ಬಾಕ್ಸಿಂಗ್ ನಲ್ಲಿ ಛಾಂಪಿಯನ್ ಆಗಬೇಕು ಅಂತಾ ಅವಿರತ ಶ್ರಮ ಪಡುವ ಹುಡುಗ. ಅವನಿಗೊಬ್ಬಳು ಲವರ್. ಮಾಮೂಲಿ ಸಿನಿಮಾಗಳಲ್ಲಿದ್ದಂತೆ ನಯ ನಾಜೂಕಿನ ಹುಡುಗಿಯಲ್ಲ. ಎಣ್ಣೆ, ಧಮ್ಮು, ಅದನ್ನೂ ಮೀರಿದ ಡ್ರಗ್ ಅಡಿಕ್ಟ್ ಅವಳು. ಲೈಫಿನ ಬಗ್ಗೆ ಕ್ಲಾರಿಟಿಯೇ ಇಲ್ಲದ ಅವಳೆಂದರೆ ಇವನಿಗೆ ಪ್ರಾಣ. ಅವಳಿಗೂ ಅಷ್ಟೇ…

* * *
ಪ್ರೀತಿಸಿ ಮದುವೆಯಾದ ಜೋಡಿ. ಅವಳು ತುಂಬು ಬಸುರಿ. ಹುಡುಗನ ಅಪ್ಪ ಅಮ್ಮ ಮುನಿಸು ಮುರಿದು ಮೊದಲ ಬಾರಿಗೆ ಮಗ-ಸೊಸೆಯನ್ನು ನೋಡಲು ಬರುತ್ತಿದ್ದಾರೆ. ಊರಿಂದ ಬಂದಿಳಿದವರನ್ನು ಈತ ಹೋಗಿ ಮನೆಗೆ ಕರೆದುಕೊಂಡು ಬರಬೇಕು.
* * *
ಪಕ್ಕಾ ಕಾಮಿಡಿ ಪೀಸ್ ಥರಾ ವರ್ತಿಸುವ ಇಬ್ಬರು. ಇಷ್ಟ ಪಟ್ಟವಳು ಬಿಟ್ಟುಹೋದಳು ಅನ್ನೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟವನು. ಅದನ್ನು ತಪ್ಪಿಸೋದು ಜೊತೆಗಿದ್ದವನ ಟಾಸ್ಕ್.
* * *
ಮಾದಕ ವಸ್ತವನ್ನು ಸಾಗಿಸುವ ಜವಾಬ್ದಾರಿ ವಹಿಸಿಕೊಂಡ ಇಬ್ಬರು. ಅವರಲ್ಲಿ ಒಬ್ಬ ನಶೆಗಾಗಿ ಹಪಹಪಿಸುವ ಯುವಕ. ಅವನ ಜೊತೆಗೊಬ್ಬ ಗೆಳೆಯ. ಅವನಿಗೊಬ್ಬಳು ಗೆಳತಿ.
* * *
ಹಣಕ್ಕಾಗಿ ಮಗಳನ್ನು ದುಷ್ಟರಿಗೆ ಮಾರಿಬಿಡುವ ತಂದೆ. ಆ ವ್ಯಾಪಾರಕ್ಕೊಬ್ಬ ಬ್ರೋಕರ್. ಮಾಡಿದ್ದು ತಪ್ಪು ಅಂತ ಹೇಳುವ ತಾಯಿ.
* * *
ಎಲ್ಲ ಅನಿಷ್ಟಗಳಿಗೂ ಕಾರಣದಂತೆ ಒಬ್ಬ ಡಾನ್. ಮಾಡಬಾರದ್ದನ್ನೆಲ್ಲಾ ಮಾಡುತ್ತಾ ನಮ್ಮವರು ತಮ್ಮವರು ಅನ್ನೋದನ್ನೂ ನೋಡದೆ ಢುಂ ಅಂತಾ ಶೂಟ್ ಮಾಡುವ ರಾಕ್ಷಸ. ಅವನ ಜೊತೆಗೊಂದಿಷ್ಟು ಜನ ಧಾಂಡಿಗರು.
