2020ರ ಪ್ರಯೋಗಾತ್ಮಕ ಸಿನಿಮಾ ಡಿಂಗ. ಐಫೋನ್ ಬಳಸಿ ರೂಪಿಸಿರುವ ಪರಿಪೂರ್ಣ ಸಿನಿಮಾ ಇದು. ಸಾಕಷ್ಟು ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ, ಚಿತ್ರಕತೆ ಬರಹಗಾರರಾಗಿ ದುಡಿದಿದ್ದ ಅಭಿಷೇಕ್ ಜೈನ್ ನಿರ್ದೇಶನದ ಡಿಂಗ ನೋಡಿದ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ರಂಗಭೂಮಿ ಹಿನ್ನೆಲೆಯಿಂದ ಬಂದು, ಕಿರುತೆರೆಯಲ್ಲೂ ಹೆಸರು ಮಾಡಿದ್ದ ಆರ್ವ ಈ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದರು. ಐಫೋನಿನಲ್ಲಿ ತೆಗೆದ ಸಿನಿಮಾವಾದರೂ ಎಲ್ಲ ರೀತಿಯಿಂದಲೂ ಕಮರ್ಷಿಯಲ್ಲಾಗೇ ರೂಪುಗೊಂಡಿದೆ. ಉತ್ತಮ ಸಿನಿಮಾ ಎನಿಸಿಕೊಂಡರೂ ಪ್ರೇಕ್ಷಕರ ಉದಾಸೀನಕ್ಕೆ ಪಾತ್ರವಾದ ಸಿನಿಮಾಗಳಲ್ಲಿ ಇದೂ ಒಂದಾಗಿದೆ. ಪರಭಾಷೆಯಲ್ಲಾಗಿದ್ದಿದ್ದರೆ ಡಿಂಗ ದಂಥಾ ಸಿನಿಮಾ ಬಿಡುಗಡೆಯಾದ ಚಿತ್ರಮಂದಿರ ತುಂಬಿ ತುಳುಕುತ್ತಿತ್ತು. ಡಿಂಗನ ಅದೃಷ್ಟ ಆ ಮಟ್ಟಿಗಲ್ಲದಿದ್ದರೂ ಕಡಿಮೆ ಚಿತ್ರಮಂದಿರಗಳಲ್ಲೇ ಪ್ರದರ್ಶನಗೊಳ್ಳುತ್ತಿದೆ. ಹೀಗಾಗಿ ಡಿಂಗ ಈಗ ಇಪ್ಪತ್ತೈದನೇ ದಿನದ ಸಡಗರದಲ್ಲಿದ್ದಾನೆ.
ಡಿಂಗ ಸಿನಿಮಾಗಾಗಿ ಸಕಲೇಶಪುರ, ಮೈಸೂರು ಬೆಂಗಳೂರು ಸೇರಿದಂತೆ ಬರೋಬ್ಬರಿ ೨೭ ಲೊಕೇಶನ್ನುಗಳಲ್ಲಿ ಇಪ್ಪತ್ತೇಳು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತು. ಇತರೆ ಕಮರ್ಷಿಯಲ್ ಸಿನಿಮಾಗಳ ಮಟ್ಟಕ್ಕೆ ಪಬ್ಲಿಸಿಟಿಯನ್ನೂ ಮಾಡಿದ್ದಾರೆ. ಫೋನೋಗ್ರಫಿ ಮೂಲಕ ಐಫೋನಿನಲ್ಲಿ ಚಿತ್ರೀಕರಿಸಿರುವ ಸಿನಿಮಾ ಇದಾಗಿರುವುದರಿಂದ ಪರಭಾಷೆಯ ಸಾಕಷ್ಟು ಸಿನಿಮಾ ಮಂದಿಗೆ ಕೂಡಾ ಈ ಚಿತ್ರ ಕುತೂಹಲದ ವಸ್ತುವಾಗಿದೆ. ಈಗಾಗಲೇ ಸಾಕಷ್ಟು ಜನ ಅಭಿ ಅವರನ್ನು ಭೇಟಿ ಮಾಡಿ ತಮಗೂ ಇದೇ ತಂತ್ರಜ್ಞಾನ ಬಳಸಿ ಸಿನಿಮಾ ರೂಪಿಸಿಕೊಡುವಂತೆ ಕೇಳಿಕೊಂಡಿದ್ದಾರಂತೆ. ಕ್ಯಾಮೆರಾದಲ್ಲಿ ಚಿತ್ರೀಕರಿಸಲಿ, ಮೊಬೈಲಿನಲ್ಲಿ ಸೆರೆ ಹಿಡಿಯಲಿ, ಜನರನ್ನು ತಲುಪಲು ಬೇಕಿರುವುದು ಗಟ್ಟಿಯಾದ ಕಥೆ, ನಿರೂಪಣೆ. ಅದು ಕೂಡಾ ಡಿಂಗ ಚಿತ್ರ ಒಳಗೊಂಡಿದೆ. ಮನುಷ್ಯ ಸಂಬಂಧಗಳ ಜೊತೆಗೆ ನಾಯಿಯ ಬಾಂಧವ್ಯವನ್ನೂ ಈ ಚಿತ್ರದಲ್ಲಿ ಬೆಸೆಯಲಾಗಿತ್ತು. ಈ ಎಲ್ಲಾ ಕಾರಣದಿಂದ ಡಿಂಗ ಗೆದ್ದಿದ್ದಾನೆ. ಯಾವುದೇ ಹೊಸ ಆವಿಷ್ಕಾರಗಳಾದಾಗ ಅದನ್ನು ಬೆಂಬಲಿಸಬೇಕು. ಈ ಕಾರಣಕ್ಕಾದರೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಥಿಯೇಟರಿಗೆ ಹೋಗಿ ಈ ಚಿತ್ರವನ್ನು ನೋಡಲಿ. ಆ ಮೂಲಕ ಅಭಿ ಮತ್ತವರ ತಂಡ ಇಂಥಾ ಹತ್ತು ಹಲವು ಸಿನಿಮಾಗಳನ್ನು ನೀಡುವ ಶಕ್ತಿ ಹೊಂದಲಿ…