ಸಿನಿಮಾಗೆ ಬರುವ ಹೊಸಾ ಪ್ರತಿಭೆಗಳಲ್ಲಿ ಒಂದು ಭ್ರಮೆಯಿದೆ. ‘ದೊಡ್ಡ ನಟರ ಹೆಸರನ್ನು ಬಳಸಿಕೊಂಡು ಸಿನಿಮಾ ಮಾಡಿದರೆ, ಅದನ್ನು ನೋಡಲು ಜನ ರಭಸವಾಗಿ ಥಿಯೇಟರಿಗೆ ನುಗ್ಗಿಬಿಡುತ್ತಾರೆ’ ಎಂದು.
ಅದು ನಿಜವೇ ಆಗಿದ್ದಿದ್ದರೆ ಈ ಹೊತ್ತಿಗೆ ‘ಫ್ಯಾನ್’ ಅನ್ನೋ ಸಿನಿಮಾ ಸೂಪರ್ ಹಿಟ್ ಆಗಿ ಥಿಯೇಟರಿನ ಮುಂದೆ ಜನಸ್ತೋಮ ನೆರೆದಿರಬೇಕಿತ್ತು. ಹೇಳಿ ಕೇಳಿ ಇದು ಶಂಕರ್ ನಾಗ್ ಅವರ ಹೆಸರನ್ನು ಬಳಸಿಕೊಂಡು ತಯಾರಾಗಿರುವ ಚಿತ್ರ. ಸಿನಿಮಾದ ಬಿಡುಗಡೆಯ ದಿನ ಆಟೋ ಚಾಲಕರಿಗೆ ಉಚಿತ ಪ್ರದರ್ಶನವನ್ನೂ ಏರ್ಪಡಿಸಿದ್ದರು. ಯಾವಾಗ ಉಚಿತ ಅಂತಾ ಅನೌನ್ಸು ಮಾಡುತ್ತಾರೋ ಆಗಲೇ ಜನ ‘ನಿರ್ಧರಿಸಿಬಿಡುತ್ತಾರೆ ಈ ಸಿನಿಮಾದಲ್ಲಿ ಏನೂ ಇರಲ್ಲ’ ಅಂತಾ. ವಿಪರ್ಯಾಸವೆಂದರೆ, ಫ್ಯಾನ್ ಸಿನಿಮಾ ನೋಡಿದ ಪ್ರತಿಯೊಬ್ಬರೂ ಈ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತಾಡಿದ್ದಾರೆ. ವಿಮರ್ಶಕರ ವಲಯದಲ್ಲಿ ಕೂಡಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫ್ಯಾನ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಅದ್ವಿತಿ ಶೆಟ್ಟಿ ಮತ್ತು ಆರ್ಯನ್ ಅವರ ಅಭಿನಯ ಎಲ್ಲರನ್ನೂ ಸೆಳೆದಿದೆ. ಆದರೆ ಪ್ರಚಾರದ ಕೊರತೆ ಮತ್ತು ಉಚಿತ ಪ್ರದರ್ಶನದ ಕಾರಣಕ್ಕೆ ಜನರಲ್ಲಿ ತಪ್ಪು ಸಂದೇಶ ರವಾನೆಯಾಗಿದೆ. ಈ ಕಾರಣದಿಂದ ‘ಫ್ಯಾನು’ ತಿರುಗಲು ತ್ರಾಣವಿಲ್ಲದೇ ವಿಲಗುಟ್ಟುತ್ತಿದೆ. ದರ್ಶಿಲ್ ಭಟ್ ಎನ್ನುವ ನಿರ್ದೇಶಕ ಒಂದಿಷ್ಟು ಜಾಣ್ಮೆ ವಹಿಸಿ, ಸಿನಿಮಾ ಮಾಡಲು ವ್ಯಯಿಸಿದ್ದ ಬುದ್ಧಿಯನ್ನು ಪ್ರಚಾರ ಪಡೆಯಲೂ ಉಪಯೋಗಿಸಿದ್ದಿದ್ದರೆ ‘ಫ್ಯಾನ್’ಗೆ ಇಂಥಾ ಹೀನಾಯ ಸ್ಥಿತಿ ಬರುತ್ತಿರಲಿಲ್ಲವೇನೋ!