* * *

ಇವೆಲ್ಲಾ ಯಾವುದೋ ಐದಾರು ಸಿನಿಮಾಗಳ ಕತೆಯಲ್ಲ. ಒಂದೇ ಸಿನಿಮಾದಲ್ಲಿ ಏಕಕಾಲದಲ್ಲಿ ನಡೆಯುವ ಟ್ರ್ಯಾಕುಗಳು. ನಾಲ್ಕಾರು ಕಡೆಗಳಲ್ಲಿ ನಡೆಯುವ ಕತೆ ಕಡೆಗೆ ಒಂದೇ ಕಡೆಗೆ ಬಂದು ಸೇರುವ ಧಾಟಿಯ ಸಿನಿಮಾಗಳು ಸಾಕಷ್ಟು ಬಂದಿವೆ. ಆದರೆ ಅವೆಲ್ಲಕ್ಕಿಂತಾ ಭಿನ್ನ ರೀತಿಯಲ್ಲಿ ಅರಳಿರುವ ಹೈಪರ್ ಲಿಂಕ್ ಸಿನಿಮಾ ಧರಣಿಮಂಡಲ ಮಧ್ಯದೊಳಗೆ. ಈ ಚಿತ್ರದಲ್ಲಿ ಒಬ್ಬ ಹೀರೋ, ಒಂದು ಕತೆಯಿಲ್ಲ. ಏಳೆಂಟು ವೆರೈಟಿಯ ಕತೆಯ ಜೊತೆಗೆ ಚೆಲ್ಲಾಪಿಲ್ಲಿಯಾದ ಸಾಕಷ್ಟು ಪಾತ್ರಗಳು, ಮಧ್ಯಂತರದ ಹೊತ್ತಿಗೆ ಬಂದು ಒಂದು ಕಡೆ ಜಮಾವಣೆಯಾಗುತ್ತವೆ. ಮತ್ತೆ ಎಲ್ಲೆಲ್ಲೋ ಚೆದುರಿಹೋಗುತ್ತವೆ. ಹಾಗೆ ಅಸ್ತವ್ಯಸ್ತಗೊಂಡ ಪಾತ್ರಗಳು ಮತ್ತೆ ಒಂದು ಕಡೆ ಸೇರುತ್ತವಾ? ಅನ್ನೋದು ಕಟ್ಟಕಡೆಗೆ ಗೊತ್ತಾಗುತ್ತದೆ.
ಪ್ರೀತಿ ಅಂದರೆ ಹುಡುಕೋದಲ್ಲ. ಅದಾಗದೇ ಸಿಗೋದು. ಕೆಲವೊಂದು ಸಲ ಕಳೆದುಕೊಂಡ ವಸ್ತುಗಳು ಸಿಕ್ಕಾಗ ಸಿಕ್ಕಾಪಟ್ಟೆ ಖುಷಿಯಾಗತ್ತೆ. ಕಳಕೊಳ್ಳಲೇಬಾರದು ಅಂತಿದ್ದ ವ್ಯಕ್ತಿಗಳು ಮತ್ತೆ ಸಿಕ್ಕರೆ ಹೇಗಿರುತ್ತದೆ? ಹಾಗೆ ಸಿಕ್ಕ ಜೀವ ಮತ್ತೆ ದೂರಾದಾಗ ಎದುರಾಗುವ ಸಂಕಟ ಎಂಥದ್ದು ಅನ್ನೋದನ್ನು ನವೀನ್ ಶಂಕರ್ ಮತ್ತು ಐಶಾನಿ ಪಾತ್ರಗಳು ಹೇಳುತ್ತವೆ.
ಇನ್ನೇನು ಹೆತ್ತವರು ಬಂದು ಜೊತೆಯಾಗಲಿದ್ದಾರೆ. ಅದರ ಜೊತೆ ಹೊಸ ಜೀವವೊಂದು ಮನೆ-ಮನ ತುಂಬಲಿದೆ ಎನ್ನುವ ನಿರೀಕ್ಷೆಯಲ್ಲಿದ್ದವರ ಬದುಕಲ್ಲಿ ಏನೆಲ್ಲಾ ಘಟನೆಗಳು ಸಂಭವಿಸುತ್ತವೆ ಎನ್ನುವ ವಿಚಾರವನ್ನು ಕೂಡಾ ಇಲ್ಲಿ ಅನಾವರಣಗೊಂಡಿದೆ. ಬೆಂಗಳೂರೆನ್ನುವ ಕೇಂದ್ರ ಸ್ಥಾನದಲ್ಲಿ ಏಕಕಾಲದಲ್ಲಿ ನಡೆಯುವ ಹತ್ತಾರು ವಿಚಾರಗಳು, ಅದರ ಸುತ್ತುವರಿದ ಪಾತ್ರಗಳು.. ಇಲ್ಲಿ ಎಲ್ಲವೂ ಅನಿರೀಕ್ಷಿತ. ಇದು ಹೀಗೇ ಆಗುತ್ತದೆಂದುಕೊಂಡರೆ ಅದು ತಪ್ಪು. ಅಂದುಕೊಂಡಿದ್ದು ಒಂದಾದರೆ ಆಗುವುದೇ ಒಂದು. ಎದುರಾಗುವ ಕಷ್ಟಗಳು ಸವಾಲುಗಳು ಏನೇ ಆಗಿದ್ದರೂ ಕಡೆಯದಾಗಿ ಒಳ್ಳೇದು ಮಾಡಿದರಷ್ಟೇ ಇಲ್ಲಿ ಉತ್ತಮ ಫಲ. ಅವರವರು ಮಾಡಿದ್ದನ್ನು ಅವರೇ ಉಣ್ಣಬೇಕು ಎನ್ನುವ ಕರ್ಮಸಿದ್ದಾಂತದ ಆಧಾರದಲ್ಲಿ ʻಧರಣಿಮಂಡಲ ಮಧ್ಯದೊಳಗೆʼ ಚಿತ್ರ ರೂಪುಗೊಂಡಿದೆ.

