪಾತ್ರಧಾರಿ ನಾಗೇಂದ್ರ ಮತ್ತು ಅಮ್ಮ ಉಷಾ ಬಂಢಾರಿ.

ಒಬ್ಬ ಕಸುಬುದಾರ ನಿರ್ದೇಶಕನಿಂದ ಮಾತ್ರ ಇಂಥಾ ಸಿನಿಮಾ ಕಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ನಿರ್ದೇಶಕ ರವಿ ತೇಜ್ ಅವರನ್ನು ನಿಜಕ್ಕೂ ಅಭಿನಂದಿಸಬೇಕು. ಎಲ್ಲೋ ಶುರುವಾಗಿ ಇನ್ನೆಲ್ಲೋ ಅಂತ್ಯವಾಗುವ ಕತೆ, ಜರ್ನಿಗಳೆಲ್ಲಾ ಇದ್ದಾಗ ಎಷ್ಟೋ ಬಾರಿ ನಿರ್ದೇಶಕರು ಕೂಡಾ ದಿಕ್ಕು ತಪ್ಪುವುದು ಸಹಜ. ಆದರೆ ರವಿಗೆ ತಾವು ತಲುಪಬೇಕಿರುವ ದಾರಿ, ಗುರಿಗಳು ಸ್ಪಷ್ಟವಾಗಿವೆ. ಹೀಗಾಗಿ ದೂರ ಎಷ್ಟೇ ಆದರೂ ಸಲೀಸಾಗಿ ಸಾಗಿದ್ದಾರೆ. ಸಿನಿಮಾ ಸಾಗುವುದೇ ಗೊತ್ತಾಗದಂತೆ ದೃಶ್ಯಗಳನ್ನು ಸೃಷ್ಟಿಸಿದ್ದಾರೆ.

ಅಮ್ಮನ ಬಗ್ಗೆ ಪ್ರಶ್ನೆಗಳನ್ನು ಮೂಡಿಸುತ್ತಾ, ಗೊಂದಲಗೊಳ್ಳುವ ಮನಸ್ಸುಗಳಿಗೆ ಕಡೆಗೆ ಗೊತ್ತಾಗೋದು ಇಷ್ಟು ; ಅಮ್ಮ ಅಂದರೆ ಮೌನ, ಅಮ್ಮ ಅಂದ್ರೆ ಧ್ಯಾನ, ಅಮ್ಮನೆಂದರೆ ಅನುಭೂತಿ, ನಾವು ಪಡೆದಷ್ಟು, ಕೊಂಡಷ್ಟು!

CG ARUN

25ನೇ ದಿನದತ್ತ ಡಿಂಗನ ನಡಿಗೆ

Previous article

You may also like

Comments

Leave a reply

Your email address will not be published. Required fields are marked *