ಇದು ನಿರ್ದೇಶಕರ ಸಿನಿಮಾ, ಕಲಾವಿದರ ಚಿತ್ರ ಅಂತೆಲ್ಲಾ ಹೇಳುತ್ತಾರಲ್ಲಾ? ಹಾಗೆ ಇದು ಅಕ್ಷರಶಃ ಸಂಕಲನಕಾರನ ಚಿತ್ರ. ಇಲ್ಲಿ ಹತ್ತೋ ಇಪ್ಪತ್ತೋ ಪಾತ್ರಗಳಿಲ್ಲ. ಎಣಿಸಿದರೆ ನೂರಕ್ಕೂ ಹೆಚ್ಚು ಜನ ಬಂದು ಹೋಗುತ್ತಾರೆ. ಏಳೆಂಟು ಕತೆ ಒಂದೇ ಕಡೆ ಅಡಕಗೊಂಡಿವೆ. ಅದೂ ಒಟ್ಟೊಟ್ಟಿಗೇ ಬೆರೆತುಹೋಗಿವೆ. ಇಂಥದ್ದೊಂದು ಚಿತ್ರಕ್ಕೆ ಸಂಕಲನ ಮಾಡೋದು ತೀರಾ ತ್ರಾಸದ ಕೆಲಸ. ಎಡಿಟರ್ ಉಜ್ವಲ್ ಚಂದ್ರ ನೋಡುಗರಿಗೆ ಎಲ್ಲೂ ಗೊಂದಲವಾಗದಂತೆ ಕತ್ತರಿಸಿ ಪೋಣಿಸಿದ್ದಾರೆ. ಇದನ್ನು ಸಾಧ್ಯವಾಗಿಸಿರುವುದು ಕೀರ್ತನ್ ಪೂಜಾರಿ ಕ್ಯಾಮೆರಾ ವರ್ಕ್. ಹಿನ್ನೆಲೆ ಸಂಗೀತ ಒಟ್ಟು ಸಿನಿಮಾವನ್ನು ಮೇಲಕ್ಕೆತ್ತಿ ನಿಲ್ಲಿಸಿದೆ. ಸಿನಿಮಾದ ಗೆಲುವಿನಲ್ಲಿ ಈ ಮೂವರ ಪಾತ್ರ ದೊಡ್ಡದು. ಭೂಗತ ಜಗತ್ತು, ಮಾದಕ ಜಾಲ, ಅಂಗಾಗಗಳ ಕಳ್ಳತನ, ಪ್ರೀತಿ, ಪ್ರೇಮ ಎಲ್ಲವನ್ನೂ ಸೇರಿಸಿ ಒಂದೇ ಸಿನಿಮಾದಲ್ಲಿ ಒಂಚೂರು ಹೆಚ್ಚು ಅನ್ನಿಸುವಷ್ಟು ಕಂಟೆಂಟ್ ಇಟ್ಟು, ಅದು ಅಜೀರ್ಣವಾಗದಂತೆ ಎಚ್ಚರ ವಹಿಸಿರುವ ನಿರ್ದೇಶಕ ಶ್ರೀಧರ್ ಶಿಕಾರಿ ಪುರ ಶ್ರಮ ವಹಿಸಿ ಸಿನಿಮಾ ಕಟ್ಟಿರುವುದು ಗೊತ್ತಾಗುತ್ತದೆ.
ನವೀನ್ ಶಂಕರ್, ಐಶಾನಿ ಚೆಂದಗೆ ನಟಿಸಿದ್ದಾರೆ. ನಟ ಯಶ್ ಶೆಟ್ಟಿ ಅವರಿಗೆ ಎಲ್ಲರನ್ನೂ ಆವರಿಸಿಕೊಳ್ಳುವಂತೆ ನಟಿಸುವ ಕಲೆ ಸಿದ್ದಿಸಿದೆ. ಸಿದ್ದು ಮೂಲಿಮನಿ ಕೂಡಾ ಯಾವ ಪಾತ್ರವನ್ನೂ ನುಂಗಿಕೊಂಡು ನಟಿಸುವ ಕಲಾವಿದ ಅನ್ನೋದಿಲ್ಲಿ ಗೊತ್ತಾಗಿದೆ. ಮಹಂತೇಶ್, ಪ್ರಕಾಶ್ ತುಮಿನಾಡು ಮತ್ತವರ ಜೊತೆಗಾರ, ಡಿಸ್ಕೋ ಪಾತ್ರಧಾರಿ, ಚನ್ನಕೇಶವ, ಕರಿಸುಬ್ಬು… ಎಲ್ಲರೂ ಇಷ್ಟವಾಗುತ್ತಾರೆ.
ಈ ಚಿತ್ರದಲ್ಲಿ ಎರಡು ಹಾಡುಗಳು ಒಂದು ಫೈಟನ್ನು ಅನವಶ್ಯಕವಾಗಿ ತುರುಕಿದಂತೆ ಕಾಣುತ್ತದೆ. ಉಳಿದಂತೆ ಕನ್ನಡದ ಮಟ್ಟಿಗೆ ಇದು ವಿಶಿಷ್ಟ ಸಿನಿಮಾ. ಎಲ್ಲರೂ ನೋಡಿ, ಹರಸಿ!